ಮಂಗಳವಾರ, ಜೂನ್ 22, 2021
29 °C

ಪ್ರೀತಿ, ಪ್ರೇಮ, ಪ್ರಣಯ

ಎನ್ವಿ Updated:

ಅಕ್ಷರ ಗಾತ್ರ : | |

ಆರನೇ ಇಯತ್ತೆಯ ಹುಡುಗ ಮೊದಲ ಸಲ ಡೇಟ್‌ಗೆ ಹೊರಟ. ಹುಡುಗಿ ಐಸ್‌ಕ್ರೀಮ್ ಬೇಕೆಂದಳು. ಕೊಡಿಸಿದ. ಒಂದು ಗಂಟೆಯೂ ಕಳೆದಿರಲಿಲ್ಲ. ಕಾಫಿ ಬೇಕೆಂದಳು. ಅದನ್ನೂ ಕೊಡಿಸಿದ. ಇಷ್ಟಪಟ್ಟ ಹುಡುಗಿ ಬಯಸಿದ್ದೆಲ್ಲವನ್ನೂ ಕೊಡಿಸಿದ ಹೆಮ್ಮೆ ಅವನಿಗೆ. ಆಗಾಗ ಜೇಬಿನಲ್ಲಿ ಕೈಇಳಿಬಿಡುತ್ತಿದ್ದ. ‘ಪಾಕೆಟ್ ಮನಿ’ಯಲ್ಲಿ ಉಳಿದಿರುವುದೆಷ್ಟು ಎಂಬ ಸಹಜ ಆತಂಕ. ಆ ಹಣಕ್ಕೂ ಮೀರಿದ ಏನನ್ನಾದರೂ ಹುಡುಗಿ ಕೇಳಿಬಿಟ್ಟರೆ ಏನು ಗತಿ ಎಂಬ ಚಿಂತೆ.ಓದುತ್ತಿದ್ದ ಸಬ್ಜೆಕ್ಟ್‌ಗಳು, ಭರ್ತಿ ಮಾಡಬೇಕಿದ್ದ ಕ್ಲಾಸ್‌ವರ್ಕ್‌ನ ಖಾಲಿ ಪುಟಗಳು, ಇಷ್ಟದ ಶಿಕ್ಷಕಿ, ಇಷ್ಟವಾಗದ ಶಿಕ್ಷಕ, ಆಪ್ತ ಸ್ನೇಹಿತರು ಎಲ್ಲರನ್ನೂ ಆ ದಿನದ ಒಂದಿಷ್ಟು ಗಂಟೆ ಅವನು ಮರೆತಿದ್ದ. ಹುಡುಗಿಯ ಪುಟ್ಟ ಕೈಗಳನ್ನು ಹಿಡಿಯುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲೇ ಡೇಟಿಂಗ್‌ನ ಅಷ್ಟೂ ಸಮಯ ಕಳೆದುಹೋಯಿತು. ತನ್ನಿಷ್ಟದ ತಿನಿಸು, ಪಾನೀಯಗಳನ್ನು ಪಡೆದಾಗಲೆಲ್ಲಾ ಹುಡುಗಿಯ ಮುಖವನ್ನು ಆವರಿಸಿಕೊಳ್ಳುತ್ತಿದ್ದ ಪರಮಾನಂದ ಹುಡುಗನ ಎದೆಯಲ್ಲಿ ಚಿಟ್ಟೆಗಳನ್ನು ಹಾರಿಸುತ್ತಿತ್ತು. ಕೊನೆಗೆ ಕೈಗಳ ಸ್ಪರ್ಶವೂ ಇಲ್ಲದೆ ಡೇಟಿಂಗ್ ಮುಗಿಯಿತು.ತಮ್ಮ ಬದುಕಿನ ಮೊದಲ ಡೇಟಿಂಗನ್ನು ಹೀಗೆ ಪುಟ್ಟ ಕತೆಯಂತೆ ಹೇಳಿಕೊಂಡವರು ‘ಆಶಿಕಿ ೨’ ಹಿಂದಿ ಚಿತ್ರದ ನಾಯಕ ಆದಿತ್ಯ ರಾಯ್ ಕಪೂರ್.ಪ್ರೀತಿ, ಪ್ರೇಮ, ಪ್ರಣಯ, ಭಗ್ನಪ್ರೇಮ ಇವಿಷ್ಟೂ ಅನುಭವಗಳನ್ನು ಕಂಡುಂಡಿರುವವರು ಆದಿತ್ಯ. ಜೀವನದಲ್ಲಿ ಅವರಿಗೆ ಎರಡು ಸಲ ಪ್ರೇಮ ಭಗ್ನವಾಗಿದೆ. ‘ಮೊದಲನೆಯದ್ದು ಒಂಬತ್ತನೇ ತರಗತಿಯಲ್ಲಿದ್ದಾಗ. ಇನ್ನೊಂದು ಇತ್ತೀಚೆಗೆ’ ಎಂದಷ್ಟೇ ಹೇಳಿ ಅವರು ಸುಮ್ಮನಾಗುತ್ತಾರೆ. ಬದುಕಿನಲ್ಲಿ ಹುಡುಗಿಯೊಬ್ಬಳಿಗೆ ಮೊದಲ ಚುಂಬನ ಕೊಟ್ಟ ಕ್ಷಣ ಅವರ ಮನದಲ್ಲಿದೆ. ಆದರೆ ಅದು ಯಾವಾಗ, ಎಂದು, ಯಾರಿಗೆ ಎಂಬುದು ಖಾಸಗಿ ವಿಚಾರ. ಒಂದು ರಾತ್ರಿಯ ಮಟ್ಟಿನ ಗೆಳತಿ ಎಂಬ ಪರಿಕಲ್ಪನೆಯನ್ನು ವೈಯಕ್ತಿಕವಾಗಿ ಅನುಭವಿಸದ ಅವರಿಗೆ ಒಪ್ಪಿತವಾದ ಯಾವುದೇ ರೀತಿಯ ಪ್ರೀತಿಯ ಕುರಿತು ತಕರಾರೇನೂ ಇಲ್ಲ; ಅದು ಸಲಿಂಗಿಗಳ ಪ್ರೇಮ ಆಗಿರಲಿ, ಲಿವ್-–ಇನ್ ಸಂಬಂಧಗಳಾಗಿರಲಿ. ‘ಪರರ ಪ್ರೇಮಸಲ್ಲಾಪವನ್ನು ಹಣಕಿ ನೋಡುವುದು ಅಸಹ್ಯಕರ ವ್ಯಕ್ತಿತ್ವದ ಸಂಕೇತ’ ಎಂಬುದು ಅವರ ಭಾವನೆ. ಇಬ್ಬರು ಪ್ರೇಮಿಗಳಿಗೆ ತೊಂದರೆ ಕೊಡುವ ಮೂರನೇ ವ್ಯಕ್ತಿಯನ್ನು ಅವರು ‘ಸ್ಯಾಡಿಸ್ಟ್’ ಎಂದೇ ಬಣ್ಣಿಸುತ್ತಾರೆ. ಓದುವ ದಿನಗಳಲ್ಲಿ ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಷ್ಟರ ಮಟ್ಟಿಗೆ ಅಂಥ ಸ್ಯಾಡಿಸ್ಟ್‌ಗಳು ವರ್ತಿಸಿದ್ದರಂತೆ.ತಮ್ಮಿಷ್ಟದ ಹುಡುಗಿ ಹೇಗಿರಬೇಕು ಎಂಬುದರ ಬಗೆಗೂ ಅವರ ಕಲ್ಪನೆ ಸ್ಪಷ್ಟ. ಮುಖಲಕ್ಷಣಕ್ಕೆ ಹೊಂದುವಂಥ ಸುಂದರವಾದ ಮೂಗು. ಕತ್ತಿಯ ಅಂಚಿನಂಥ ಕಣ್ಣೋಟ. ಮಾಡುವ ಕೆಲಸದಲ್ಲಿ ಸದಾ ಮನಸ್ಸಿಡುವ ಸ್ವಭಾವ. ಎಲ್ಲಕ್ಕೂ ಮಿಗಿಲಾಗಿ ಪ್ರಫುಲ್ಲಗೊಳಿಸುವಂಥ ದೇಹದ ಪರಿಮಳ- ಇವಿಷ್ಟೂ ಇದ್ದರಷ್ಟೇ ಅವರಿಗೆ ಹುಡುಗಿ ಇಷ್ಟವಾಗುವುದು.ಪ್ರತಿ ಪುರುಷ ಏಳು ಸೆಕೆಂಡಿಗೆ ಒಮ್ಮೆ ಮನಸ್ಸಿನಲ್ಲಿಯೇ ಸೆಕ್ಸ್ ಕಲ್ಪಿಸಿಕೊಳ್ಳುತ್ತಾನೆ ಎಂದು ಸಮೀಕ್ಷೆಯೊಂದು ತಿಳಿಸಿರುವುದನ್ನು ಹೇಳುತ್ತಾ, ಆದಿತ್ಯ ನಗುತ್ತಾರೆ. ಅದು ಶುದ್ಧ ಸುಳ್ಳು ಎನ್ನುವ ಅವರು, ‘ಸದಾ ಕಾಲ ಮನಸ್ಸಿನಲ್ಲಿ ಯಾರೂ ಸೆಕ್ಸ್ ಕಲ್ಪಿಸಿಕೊಳ್ಳುತ್ತಾ ಕೂರಲಾರರು’ ಎಂದು ಮಾತು ಸೇರಿಸುತ್ತಾರೆ.‘ಮೊದಲು ನನ್ನ ಗೆಳತಿ ಮೋಸ ಮಾಡಿದರೆ ಮತ್ತೆ ಅವಳ ಕಡೆ ತಲೆಎತ್ತಿ ನೋಡಬಾರದು ಎನಿಸುತ್ತಿತ್ತು. ಈಗ ಬಹುಶಃ ನಾನು ಆ ವಿಷಯದಲ್ಲಿ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ. ನನ್ನಂತೆ ಅವಳೂ; ಅವಳಂತೆಯೇ ನಾನು. ಈ ದಿನಮಾನದಲ್ಲಿ ಪ್ರೀತಿ ಗಟ್ಟಿಗೊಳ್ಳಬೇಕಾದರೆ ಸೆಕ್ಸ್ ಅನಿವಾರ್ಯ ಎಂದು ಸ್ನೇಹಿತನೊಬ್ಬ ಎರಡು ವರ್ಷಗಳ ಹಿಂದೆ ಹೇಳಿದ್ದ. ಅವನ ಅಭಿಪ್ರಾಯವನ್ನು ಸಾಬೀತುಪಡಿಸುವಂತೆ ನನ್ನ ಕೆಲವು ಆಪ್ತೇಷ್ಟರು ವರ್ತಿಸಿದ್ದಾರೆ.ತಲೆಮಾರಿನಿಂದ ತಲೆಮಾರಿಗೆ ಪ್ರೀತಿ, ಸಲ್ಲಾಪ, ಪ್ರೇಮ, ಕಕ್ಕುಲತೆ ಇವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಆ ಕುರಿತು ನನ್ನ ಅಭಿಪ್ರಾಯವನ್ನು ನನ್ನ ಅಜ್ಜ ಕೇಳಿಸಿಕೊಂಡರೆ ಕಪಾಳಕ್ಕೆ ಹೊಡೆಯಬಹುದು’–- ಆದಿತ್ಯ ಆಡಿದ ಈ ಮಾತಿನಲ್ಲಿ ಒಂದು ಸತ್ಯ, ತತ್ವ ಅಡಗಿದೆಯಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.