ಮಂಗಳವಾರ, ಏಪ್ರಿಲ್ 20, 2021
25 °C

ಪ್ರೇಮಲೋಕದಲ್ಲಿ ಬರಗಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಮಾಪಕ: ಕನಕಪುರ ಚಿನ್ನಸ್ವಾಮಿ

ನಿರ್ದೇಶಕ: ಸಂಗಮೇಶ್ ಜಿ.

ತಾರಾಗಣ: ಅಶ್ವಿನ್‌ರಾಜ್, ಪದ್ಮಿನಿ, ರಮೇಶ್ ಭಟ್, ವಿಜಯ್, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಬಿರಾದಾರ್, ಶಿವಾನಿ, ಪದ್ಮಿನಿ ರಾವ್ ಮತ್ತಿತರರು.

`ಬರಗಾಲದಲ್ಲಿ ಅಧಿಕ ಮಾಸ~ ಎನ್ನುವುದು ಇದಕ್ಕೇ ಇರಬಹುದು!. ಸ್ಟಾರ್ ನಟರ ಚಿತ್ರಗಳನ್ನೇ ಜನ ತಿರಸ್ಕರಿಸುತ್ತಿರುವಾಗ ಬಿಡುಗಡೆಯಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳುವ ಸಲುವಾಗಿಯೇ ಹುಟ್ಟಿಕೊಂಡಿರುವಂತೆ ಕಾಣುವ ಈ ಚಿತ್ರಗಳು ಅಧಿಕ ಮಾಸವಿದ್ದಂತೆ. ನೀರು, ನೆರಳು ಕಾಣದ ಬರಗಾಲ ಪೀಡಿತ ಪ್ರದೇಶದಲ್ಲಿ ಬರಿಗಾಲಲ್ಲಿ ಸುತ್ತಾಡಿ ಬಂದ ಅನುಭವ ನೀಡುತ್ತದೆ `ಓ ಪ್ರೀತಿಯೇ~ ಎಂಬ ಚಿತ್ರ. ಇಲ್ಲಿ ಎಲ್ಲದಕ್ಕೂ ಬರ. ಕತೆಯೆಂಬ ಮಳೆ ಇಲ್ಲಿಲ್ಲ. ಶೀರ್ಷಿಕೆಯಲ್ಲಿ ಇರುವ ಪ್ರೀತಿ ಇಡೀ ಸಿನಿಮಾವನ್ನು ಅಗೆದು ಬಗೆದು ನೋಡಿದರೂ ಒಂದು ಹನಿ ದಕ್ಕದು. ಸಂಭಾಷಣೆಯ ಪ್ರತಿ ತುಣುಕಲ್ಲೂ ಹಾಹಾಕಾರ! ಅಭಿನಯಕ್ಕೆ ತತ್ವಾರ. ಕ್ಯಾಮೆರಾ ಕಣ್ಣಿಗೆ ಒಂದಷ್ಟು ಹಸಿರು ಸಿಕ್ಕಿದೆ. ಅದೇ ಸಮಾಧಾನ.ನಿರ್ದೇಶಕನಾಗಬೇಕೆಂಬ ಖಯಾಲಿಗೆ ಸಂಗಮೇಶ್ ಈ ಚಿತ್ರ ಮಾಡಿದಂತಿದೆ. ನಿರ್ದೇಶನದ ಪಟ್ಟುಗಳನ್ನು ಅರಿಯದ ಚಿಕ್ಕ ಹುಡುಗನಂತೆ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕೆ ಪೂರಕವಾದ ತಾರಾಬಳಗವೂ ಅವರ ಜೊತೆಗೂಡಿದೆ. ಹೊಸ ಕಲಾವಿದರಿಂದ ಒಂದಿಷ್ಟು ನಟನೆಯನ್ನು ಹೊರತೆಗೆಯುವುದು ಅವರ ಪಾಲಿಗೆ ಸಾಹಸ ಕಾರ್ಯ ಎಂದೆನಿಸಿರಬಹುದು. ಜೊಳ್ಳು ಜೊಳ್ಳಾದ ಚಿತ್ರಕತೆಯನ್ನು ಅಚ್ಚುಕಟ್ಟಾಗಿ ನಿರೂಪಿಸುವ ಪ್ರಯತ್ನಕ್ಕೂ ಅವರು ಕೈ ಹಾಕಿಲ್ಲ. ಸನ್ನಿವೇಶಗಳ ಮಧ್ಯೆ ಕೊಂಡಿಯೇ ಇಲ್ಲ. ತಾಂತ್ರಿಕ ಜ್ಞಾನದ ಕೊರತೆ ಎದ್ದು ಕಾಣುತ್ತದೆ.ಮಾಡೆಲಿಂಗ್ ಮಾಡುತ್ತಿರುವ ನಾಯಕ ಅಪ್ಪ ಅಮ್ಮನನ್ನು ನೋಡಲು ಊರಿಗೆ ಬರುತ್ತಾನೆ. ಊರಿಗೆ ಬಂದ ಮಗ ಪ್ರೀತಿಯಲ್ಲಿ ಬೀಳಲೇ ಬೇಕಲ್ಲವೇ. ಅವನು ಪ್ರೀತಿಸುವುದು ತನ್ನ ಜಮೀನಿನಲ್ಲಿ ಮ್ಯಾನೇಜರ್ ಕೆಲಸ ಮಾಡುವವನ ಮಗಳನ್ನು. ಮಗನ ಪ್ರೀತಿಗೆ ಅಪ್ಪನ ವಿರೋಧ. ಅಪ್ಪನ ಹಂಗಿನಲ್ಲಿರಲು ಒಪ್ಪದ ಮಗ ಮನೆ ಬಿಟ್ಟು ಹೊರಡುತ್ತಾನೆ. ಮುಂದಿನದ್ದೆಲ್ಲವೂ ಚಿತ್ರವಿಚಿತ್ರಾನ್ನ.ಇಡೀ ಚಿತ್ರದಲ್ಲಿ ನಟಿಸಿರುವುದು ರಮೇಶ್ ಭಟ್ ಮಾತ್ರ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟುವಿನಂತೆ ಅವರು ನೆಮ್ಮದಿ ನೀಡುತ್ತಾರೆ. ಉಮೇಶ್, ಡಿಂಗ್ರಿ ನಾಗರಾಜ್ ಮತ್ತು ಬಿರಾದಾರ್ ಕಾಣಿಸುವ ಸನ್ನಿವೇಶಗಳಲ್ಲಿ ಹಾಸ್ಯವಿಲ್ಲದಿದ್ದರೂ ಅವರ ನಟನೆಯ ಮೂಲಕ ತುಸು ಜೀವ ತುಂಬಿದ್ದಾರೆ. ಚಿತ್ರದಲ್ಲೊಬ್ಬ ಖಳನಾಯಕನಿದ್ದಾನೆ. ಆತ ಪಾಪದವ. ಪದೇಪದೇ ತನ್ನ ತಲೆಗೆ ತಾನೇ ಹೊಡೆದುಕೊಳ್ಳುವಾತ. ಆತನ ಸುತ್ತ ಒಂದು ಗುಂಪು. ಆದಿಯಿಂದ ಅಂತ್ಯದವರೆಗೂ ಚಿತ್ರದಲ್ಲಿ ಮುಖಪ್ರದರ್ಶನ ಮಾಡುವುದಷ್ಟೇ ಅವರ ಕೆಲಸ.ಸಂಗೀತ್ ಸಾಗರ್ ನೀಡಿರುವ ಸಂಗೀತ ಸಾಧಾರಣ. ಹಸಿರಿನ ಸಿರಿಯ ನಡುವೆ ಚಿತ್ರೀಕರಣ ನಡೆದಿದೆ. ಆದರದನ್ನು ಆಸ್ವಾದಿಸುವ ಅವಕಾಶವನ್ನು ನೀಡಿಲ್ಲ. ಸಿನಿಮಾ ಕುರಿತು ತಿಳಿವಳಿಕೆ ಇಲ್ಲದ ಅಪ್ರಬುದ್ಧರಿಂದ ಸುಖಾಸುಮ್ಮನೆ ಸೃಷ್ಟಿಯಾದ ವ್ಯರ್ಥ ದೃಶ್ಯಗಳ ರಾಶಿಯಾಗಿ `ಓ ಪ್ರೀತಿಯೇ~ ಕಾಣುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.