ಶುಕ್ರವಾರ, ಡಿಸೆಂಬರ್ 13, 2019
20 °C

ಪ್ರೇಮದಲ್ಲಿ... ಅಡ್ಡಾದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೇಮದಲ್ಲಿ... ಅಡ್ಡಾದಲ್ಲಿ...

ಸಂಕ್ರಾಂತಿ ಹಬ್ಬದ ದಿನ ಕಂಠೀರವ ಸ್ಟುಡಿಯೋ ಬಯಲಿನಲ್ಲಿ ನಿರ್ದೇಶಕ-ನಟ ಪ್ರೇಮ್ ಹಳ್ಳಿಯ ತುಣುಕೊಂದನ್ನು ಸೃಷ್ಟಿಸಿದ್ದರು. ಅದೊಂದು ರೀತಿಯ ತ್ರಿಶಂಕು ಹಳ್ಳಿ. ಅಲ್ಲಿ ದನಗಳಿದ್ದವು, ಅವುಗಳು ಹಾಯಲು ಕಿಚ್ಚನ್ನೂ ಉರಿಸಲಾಗಿತ್ತು.ಬಣ್ಣಬಣ್ಣದ ಕಾಗದಗಳನ್ನು ತೋರಣದ ರೂಪದಲ್ಲಿ ಕಟ್ಟಲಾಗಿತ್ತು. ಪಂಚೆಯುಟ್ಟು ಹೆಗಲಿಗೆ ಟವೆಲ್ ಇಳಿಬಿಟ್ಟ ಹೈಕಳೂ, ಬಯಲಿನಲ್ಲಿ ಬೆಂಕಿ ಉರಿಸುತ್ತಾ ಏನನ್ನೋ ಬೇಯಿಸುತ್ತಿದ್ದ ಹೆಂಗಳೆಯರೂ ಅಲ್ಲಿದ್ದರು. ಎಲ್ಲವೂ ಸಿದ್ಧ- ಇನ್ನೇನು ಹಬ್ಬ ಶುರುವಾಗುತ್ತೆ, `ಸಂಕ್ರಾಂತಿ ಬಂತೋ ಬಂತು~ ಎಂದು ಪ್ರೇಮ್‌ಬಳಗ ಹಾಡಲು ತೊಡಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಎದುರಾದುದು ಬೇರೆಯದೇ ಸನ್ನಿವೇಶ.ಉಹುಂ, ಪ್ರೇಮ್ ಹಬ್ಬ ಮಾಡುವ ಮೂಡಿನಲ್ಲಿರಲಿಲ್ಲ. ಅಡ್ಡಾದಲ್ಲಿ ಮಾತಿನ ಸಾಮು ಮಾಡಲು ಸಿದ್ಧರಾದಂತಿದ್ದರು. ಅಂದಹಾಗೆ, ಅದು `ಪ್ರೇಮ್ ಅಡ್ಡಾ~ ಚಿತ್ರದ ಮುಹೂರ್ತ ಸಮಾರಂಭ.ತಕರಾರುಗಳ ಮಾತು ಆಮೇಲಿರಲಿ. ಮೊದಲು ಚಿತ್ರದ ಬಗ್ಗೆ ತಿಳಿಯೋಣ. ತಮಿಳಿನಲ್ಲಿ ಸಿಕ್ಕಾಪಟ್ಟೆ ಕಾಸು ಮಾಡಿದ `ಸುಬ್ರಹ್ಮಣ್ಯಪುರಂ~ ಎನ್ನುವ ಸಿನಿಮಾ ಇದೆಯಲ್ಲ, ಅದರ ಕನ್ನಡ ರೂಪವೇ ಈ `ಪ್ರೇಮ್ ಅಡ್ಡಾ~. ಮುರಳೀಕೃಷ್ಣ ಎನ್ನುವವರು ಕನ್ನಡೀಕರಿಸುತ್ತಿರುವ ಈ ತಮಿಳುಪುರವನ್ನು ಮಹೇಶ್‌ಬಾಬು ನಿರ್ದೇಶಿಸುತ್ತಿದ್ದಾರೆ.

 

`ಇದೊಂದು ಸಾರ್ವಕಾಲಿಕ ಕಥನದ ಚಿತ್ರ. ಮೂಲಚಿತ್ರಕ್ಕಿಂತಲೂ ಹೆಚ್ಚು ಸಶಕ್ತವಾಗಿ ಕನ್ನಡದಲ್ಲಿ ಮಾಡುತ್ತಿದ್ದೇವೆ~ ಎಂದು ಬಾಬು ಭರವಸೆ ನೀಡಿದರು. ಚಿತ್ರದ ನಾಯಕ ಪ್ರೇಮ್ ಎನ್ನುವುದು ಈಗಾಗಲೇ ಸರ್ವವಿದಿತ. ಉಳಿದಂತೆ, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಒಳಗೊಂಡಂತೆ ಹದಿನೈದು ನಿರ್ದೇಶಕರು ಅಡ್ಡಾದ ತಾರಾಗಣದಲ್ಲಿದ್ದಾರೆ.ಐವತ್ತು ದಿನಗಳ ಚಿತ್ರೀಕರಣದ ಯೋಜನೆಯನ್ನು ಮಹೇಶ್‌ಬಾಬು ರೂಪಿಸಿದ್ದು, ಮೊದಲ ಹಂತದ ಚಿತ್ರೀಕರಣ ಕೊಳ್ಳೇಗಾಲದಲ್ಲಿ ನಡೆಯಲಿದೆ. ಹರಿಕೃಷ್ಣರ ಸಂಗೀತ, ಅರುಣ್‌ಪ್ರಸಾದ್ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚಿತ್ರಕ್ಕಿದೆ.`ಪ್ರೇಮ್ ಅಡ್ಡಾ~ಕ್ಕೆ ಶುಭ ಹಾರೈಸಲು ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ಸಹೋದರರು ಹಾಜರಿದ್ದರು. ಇದಿಷ್ಟು `ಪ್ರೇಮ್ ಅಡ್ಡಾ~ ವೃತ್ತಾಂತ. ಈಗ ಪ್ರೇಮ್ ಅವರ ಮಾತಿನ ಸಾಮಿನ ವಿಚಾರಕ್ಕೆ ಬರೋಣ.`ಅಡ್ಡಾ~ ಎನ್ನುವ ಶೀರ್ಷಿಕೆಗಾಗಿ ಬಿ.ಕೆ.ಶ್ರೀನಿವಾಸ್ -ಪ್ರೇಮ್ ನಡುವಿನ ಜಟಾಪಟಿ ಹಳೆಯ ವಿಷಯ. ಈ ಗೊಂದಲಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರೇಮ್ ಅವರಿಗೆ ಪತ್ರ ಬರೆದಿದ್ದು, ತಾನು ನೀಡಿರುವ `ಪ್ರೇಮ್ ಅಡ್ಡಾ~ ಎನ್ನುವ ಶೀರ್ಷಿಕೆಯನ್ನು ಎಲ್ಲ ಅಕ್ಷರಗಳೂ ಸಮಗಾತ್ರದಲ್ಲಿರುವಂತೆ ಬಳಸಿಕೊಳ್ಳಲು ಸೂಚಿಸಿದೆ. ಈ ಪತ್ರವೇ ಪ್ರೇಮ್ ಅವರ ಸಿಟ್ಟಿಗೆ ಕಾರಣ.`ಚಿತ್ರದ ಶೀರ್ಷಿಕೆಯನ್ನು ಹೇಗೆ ತೋರಿಸಬೇಕೆನ್ನುವುದು ನನಗೆ ಗೊತ್ತು. ಅದೊಂದು ಸೃಜನಾತ್ಮಕ ಕೆಲಸ. ಅದರಲ್ಲಿ ಮೂಗು ತೂರಿಸಲು ಮಂಡಳಿಗೆ ಯಾವ ಅಧಿಕಾರವಿದೆ~ ಎನ್ನುವುದು ಅವರ ಪ್ರಶ್ನೆ. ಈ ಲಾ ಪಾಯಿಂಟು ಇಟ್ಟುಕೊಂಡೇ ಅವರು ಮಂಡಳಿಯ ನಿರ್ಧಾರ ವಿರೋಧಿಸಿ ನಿರ್ಮಾಪಕರ ಸಂಘಕ್ಕೆ ಅಹವಾಲು ಸಲ್ಲಿಸಲಿದ್ದಾರಂತೆ.ಮರೆತ ಮಾತು: ಕೀರ್ತಿ ಕರಬಂಧ ಚಿತ್ರದ ನಾಯಕಿ. `ಚಿರು~ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಈ ಚೆಲುವೆಗೆ `ಪ್ರೇಮ್ ಅಡ್ಡಾ~ದ ಪಾತ್ರ ನಿರೀಕ್ಷೆಗಳನ್ನು ಹುಟ್ಟಿಸಿದೆ. `ಚಿತ್ರದ ಶೀರ್ಷಿಕೆ ವಿವಾದದ ಬಗ್ಗೆ ಏನಂತೀರಿ?~ ಎಂದು ಕೇಳಿದಾಗ- `ಕಾಂಟ್ರವರ್ಸಿ ಒಳ್ಳೆಯದೇ ಅಲ್ಲವಾ... ಇದರಿಂದ ಚಿತ್ರಕ್ಕೆ ಪಬ್ಲಿಸಿಟಿ ಸಿಗುತ್ತೆ~ ಎಂದು ಕೃತಿ ತಮ್ಮ ಅಮಾಯಕ ಕಣ್ಣುಗಳನ್ನು ಅರಳಿಸಿ ಸತ್ಯವೊಂದನ್ನು ಬಯಲುಮಾಡಿದರು.

ಪ್ರತಿಕ್ರಿಯಿಸಿ (+)