ಪ್ರೀತಿ ಎಂಬ ಜೀವಜಲ

7

ಪ್ರೀತಿ ಎಂಬ ಜೀವಜಲ

Published:
Updated:

ಈ  ವರ್ಷವೂ ಫೆಬ್ರುವರಿ 14 ಬಂದೇ ಬಿಟ್ಟಿದೆ. ಪಡ್ಡೆಗಳಿಗೆ, ಪೋಲಿಗಳಿಗೆ,   ಮೊನ್ನೆಯಷ್ಟೆ ನೆಲ ಕಾಣದ ಷೋಡಶಿಯರಿಗೆ ಸಣ್ಣದೊಂದು ಪುಳಕ ನರನಾಡಿಗಳಲ್ಲಿ, ನಚ್ಚಗೆ ಹರಿದಾಡುತ್ತಿದೆ. ಕೆಲ ಕಾಲ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ `ಪ್ರೇಮಿಗಳ~ ದಿನ ಅನೇಕ ದಿನಗಳಂತೆ ಅನೇಕರ ಪಾಲಿಗೆ ಬಂದು ಹೋದರೂ ಈಗಿನ ಪ್ರೇಮಿಗಳಿಗಂತೂ ವಿಶೇಷವೇ.ಆದರೆ, ಅದೇ ಮೊನ್ನೆಯಷ್ಟೆ ಹುಡುಗನೊಬ್ಬನ ಕುಡಿನೋಟವನ್ನು ತನ್ನದೇ ಆದ ಪ್ರೀತಿಯ ಭಾಷೆಯಲ್ಲಿ ಭಾಷಾಂತರಿಸಿಕೊಂಡ ಹುಡುಗಿಗೆ? ಇವಳೇ ನನ್ನ ಬದುಕಿನ ಹುಡುಗಿ ಎಂದು ಅಫಿಡೆವಿಟ್ ಕೂಡ ಮಾಡಿಕೊಡಬಲ್ಲ, ಬಣ್ಣದ ಕನಸಿನ ಲೋಕದ ಒಳ ಹೊಕ್ಕ ಹುಡುಗನಿಗೆ? ಅದೊಂದು ಎಲ್ಲರ ಜೀವನದಲ್ಲಿ ಬರುವ ಸಣ್ಣ ಸಂಗತಿ ಅನಿಸಿದರೂ ಜೀವನ ಪೂರ್ತಿ ನೆನಪಲ್ಲಿ ಉಳಿಯುವ ಹದಿಹರೆಯದವರಿಗೆ? ಪ್ರತಿ ದಿನವೂ `ಪ್ರೇಮಿಗಳ ದಿನ~ವೇ.`ಪ್ರೀತಿ~ ಯಾಕೆ ಹುಟ್ಟುತ್ತದೆ, ಎದೆಯೊಳಗೆ ಎಲ್ಲಿ ಇಳಿಯಿತು ಎಂಬೆಲ್ಲ ಜಿಜ್ಞಾಸೆಗಳು ಅನೇಕ ಕಾಲದಿಂದ ನಡೆದೇ ಇವೆ. ಅದಕ್ಕೊಂದು ಕಾರಣ, ತರ್ಕ, ತತ್ವ ಎನ್ನುವುದು ಇನ್ನೂ ಸಿದ್ಧವಾಗಿಲ್ಲ.`ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ~ ಎನ್ನುವಂತೆ ಕನಕಾಂಗಿಯೂ, ಕನಕರೂ ಒಟ್ಟಾಗಿಯೇ ಪ್ರೇಮದ ಮಡುವಿನಲ್ಲಿ ಬೀಳಬೇಕು ಎಂದೇ ಬೀಳುತ್ತಾರೆ. ಅಲ್ಲಿಂದ ಏಳುವ ಮನಸ್ಸಿಲ್ಲದೆ ಅಲ್ಲೇ ಉಳಿದುಕೊಳ್ಳುತ್ತಾರೆ.ಅದಕ್ಕೊಂದು ದೃಢೀಕರಣ ಇರಲಿ ಎಂದು ಮದುವೆ ಕೂಡ ಆಗುತ್ತಾರೆ. ಮದುವೆ ಇಲ್ಲದೆ ಪ್ರೀತಿ ಸಾಧ್ಯವೇ ಇಲ್ಲವೆ? ಅದಕ್ಕೆ ಉದಾಹರಣೆಗಳನ್ನು ಕೊಡುವುದು, ಹುಡುಕಾಡುವುದು ಬೇಡ. ಮದುವೆಯಾಗಿಯೂ ಇನ್ನೊಬ್ಬರನ್ನು ಪ್ರೀತಿಸಬಹುದು. (ಎಷ್ಟು ಜನರನ್ನು ಎಂಬುದನ್ನು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು!). ಈ ಪ್ರೀತಿಗೆ ಕೊಂಚ ಧೈರ್ಯ ಬೇಕು. ಹೌದು, ಪ್ರೀತಿ ಧೈರ್ಯದ ವಿಷಯವೂ ಕೂಡ.ಆಕೆಗೆ ತನ್ನಲ್ಲಿ ನಿನ್ನ ಬಗ್ಗೆ ಪ್ರೀತಿ ಹುಟ್ಟಿಕೊಂಡಿದೆ ಎಂದು ಸರಿಯಾದ ಸಮಯದಲ್ಲಿ ಹೇಳಲಾಗದೆ ಜೀವನವಿಡೀ ಪರಿತಪಿಸುವ, ಅದಕ್ಕಾಗಿ ಮದುವೆ ಕೂಡ ಆಗದೆ ಒಂಟಿಯಾಗಿರುವ, ಮದುವೆ ಆಗಿಯೂ ಅವಳ/ ಅವನ ನೆನಪಲ್ಲೇ `ಸಿಹಿ ನೆನಪೇ ಮನದಲ್ಲಿ ಆರಾಧನೆ~ ಎನ್ನುತ್ತ ಬದುಕನ್ನು ತಳ್ಳುವವರ ಸಂಖ್ಯೆಯೂ ಹೆಚ್ಚಿದೆ.ಆದ್ದರಿಂದ ಪ್ರೀತಿಯ ಆಯಾಮ ಅನೇಕ, ಅಗಣಿತ, ಮುಖವನ್ನುಳ್ಳದ್ದು. ಈ ವಸ್ತುವನ್ನು ಆಧರಿಸಿಯೇ ಅನೇಕ ಶ್ರೇಷ್ಠ ಕಾದಂಬರಿಗಳು ಬಂದಿವೆ. ಕವಿತೆಗಳು ಇವೆ. ಹದಿಹರೆಯದ ಪ್ರೀತಿಯನ್ನು ಇಟ್ಟುಕೊಂಡೇ ಸಿನಿಮಾದ ಮಂದಿ ರೀಲುಗಳನ್ನು ಮಡಚುತ್ತಾ ಬಂದಿದ್ದಾರೆ.ಪ್ರೀತಿ ಅಂಥವರಿಗೆ ಬಂಡವಾಳ. ಆದರೆ ನಮ್ಮಂಥ ಹುಲು ಮಾನವರಿಗೆ? ಅದೇ ಎಲ್ಲ ಎನ್ನುವುದು ಹದಿಹರೆಯದ ಹುಡುಗರ ಮಾತು. ಆದರೆ, ಕವಿತೆ, ಸಿನಿಮಾಗಳು ಹುಡುಗ/ ಹುಡುಗಿಯರ ಪ್ರೀತಿಗೆ ಮಾತು ಕೊಟ್ಟಿವೆ.ಯಾವುದು ಪ್ರೀತಿಗೆ ಸರಿಯಾದ ವಯಸ್ಸು? ಅದಕ್ಕೆ ಸರ್ಕಾರಿಗೆ ನೌಕರಿಗೆ ಇದ್ದಂತೆ ವಯೋಮಿತಿ ಎನ್ನುವುದು ಇದೆಯೇ? ಯಾವ ವಯಸ್ಸಿನಲ್ಲಿ ಪ್ರೀತಿ ಪಕ್ವಗೊಳ್ಳುತ್ತದೆ. ಅಂಥ ಯಾವ ವ್ಯಾಕರಣ, ಸಂಕಲನ, ವ್ಯವಕಲನವನ್ನೂ ಪ್ರೀತಿಯ ಬಗ್ಗೆ ಹೇಳಲಾಗುವುದಿಲ್ಲ. ಇಪ್ಪತ್ತರ ಬಿಸುಪು ಮೂವತ್ತರಲ್ಲಿ ಇಲ್ಲದಿರಬಹುದು. ಮೂವತ್ತರ ಹುಡುಗನ ಪ್ರೀತಿಯನ್ನು ಪ್ರೀತಿ ಅಲ್ಲ ಎಂದು ಹೇಳಲಾಗದು.

 

ಇಪ್ಪತ್ತರ ಹುಡುಗ ಹುಡುಗಿ ಪ್ರೀತಿಸಿದರೆ ಮಾತ್ರ ಅದನ್ನು ಪ್ರೀತಿ ಎನ್ನಬಹುದೆ? ಹೀಗಾಗಿ ಅದಕ್ಕೊಂದು ದಿಕ್ಕು ದೆಸೆ ಎನ್ನವುದು ಅದರಲ್ಲಿ ಇಳಿದವರಿಗಾಗಲಿ, ಉಳಿದವರಿಗಾಗಲೀ ಗೊತ್ತಾಗುವುದು ಅಸಾಧ್ಯ. ಹಾಗಾದರೆ ಪ್ರೀತಿ ಎಂದರೆ ಏನು, ಯಾವುದು? ತಿಳಿಯದು ಎಂದು ಕೆಲವರು ಅನ್ನಬಹುದಾದರೆ, ಕೆಲವರು ನನ್ನ ಹುಡುಗಿ, ಹುಡುಗನೇ ಅದು ಎನ್ನಬಹುದು.ಸಿಕ್ಕಿದ ಹುಡುಗಿಗಿಂತ, ಸಿಗದ ಹುಡುಗಿಯ ನೆನಪೇ ಹೆಚ್ಚಾಗಿ ಕಾಡುತ್ತದೆ ಎನ್ನುತ್ತಾನೆ ಕವಿಯೊಬ್ಬ. ಆದರೆ ಅದೇ ಹುಡುಗಿಯೊಬ್ಬಳಿಗೆ? ಅವನು ಒಬ್ಬನೆ, ಇನ್ನೊಬ್ಬನೆ? ಕೇವಲ ಮದುವೆಯಾದವನೆ? ಬದುಕಿನ ಸಂಕೀರ್ಣತೆಯ ಹಾಗೆಯೇ ಪ್ರೀತಿಯ ಸಂಕೀರ್ಣತೆಯನ್ನು, ಅದರ ಜಟಿಲ ಹೆಣಿಗೆಯನ್ನು ವಿವರಿಸುವುದು ಅಸಾಧ್ಯ.

 

ಆದರೆ, ಪ್ರೀತಿ ಎಂಬ ಮಾಯಕದ ವಸ್ತು ಬೇಡ ಎನ್ನುವವರು ಬಹುಶಃ ಯಾರೂ ಇರಲಾರರು. ಅದರ ನರಗಳಿಂದ ಉಕ್ಕುವ ಚುಂಬಕ, ಮೋಹಕ ಗುಣಕ್ಕೆ ಮನಸೋಲದವರು ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ.ಭಾರತೀಯರು ಎಂಥ ಕಿಲಾಡಿಗಳು ನೋಡಿ. ಸರ್ವಾಂತರ್ಯಾಮಿ, ಸರ್ವವ್ಯಾಪಿಯಾದ ಹಾಗೂ ಅಷ್ಟೇ ವೈಯಕ್ತಿಕವಾದ ಈ ಪ್ರೀತಿಯ ನಡುವೆ ಯಾರೂ ತಲೆ ಹಾಕಬಾರದು ಎಂದೇ ಅವರು ಪ್ರೀತಿಗೆ ಎಂದು ಒಂದು ದೇವರನ್ನು ಇಟ್ಟುಕೊಂಡಿಲ್ಲ! ಪ್ರೀತಿಗೆ ದೇವರ ಗೊಡವೆಯೂ ಬೇಡ. (ಪ್ರೀತಿಯಲ್ಲಿ ಮುಳುಗಿದ ಹುಡುಗನಿಗೆ `ಪ್ರೇಮ ದೇವತೆ~ ಇದ್ದೇ ಇರುತ್ತಾಳಲ್ಲ!) ಕಾಮ, ಕ್ರೋಧಕ್ಕೆಲ್ಲ ದೇವರು ಇದ್ದಾನೆ.ಹಾಗಾಗಿ ಆಕಾರವಿಲ್ಲದ ಪ್ರೀತಿಗೆ ಸಾಕಾರಗೊಂಡ ದೇವರಿಲ್ಲ! ಹಾಗೆಂದು ನಮ್ಮ ದೇವರೆಲ್ಲ ಪ್ರೀತಿಯನ್ನು ಬಿಟ್ಟವರಲ್ಲ. ಅವರೆಲ್ಲ ತಮ್ಮ ಶಕ್ತ್ಯಾನುಸಾರ ಪ್ರೀತಿಯ ನದಿಯಲ್ಲಿ ಈಜು ಬಿದ್ದವರೇ. ಆ ಸಂದರ್ಭದಲ್ಲಿ ಆದ ಲಪಡಾಗಳು, ಭಾನಗಡಿಗಳು ಎಲ್ಲಿಗೂ ಗೊತ್ತಿರುವಂಥವೇ.

 

ಮಾನವರ ಪ್ರೇಮ ಕಹಾನಿಗಳು ಅಪರೂಪ ಎನ್ನುವಂತೆ ನಾಲ್ಕು ಜನರಿಗೆ ಗೊತ್ತಾಗುತ್ತವೆ. ಅದಕ್ಕಿಂತಲೂ ಮೊದಲು ಮನೆಯವರಿಗೆ ತಿಳಿಯುತ್ತವೆ. ಅಪ್ಪ, ಅಣ್ಣಂದಿರ ವಜ್ರಮುನಿ, ಅಮರೇಶಪುರಿ ಅವತಾರವನ್ನು ಕಾಣುವುದು ಆಗಲೇ.ಈಗೀಗ ಪ್ರೀತಿಗೆ ವೈಯಕ್ತಿಕತೆ ಎನ್ನುವುದು ಕಡಿಮೆಯಾಗಹತ್ತಿದೆ. ಮೊದಲೆಲ್ಲ `ನನ್ನ ಮುದ್ದಿನ ಬೆಕ್ಕೇ, ಪ್ರಿಯ ರಾಕ್ಷಸಿ, ಕೋತಿಯೇ, ಬೆಳದಿಂಗಳೇ, ಮೊಡವೆ ಮುಖದ ಚೆಲುವೆಯೇ...~ ಮುಂತಾಗಿ ಸಂಬೋಧಿಸಿ ಬರೆಯುವ ಪ್ರೇಮ ಪತ್ರಗಳಲ್ಲಿ, ಗ್ರೀಟಿಂಗುಗಳಲ್ಲಿ ವ್ಯಕ್ತವಾಗುತ್ತಿದ್ದ ಭಾವನೆಗಳು ತಮ್ಮ ಮೊದಲಿನ ರಮ್ಯತೆಯನ್ನು ಉಳಿಸಿಕೊಂಡಂತಿಲ್ಲ.

 

`ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ~ ಎಂದು ಹುಡುಗರು ಗೆಳೆಯರೆದುರು ಬಹಿರಂಗವಾಗಿಯೇ ಸಾರುತ್ತಾರೆ. ಹುಡುಗಿಯರೂ ಈ ವಿಷಯದಲ್ಲಿ ನೇರವಾಗಿದ್ದಾರೆ. ಪ್ರೇಮ ಪತ್ರವನ್ನು ಈಗ ಕೇಳಲೇ ಬೇಡಿ.

 

ಒಂದು ಎಸ್‌ಎಂಎಸ್, ಫೋನ್‌ಕಾಲ್‌ನಲ್ಲಿ, ಇ-ಮೇಲ್‌ನಲ್ಲಿ ಭಾವನೆಗಳು ದಾಟಿರುತ್ತವೆ. ಅದೂ ಕೂಡ ಹಳಸಲಾದ ಯಾರೋ ರೂಪಿಸಿದ ನುಡಿಗಟ್ಟುಗಳಲ್ಲಿರುತ್ತವೆ. ಗೆಳೆಯನೊಬ್ಬ ಕಳಿಸಿದ ಪ್ರೀತಿಯ ಕೊಟೇಶನ್ ಯಾರಿಗೋ ಫಾರ್‌ವರ್ಡ್ ಆಗಿರುತ್ತದೆ.

 

ಅಂದರೆ ಯುವಪ್ರೇಮಿಗಳ ಪ್ರೇಮದ ಪರಿ ಬದಲಾಗಿದೆಯೇ? ಅವರೆಲ್ಲ ಮನಬಿಚ್ಚಿ (ಬೇರೆನೂ ಅಲ್ಲ!) ಒಂದು ಪ್ರೇಮಪತ್ರವನ್ನು ಬರೆದು ಯಾವ ಕಾಲವಾಯಿತು? ಅವನ ಹುಟ್ಟುಹಬ್ಬದ ದಿನ ಬಸ್‌ಸ್ಟಾಪಿನಲ್ಲಿ ಕಾದು, ಜೊತೆಗಿದ್ದ ಗೆಳತಿ ಕೊಟ್ಟ ಧೈರ್ಯದ ಮೇಲೆ ಸುಂದರ ಗ್ರೀಟಿಂಗ್ ಅನ್ನು ನಡಗುವ ಕೈಗಳಲ್ಲಿ ಕೊಟ್ಟದ್ದು ಎಷ್ಟು ದಶಕದ ಹಿಂದೆ? ಒಟ್ಟಿಗೇ ನರಸಿಂಹಸ್ವಾಮಿಯವರ, ಯೋಗರಾಜ ಭಟ್ಟರ ಗೀತೆಯನ್ನು ಗುನುಗಿಕೊಂಡದ್ದು ಯಾವ ಶತಮಾನದಲ್ಲಿ? ಆದರೆ, `ಕುಡಿ ನೋಟವೇ ಬಲು ಮೋಹಕ~ ಎನ್ನುವ ಹಿಂದಿನ ರಮ್ಯ ಗುಣವನ್ನು, ಅದು ಹೀಗೇ ಇರಬೇಕು ಎಂದು ನಾವು  ಬಯಸುವುದು ತಪ್ಪಾದೀತೇನೊ.

 

ಬದುಕಿನ ಹಾಗೆಯೇ ಅದೂ ಬದಲಾಗುವ ಗುಣವುಳ್ಳದ್ದು. ಪರಿವರ್ತನೆಗೊಳ್ಳುವ ಸ್ವಭಾವವಿಲ್ಲದಿದ್ದರೆ ಅದು ಪ್ರೀತಿ ಹೇಗಾದಿತು, ಯಾಕಾದೀತು? ಅದರ ಆಳವನ್ನು ಮಾತ್ರ ಈ ಹಣದ ಜಗತ್ತಿನಲ್ಲಿ ಪರೀಕ್ಷಿಸಬೇಕಾದೆ. ಬಹುಶಃ ಪ್ರೀತಿ ಎನ್ನುವುದು ಹಣ, ನೌಕರಿ, ಜಾತಿ, ಅಂತಸ್ತಿನ ಹಿಂದೆ ಬಿದ್ದು `ಸುರಕ್ಷಿತ ವಲಯ~ವನ್ನು ಹುಡುಕಿಕೊಂಡಂತಿದೆ.`ದೇಹಕ್ಕೆ ಆಹಾರ ಹೇಗೆ ಬೇಕೋ ಹಾಗೆ ಆತ್ಮಕ್ಕೆ ಪ್ರೇಮವೂ ಅವಶ್ಯಕ. ಪ್ರೇಮದ ಅನುಭೂತಿ ಇಲ್ಲದ ಜೀವನಕ್ಕೆ ಯಾವ ಅರ್ಥ ಹಾಗೂ ಅಸ್ತಿತ್ವಗಳಿಲ್ಲ~ ಎಂದು ಓಶೋ ರಜನೀಶ್ ಹೇಳುತ್ತಾನೆ. `ಪ್ರೇಮ ವಿಧೇಯವಲ್ಲ, ಪ್ರೇಮ ಕ್ರಾಂತಿಕಾರಿ, ಪ್ರೇಮವನ್ನು ಹೊಂದಲು ಸಾಧ್ಯವಿಲ್ಲ~ ಎಂದೂ ಅವನು ಹೇಳುತ್ತಾನೆ.

 

ಜಗತ್ತಿನಲ್ಲಿ ಪ್ರೀತಿಸದೇ ಇರಲು ಯಾರಿಗೂ ಸಾಧ್ಯವಿಲ್ಲ. ಪ್ರೀತಿಯ ಅನೇಕ, ಅನಂತ ಸ್ವರೂಪಗಳು ಇವೆ. ನಮ್ಮ ಸುತ್ತಲಿನ ಬಂಧುಗಳ ಅಂತಃಕರಣದ ಮಮತೆಯ ಪ್ರೀತಿಯನ್ನು ಹೊರತು ಪಡಿಸಿದರೆ ಗಂಡು ಹೆಣ್ಣಿನ ಏನೋ ಒಂಥರ ಅನ್ನಿಸುವ ಪ್ರೀತಿಯ ರೀತಿಯೇ ಬೇರೆಯದು.

 

ಹೆಣ್ಣು ವಯಸ್ಸಿಗೆ ಯಾವಾಗ ಬಂದಳು ಎನ್ನುವ ಖಚಿತ ದಿನಾಂಕ, ಸಮಯ ಹೇಗೆ ಗೊತ್ತಿರುವುದಿಲ್ಲವೊ ಹಾಗೆ ಪ್ರೀತಿ ಮೊಳೆತದ್ದೂ ಅದು ಮರವಾಗಿದ್ದೂ ಗೊತ್ತೇ ಆಗುವುದಿಲ್ಲ.`ಅವಳು ಬರುತ್ತಿದ್ದಾಳೆ ಎಂಬ ಸುದ್ದಿಯ ತಿಳಿದು ನನ್ನ ಮುಖಾರವಿಂದ ಅರಳಿದೆ/ ಸುತ್ತಮುತ್ತಲಿನವರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ ರೋಗಿ ಚೇತರಿಸಿಕೊಳ್ಳತ್ತಿದ್ದಾನೆಂದು~ ಎಂದು ಉರ್ದುವಿನ ದೊಡ್ಡ ಕವಿ ಮಿರ್ಜಾ ಗಾಲಿಬ್ ತನ್ನ ಕವಿತೆಯೊಂದರಲ್ಲಿ ಬರೆದುಕೊಂಡಿದ್ದಾನೆ.

 

ಪ್ರೀತಿಗೆ ಚಿಕಿತ್ಸೆ ನೀಡುವ ಗುಣವೂ ಉಂಟು. ಪ್ರೀತಿಸಿದವರು ಬಳಿಗೆ ಬಂದಾಗ ಆಗುವ ಬದಲಾವಣೆ ಊಹಾತೀತ. ಅದಕ್ಕೆ ಇರುವುದು ನೀರಿನಂಥ ಗುಣ. ಯಾವ ಪಾತ್ರೆಯಲ್ಲಿ ಹಾಕುತ್ತೀರಿ ಆ ಆಕಾರವನ್ನು ತಳೆಯುತ್ತದೆ. ಆ ಸ್ಥಳವನ್ನು ಅದು ಆವರಿಸಿಕೊಳ್ಳುತ್ತದೆ.ನಮ್ಮ ಅಹಂಕಾರದ ಪಾತ್ರೆಯನ್ನು ಬರಿದು ಮಾಡಿ ಪ್ರೀತಿಯ ನೀರನ್ನು ಸುರಿದುಕೊಂಡಾಗ ಹೊಸ ಕನಸಿನ ಲೋಕವೊಂದು ತೆರೆದುಕೊಳ್ಳುತ್ತದೆ. ಅದು ಜೀವಜಲವಾಗಿ ನಮ್ಮ ಅನೇಕ ಗಾಯಗಳಿಗೆ ಔಷಧಿಯಾಗಬಲ್ಲದು. ಕೆಲವರಿಗೆ ಇದು ತಡ ಎನಿಸಿದರೂ ಅದು ನಮ್ಮಳಗೇ ಇದೆ ಎನ್ನುವುದನ್ನು ಮಾತ್ರ ಅರಿತುಕೊಳ್ಳಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry