ಪ್ರೇಮಿಗಳ ತೋಟದಲ್ಲಿ ರಾಣಿ ಆಟ

ಗುರುವಾರ , ಜೂಲೈ 18, 2019
22 °C

ಪ್ರೇಮಿಗಳ ತೋಟದಲ್ಲಿ ರಾಣಿ ಆಟ

Published:
Updated:

ಗುಲ್ಬರ್ಗ ನಗರದ ಸಮೀಪದಲ್ಲೇ ಇದೆ ಪ್ರೇಮಿಗಳ ಸ್ವರ್ಗ `ಕೆಸರಟಗಿ ಪಾರ್ಕ್~. ಇದರೊಳಗೆ ಮೂಲೆ ಮೂಲೆಗಳಲ್ಲಿ, ಮರಗಳ ಮರೆಯಲ್ಲಿ ಪ್ರೇಮಜೋಡಿಗಳದ್ದೇ ಕಾರುಬಾರು. ಆದರೆ ಇವರ ಜತೆ ಚೇಷ್ಟೆ ಮಾಡಲು ಇಲ್ಲೊಬ್ಬಳು `ರಾಣಿ~ ಇದ್ದಾಳೆ.ಯಾರೇ ಬರಲಿ ಕಣ್ಣು ಮಿಟುಕಿಸಿ, ಹಲ್ಕಿರಿದು ತನ್ನತ್ತ ಅವರ ಗಮನ ಸೆಳೆಯಲು ತಿಪ್ಪರಲಾಗ ಹಾಕಿ ಸಿಕ್ಕಾಪಟ್ಟೆ ಮನರಂಜನೆ ಕೊಡುತ್ತಾಳೆ.ಆದರೆ ಈಕೆಯ ಹೆಸರಷ್ಟೇ ರಾಣಿ. ಅರಮನೆ ಅಂತಃಪುರಗಳಿಲ್ಲ, ಕಾಲಾಳು ಕೈಯಾಳುಗಳಿಲ್ಲ. ಬಾವಿ ಪಕ್ಕದ ಮರದ ನೆರಳಲ್ಲೇ ಒಡ್ಡೋಲಗ. ಏಕೆಂದರೆ ಈ `ರಾಣಿ~ ಇಲ್ಲಿ ಎಲ್ಲರ ಮನಕದ್ದ ಮುದ್ದು ಹೆಣ್ಣು ಕೋತಿ.ಇವಳು ಹೆಸರಿಗೆ ತಕ್ಕಂತೆಯೇ ರಾಣಿ. ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಪಾರ್ಕ್ ಸಿಬ್ಬಂದಿಯ ಪುತ್ರ ಸಚಿನ್ ಎಂಬ ಬಾಲಕ ಮತ್ತು ರಾಣಿ ಮಧ್ಯೆ ಅದೇನೋ ವಾತ್ಸಲ್ಯ. ಯಾರಾದರೂ ತಿಂಡಿತಿನಿಸು ತಿನ್ನಲು ಕೊಟ್ಟರೆ ಅದನ್ನು ಸಚಿನ್‌ನೊಂದಿಗೆ ಹಂಚಿಕೊಂಡು ತಿನ್ನುವ ದೊಡ್ಡ ಮನಸ್ಸು ನಮ್ಮ ರಾಣಿಗಿದೆ. ತನ್ನದಲ್ಲದ ಮಗುವಿನಲ್ಲಿ ವಿಪರೀತ ಅಕ್ಕರೆ.ಸಚಿನ್ ಕೂಡ ರಾಣಿಗೂ `ಮಗು~. ಕೋತಿಯಾದರೂ ಹೆತ್ತಮ್ಮನಂತೆ ಆ ಬಾಲಕನನ್ನು ಮುದ್ದು ಮಾಡುವುದನ್ನು ನೋಡುವುದೇ ಜನರಿಗೆ ಮೋಜು. ಬಾಲಕನಿಗೂ ಅಷ್ಟೇ. ರಾಣಿ ಅಂದ್ರೆ ಅಚ್ಚುಮೆಚ್ಚು. ಈ ಜೋಡಿಯನ್ನು ನೋಡುತ್ತಾ ಅಲ್ಲಿ ಸೇರಿದ ಪುಟಾಣಿಗಳು `ಮುದ್ದು ಕೊಡು~, `ಮುದ್ದು ಕೊಡು~ ಎಂದು ದುಂಬಾಲು ಬೀಳುತ್ತಾರೆ.ಆಗ ರಾಣಿ- ಸಚಿನ್ ತಾಯಿ ಮಗನಂತೆ ಅಥವಾ ಅಕ್ಕ-ತಮ್ಮನಂತೆ ಕೈ ಹಿಡಿದು ಕೂರುತ್ತಾರೆ. ಜನ್ಮಾಂತರದ ಸಂಬಂಧ ಎಂಬಂತೆ! ಇಲ್ಲಿ ಮನುಷ್ಯರಲ್ಲಿಲ್ಲದ ಸಹಬಾಳ್ವೆ ಕಂಡು ಕುತೂಹಲ, ಅಚ್ಚರಿ ಉಂಟಾಗುತ್ತದೆ.ಪಾರ್ಕ್‌ನಲ್ಲಿ ಹಿಂದೊಮ್ಮೆ ಕೆಲಸಕ್ಕಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದಿದ್ದ ರಾಣಿ ಈಗ ಇಲ್ಲಿನ ಮನೆಮಗಳು. ಪಾರ್ಕ್ ಒಳಗೆಲ್ಲಾ  ಈಕೆಯದ್ದೇ ಸಾಮ್ರಾಜ್ಯ. ಹಾಗಂತ ಯಾರ ಮೇಲೂ ದರ್ಬಾರು ನಡೆಸುವುದಿಲ್ಲ.ಬದಲಿಗೆ ಎಲ್ಲರೊಂದಿಗೆ ಪ್ರೀತಿ ಸ್ನೇಹಗಳಿಂದ ವರ್ತಿಸುತ್ತಾಳೆ. ಬಾಲಕ ಸಚಿನ್ ಹಾಗೂ ಕಾವಲುಗಾರ ರವಿಯ ತಂಟೆಗೆ ಯಾರಾದರೂ ಬಂದರೆ ಮಾತ್ರ ರಾಣಿ ಸುಮ್ಮನಿರಲ್ಲ. ಗುರ್ ಅನ್ನುತ್ತಾಳೆ, ಹಲ್ಲುಕಿರಿದು ಕೈ ಅಪ್ಪಳಿಸಿ ಹೆದರಿಸುತ್ತಾಳೆ. ಇವರ ರಕ್ಷಣೆಗೆ ರಾಣಿ ಸದಾ ಸಿದ್ಧ.ಲವರ್ಸ್‌ಗಳಿಗೆ ಹೆಸರಾಗಿದ್ದ ಕೆಸರಟಗಿ ಪಾರ್ಕ್, ಈಗ ರಾಣಿಯಿಂದಾಗಿ ಮತ್ತೊಮ್ಮೆ ಹೆಸರು ಮಾಡಿದೆ. ಮೊದಲು ಪಾರ್ಕ್‌ನ ಯಾವ ಮೂಲೆಯಲ್ಲಿ ನೋಡಿದರೂ ಯುವ ಪ್ರೇಮ ಜೋಡಿಗಳೇ ಕಾಣುತ್ತಿದ್ದವು. ಆದರೆ ಇಂದು ರಾಣಿಯ ದೆಸೆಯಿಂದಾಗಿ ಕುಟುಂಬಗಳು ಇಲ್ಲಿಗೆ ಲಗ್ಗೆ ಇಟ್ಟಿವೆ.ಅವಳನ್ನು ನೋಡಲೆಂದೇ ಸುತ್ತಮುತ್ತಲಿನ ಗ್ರಾಮಗಳ ಜನ ಮಕ್ಕಳು ಮರಿ ಸಮೇತ ಬರುತ್ತಿದ್ದಾರೆ. ಮಕ್ಕಳು ರಾಣಿಯನ್ನು ಹಾಗೂ ಅವಳ ಆಟವನ್ನು ನೋಡಿ ಸಂತೋಷ ಪಡುತ್ತಾರೆ. ಅವಳಿಂದ ಪಾರ್ಕ್‌ನಲ್ಲಿ ಜನಜಂಗುಳಿ ಹೆಚ್ಚಿದೆ.ಅಪರಿಚಿತರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಮುನ್ನೆಚ್ಚರಿಕೆಗಾಗಿ ರಾಣಿಯ ಸೊಂಟಕ್ಕೊಂದು ಚೈನ್ ಹಾಕಲಾಗಿದೆ. ಇದು ಬಂಧನವಲ್ಲ, ಆಕೆಗೆ ಆತ್ಮೀಯತೆಯ ಶ್ರೀರಕ್ಷೆ ಎನ್ನುತ್ತಾರೆ ಇಲ್ಲಿಯ ಕಾವಲುಗಾರರು.ಪಾರ್ಕ್‌ನಲ್ಲೊಂದು ಕ್ಯಾಂಟೀನ್ ಇದೆ. ಅದರ ಮಾಲೀಕ ರಾಣೋಜಿಯ ತಲೆಯಿಂದ ಹೇನು ಹೆಕ್ಕುವಂತೆ ನಟಿಸುವುದೆಂದರೆ ರಾಣಿಗೆ ಅದೇನೋ ಆನಂದ.

ಅಂದಹಾಗೆ ನೀವೂ ಬನ್ನಿ. ಹಾಂ. ರಾಣಿಗೆ ಏನಾದರೂ ತಿನಿಸು ಗಿಫ್ಟ್ ತನ್ನಿ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry