ಪ್ರೇಮಪಲ್ಲವಿ ಭಗ್ನಚರಣ

7

ಪ್ರೇಮಪಲ್ಲವಿ ಭಗ್ನಚರಣ

Published:
Updated:

ಎಂಟು ವರ್ಷಗಳಿಂದ... ಸತತವಾಗಿ ಕಾಡುತ್ತಿರುವ ಈ ನೆನಪುಗಳು ಜೀವನದುದ್ದಕ್ಕೂ ಹೀಗೇ ಹಸಿಯಾಗಿರುತ್ತವೆಯಾ? ಇರಬಹುದೇನೋ. ಎಲ್ಲೋ ಆಳದಲ್ಲಿ ಕೊಂಚ ಮುಳ್ಳಾಡಿಸಿದಂತಾದರೂ ಬಹು ಮಟ್ಟಿಗೆ ಸಿಹಿಯನ್ನೇ ನೀಡುವ ಇವು ಕೊನೆವರೆಗೂ ಹೀಗೇ ಇರಲಿ.ದಿನಾ ಆಫೀಸಿನಿಂದ ಹಿಂದಿರುಗುವ ದಾರಿಯಲ್ಲಿ ಎದುರಾಗುವ, ಕಣ್ಣಲ್ಲಿನ್ನೂ ಕನಸು ಮೂಡಿಸುವ ಆ ಮಧುರ ನೆನಪುಗಳು ಹುಟ್ಟುವ ತಾಣ ಜಯನಗರ ಮೂರನೇ ಬ್ಲಾಕಿನಿಂದ ಆರಂಭವಾಗಿ, ಅಥವಾ ಇನ್ನೂ ಸರಿಯಾಗಿ ಹೇಳುವುದಾದರೆ ದೀಪಂ ಸಿಲ್ಕ್ಸ್ ನಿಂದ ಶುರುವಾಗಿ, ಕೂಲ್ ಜಾಯಿಂಟ್, ಹೋಟೆಲ್ ಪವಿತ್ರ ತನಕ ಹರಡಿತ್ತು.ಎಂಟು ವರುಷದ ಹಿಂದೆ.. ಆಗಿನ್ನೂ ಚಿಕ್ಕವಳು ನಾನು-ಇಪ್ಪತ್ತೆರಡರ ಚಿಗುರು ಯೌವನ. ಅವನಿಗೆ ಮೂವತ್ತಿರಬಹುದು. ಆಗತಾನೇ ಓದು ಮುಗಿಸಿ ಕೆಲಸಕ್ಕೆ ಸೇರಿದ್ದೆ. ಹುಟ್ಟಿ ಬೆಳೆದ ಮನೆ, ಮೋಹಕ ಮಲೆನಾಡಿನಿಂದ ಬೇರ್ಪಟ್ಟು ದೊಡ್ಡ ಶಹರು ಬೆಂಗಳೂರಿಗೆ ಬಂದು ಸೇರಿದಾಗ ಕಂಗಾಲಾಗಿದ್ದೆ.

 

ಪಿ.ಜಿ.ಯೊಂದರಲ್ಲಿ ಸೇರಿ, ದಿನವೂ ಬಿಎಂಟಿಸಿಯಲ್ಲಿ ಓಡಾಡುತ್ತ ಅಡ್ಜಸ್ಟ್ ಆಗುತ್ತಿರುವಾಗಲೇ ಅವನ ಪ್ರವೇಶವಾಗಿತ್ತು ನಮ್ಮ ಶಾಖೆಗೆ, ನನ್ನ ಬಾಳಿಗೆ. ಅವನ ಬಿಚ್ಚುಮನಸ್ಸು, ಬಿಚ್ಚುಮಾತು, ನಗು, ಹಾಡು ಎಲ್ಲ ನನ್ನ ಎಳೆಮನಸನ್ನು ಅಯಸ್ಕಾಂತದಂತೆ ಸೆಳೆದಿತ್ತು. ಅವನಿಗೆ ಹೇಗನಿಸಿತೋ ಗೊತ್ತಿಲ್ಲ, ಆದರೆ ನಾವಿಬ್ಬರೂ ಅತ್ಯಂತ ಅಲ್ಪ ಅವಧಿಯಲ್ಲೇ ಆತ್ಮೀಯ ಸ್ನೇಹಿತರಾಗಿಬಿಟ್ಟೆವು. ಎಷ್ಟೆಂದರೆ ಇಬ್ಬರಲ್ಲಿ ಒಬ್ಬರು ರಜಾ ಹಾಕಿದರೆ ಇನ್ನೊಬ್ಬರಿಗೆ ದಿನವೆಲ್ಲ ಭಣಭಣ ಎನಿಸುವಷ್ಟು.ಎಷ್ಟೋ ಸಲ ಊರಿನ ನೆನಪಾಗಿ ಅವನ ಹತ್ತಿರ ಗೊಳೋ ಅಂತ ಅತ್ತು ಸಮಾಧಾನ ಮಾಡಿಕೊಳ್ತಿದ್ದೆ. ತಲೆ ಸವರಿ ಸಂತೈಸುತ್ತಿದ್ದ. ಅಪ್ಪನ ಬಗ್ಗೆ ಹೆಮ್ಮೆಯಿಂದ ಮಾತಾಡುವಾಗ ಗಂಟೆಗಟ್ಟಲೆ ತಾಳ್ಮೆಯಿಂದ ಕೇಳಿಸಿಕೊಳ್ತಿದ್ದ. ಅವನ ಕಾಲೇಜಿನ ಸ್ನೇಹಿತರ ಬಗ್ಗೆ, ತಂಗಿಯರ ಬಗ್ಗೆ ಹೇಳುವಾಗ ನಾ ಅರಳುಗಣ್ಣಾಗುತ್ತಿದ್ದೆ.

 

ವಾರಾಂತ್ಯಗಳೆಲ್ಲ ನನಗೇ ಮೀಸಲು. ಸಿನಿಮಾ, ಹೋಟೆಲು, ಪಾರ್ಕು ಅಂತೆಲ್ಲ ಸುತ್ತುವಾಗ ಒಮ್ಮಮ್ಮೆ ನನಗೆ ಗಾಬರಿಯಾಗ್ತಿತ್ತು, ಇದೇನಿದು? ನಾನೇನು ಮಾಡ್ತಿದೀನಿ? ಅಪ್ಪ, ಅಮ್ಮ ಎಷ್ಟು ನಂಬಿಕೆಯಿಂದ ಕಳ್ಸಿದಾರೆ! ಅಂತ. ಮಲೆನಾಡ ಹುಡುಗಿಯಾದ್ದರಿಂದ ಧೈರ್ಯ ಜಾಸ್ತಿಯೇ ಇತ್ತು. ನಾನೆಂದೂ ದಾರಿ ತಪ್ಪಿ ನಡೆಯೆನೆಂಬ ನಂಬಿಕೆಯೂ. ನನಗಿಂತ ಹೆಚ್ಚಾಗಿ ಆ ಹುಡುಗನ ಮೇಲೆ! ನಿಜಕ್ಕೂ.. ಮೂವತ್ತು ಅಂಥ ದೊಡ್ಡ ವಯಸ್ಸೇನಲ್ಲ.ಕೊನೆಯ ತಂಗಿಗೆ ಮದುವೆಯಾದ್ಮೇಲೆ ಮಾಡ್ಕೋತೀನಿ ಅಂತ ಕೂತವನ ಮನದಲ್ಲಿ ವಯೋಸಹಜವಾದ ಬಯಕೆಗಳು ಹುಟ್ದೆ ಇರ‌್ತವಾ? ಆದರೆ ಒಂದೇ ಒಂದು ಸಲವಾದ್ರೂ ಅವನು ಮಿಸ್ ಬಿಹೇವ್ ಮಾಡಿದ್ದರೆ! ಊಹೂಂ. ಮಾತು ಕೂಡ ಅಷ್ಟೆ. ಇಬ್ರೂ ಏಕವಚನದಲ್ಲೇ ಮಾತಾಡಿದ್ರೂನೂ ಅವನು ಹೋಗಮ್ಮ ಬಾರಮ್ಮ ಹೀಗೇ. ತೀರ ಆತ್ಮೀಯತೆ ಅನಿಸಿದಾಗ ಪುಟ್ಟಿ ಅನ್ನುತ್ತಿದ್ದ.ಫೆಬ್ರವರಿ 24.. ನನ್ನ ಹುಟ್ಟಿದ ದಿನ. ಅಂದೇಕೋ ನಾ ತುಂಬ ಸಂತೋಷದಿಂದಿದ್ದೆ. ಅವನೂ ಬೆಳಿಗ್ಗೆ ಎದ್ಕೂಡ್ಲೆ ಕಾಲ್ ಮಾಡಿ ವಿಷ್ ಮಾಡಿದ. ಆಫೀಸಿಗೆ ಅವನಿಗಿಷ್ಟವಾದ ಸ್ವೀಟ್ ತಗೊಂಡು ಹೋಗಿ ಎಲ್ರಿಗೂ ಹಂಚಿದೆ.ಎಲ್ರೂ ಹ್ಯಾಪಿ ಬರ್ತ್‌ಡೇ ಅಂತ ರಾಗವಾಗಿ ಹಾಡಿದಾಗ ಚಿಕ್ಕ ಹುಡುಗಿಯ ಹಾಗೆ ಸಂಭ್ರಮಿಸಿದೆ. ಸಂಜೆ  ಬಾ  ಎಂದವನ ಬೆನ್ನ ಹಿಂದೆ ಬೈಕೇರಿದಾಗ ಏನೋ ನಿರೀಕ್ಷೆಯಿಂದ ಮನ ಹೂವಾಯಿತು. ಸೀದಾ ಹೋಗಿದ್ದು ಜಯನಗರದ ದೀಪಂ ಸಿಲ್ಕ್ಸ್‌ಗೆ. ನಾ ಬಾಯ್ಬಿಡುವ ಮುನ್ನವೇ 5-6 ಸಾವಿರದ ಸೀರೆ ತೋರಿಸಿ ಎಂದು ಹೇಳಿ, ಪ್ರತಿಭಟಿಸಲು ತೆರೆದ ನನ್ನ ಬಾಯಿ ಮುಚ್ಚಿದ. ಸೇಲ್ಸ್‌ಗರ್ಲ್ ನನಗೆ ಸೀರೆ ಉಡಿಸಿ ತೋರಿಸುವಾಗ ಹೇಗಿದೆ ನೋಡಿ ಸರ್ ಅಂತ ಅವನನ್ನು ಕರೆದಳು. ನನಗಿಂತ ಹೆಚ್ಚು ನಾಚುತ್ತ ನೋಡಿದವನ ಕಣ್ಣಲ್ಲಿ ಮೆಚ್ಚುಗೆ ಕಂಡು ನಾ ಅರಳಿದೆ.ಅಲ್ಲಿಂದ ರಾತ್ರಿ ಎಂಟರ ಹೊತ್ತಿಗೆ ಸೀದಾ ಹೋಗಿದ್ದು ಹೋಟೆಲ್ ಪವಿತ್ರಾಗೆ. ನಾನಾಗಲೇ ಯಾವುದೋ ಲೋಕದಲ್ಲಿದ್ದೆ. ಇವತ್ತು ನಂಗೆ ಖಂಡಿತ ಪ್ರಪೋಸ್ ಮಾಡ್ತಾನೆ.  ಆಗ ನಾ ಹೇಗೆ ರಿಯಾಕ್ಟ್ ಮಾಡಲಿ? ಎಂದು ಕನಸು ಕಾಣುತ್ತ ಕೂತವಳು ನನಗರಿಯದೆ ಅವನಿಗೊರಗಿದ್ದೆ. ಅಚ್ಚರಿಯಿಂದ ನನ್ನತ್ತ ತಿರುಗಿದವನಿಗೆ ಕಂಡದ್ದು ದುಂಬಿಯನ್ನು ಕರೆವ ಹೂವಿನಂಥ ನನ್ನ ಮುಖ. ಅರೆಮುಚ್ಚಿದ ಕಂಗಳು, ಅರೆಬಿರಿದ ತುಟಿಗಳು, ನಶೆಯೇರಿದಂಥ ದನಿ ನನ್ನೊಳಗನ್ನು ಅವನ ಮುಂದೆ ಬಿಚ್ಚಿಟ್ಟವು. ಮೆಲ್ಲಗೆ ನನ್ನತ್ತ ಬಾಗಿದವನ ತುಟಿಗಳು ಇನ್ನೇನು ನನ್ನ ತುಟಿಗಳನ್ನು ಸ್ಪರ್ಶಿಸುತ್ತದೆನ್ನುವಾಗ ಅವನು ತಡೆದ. ತುಂಬ ಮೃದುವಾಗಿ ನನ್ನ ನೆತ್ತಿಗೆ ಹೂಮುತ್ತನೊತ್ತಿ ಕೂಲ್ ಡೌನ್ ಪುಟ್ಟಿ ಎಂದವನ ಧ್ವನಿಯಲ್ಲಿ ಅಪಾರ ವ್ಯಥೆಯಿತ್ತು. ನಾಚಿ ಹಿಂದೆಸರಿದ ನನ್ನ ಕಣ್ಣಲ್ಲೂ. ಮಾತಿಲ್ಲದೆ ತಲೆ ಬಗ್ಗಿಸಿ ಕೂತ ನನಗೆ ಅವನೇ ಒತ್ತಾಯ ಮಾಡಿ ತಿನ್ನಿಸಿ ತಮಾಷೆ ಮಾಡುತ್ತ ನಗಿಸಿದ.ಮರುದಿನ ಬೆಳಿಗ್ಗೆ ಊರಿಗೆ ಹೋಗ್ತಿದೀನಿ ಪುಟ್ಟಿ. ಬರೋದು ಒಂದು ವಾರವಾಗ್ಬಹುದು ಅಂತ ಮೆಸೇಜ್ ಬಂತು. ವಾರದ ನಂತರ ಬೆಳಿಗ್ಗೆಯೇ ಸ್ವೀಟ್ ಬಾಕ್ಸ್ ಹಿಡಿದು ನುಡಿದವನ ದನಿಯಲ್ಲಿ ನಿರ್ಭಾವವಿತ್ತು. ನಂಗೆ ಮದುವೆ ಫಿಕ್ಸ್ ಆಗಿದೆ ಕಣೇಮ್ಮ. ಮಲೆನಾಡಿಂದೇ ಹುಡುಗಿ, ಇನ್ನೆರಡು ತಿಂಗಳಿಗೆ ಮದುವೆ.  ನನ್ನ ಕಣ್ಣಲ್ಲಿ ಇಣುಕಿದ ನೀರನ್ನು ನೋಡಲಿಚ್ಛಿಸದಂತೆ ಬೇಗನೆ ಅಲ್ಲಿಂದ ಕಾಲ್ತೆಗೆದ. ಮತ್ತೆಂದೂ ಅವನು ನನ್ನೊಡನೆ ಹೊರಗೆ ಸುತ್ತಾಡಲು ಬರಲಿಲ್ಲ. ಮೊದಲಿನ ಆತ್ಮೀಯತೆಯಿಂದ ವರ್ತಿಸಲಿಲ್ಲ. ಏಕೆ? ಏಕೆ ಅವನ ಮನದಲ್ಲಿದ್ದ ಪ್ರೀತಿಯನ್ನು ವ್ಯಕ್ತ ಪಡಿಸಲಿಲ್ಲ? ಏಕೆ ನನ್ನ ಮದುವೆ ಮಾಡಿಕೊಳ್ಳಲಿಲ್ಲ? ತೀರ ಹತ್ತಿರ ಬಂದಿದ್ದ ಆ ಎಳೆಯ ಹೃದಯಗಳು ಹೀಗೆ ದೂರಾಗಲು ಕಾರಣವೇನು? ಉತ್ತರ ದಕ್ಷಿಣ ಧ್ರುವಗಳ ಅಂತರದಲ್ಲಿದ್ದ ನಮ್ಮ ಜಾತಿಯೆ? ಕೇಳಲು ಅವನಿಲ್ಲ. ಒಬ್ಬಳೇ ನಾನಿಲ್ಲಿ.. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry