ಪ್ರೀತಿ ಮೃತ್ಯು ಭಯ

7

ಪ್ರೀತಿ ಮೃತ್ಯು ಭಯ

Published:
Updated:

uthorities ತಗಾದೆ ಮಾಡ್ತಿದಾರೆ ತಗೊಂಡು ಹೋದರೆ ಒಳ್ಳೇದು~ ಎಂದು ಇನ್ನು ಯಾರೋ ಹೇಳಿದರು. ವಾರಸುದಾರರು ನಾಳೆ ಬೆಳಗ್ಗೆ ಬರುತ್ತಾರೆ ಎಂದು ಇನ್ನೊಂದು ರಾತ್ರೆಯ ಕರುಣೆ. ಪರದೇಶಿ. ನಾನು ಜೀವದಿಂದಿದ್ದೂ ಎಲ್ಲೋ ಆಸ್ಪತ್ರೆಯಲ್ಲಿ ಸತ್ತ. ಖಾಹಿಲೆಯೆಂದು ಸ್ವಲ್ಪ ಮೊದಲೇ ತಿಳಿಸಬಾರದಾ ಚಂದ್ರು.

 

ವಾಸನೆಯಾಗಿ ಹೋದಿ. ನನ್ನ ತಮ್ಮ, ಎಡಗೈ ಮುಂದೆ ಮಾಡಿ ಲೇವಡಿ ಮಾಡುತ್ತಿದ್ದವ, ಇಪ್ಪತ್ತೈದರ ಎಳೆಯ ಸತ್ತ. ಯಾಕೆ ಸಾಯಬೇಕು. ಅರ್ಥವೇನು. ಶ್ಯಾಮಲಾ ನಾನು ಬಾತು ಕೊಳೆಯುತ್ತಿದ್ದ ತಮ್ಮನ ಹೆಣ ನೋಡಿದೇನೆ. ಅಪ್ಪ, ಸುಮ್ಮನೆ ಪರಚಿಕೊಂಡು ತಲೆ ಜಪ್ಪಿಕೊಳ್ಳುತ್ತೀರಿ ಯಾಕೆ; ಅಮ್ಮ ಚುಚ್ಚಿ ಚುಚ್ಚಿ ನನ್ನನ್ನ ಪೀಡಿಸುವಿ ಯಾಕೆ.`ಶ್ಯಾಮಲನನ್ನು ಮದುವೆಯಾಗಬೇಡ. ಜಾತಿ ಬೇರೆ ಎಂದು ಪಾಲಿಡಾಲ್ ಕುಡಿದು ಸಾಯುತ್ತೇವೆ ಎನ್ನುವಿರಾ~. ನಾವೆಲ್ಲ ಸಾಯಲೇಬೇಕು. ಚಂದ್ರು ಸತ್ತ. ಸತ್ತವನ ಕೊಳೆಯುವ ಮುಖ ಕಂಡಿದೇನೆ. ಬದುಕಿರೋದು ತುಂಬ ಚೆಂದ. ಪಾಪವಿಲ್ಲ-ಪುಣ್ಯವಿಲ್ಲ - ಹೇಗೊ ಏನೊ ಅಂತೂ ಬದುಕಿರೋದು ತುಂಬ ಚೆಂದ. ಪೀಡಿಸಬೇಡಿ, ಸಣ್ಣ ಪುಟ್ಟ ಕೈ ಹೊಡೆದಾಟ.ಬಿಗಿದುಕೊಂಡೇ ಶ್ಯಾಮಲನ ಮನೆಯಲ್ಲಿ ಇವರಿಗಿಂತ ನಾನು ಪ್ರತ್ಯೇಕ ಎನ್ನುವಂತೆ ಕೂತಿರೋದು, ಮನೆಯಲ್ಲಿ `ನಿಮಗೆ ನನ್ನ ಮೇಲೆ ಯಾವ ಅಧಿಕಾರ~ ಎಂದು ಉರಿದು ಉರಿದು ಮಾತಾಡೋದು. ನಾನು ಹೆಣದ ಮುಖ ನೋಡಿರುವವನು. ಅಯ್ಯೋ ಪೆದ್ದೇ ಕಚ್ಚಾಡುವ ಮಣ್ಣಿನ ಮುದ್ದೆಗಳೇ, ಅಮೃತ ಪುತ್ರರೇ, ಪರಲೋಕದಲ್ಲಿರುವ ತಂದೆಯೇ, ಊರಿನಲ್ಲಿ ರೇಗಿ ರೇಗಿ ಕಾಗದ ಬರೆಯುವ ಅಪ್ಪನೇ, ಬಟ್ಟೆಯನ್ನು ಸರಿಸಿದಾಗ ನಾನು ಕಂಡದ್ದನ್ನು ಕೇಳಿ. ಸತ್ತವನು ಬದುಕಿರುವ ನಮ್ಮ ಕೈಯಲ್ಲಿ ಟ್ರಂಪ್ ಕಾರ್ಡ್ ಆದ.

 

ದುಃಖ ಗರಿಗರಿಯಾಗಿ ರುಚಿಯಾಗುತ್ತದೆ. ಮೂರು ವರ್ಷಗಳಿಂದ ಅವನು ಎಲ್ಲಿಯೂ ಇಲ್ಲ. ಪಾಪ ಹೊರಟೇ ಹೋದ. ಎಲ್ಲಿಗೋ. ಕರುವನ್ನು ಈಯಲು ಪಶು ಬೇನೆಯಲ್ಲಿ ನಿಂತಂತೆ ನಿಂತಿದ್ದೇನೆ. ಬಟ್ಟೆ ಸರಿಸಿ ನೋಡಿದ ದಿನದಿಂದ ಇವತ್ತಿಗೂ ಕಂಡದ್ದು ನೆನಪಾದಾಗ ಕೊಡವಿಕೊಂಡಂತಾಗುತ್ತದೆ. ಜಾಡಿಸಿ ಒದ್ದು ತಾಗುತ್ತದೆ. ಯಾರು ಎಷ್ಟು ಹೆಣವನ್ನು ನೋಡಿಲ್ಲ. ಬಳಸಿ ಒದ್ದಾಡಿ ನಾನು ಹೇಳಬೇಕೆಂದಿರುವ ಮಾತು ತಾಗುವುದಿಲ್ಲ.ನಾನು=ನಾನು. ನೀನು=ನೀನು. ಒಂದೊಂದು ಸಾರಿ ತೋಳಿನಲ್ಲಿ ಹಿಡಿದುಕೊಂಡ ಶ್ಯಾಮಲನ ಕಣ್ಣು ಬೇರೆ ಯಾವುದೋ ಸ್ಮರಣೆಗೆ ಜಾರಿ ದೂರ ದೂರವಾಗುವುದನ್ನು ಕಂಡಿದೇನೆ. ಅಪ್ಪ, ಅಮ್ಮ ಹತ್ತಿರ ಬನ್ನಿ, ಕೂತುಕೊಳ್ಳಿ, ಹೇಳುತ್ತೇನೆ ಕೇಳಿ.

ನಾನು=ನಾನು. ನೀವು=ನೀವು.ನಿಮ್ಮಲ್ಲಿ ಹುಟ್ಟಿದೆ, ಬೆಳೆದೆ. ಸಾಯುತ್ತೇನೆ ಒಂದು ದಿನ. ಚಂದ್ರು ಸತ್ತ. ನಾನು ಯಾಕೆ ಶ್ಯಾಮಲನನ್ನು ಮದುವೆಯಾಗಬಾರದು.ಅವಳು ಕ್ರಿಶ್ಚಿಯನ್ ಎಂದೆ? damn it. A. ಅಕ್ಕಪಕ್ಕದವರು ಏನೆಂದುಕೊಳ್ಳುತ್ತಾರೆ ಎಂದೆ? damn it again. ಶ್ಯಾಮಲನನ್ನು ಬೆತ್ತಲೆ ನಾನು ನೋಡಿದೇನೆ. ಅವಳು ಹೆಣ್ಣು. ಮೊಲೆ, ತೊಡೆ, ಹೊಟ್ಟೆ ತುಂಬ ಚೆನ್ನಾಗಿದೆ. ಕಣ್ಣು, ಹುಬ್ಬು, ಮೂಗು ಮಾಟವಾಗಿದೆ. ಒಗರಾಗಿ, ಗೆಲುವಾಗಿ, ಸ್ವಲ್ಪ ಎಣ್ಣೆಗೆಂಪು ಬಣ್ಣವಾಗಿ ನನ್ನಿಂದ ಬೆತ್ತಲೆಯಾಗಲು ಕಾದಿದಾಳೆ.ನಿಮಗೆ ಯಾಕೆ ಸಿಟ್ಟು. ನಮ್ಮ ಜಾತಿಯ ಹುಡುಗಿಯಾಗಿದ್ದರೆ ದೇವರು ಕೊಟ್ಟಿರುವುದು ಬೇರೆಯಾಗಿರುತ್ತಿತ್ತೆ. ನನ್ನ ಆಸ್ತಿ ಅವಳು. ಅವಳ ಆಸ್ತಿ ನಾನು. ನಮ್ಮಿಬ್ಬರ ಮೇಲೆ ಸಂಚು ಹೂಡಬೇಡಿ. ನಕ್ಕು ಬಿಡಿ. ಇನ್ನೊಂದು ವಿಷಯ. ಮಾತಾಡಿಬಿಡುವ. ನಾನು ನಿಮ್ಮನ್ನು ದ್ವೇಷಿಸುತ್ತೇನೆ. ಅದಕ್ಕೆಂದೇ ಬಹುಶಃ ಬೇರೆ ಜಾತಿಯ ಹೆಣ್ಣನ್ನು ಮದುವೆಯಾಗಲು ಇಚ್ಚಿಸಿದೆ.To rebel.  ಆದರೆ ಯಾಕೆ ದ್ವೇಷಿಸುತ್ತೇನೆ. ಯಾಕೆ ಶ್ಯಾಮಲನ ಮೇಲೆ ನನಗೆ ಪ್ರೀತಿ ಬೆಳೆಯಿತು. ಯಾಕೆ ಅವಳ ಜೊತೆಗೂ ಸೆಟೆದುಕೊಂಡಿರುತ್ತೇನೆ. ಇನ್ನೂ ಹತ್ತಿರ ಬನ್ನಿ. ಹೇಳಿ ಬಿಡುತ್ತೇನೆ. ಕೊಳೆಯುತ್ತಿದ್ದ ಹೆಣದ ಮುಖ ನೋಡಿದವನಿಗೆ ಇವೆಲ್ಲ ಕ್ಷುಲ್ಲಕ. ಅಪ್ಪ ನೀವೂ ಯಾಕೆ ನಿಮ್ಮ ಅಪ್ಪನನ್ನು ದ್ವೇಷಿಸಿದಿರಿ.ನಿಮ್ಮ ಅಪ್ಪ ಯಾಕೆ ಊರು ಬಿಟ್ಟು ಓಡಿದರು. ಚಂದ್ರು ಯಾಕೆ ನಿಮಗೆ ಖಾಹಿಲೆಯೆಂದು ಟೆಲಿಗ್ರಾಂ ಕೊಡದೆ ಸತ್ತ. ಅಮ್ಮ ನಿನ್ನ ತೊಡೆಯ ಮೇಲೆ ತಲೆಯಿಡುತ್ತೇನೆ ಬೇಕಾದರೆ, ಇಡುವವರೆಗೆ ಸೆಟೆದುಕೊಂಡಿರುತ್ತೇನೆ, ಇಟ್ಟ ಮೇಲೆ ಹಗುರವಾಗುತ್ತೆ. ಅಮ್ಮ ನಿನ್ನ ಜೊತೆಗೆ ಇಷ್ಟು ಕಿಡಿಕಿಡಿಯಾಗಿ ರೇಗುವನಲ್ಲ. ನಿನಗೊಂದು ವಿಷಯ ನಾನು ಹೇಳಬೇಕು.ಯಾಕೆ ನಾನು ಎಳೆಯನಾಗಿದ್ದಾಗ ಒಂದು ದಿನ ಕನಸು ಬಿತ್ತು. ಆ ಕನಸಿನಲ್ಲಿ ನೀನು ಬೆತ್ತಲೆಯಾಗಿ ಕಂಡಿ. ನನಗೆ ತುಂಬ ಸುಖವಾಗಿ ಸ್ಖಲನವಾಯಿತು. ಮತ್ತೆ ಎಚ್ಚರವಾಗಿ ಯೋಚಿಸಿ ಗಾಬರಿಯಾದೆ. ನೀನು ಸೊಂಟದ ಮೇಲೆ ಕೈಯಿಟ್ಟು ನಿಂತು ಜಗಳವಾಡುವುದು, ಬಾಗಿಲ ಸಂದಿ ಕದ್ದು ಕೇಳುವುದು, ನನ್ನ ಕಾಗದ ಕದ್ದು ಓದುವುದು ಕಂಡರೆ ನನಗೆ ಹೇಸಿಗೆ.ನಾನು ದೊಡ್ಡವನಾದ ಮೇಲೆ ನೀನು ಹಾಡಿದ್ದನ್ನು ನಾನು ಕೇಳಲೆ ಇಲ್ಲ. ಚಿಕ್ಕವನಾಗಿದ್ದಾಗ ನನ್ನನ್ನು ಎದುರಿಗೆ ಕೂರಿಸಿಕೊಂಡು ನೀನು ಶೋಬಾನೆ ಹಾಡುಗಳನ್ನು ಹಾಡುತ್ತಿದ್ದಿ. ಮೈಯಲ್ಲಿ ರೋಮ ಹುಟ್ಟಿದ ಮೇಲೂ ಕಜ್ಜಿಯಾದಾಗ ಚಡ್ಡಿ ಬಿಚ್ಚಿ ಔಷಧಿ ಹಚ್ಚಿದಿ, ಉಣ್ಣಿಸಿದಿ. ಈಗ ನನ್ನನ್ನು ಕಂಡರೆ ಹೆದರುವಿ. ನಿನ್ನನ್ನು ಯಾಕೆ ನಾನು ಹೆದರಿಸುತ್ತೀನಿ ಅಮ್ಮ.ಅಪ್ಪ ಕೇಳಿ. ಚಂದ್ರುವಿನ ಸಾವಿನ ಬಗ್ಗೆ ನಿಮಗೆ ತಿಳಿಯದ ವಿಷಯ ಒಂದಿದೆ. ಗಾಬರಿಯಾಗದೆ ರೇಗದೆ ಕೇಳಿ. ಹೇಳಲೆ. ನಿಮ್ಮನ್ನೆಲ್ಲ ನಾನು ಪ್ರೀತಿಯಿಂದ ನೋಡುತ್ತೇನೆ. ಜಾತಿಯ ಮನೆ ಹಾಳಾಗಲಿ. ಅವರಿವರು ಆಡಿಕೊಳ್ಳುವ ಮಾತು ಹಾಳಾಗಲಿ. ನನಗೆ ಅಮ್ಮ ಕನಸಿನಲ್ಲಿ ಬಂದದ್ದು ತಪ್ಪಲ್ಲ. ನೀವು ನಿಮ್ಮ ಅಪ್ಪನ ಜೊತೆ ಜಗಳವಾಡಿದ್ದು ತಪ್ಪಲ್ಲ.ನಾನು ನಿಮ್ಮ ಎದುರು ದೊಡ್ಡವನಂತೆ rebel  ನಿಂತಿರೋದು ತಪ್ಪಲ್ಲ. ನಾವು ಚಂದ್ರು ಸತ್ತದ್ದನ್ನು ನೋಡಿಲ್ಲವೆ. ಎಲ್ಲವುದೂ ಕ್ಷುಲ್ಲಕ. ಮೆತ್ತಗಾಗೋಣ. ಸರಳವಾಗೋಣ. ಅಪ್ಪ ಮಗನ ಮೇಲೆ ಮಗ ಅಪ್ಪನ ಮೇಲೆ ಯಾಕೆ ಹೀಗೆ ನಿಲ್ಲಬೇಕು. ಯಾವ ಪಾಪದ ಚಕ್ರ. ನಿಮಗೂ ನಿಮ್ಮ ಅಮ್ಮನ ಮೇಲೆ ಎಳ್ಳಷ್ಟೂ ಪ್ರೀತಿ ಇರಲಿಲ್ಲ ಅಲ್ಲವೆ.

 

ಅವಳು ಅಮ್ಮನನ್ನು ಪೀಡಿಸಿದಳು. ನೀವು ಅತ್ತೆ ಸೊಸೆ ಮಾವ ಸೊಸೆಯ ನಿತ್ಯ ಕಾದಾಟದ ಸಂಸಾರಕ್ಕೆ ಸಿಕ್ಕಿ ನರಳಿದಿರಿ. ನಿಮ್ಮ ಅಪ್ಪ, ಅಮ್ಮ ಸತ್ತರು. ಈ ಚಕ್ರದಿಂದ ತಪ್ಪಿಸಿಕೊಳ್ಳೋಣ ಬನ್ನಿ.ತಂದೆ ಬಂದಿರಲಿಲ್ಲ. ಸೋಮೇಶ್ವರದಲ್ಲಿ ಮಂಗಳೂರಿಗೆ ಬರುವ ಬಸ್ ತಪ್ಪಿ ರಾತ್ರೆಯನ್ನು ಕಟ್ಟೆಯೊಂದರ ಮೇಲೆ ಮಲಗಿ ಕಳೆದರು. ನಾಳೆ ಬೆಳಗ್ಗೆ ರೈಲಿನಿಂದ ಬಂದಿಳಿಯುವ ಅವರ ಮುಖ ನೋಡುವ ಗಾಬರಿ. ಬಾಯಾರೆ ಚಂದ್ರು ಸತ್ತ ಎಂದು ಹೇಳಬೇಕು. ಸಮುದ್ರದ ನೀರು ನುಗ್ಗಿ ಆದ ವಿಶಾಲವಾದ ಸರೋವರದ ಕಲ್ಲದಂಡೆಯ ಮೇಲೆ ಕೂತದ್ದು ಜ್ಞಾಪಕವಾಗುತ್ತದೆ. ಕತ್ತಲಾಗಿತ್ತು. ಕದ್ದಿಂಗಳು.

 

ಆಕಾಶಕ್ಕೆ ಮುಖವೆತ್ತಿ ಸಪ್ತರ್ಷಿ ಮಂಡಲವನ್ನು ನೋಡಿದೆ. ಈಚೆ ತುದಿಯಲ್ಲಿ ತ್ರಿಶಂಕು. ತುಂಬ ಹೊತ್ತಾಗಿರಬೇಕು. ಮಿಣ್ಣನೆ ಹೊಳೆಯುವ ನಕ್ಷತ್ರಗಳು. ಬಾಗಿಲು ತೆಗೆದು ಲೈಟ್ ಹಾಕಿದೆ. ನಿಶ್ಶಬ್ದ. ವ್ಯಾಧನಿಗಾಗಿ ಆಕಾಶವನ್ನು ಹುಡುಕಿದೆ. ಕೊಳೆಯದಂತೆ ಕಾದಿಡುವ ಐಸ್‌ಪೆಟ್ಟಿಗೆಯಿಲ್ಲದ್ದರಿಂದ ಆಸ್ಪತ್ರೆಯವರು ಆದಷ್ಟು ಬೇಗ ಸಾಗಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಚಂದ್ರು ಗೆಳೆಯರಿಗೆ ಅದೊಂದು ದೊಡ್ಡ ತಗಾದೆ. ನಾನು ಹೋಗಿ ಅವರಿಗೆ ಸಮಾಧಾನ.ಗದ್ದಲವಿಲ್ಲದೆ, ಸಾಗುವ, ಸಾಗಿಸುವ ದಂಡೆಗೆ ಕಟ್ಟಿದ್ದ ಮೋಟಾರ್ ಬೋಟುಗಳು. ಅಲ್ಲೊಂದು ಇಲ್ಲೊಂದು ಕಾರ್ ಮಾತ್ರ ಸಂಚರಿಸುತ್ತ ಕತ್ತಲು ಮೆತ್ತಗಾಗಿದೆ. ಶಾಮಣ್ಣ ಸ್ನಾನ ಮಾಡಿ ಬಂದು ಕೂತ. ನನ್ನ ಪಕ್ಕದಲ್ಲಿ ಇನ್ನಿಬ್ಬರು ಚಂದ್ರು ಸ್ನೇಹಿತರು. ಅವರಲ್ಲಿ ಯಾರು ಕೃಷ್ಣಮೂರ್ತಿ, ಯಾರು ರತ್ನಾಕರ ನೆನಪಾಗಲೊಲ್ಲದು.ಬುಷ್‌ಕೋಟ್ ಹಾಕಿದವನು ಕಿರಿಯ, ಚಿಗರು ಮೀಸೆ ಸುಂದರವಾಗಿ ಕತ್ತರಿಸಿದ ಎಳೆಯ. ಚಂದ್ರು ಅವನನ್ನು ತುಂಬ ಪ್ರೀತಿಸಿರಬೇಕು. ಕಾಣಲು ಮೃದುವಾಗಿ, ಮಿತಭಾಷಿಯಾಗಿ, ಸ್ವಲ್ಪ ಕೆಂಪಗೆ ಇದಾನೆ. ಚಂದ್ರುವಿನ ವಿಷಯ ಅವನು ಮಾತಾಡಲ್ಲ. ನನ್ನ ಪಕ್ಕಕ್ಕೇ ಇದ್ದು ಮೃದುವಾಗಿ ನನ್ನನ್ನು ನೋಡುತ್ತಾನೆ. ಹತ್ತಿರ ಉಸಿರಾಡುತ್ತಾನೆ.

 

ನಾನು ಅವನ ಹೆಗಲಿನ ಮೇಲೆ ಕೈಯಿಟ್ಟು ನಿಟ್ಟುಸಿರು ಬಿಟ್ಟೆ. ಚಂದ್ರು ಅವನಿಗೆ ತನ್ನ ಗುಟ್ಟುಗಳನ್ನೆಲ್ಲ ಹೇಳಿರಬೇಕು. ಇನ್ನೊಬ್ಬ ಭಾರವಾದ ಮಾತಿನ ಹಿರಿಯ. ಜುಬ್ಬ ಹಾಕಿದ್ದ. ಕತ್ತಿಗೆ ಕರ್ಚೀಪ್ ಕಟ್ಟಿದ್ದ. ಅನುಭವಿಯಂತೆ ಕಾಣುತ್ತಾನೆ. ಕಿರಿಯನ ಹತ್ತಿರ ತನ್ನ ಸ್ವರವನ್ನು ತಗ್ಗಿಸಿ ಮಾತಾಡುತ್ತಾನೆ. ಕಾಪಾಡುವವನ ಹಾಗೆ ಯಾವಾಗಲೂ ಅವನ ಹತ್ತಿರ ಇರುತ್ತಾನೆ. ಹಗಲು ರಾತ್ರೆ ಒದ್ದಾಡಿ ಸಣ್ಣಗಾಗಿದಾರೆ ಪಾಪ. ಹಿರಿಯನಿಗೆ ಚಂದ್ರುವಿನ ಸಾವಿನಲ್ಲಿ ತಾವು ನಿರಪರಾಧಿಗಳೆಂದು ಸಮರ್ಥಿಸಿಕೊಳ್ಳುವ ಬಯಕೆ.`ನಾವು ಮೊದಲೆ ಟೆಲಿಗ್ರಾಂ ಕೊಡಬೇಕೆಂದು ಇದ್ದೆವು ಸಾರ್. ಆದರೆ ಚಂದ್ರು ಬಿಡಲಿಲ್ಲ. ಮಾವನಿಗೆ ಮದುವೆ ನನ್ನಿಂದ ತೊಂದರೆ ಬೇಡ ಎಂದ~.ನನಗೆ ಜ್ವರ ಬಿಡದಿದ್ದರೆ ಮದುವೆ ಗ್ರೀಟಿಂಗ್ ಕಳಿಸು ಎಂದಿದ್ದ. ಕಲ್ಕತ್ತದಿಂದ ಆರ್ಡರ್ ಬಂದಿತ್ತು ಸಾರ್. ಒಂದು ವಾರದ ಕೆಳಗೆ ನಾವು ಸಿನಿಮಾಕ್ಕೆ ಹೋದೆವು ಸಾರ್. ಆಗಲೂ ಅವನಿಗೆ ಜ್ವರ ಬರ‌್ತಿತ್ತು~.`ಅವತ್ತು ಚಂದ್ರು ಬೇಡಾಂದ್ರೂ ಚಪಾತಿ ತಿಂದ. ಅದೇ ತಾಪತ್ರಯಕ್ಕಿಟ್ಟುಕೊಂಡ್ತು. ಮೊದಲು ಟೈಫಾಯಿಡ್ ಎಂದು ಗೊತ್ತಾಗಲೇ ಇಲ್ಲ. ಫ್ಲೂಗೆ ಔಷಧಿ ತೆಗೆದುಕೊಂಡ. ಕಲ್ಕತ್ತಕ್ಕೆ ಹೊರಡಬೇಕೆಂದು ಗಡಿಬಿಡಿ ಅವನಿಗೆ~.ಶಾಮಣ್ಣ ಅವರ ಮಾತಿಗೆ ಹೂಗುಡುತ್ತಾನೆ. ನಾನು ಸುಮ್ಮನೆ ಕೂರುತ್ತೇನೆ. ಅವನದೊಂದು ಮಾತು, ಇವನದೊಂದು ಮಾತು. `ಮನೆಗೆ ವೈರ್ ಮಾಡಬೇಡಿ, ಬೇಡಿ~ ಎಂದು ಒಂದೇ ಹಂಬಲವಂತೆ ಕೊನೆವರೆಗೂ. ಹಿರಿಯವನು ಹೇಳಿದ:`ಆದರೂ ನಾವು ಟೆಲಿಗ್ರಾಂ ಕೊಡಬೇಕೂಂತ ಇದ್ದೆವು ಸಾರ್. ಡಾಕ್ಟರು ಪರವಾಗಿಲ್ಲ. ಗುಣವಾಗತ್ತೆ ಎಂದು ನಮಗೆ ಮೋಸ ಮಾಡಿದರು~.ಕೊನೆಗೆ ಭ್ರಮಣೆಯಲ್ಲಿ `ನೀನು ಟೆಲಿಗ್ರಾಂ ಕೊಟ್ಟಿದಿ ಗೊತ್ತು ಎಂದು ಕೃಷ್ಣಮೂರ್ತಿಯನ್ನು ಕಚ್ಚಿದನಂತೆ. ಆಮೇಲೆ ಸ್ವಲ್ಪ ಜ್ವರ ಇಳಿದ ಮೇಲೆ `ಸಾರಿ ಕಿಟ್ಟು~ ಎಂದನಂತೆ~.ಚಂದ್ರು ಕೊಚ್ಚಿಗೆ ಟ್ರೇನಿಂಗ್‌ಗೆ ಬರಲು ನಾನು ಕಾರಣವೆಂದು ಅಪ್ಪ ಮರೆಯುವುದಿಲ್ಲ. ಒಂದು ದಿನ ಮನೇಲಿ ರಾದ್ಧಾಂತವಾಯಿತು. ಅಪ್ಪನಿಗೆ ಮಗ ಊರಿನಲ್ಲೆ ಎಲ್ಲಾದರೂ ಕೆಲಸಕ್ಕೆ ಸೇರಲಿ ಎಂದು ಇಷ್ಟ. `ನೀವು ಅವನಿಗೆ ಅಡ್ಡಿ ಬರಬಾರದು. ದೂರ ಎಲ್ಲಿಯಾದರೂ ಹೋಗಿ ಕೆಲಸ ಮಾಡಬೇಕೆಂದಿದಾನೆ~ ಎಂದ ಕೂಡಲೆ ಅವರು ಮೈಮೇಲೆ ಬಂದರು.

 

`ನನ್ನ ಮಾತು ಕೇಳದ ನೀವು ನನ್ನ ಮಕ್ಕಳಲ್ಲ ಶತ್ರುಗಳು~ ಎಂದಿದ್ದರು. ಮಕ್ಕಳಿಗೆ ವಯಸ್ಸಾದ ಮೇಲೆ ಅವರ ಪಾಡಿಗೆ ಅವರನ್ನು ಬಿಡಬೇಕೆಂದು ಹೇಳಿದ ಕೂಡಲೆ ಗಟ್ಟಿಯಾಗಿ ಕೂಗಿ ಬೈಯಲು ಪ್ರಾರಂಭಿಸಿದರು. ಅವತ್ತು ಚಂದ್ರು ಒಂದು ಮಾತನ್ನು ಆಡದೆ ನನ್ನ ಕಡೆಗೆ ನೋಡುತ್ತ ನಿಂತಿದ್ದ. ಖಿನ್ನವಾಗಿತ್ತು ಅವನ ಮುಖ.ಕಿರಿಯ, ಕೃಷ್ಣಮೂರ್ತಿ ಹೇಳಿದ.

`ಕೊನೇಗೆ ಮಾತು ನಿಲ್ಲೋಕೆ ಮುಂಚೆ ನಿಮ್ಮನ್ನು ಕರೆದ ಸಾರ್. ಶೇಖರ ಕಾಫಿ ಕೊಡೋ, ಅಮ್ಮೋ ಕಾಫಿ ಕೊಡೇ ಎಂದು ಕರೆದ. ನಾವು ಬರಿ ಡಿಕಾಕ್ಷನ್ ಕುಡಿಸಿದೆವು. ಇಂಜೆಕ್ಷನ್ ತರಲು ದುಡ್ಡು ತೆಗೆದುಕೊಂಡಾಗ, `ಕಲ್ಕತ್ತಕ್ಕೆ ಹೋಗಲು ಅದು ಬೇಕು ಕಣೋ ಹೆಚ್ಚು ಖರ್ಚು ಮಾಡಬೇಡಿ~ ಎನ್ನುತ್ತಿದ್ದ.ತನ್ನಿಂದ ಮದುವೆಗೆ ತೊಂದರೆಯಾಗಬಾರದೂಂತ ಅವನಿಗೆ ತುಂಬ ಇತ್ತು ಸಾರ್~. ಹುಡುಗರು ತುಂಬ ಪೆಚ್ಚಾಗಿದ್ದರು. ಎಲ್ಲಿ ಇವರು ಸಾಕಷ್ಟು ಶುಶ್ರೂಷೆ ಮಾಡಲಿಲ್ಲವೆಂದು ತಿಳಿಯುತ್ತೀನೋ ಎಂದು ಹಿರಿಯವನು ಗಾಬರಿಯಾಗಿದ್ದ. ನಾನು ತುಂಬ ಕೃತಜ್ಞನೆಂದು ಅವರಿಗೆ ಹೇಗೆ ತಿಳಿಸಲಿ.`ಆ ರೂಮಿನಲ್ಲಿ ಕೂತು ನಾವು ಚಂದ್ರು ಬ್ರಿಜ್ ಆಡುತ್ತಿದ್ದೆವು. ಸರ್. ಹದಿನೈದು ದಿನಗಳ ಕೆಳಗೆ ಅವನಿನ್ನು ಕಲ್ಕತ್ತಕ್ಕೆ ಹೋಗುತ್ತಾನೆಂದು ಫೋಟೋ ತೆಗೆಸಿಕೊಂಡೆವು~.

ಶಾಮಣ್ಣ ಹೇಳಿದ,`ಆ ಫೋಟೋ ಒಂದು ಕಾಪಿ ಕೊಡಿ. ಎನ್‌ಲಾರ್ಜ್‌ ಮಾಡಿಸಿಡಬೇಕು~.`ಖಂಡಿತ ಆಗಲಿ ಸಾರ್~.

`ಇನ್ನು ನಾವು ಹೋಗಿ ಸ್ವಲ್ಪ ಏನನ್ನಾದರೂ ತಿನ್ನೋಣ ಸಾರ್. ನಾಳೆ ಶವ
 ವೈಯಕ್ತಿಕ ಸಂಘರ್ಷಗಳ ಕಥೆ

ಈ ಕಾದಂಬರಿಯನ್ನು ನಾನು ನನ್ನ ತಮ್ಮ ವೆಂಕಟೇಶ

ತೀರಿಕೊಂಡಾಗ ಬರೆಯಲು ಆರಂಭಿಸಿದೆ. ಆಗ ನಾನು ಹಾಸನದಲ್ಲಿ ಲೆಕ್ಚರರ್ ಆಗಿದ್ದೆ. ನಾನು ಜಾತಿ ಮತ ಮೀರಿ ಎಸ್ತರ್ ಜೊತೆಗೆ ಮದುವೆಯಾಗುವುದೆಂದು ನಿರ್ಧರಿಸಿದ್ದೆ. ನನ್ನ ತಮ್ಮ ಕೊಚ್ಚಿನ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ಅವನು ಕೆಲಸಕ್ಕಾಗಿ ಕಲ್ಕತ್ತಾಕ್ಕೆ ಹೋಗುವವನಿದ್ದ. ದುಡ್ಡಿಗಾಗಿ ಟೆಲಿಗ್ರಾಮ್ ಮಾಡುತ್ತೇನೆಂದು ಹೇಳಿದ್ದ. ಆದರೆ ಟೆಲಿಗ್ರಾಮ್ ಬಂದದ್ದು ಅವನ ಸಾವಿನ ಸುದ್ದಿ ಹೊತ್ತು. ನಮ್ಮ ಕುಟುಂಬದಲ್ಲಿ ಒಂದು ಮದುವೆ ನಡೆಯಬೇಕಿತ್ತು. ಅದನ್ನು ನಿಲ್ಲಿಸಿ ಕೊಚ್ಚಿನ್‌ಗೆ ಹೋದೆ.

ಆಮೇಲೆ ಈ ಕಾದಂಬರಿ ಬರೆಯಲು ಆರಂಭಿಸಿದೆ. ಈ ಹೊತ್ತಿಗೆ ನನ್ನ `ಎಂದೆಂದಿಗೂ ಮುಗಿಯದ ಕಥೆ~ ಸಂಕಲನ ಬಂದಿತ್ತು. `ಪ್ರಶ್ನೆ~ ಸಂಕಲನದ ಕಥೆಗಳನ್ನಿನ್ನೂ ಬರೆದಿರಲಿಲ್ಲ. ಬಹಳ ತೀವ್ರತೆಯಿದ್ದ ಈ ಕಾದಂಬರಿಯ ನಿರೂಪಣೆಗೆ ಪ್ರಜ್ಞಾ ಪ್ರವಾಹ ತಂತ್ರ ಬಳಸಿದ್ದೆ. ಸುಮಾರು ಎಂಬತ್ತು ಪುಟಗಳಷ್ಟು ಆದ ಮೇಲೆ ಇದು ತೀರಾ ವೈಯಕ್ತಿಕವಾಯಿತು ಅನ್ನಿಸತೊಡಗಿತು. ಅದನ್ನು ಅಲ್ಲಿಗೇ ನಿಲ್ಲಿಸಿಬಿಟ್ಟೆ. ಆಮೇಲೆ ಈ ಹಸ್ತಪ್ರತಿಯನ್ನು ನೋಡಲೂ ಹೋಗಲಿಲ್ಲ. ಈ ಬರವಣಿಗೆಯ ಹಿಂದಿದ್ದ ಅನೇಕ ಕಹಿ ನೆನಪುಗಳೇ ಬಹುಶಃ ಇದಕ್ಕೆ ಕಾರಣ. ನನ್ನ ತಮ್ಮನ ಸಾವು. ಅದರ ಹಿಂದೆಯೇ ಜಾತಿ-ಧರ್ಮವನ್ನು ಬಿಟ್ಟು ಮದುವೆಯಾಗುವ ನನ್ನ ನಿರ್ಧಾರದಿಂದ ಮನೆಯಲ್ಲಿ ಆದ ಜಗಳ. ಅದು ನನಗೆ ಸಂಪ್ರದಾಯದಿಂದ ಸಂಪೂರ್ಣವಾಗಿ ಕಿತ್ತುಕೊಂಡು ಬರುವ ಹೊತ್ತು. ಈ ಕೃತಿಯನ್ನು ನಾನು ಮತ್ತೆ ನೋಡದೆಯೇ ಇದ್ದರೂ ಬೇರೆ ಬೇರೆ ರೀತಿಯಲ್ಲಿ ನನ್ನ ಬರವಣಿಗೆಯಲ್ಲಿ ಅದು ಬಂದಿದೆ.

ಇತ್ತೀಚೆಗೆ ನನ್ನ ಜೊತೆ ಕೆಲಸ ಮಾಡುತ್ತಿದ್ದ ಜ.ನಾ.ತೇಜಶ್ರೀ ಇದನ್ನು ನನ್ನ ಹಳೆಯ ಹಸ್ತಪ್ರತಿಗಳ ನಡುವಿನಿಂದ ಹುಡುಕಿ ಓದಿ ಇಷ್ಟಪಟ್ಟು ಟೈಪ್ ಮಾಡಿ ಕೊಟ್ಟರು. ಈ ಟೈಪ್ ಮಾಡಿದ ಆವೃತ್ತಿಯನ್ನೂ ನಾನು ಎರಡು ದಿನ ಓದಲೇ ಇಲ್ಲ. ಕೊನೆಗೆ 27ನೇ ವಯಸ್ಸಿನ ನನ್ನ ಬರವಣಿಗೆಯ ಕೂತೂಹಲಕ್ಕಾಗಿ ಓದಿದೆ. ಆಮೇಲೆ ಇದರಲ್ಲಿ ನಿಜವಾಗಿಯೂ ಏನಾದರೂ ಇದೆಯೇ ಎಂಬುದನ್ನು ನೋಡಲಿ ಎಂದು ವಿವೇಕ್‌ಗೆ ಕಳುಹಿಸಿದೆ. ಅವನೊಬ್ಬ ಕಥೆಗಾರನಾಗಿ ಇದನ್ನು ಓದಿ ನೋಡಿ `ಬರೆದಾಗಲೇ ಇದು ಪ್ರಕಟವಾಗಿದ್ದಿದ್ದರೆ ನವ್ಯ ಕಾದಂಬರಿಯ ಆರಂಭ ಇದರಿಂದಲೇ ಆಗಬಹುದಿತ್ತೋ ಏನೋ~ ಎಂದ. ಅದು ಅವನ ವೈಯಕ್ತಿಕ ಅಭಿಪ್ರಾಯ. ಒಂದು ವೇಳೆ ಬರೆದಾಗಲೇ ಇದನ್ನು ಪ್ರಕಟಿಸಲು ಹೊರಟಿದ್ದರೆ ಈ ಕಾದಂಬರಿ 1959ರಲ್ಲೇ ಹೊರಬರುತ್ತಿತ್ತು ಅನ್ನುವುದೂ ನಿಜವೇ.

ಇದನ್ನು ಬರೆಯುವ ಒಂದು ಹಂತದಲ್ಲಿ ತೀರಾ ವೈಯಕ್ತಿಕವಾಗಿತ್ತು ಅಂದೆನೆಲ್ಲಾ, ಅದನ್ನು ಮೀರುವುದಕ್ಕಾಗಿ ಆಗಲೇ ಥರ್ಡ್ ಪರ್ಸನ್‌ನಲ್ಲಿಯೂ ಇದನ್ನು ಬರೆಯಲು ಪ್ರಯತ್ನಿಸಿದ್ದೇನೆ. ಅದೂ ಸುಮಾರು ಇಪ್ಪತ್ತು ಪುಟಗಳಷ್ಟಿದೆ. ಅದೂ ಈ ಕಾದಂಬರಿಯ ಭಾಗವಾಗಿಯೇ ಇದೆ. ಐವತ್ತಮೂರು ವರ್ಷಗಳ ನಂತರ ಈ ಕಾದಂಬರಿಯನ್ನು ನೋಡುವಾಗ ಆಗ ನನಗೆ ಅನ್ನಿಸಿದಂತೆ ಕೇವಲ ವೈಯಕ್ತಿಕ ಜೀವನದ ಸಂಘರ್ಷಕ್ಕೆ ಇದು ಸೀಮಿತವಾಗಿದೆ ಅನ್ನಿಸುತ್ತಿಲ್ಲ. ಇದೊಂದು ರೀತಿಯಲ್ಲಿ ನನ್ನ ಸೃಜನಶೀಲತೆಯ ಸಂಘರ್ಷದ ಪ್ರತಿಬಿಂಬವೂ ಹೌದು. ಬಹುಶಃ ನನ್ನ ಮುಂದಿನ ಬರವಣಿಗೆಯಲ್ಲಿ ಈ ಸಂಘರ್ಷ ಕೆಲಸ ಮಾಡಿದೆ ಅನ್ನಿಸುತ್ತಿದೆ.

-ಯು.ಆರ್. ಅನಂತಮೂರ್ತಿ

ಸಂಸ್ಕಾರವಾಗಬೇಕು. ಅಪ್ಪ ಬಂದ ಮೇಲೆ. ಪುರೋಹಿತನಿಗೆ ಹೇಳಿಯಾಗಿದೆ. ಕಟ್ಟಿಗೆ ಸಿದ್ಧ ಮಾಡಿದ್ದಾರೆ~.ನನಗೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿಕೊಂಡಿದಾರೆ ಚಂದ್ರು ಗೆಳೆಯರು.

`ನಿಮ್ಮಿಂದೆಲ್ಲ ತುಂಬ ಉಪಕಾರವಾಗಿದೆ~ ಎಂದೆ.`ಅವ ನಮ್ಮ ಸ್ನೇಹಿತ ಅಲ್ಲವಾ ಸಾರ್~.

ಆ ಮಾತು ಈ ಮಾತು ಚಂದ್ರು ಬಗ್ಗೆ ಆಡುತ್ತ ಸಾವಿನ ಕಠೋರತೆ ಕಡಮೆಯಾಗುತ್ತದೆ. ಅಲ್ಲಿ ಆಸ್ಪತ್ರೆಯಲ್ಲಿ ಚಂದ್ರು ದೇಹ ಕೊಳೆಯುತ್ತಿದೆ ಎಂದು ಊಟ ಅಸಹ್ಯವಾಯಿತು. ಶಾಮಣ್ಣನಿಗೆ ಒತ್ತಾಯ ಮಾಡಿ ಊಟ ಮಾಡಿಸಿದೆ. ನಾನಷ್ಟು ಕಾಫಿ ಕುಡಿದು ಸಿಗರೇಟು ಸೇದಿದೆ.ಜೂನ್ 9ರಂದು ಬೆಂಗಳೂರಿನಲ್ಲಿ, `ಅಂಕಿತ ಪುಸ್ತಕ~ ಪ್ರಕಟಿಸುತ್ತಿರುವ `ಪ್ರೀತಿ ಮೃತ್ಯು ಭಯ~ ಕಾದಂಬರಿಯ ಬಿಡುಗಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry