ಪ್ರೀತಿಯ ಪ್ರೀತಿಗೆ ಪ್ರೀತಿಯಿಂದ...

7

ಪ್ರೀತಿಯ ಪ್ರೀತಿಗೆ ಪ್ರೀತಿಯಿಂದ...

Published:
Updated:

ಕಣ್ಣಿಂದ ಶುರುವಾದ ಪ್ರೀತಿ; ಕಣ್ಣೊಳಗೇ ಕುಳಿತು, ಕದ್ದು ನೋಡುತ್ತಿರುವ ಪ್ರೀತಿ!



ಹಾಯ್ ಚಿನ್ನು. ಯಾಕೋ ಹಾಗೆ ನೋಡ್ತಿದ್ದಿಯಾ? ಏನಿದು ಅಂತಾನಾ? ಹಾಗೇ ನಿನ್ನ ನೆನಪು ತುಂಬಾ ಆದಾಗ ನಿನಗಂತೂ ಪತ್ರ ಬರೆದು, ನಾನೇ ಓದುತ್ತಿದ್ದ ಕೆಲವು ಪತ್ರಗಳಲ್ಲಿ ಇದೂ ಒಂದು ಕಣೋ. ನಿಂಜೊತೆ  ಎಷ್ಟು ಹೊತ್ತು  ಮಾತಾಡಿದ್ರೂ ಮನದ ಮಾತುಗಳನ್ನು ಬರವಣಿಗೆಯಲ್ಲಿ ನೋಡೋಕೆ ಎಷ್ಟು ಖುಷಿ ಅನ್ಸುತ್ತೆ ಅಲ್ವಾ ಪುಟ್ಟಾ. ಮಾತುಗಳಿಗೆ ಶಬ್ದರೂಪ ಕೊಡೋದಂದ್ರೆ ನನಗೆ ತುಂಬಾನೇ ಇಷ್ಟ ಕಣೋ. ಅಷ್ಟೇ ಅಲ್ಲ, ನೇರ ಮಾತಿಗಿಂತ ಇದು ಎಷ್ಟೋ ಹೆಚ್ಚು ಪರಿಣಾಮ ಬೀರುತ್ತೆ ಅಲ್ವಾ ಮನಸ್ಸಿಗೆ.....



ಅಯ್ಯೋ! ನಾನೊಂದು. ಹೋಗಿ ಹೋಗಿ ಮನಸ್ಸಿನ ಬಗ್ಗೆ ನಿನ್‌ಹತ್ರ ಹೇಳ್ತಾ ಇದೀನಿ, ನೋಡು. ಆದ್ರೂ ಸ್ವಲ್ಪನಾದ್ರೂ ನನ್ನ ಭಾವನೆಗಳನ್ನ ಅರ್ಥ ಮಾಡ್ಕೊಳೋ ಪ್ರಯತ್ನಾನಾದ್ರೂ ಮಾಡ್ತೀಯಾ ಅನ್ನೋ ಸಣ್ಣ ನಂಬಿಕೆ ಕಣೋ.



ಅದಿರಲಿ, ಚಿನ್ನು ನಿನಗೆ ನೆನಪಿದೆಯಾ.... ನನಗೂ-ನಿನಗೂ ಪರಿಚಯ ಆಗಿದ್ದೇ ಕಣ್ಣಿಂದ ಅಲ್ವಾ? ಬರಿಯ ಮುಖ ಪರಿಚಯದಿಂದ ಇಬ್ಬರೂ ಕದ್ದು ನೋಡಿಕೊಳ್ಳುತ್ತಿದ್ದ, ನೀನು ಪದೇ ಪದೇ ನನಗಾಗಿ ಮನೆಯ ಬಳಿ ಬರುತ್ತಿದ್ದ, ನಿನ್ನನ್ನು ಕಂಡಾಗ ನನಗೇ ತಿಳಿಯದಂತೆ ನಾನು ಕುಣಿಯುತ್ತಿದ್ದ, ಆ   ದಿನಗಳನ್ನು ನನ್ನಿಂದ ಎಂದೂ ಮರೆಯೋಕಾಗಲ್ಲ ಕಣೋ. ಆದ್ರೆ ನನ್ ಹೃದಯಕ್ಕೆ ಹತ್ತಿರ ಆಗೋಕೆ ನೀನು ಹೆಚ್ಚು ಸಮಯ ತಗೊಳ್ಳೇ ಇಲ್ಲ ಕಣೋ.

ಅದೇ ಮೊದಲು ನನ್ನ ಮನಸ್ಸಲ್ಲಿ ಒಬ್ಬ ಹುಡುಗನ ಬಗ್ಗೆ ಅಷ್ಟೊಂದು ಆಕರ್ಷಣೆ, ಶುರುವಾಗಿದ್ದು. ನಿನ್ನ ಕಣ್ಣಿನ ಆ ನೋಟದಲ್ಲಿ ಅದೇನು ಅಂತಾ ಸೆಳೆತ ಇತ್ತೋ ಗೊತ್ತಿಲ್ಲ. ಆದ್ರೆ ನಾನು ಮಾತ್ರ ನಿನ್ನ ಮೋಹದ ಆ ಕಣ್ಗಳಿಗೆ ಬಹುಬೇಗ ಮನಸೋತು ಬಲಿಬೀಳುವ ಕುರಿಯಂತಾಗಿಬಿಟ್ಟೆ.

ನಿಜವಾಗಿ ಹೇಳ್ತಾ ಇದೀನಿ ಕೇಳು; ಅಂದು ನಿನ್ನ ಕಡೆಗಿದ್ದ ಬರಿಯ ಆಕರ್ಷಣೆ; ಒಮ್ಮೆ ನಿನ್ನೊಂದಿಗೆ ಸ್ನೇಹವಾದ ಮೇಲೆ; ಅದು ಯಾಕೋ ಗೊತ್ತಿಲ್ಲ, ಅದು ಪ್ರೀತಿಯಾಗಿ ಪರಿವರ್ತನೆ ಆಗೋಕೆ ಹೆಚ್ಚು ಸಮಯ ಬೇಕಾಗಲಿಲ್ಲ. ನನಗೆ ನಿನ್ನ ಮೇಲಿರೋ ಈ ಅಪಾರ ಪ್ರೀತಿಗೆ ಬಹುಶಃ ನಮ್ಮ ನಡುವೆ ಇರುವ ಈ ಮಿತಿ ಮೀರಿದೆ ಎನಿಸುವಷ್ಟು ಸಲುಗೆಯೇ ಕಾರಣವಿರಬಹುದೇನೋ ತಿಳಿಯದು.



ಆದ್ರೆ ನಮ್ಮ ನಡುವೆ ಇರುವ ಈ ಬಂಧಕ್ಕೆ ಏನೆಂದು ಕರೆಯಬೇಕೆಂದು ತಿಳಿಯುತ್ತಿಲ್ಲ. ಬರಿಯ ಸ್ನೇಹ ಅಂತಾ ಹೇಳೋಕೆ ಖಂಡಿತಾ ಸಾಧ್ಯ ಇಲ್ಲ. ಯಾಕೆಂದ್ರೆ ನಾವು ಎಷ್ಟರಮಟ್ಟಿಗೆ ಬೆರೆತಿದ್ದೀವಿ ಅಂತಾ ನಿನಗೂ ಗೊತ್ತು. 



ನಮ್ಮಿಬ್ಬರ ಮಧ್ಯೆ ಇರುವ ಸಂಬಂಧ ‘ಪ್ರೀತಿ’ ಅಂತಾ ಕರೆದ್ರೇನೇ ಸರಿಯಾದ ಅರ್ಥ. ನಾನು ಇನ್ನೂ ನಿಂಜೊತೆ ಮಾತಾಡುವಾಗ  ಪ್ರೀತಿ, ಪ್ರೀತಿ, ಅಂತಾ ತಲೆ ತಿಂತೀನಿ ಅಲ್ವಾ.  ಅದೆಲ್ಲ ಏನೇ ಇರಲಿ, ಕೊನೆಯ ಉಸಿರಿರುವರೆಗೂ ನನ್ನೊಂದಿಗೆ ನೀನಿರುವ ಈ ಅನುಬಂಧ ಹೀಗೆಯೇ ಇರಲಿ. ಹಾಗೇ ನನ್ನಲ್ಲಿ ಒಂದು ಪ್ರಶ್ನೆ ಇದೆ ಕಣೋ. ಅದಕ್ಕಿನ್ನೂ ಉತ್ತರ ಸಿಗದೇ ನನ್ನಲ್ಲೇ ಉಳಿದಿದೆ. ಅದು; ನೀನು ನನಗಾಗಿ ಮಾಡಿದ್ದಾದರೂ ಏನು? ಕೊನೆಯ ಪಕ್ಷ ನಿನ್ನಿಂದ ಅಂತಹ ಪ್ರೀತಿನೂ ಸಹ ಸಿಕ್ಕಿಲ್ಲ ನನಗೆ. ನೀನೂ ಕೊಟ್ಟಿಲ್ಲ ಅಂತಹ  ಪ್ರೀತಿ, ನನಗೆ. ಅಂಥದ್ರಲ್ಲಿ ನನಗ್ಯಾಕೆ ನಿನ್ನ ಮೇಲೆ ಇಂಥಾ ಗಾಢ ಪ್ರೀತಿಯಿದೆ. ಇದು ಹೇಗಾದರೂ ಹುಟ್ಟಿತು ನನ್ನ ಮನಸ್ಸಿನಲ್ಲಿ? ಬಹುಶಃ ಕೊನೆಯವರೆಗೂ ನನ್ನ ಈ ಪ್ರಶ್ನೆಗೆ ಉತ್ತರ ಖಂಡಿತಾ ಸಿಗಲ್ವೇನೋ. ಆದ್ರೆ ನಿನಗೂ ನನ್ನ ಮೇಲೆ ಪ್ರೀತಿಯಿದೆ ಎಂದು ನಂಬಿದ್ದೀನಿ ಕಣೋ.



ಚಿನ್ನು; ಸತ್ಯಮಾಡಿ ಹೇಳ್ತೀನೋ ನಿನ್ನ ಬಿಟ್ಟು, ನಿನ್ನಿಂದ ದೂರಾಗಿ ಬದುಕಿರೋ ಶಕ್ತಿ ನನ್ನಲ್ಲಿ ನಿಜವಾಗ್ಲೂ ಇಲ್ಲ ಕಣೋ. ನನ್ನಿಂದ ಯಾವತ್ತೂ ದೂರ ಆಗಲ್ಲ ಅಂತಾ ಮಾತು ಕೊಡು ನನಗೆ. ಪ್ಲೀಸ್....  l

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry