ಶನಿವಾರ, ಮೇ 28, 2022
26 °C

ಪ್ರೀತಿಯ ದಿನಕ್ಕಾಗಿ ಸಮರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರೀತಿಗೆ ಕಣ್ಣಿಲ್ಲ, ರೂಪವಿಲ್ಲ, ಎಲ್ಲೆ ಇಲ್ಲ, ಜಾತಿ-ಧರ್ಮವಿಲ್ಲ, ಬೆಲೆ ಕಟ್ಟಲು ಸಾಧ್ಯವಿಲ್ಲ... ಆದರೆ ಪ್ರೀತಿಗೊಂದು ದಿನವಿದೆ. ಅದು ಫೆ.14. ಅಮೂರ್ತ ಭಾವನೆಗಳು ಮೂರ್ತ ರೂಪ ತಾಳುವ ದಿನ!ಪ್ರೇಮಿಗಳ ದಿನವೇ ಈಗ ಚರ್ಚೆಯ ವಸ್ತುವಾಗಿದೆ. ಕೆಲ ಸಂಪ್ರದಾಯವಾದಿ ಮತ್ತು ಆಧುನಿಕ ಜನರ ನಡುವಿನ ಸಮರವಾಗಿದೆ. ಇನ್ನೊಂದೆಡೆ ಮಾರುಕಟ್ಟೆಯ ಕೊಳ್ಳುಬಾಕತನ ಹಾಗೂ ಸಾಂಸ್ಕೃತಿಕ ಮೂಲಭೂತವಾದಿಗಳ ಮಧ್ಯೆ ‘ಪ್ರೇಮಿಗಳು’ ಸೊರಗಿ ಹೋಗಿದ್ದಾರೆ. ಫೆ.14 ಜಿಜ್ಞಾಸೆಯಾಗಿದೆ.  ಜಾಗತೀಕರಣದ ಬಳಿಕ ಭಾರತದಲ್ಲಿ ಇಂತಹ ದಿನಗಳ ಕಾವು ಹೆಚ್ಚಿದೆ. ಗ್ರೀಟಿಂಗ್ಸ್, ಗಿಫ್ಟ್, ಟ್ರೀಟ್, ಪಾರ್ಟಿಗಳು ಬಂದಿವೆ.ಜಿಜ್ಞಾಸೆ: 
ನಮ್ಮ ಸಂಸ್ಕೃತಿಯಲ್ಲ. ಸಭ್ಯತೆಯ ಲಕ್ಷಣವಲ್ಲ. ಕೌಟುಂಬಿಕ ವ್ಯವಸ್ಥೆಯ ಚೌಕಟ್ಟಿಲ್ಲ. ವಿವಾಹ ಪದ್ಧತಿಗೆ ವಿರುದ್ಧ ಎಂದು ಕೆಲವು ಸಂಪ್ರದಾಯವಾದಿಗಳು ವಿರೋಧಿಸುತ್ತಾರೆ. ಇನ್ನೊಂದೆಡೆ ಗ್ರೀಟಿಂಗ್ಸ್, ಗಿಫ್ಟ್, ಅಂಗಡಿ-ಕಂಪೆನಿಗಳು ಈ ದಿನವನ್ನು ಆಚರಿಸಲು ಪ್ರೇರೇಪಿಸುತ್ತವೆ. ಇವುಗಳ ನಡುವೆ ‘ಯುದ್ಧದ ವಿರುದ್ಧ ಪ್ರೀತಿಗಾಗಿ’ ಹುತಾತ್ಮನಾದ ಸಂತ ವ್ಯಾಲೆಂಟೈನ್ ಮರೆತೇ ಹೋಗಿದ್ದಾರೆ.ಹಿನ್ನೆಲೆ:
ಮೂರನೇ ಶತಮಾನದಲ್ಲಿ ರೋಮ್ ಅನ್ನು ಗ್ಲ್ಯಾಡಿಯಸ್ ಎಂಬಾತ ಆಳುತ್ತಿದ್ದ. ಆತ ಪ್ರಜೆಗಳನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸುತ್ತಿದ್ದ. ಆದರೆ ಯುವಜನತೆ ತಮ್ಮ ಕೌಟುಂಬಿಕ ಜವಾಬ್ದಾರಿಗೆ ಮಾರು ಹೋಗುತ್ತಿದ್ದರು. ಅದಕ್ಕಾಗಿ ಗ್ಲ್ಯಾಡಿಯಸ್ ಮದುವೆಯನ್ನೇ ವಿರೋಧಿಸಿದ. ಆ ಸಂದರ್ಭದಲ್ಲಿ ಜೀವನ ಪ್ರೀತಿ ಹಾಗೂ ಕುಟುಂಬವನ್ನು ಗಟ್ಟಿಗೊಳಿಸಲು ಸಂತ ವ್ಯಾಲೆಂಟೈನ್ ಮದುವೆ ಮಾಡಿಸುತ್ತಿದ್ದ. ಇದರಿಂದ ಕ್ರೋಧಗೊಂಡ ರಾಜನು ವ್ಯಾಲೆಂಟೈನ್‌ಗೆ ಶಿಕ್ಷೆ ವಿಧಿಸಿದ. ಸಂತ ಜೀವ ತೆರಬೇಕಾಯಿತು. ಆ ದಿನವನ್ನು ವ್ಯಾಲೆಂಟೈನ್ ದಿನವಾಗಿ ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.ಗುಲ್ಬರ್ಗದಲ್ಲಿ: ಮಹಾನಗರಗಳಂತೆ ಗುಲ್ಬರ್ಗದಲ್ಲಿ ಪ್ರೇಮಿಗಳ ದಿನ ಆಚರಣೆ, ಬ್ಯಾನರ್, ಪಾರ್ಟಿಗಳು ಅಷ್ಟಾಗಿ ಕಂಗೊಳಿಸುತ್ತಿಲ್ಲ. ಇಂತಹ ಆಚರಣೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್ ಮತ್ತಿತರ ಕೋರ್ಸ್‌ಗಳಿಗೆ ಹೊರಗಿನಿಂದ ಆಗಮಿಸುವ ವಿದ್ಯಾರ್ಥಿಗಳು ಹೆಚ್ಚಾಗಿ ಆಸಕ್ತಿ ವಹಿಸುತ್ತಾರೆ. ವಸತಿ ನಿಲಯ, ಹೋಟೆಲ್‌ಗಳಲ್ಲಿ ಗುಪ್ತ್ ಗುಪ್ತ್ ಆಚರಣೆ ನಡೆಯುತ್ತವೆ. ಆದ್ದರಿಂದಲೇ ಗ್ರೀಟಿಂಗ್ಸ್ ವ್ಯಾಪಾರದ ಭರಾಟೆ ಸದ್ದಿಲ್ಲದೇ ಸಾಗಿದೆ. ಆದರೆ ಸ್ಥಳೀಯ ಯುವಜನತೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಹಲವು ಕಡೆಗಳಲ್ಲಿ ಆಚರಣೆಯ ಸುಳಿವೇ ದೊರಕುವುದಿಲ್ಲ. ಹೋಟೆಲ್‌ಗಳ ಮಾಲೀಕರು ಸಹ ವಿಶೇಷ ಕಾರ್ಯಕ್ರಮ ಆಯೋಜಿಸಿಲ್ಲ. ನಗರದಲ್ಲಿ ‘ಪ್ರೇಮಿಗಳ ದಿನಕ್ಕಾಗಿ ವಿಶೇಷ ಕಾರ್ಯಕ್ರಮಗಳಿಲ್ಲ. ಎಂದಿನಂತೆ ವಿದ್ಯಾರ್ಥಿಗಳು, ಯುವಜನತೆ ಬಂದು ಟ್ರೀಟ್ ಕೊಟ್ಟು ಹೋಗ್ತಾರೆ’ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು. ನಗರದ ಕೆಸರಟಗಿ ಪಾರ್ಕ್, ಅಪ್ಪನ ಕೆರೆ ಉದ್ಯಾನ, ಪಾಲಿಕೆ ಹಿಂದಿನ ಉದ್ಯಾನ, ಉಪ್ಪಳಾಂವ್, ವಿಶ್ವವಿದ್ಯಾಲಯದ ಕ್ಯಾಂಪಸ್, ಸೇಡಂ ರಸ್ತೆ, ನಾಗೇನ ಹಳ್ಳಿ, ಮಲ್ಟಿಫ್ಲೆಕ್ಸ್ ಚಿತ್ರಮಂದಿರ, ಐಸ್‌ಕ್ರೀಂ ಪಾರ್ಲರ್, ಸುಸಜ್ಜಿತ ಹೋಟೆಲ್‌ಗಳು ಮತ್ತಿತರ ಚಿಕ್ಕಪುಟ್ಟ ಉದ್ಯಾನಗಳು ಪ್ರೀತಿಯ ಹಕ್ಕಿಗಳ ತಾಣವಾಗಿವೆ. ನಿಸರ್ಗವನ್ನರಸಿ ನಗರದ ಹೊರವಲಯಕ್ಕೂ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರಿಗೂ ಎಸ್ಸೆಮ್ಮೆಸ್‌ಗಳೇ ಸಂದೇಶ ಸೂಚಕವಾಗಿವೆ.ಈ ಹಿಂದೆಯೇ ಶ್ರೀರಾಮ ಸೇನೆ, ರಾಷ್ಟ್ರ ಹಿಂದೂ ಸೇನೆ ಮತ್ತಿತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದರು. ಈ ಬಾರಿಯೂ ಬಂದೋಬಸ್ತ್  ಕೈಗೊಂಡಿದ್ದಾರೆ. ಯುದ್ಧದ ವಿರುದ್ಧ ಪ್ರೀತಿ ಗೆದ್ದ ನೆನಪಿನಲ್ಲಿ ವಸಂತಾಗಮನದಂದು ಆಚರಿಸುವ ಪ್ರೇಮಿಗಳ ದಿನ ಇಂದು ‘ಸಮರ’ದ ವಸ್ತುವಾಗಿದೆ. ಉದ್ಯಮಿಗಳಿಗೆ ‘ಮಾರುಕಟ್ಟೆ’ಯಾಗಿದೆ. ಕೊನೆಗೂ ಪ್ರೀತಿ ಸೊರಗಿದೆ.  

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.