ಪ್ರೇಮಿಗಳ ದಿನದಂದು ವಿಧವೆ ಕೈಹಿಡಿದ ಯುವಕ

7

ಪ್ರೇಮಿಗಳ ದಿನದಂದು ವಿಧವೆ ಕೈಹಿಡಿದ ಯುವಕ

Published:
Updated:

ಮಾಯಕೊಂಡ: ಇಲ್ಲಿನ ಗಣೇಶ ದೇವಾಲಯ ಸೋಮವಾರ ಮದುವೆ ಮಂಟಪವಾಗಿತ್ತು. ತಾಳಮೇಳ, ಪುರೋಹಿತರಿರಲಿಲ್ಲ. ಕುತೂಹಲ, ಕೌತುಕಗಳು ತುಂಬಿದ್ದವು. ಮಾಯಕೊಂಡದ ವಿಧವೆ ನಾಗಮ್ಮ ಮತ್ತು ಪಕ್ಕದ ಪರಶುರಾಂಪುರ ಗ್ರಾಮದ ಪೀರಾನಾಯ್ಕ ಅವರು `ಪ್ರೇಮಿಗಳ ದಿನ~ದಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಇಲ್ಲಿಗೆ 6 ವರ್ಷಗಳ ಹಿಂದೆ ಚನ್ನಗಿರಿ ತಾಲ್ಲೂಕು ತಣಿಗೆರೆ ಗ್ರಾಮದ ನಾಗಮ್ಮ ಮಾಯಕೊಂಡದ ಏಳುಕೋಟಿ ಎಂಬುವವರನ್ನು ವಿವಾಹವಾಗಿದ್ದಳು. ದುರದೃಷ್ಟವಶಾತ್ ಮದುವೆಯಾದ ಒಂದೇ ವರ್ಷದಲ್ಲಿ ಪತಿ ತೀರಿಕೊಂಡಿದ್ದರು.ವಿಧವೆ ನಾಗಮ್ಮ ಜೀವನಕ್ಕಾಗಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಗುತ್ತಿಗೆದಾರರೊಬ್ಬರಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತಿದ್ದರು. ಕೆಇಬಿಯಲ್ಲಿ ಕಂಬ ಹಾಕುವ ಕೂಲಿ ಕೆಲಸ ಮಾಡಿಕೊಂಡಿದ್ದ ಪರುಶುರಾಂಪುರ ಗ್ರಾಮದ  ಪೀರಾನಾಯ್ಕನೊಂದಿಗೆ ಪ್ರೀತಿ ಬೆಳೆದಿದ್ದು, ಸಂಬಂಧವಾಗಿ ಮಾರ್ಪಟ್ಟಿತ್ತು.ವಿವಾಹವಾಗುವ ಚಿಂತನೆಯಲ್ಲಿದ್ದರು. ಆದರೂ ಇಬ್ಬರೂ ಕುಟುಂಬದ ಸದಸ್ಯರಿಗೆ ಮುಂಚಿತವಾಗಿ ತಿಳಿಸಿರಲಿಲ್ಲ. ಕಳೆದ 6 ತಿಂಗಳಿಂದ ನಾಗಮ್ಮನನ್ನು ಆಕೆಯ ಮನೆಯಲ್ಲಿ ಆಗಾಗ್ಗೆ ಭೇಟಿ ಮಾಡುತ್ತಿದ್ದ ಪೀರಾನಾಯ್ಕ ಭಾನುವಾರ ರಾತ್ರಿ ಎಂದಿನಂತೆ ಬಂದಾಗ ನಾಗಮ್ಮನ ಕುಟುಂಬದವರು ಅನುಮಾನಿಸಿ ವಿಚಾರಿಸಿದ್ದಾರೆ.ಗ್ರಾಮಸ್ಥರು ಮತ್ತು ಸಮಾಜದ ಮುಖಂಡರು ಸೇರಿ ನಾಗಮ್ಮ ಮತ್ತು ಪೀರಾನಾಯ್ಕರ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ಇಬ್ಬರೂ ಪರಸ್ಪರ ಮದುವೆಯಾಗಲು ಒಪ್ಪಿಕೊಳ್ಳಲು ತಿಳಿಸಿದ್ದಾರೆ.ಸೋಮವಾರ ಬೆಳಿಗ್ಗೆ ಗಣೇಶ ದೇವಾಲಯಕ್ಕೆ ಇಬ್ಬರನ್ನೂ ಕರೆತಂದು ವಿವಾಹ ಮಾಡಲಾಯಿತು. ಈ ಅಂತರಜಾತಿಯ ಮತ್ತು ವಿಧವಾ ವಿವಾಹಕ್ಕೆ ಗ್ರಾಮದ ನೂರಾರು ಗ್ರಾಮಸ್ಥರು ಸಾಕ್ಷಿಯಾದರು. ಅನೇಕರು ಇದು ಅವರ ಹಣೆಬರಹ ಯಾರೂ ಏನೂ ಮಾಡಲಿಕ್ಕಾಗಲ್ಲ ಎಂದು ಸಮಾಧಾನ ಹೇಳಿಕೊಳ್ಳುತ್ತಿದ್ದರು. ಪೀರಾನಾಯ್ಕನ ಕುಟುಂಬದವರು ಬಂದಿರಲಿಲ್ಲ. ನಂತರ, ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು.ಇವರ ವರ್ತನೆಯಿಂದ ನಮ್ಮ ಕುಟುಂಬದ ಘನತೆಗೆ ಧಕ್ಕೆಯಾಗಿದೆ. ಸಮಾಜ ಎದುರಿಸುವುದು ಕಷ್ಟವಾಗಿದೆ. ಇದು ನಮ್ಮ ಪಾಲಿನ ನೋವಿನ ಸಂಗತಿಯಾಗಿದೆ ಎಂದು ನಾಗಮ್ಮನ ಮೈದುನ ಸಿದ್ದೇಶ ನೊಂದುಕೊಂಡರು.

ಮುಂದೆ ಪತ್ನಿಯೊಂದಿಗೆ ಸುಖವಾಗಿ ಸಂಸಾರ ನಡೆಸುತ್ತೇನೆ. ಯಾವುದೇ, ತರದ ಗೊಂದಲ-ಗಲಾಟೆಗೆ ಆಸ್ಪದ ನೀಡುವುದಿಲ್ಲ ಎಂದು ಪೀರಾನಾಯ್ಕ ನುಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry