ಪ್ರೀತಿಸಿ ವಿವಾಹವಾದರು, ಪ್ರೇಮಿಗಳ ದಿನವೇ ಇಹಲೋಕ ತ್ಯಜಿಸಿದರು

7

ಪ್ರೀತಿಸಿ ವಿವಾಹವಾದರು, ಪ್ರೇಮಿಗಳ ದಿನವೇ ಇಹಲೋಕ ತ್ಯಜಿಸಿದರು

Published:
Updated:

ಬೆಂಗಳೂರು: `ಡಾ.ವಿ.ಎಸ್. ಆಚಾರ್ಯ ಮತ್ತು ಶಾಂತಾ ಅವರದ್ದು ಅನನ್ಯ ದಾಂಪತ್ಯ. ಅವರದ್ದು ಪ್ರೇಮ ವಿವಾಹವೂ ಹೌದು. ಕೊನೆಯ ಕ್ಷಣದವರೆಗೂ ಅವರಿಬ್ಬರ ನಡುವಿನ ಪ್ರೀತಿ ಮಾಸಿರಲಿಲ್ಲ. ಆದರೆ ಆಚಾರ್ಯರು ಪ್ರೇಮಿಗಳ ದಿನವೇ ನಿಧನರಾಗಿದ್ದು ಮಾತ್ರ ದುರ್ದೈವದ ಸಂಗತಿ...~ಮಂಗಳವಾರ ನಿಧನರಾದ ಡಾ. ಆಚಾರ್ಯ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗಾಗಿ ರೇಸ್ ಕೋರ್ಸ್ ರಸ್ತೆಯ ಅವರ ಸರ್ಕಾರಿ ನಿವಾಸದಲ್ಲಿ ತುಸು ಹೊತ್ತು ಇಡಲಾಗಿತ್ತು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆಚಾರ್ಯರ ಬದುಕಿನ ಕೆಲವು ಪುಟಗಳನ್ನು ಹೀಗೆ ನೆನಪಿಸಿಕೊಂಡರು.`ಆಚಾರ್ಯರು ಮೈಸೂರಿನಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿದ್ದಾಗ ಶಾಂತಾ ಅವರ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತು. ಎಷ್ಟೇ ಒತ್ತಡದಲ್ಲಿರಲಿ, ಎಂಥದೇ ಸಂದರ್ಭ ಎದುರಾಗಿರಲಿ, ಮನೆಗೆ ಹೋದ ತಕ್ಷಣ ಅವರು ಮಾತನಾಡಿಸುತ್ತಿದ್ದದ್ದು ಶಾಂತಾರನ್ನು~ ಎಂದು ಕಾರ್ಣಿಕ್ ನೆನಪು ಮಾಡಿಕೊಂಡರು.  `ಯಾವುದೇ ವಿಷಯವಿರಲಿ, ಅದರ ಕುರಿತು ಸಾಕಷ್ಟು ಅಧ್ಯಯನ ಮಾಡುತ್ತಿದ್ದರು. ಅಧ್ಯಯನ ನಡೆಸದೆ ಯಾವ ವಿಷಯದ ಕುರಿತೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರಂಥ ರಾಜಕಾರಣಿಯನ್ನು ರಾಜ್ಯ ಇನ್ನು ಕಾಣುವುದಿಲ್ಲ~ ಎಂದರು.`ಆರ್‌ಎಸ್‌ಎಸ್ ಕಾರಣ: `ಆರ್‌ಎಸ್‌ಎಸ್ ಕಾರ್ಯಕರ್ತರಾದ ಆಚಾರ್ಯರಿಗೆ ರಾಜಕೀಯ ಪ್ರವೇಶಿಸುವಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ 1967-68ರ ಸಮಯದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕರಾಗಿದ್ದ ಎಂ.ಎಸ್. ಗೋಳ್ವಾಲ್ಕರ್ ಸೂಚನೆಯ ಕಾರಣ, ಆಚಾರ್ಯರು ಉಡುಪಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಗೆಲುವನ್ನೂ ಕಂಡರು~ ಎಂದು ಹಿಂದಿನ ದಿನಗಳ ಮೆಲುಕು ಹಾಕಿದವರು 52 ವರ್ಷಗಳಿಂದ ಆಚಾರ್ಯರ ಒಡನಾಡಿಯಾಗಿರುವ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರ ಗೌಡ.`ಉಡುಪಿ ನಗರಸಭೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1968ರಲ್ಲಿ) ಅವರು ರಾಜ್ಯದಲ್ಲೇ ಪ್ರಥಮ ಬಾರಿಗೆ, ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದರು. ಅನಂತರ ಈ ಪದ್ಧತಿಯನ್ನು ರಾಜ್ಯದೆಲ್ಲೆಡೆ ನಿಷೇಧಿಸಲಾಯಿತು. ಅವರ ಅವಧಿಯಲ್ಲಿ ಉಡುಪಿ ನಗರಸಭೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ಸೂಚಿಸಿ ರಾಜ್ಯ ಸರ್ಕಾರ ಐದು ಲಕ್ಷ ರೂಪಾಯಿಗಳ ಬಹುಮಾನ ನೀಡಿತ್ತು~ ಎಂದು ತಿಳಿಸಿದರು.`ಅವರು ಯಾವ ಸಂದರ್ಭದಲ್ಲೂ ವೈದ್ಯ ವೃತ್ತಿಯನ್ನು ಬಿಡಲಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲೂ ವೈದ್ಯರಾಗಿ ಕೆಲಸ ಮಾಡಿದ್ದ ನಿದರ್ಶನಗಳಿವೆ. ನಾನು ಕಂಡಂತೆ, ವೈಯಕ್ತಿಕ ಆಕಾಂಕ್ಷೆಗಳಿಲ್ಲದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಏಕೈಕ ವ್ಯಕ್ತಿ ಆಚಾರ್ಯರು~ ಎಂದು ರಾಮಚಂದ್ರ ಗೌಡರು ತಮ್ಮ ಗೆಳೆಯನ ಕುರಿತು ಅಭಿಮಾನದ ಮಾತು ಹೇಳಿದರು.ಪದವಿ ಒಪ್ಪದ ಮನುಷ್ಯ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗುವ ಅವಕಾಶ 1988ರ ಫೆಬ್ರುವರಿಯಲ್ಲಿ ಆಚಾರ್ಯರಿಗೆ ಇತ್ತು. ಆದರೆ ಅವರು ಆ ಹುದ್ದೆಯನ್ನು ಒಪ್ಪದ ಕಾರಣ, ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೇರಿದರು. ಅಷ್ಟೇ ಅಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದಾಗ ಆ ಹುದ್ದೆ ನಿಭಾಯಿಸುವಂತೆ ಆಚಾರ್ಯರನ್ನು ಕೋರಲಾಗಿತ್ತು. ಆದರೆ ಅದನ್ನೂ ನಿರಾಕರಿಸಿದರು. ಅಂಥ ರಾಜಕಾರಣಿ ಇನ್ನೆಲ್ಲಿ ಎಂದು ಪ್ರಶ್ನಿಸಿದ ಗೌಡರು ಮೌನವಾದರು.ಆಚಾರ್ಯರ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಅವರ ಜೊತೆ ಇರುತ್ತಿದ್ದ ಶ್ರೀನಿವಾಸ ಭಟ್ಟರ ಮುಖ ಕಳೆಗುಂದಿತ್ತು. ಆಚಾರ್ಯರ ಕುಟುಂಬದ ಸದಸ್ಯರು ಅವರ ಸರ್ಕಾರಿ ನಿವಾಸಕ್ಕೆ ಸಾಮಾನ್ಯವಾಗಿ ಬರುತ್ತಿರಲಿಲ್ಲ. ಇಲ್ಲಿದ್ದಾಗ ಅವರ ದೈನಂದಿನ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದವರು ಶ್ರೀನಿವಾಸ ಭಟ್ಟರು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದರು. ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟಿದ್ದಾಗಲೂ ಕುಟುಂಬದವರ‌್ಯಾರು ಅಲ್ಲಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry