ಪ್ರೇಮಿಗಳ ದಿನಾಚರಣೆಗೆ ಬಣ್ಣದ ವೇಷ!

7

ಪ್ರೇಮಿಗಳ ದಿನಾಚರಣೆಗೆ ಬಣ್ಣದ ವೇಷ!

Published:
Updated:

ಮಂಗಳೂರು: ಫೆಬ್ರುವರಿ 14 ಎಂದರೆ ಯುವಜನರಲ್ಲಿ ಅದೇನೋ ಉತ್ಸಾಹ. ಎಂದೂ ಇಲ್ಲದ ಕಾತುರ, ಆಕರ್ಷಣೆ ಯುವಜನರಲ್ಲಿ ಭುಗಿಲೇಳುತ್ತವೆ.ಪ್ರೇಮಿಗಳ ದಿನಾಚರಣೆ ಎಂದರೆ ಅದು ಯುವಕ-ಯುವತಿಯರದ್ದೇ ಹಬ್ಬ. ಪ್ರೀತಿಯನ್ನು ಆಚರಿಸುವ, ಹೊಸ ಪ್ರೀತಿಗೆ ಮುನ್ನುಡಿ ಹಾಡಲು ಸಂಭ್ರಮಿಸುವ ಈ ದಿನವನ್ನು ಮಂಗಳೂರಿನಲ್ಲೂ ಯುವಜನರು ಮಂಗಳವಾರ ಆಚರಿಸಲಾಯಿತು.ಆದರೆ ಪ್ರೇಮಿಗಳ ದಿನಕ್ಕೆ ಏಕೋ ಏನೋ ಕೊಂಚ ಉತ್ಸಾಹ ಕಡಿಮೆಯೇ ಇದ್ದಿತು. ಮಂಗಳವಾರ ಬೆಳಿಗ್ಗೆಯಾಗುತ್ತಲೂ ಪ್ರೇಮಿಗಳಿಗೆ ತಮ್ಮ ಸಂಗಾತಿಯೊಂದಿಗೆ ಪ್ರೇಮದಿನ ಆಚರಿಸುವ ಸಂಭ್ರಮವೇನೋ ಇದ್ದಂತೆ ಕಂಡಿತು. ಆದರೆ ಆಚರಿಸುವವರ ಸಂಖ್ಯೆ ಮಾತ್ರ ಅತಿ ವಿರಳವಾಗಿತ್ತು. ಪ್ರೇಮಿಗಳ ಫೇವರೇಟ್ ಸ್ಪಾಟ್ ಆದ ಎಂಪೈರ್ ಮಾಲ್‌ನ ಅಮೀಬಾ, ಸಿಟಿ ಸೆಂಟರ್‌ನ ಫುಟ್ ಕೋರ್ಟ್, ಬಿಗ್ ಬಜಾರ್ ಸೇರಿದಂತೆ ನಗರದ ಅನೇಕ ಕಾಫಿ ಡೇ ಕೌಂಟರ್‌ಗಳಲ್ಲಿ ಪ್ರೇಮಿಗಳು ವ್ಯಾಲೆಂಟೇನ್ ದಿನ ಆಚರಿಸಿದರು. ಸಿಹಿ ಹಂಚಿ ಆಲಂಗಿಸುವ ಜತೆಗೆ ತಮ್ಮ ಪ್ರೇಮವನ್ನೂ ಹಂಚಿಕೊಂಡರು.ಬಣ್ಣ ಬಣ್ಣಕ್ಕೂ ಅರ್ಥ..!: ಪ್ರೇಮಿಗಳ ದಿನದ ಜೋಷ್‌ನಲ್ಲಿ ರಂಗುರಂಗಿನ ಬಟ್ಟೆಗಳನ್ನು ತೊಟ್ಟಿದ್ದ ಪ್ರೇಮಿಗಳು ಗಮನ ಸೆಳೆದರು. ಈಗಾಗಲೇ ಪ್ರೇಮಿಗಳಾಗಿರುವವರು ಕೆಂಪು ಬಟ್ಟೆ ತೊಟ್ಟರೆ, ಪ್ರೇಮಕ್ಕಾಗಿ ಹಾತೊ ರೆಯುತ್ತಿರುವವರು ಹಸಿರು ಬಟ್ಟೆ ತೊಟ್ಟಿದ್ದರು. ಪ್ರೇಮ ಬಯಸದೇ ಸ್ನೇಹವನ್ನು ಮಾತ್ರ ಬಯಸುವವರು ಹಳದಿ ವಸ್ತ್ರ ಧರಿಸಿ ಗಮನ ಸೆಳೆದರು.ಎಂಪೈರ್ ಮಾಲ್‌ನ ಅಮೀಬಾದಲ್ಲಿ ಸಿಕ್ಕ, ಬಿಜೈನ ಯುವ ಜೋಡಿ ಕ್ಲಾರಾ ಮತ್ತು ಜಫರ್‌ಸನ್ `ಪ್ರಜಾವಾಣಿ~ ಯೊಂದಿಗೆ ಈ `ಬಣ್ಣದ ಬಟ್ಟೆ~ ವಿಚಾರ ಹಂಚಿಕೊಂಡವರು. ಈ ಜೋಡಿ ಕೆಂಪು ಮೇಲಂಗಿ ತೊಟ್ಟಿದ್ದಿತು.

`ಕಳೆದ 3 ವರ್ಷದಿಂದ ಪ್ರೇಮಿಸುತ್ತಿದ್ದೇವೆ. ಇದೇ ವರ್ಷ ಮದುವೆಯಾಗಲಿದ್ದೇವೆ. ನಮ್ಮ ಪ್ರೀತಿಗೆ ಶಾಶ್ವತ ಆಯಸ್ಸು ನೀಡಲು ನಮಗೆ ಮದುವೆಯೇ ಆಧಾರ~ ಎಂದು ತಮ್ಮ ಭಾವನೆ ಹಂಚಿಕೊಂಡರು.`ಆದರೆ, ನಮಗೆ ವ್ಯಾಲೆಂಟೇನ್ಸ್ ಡೇ ಕೇವಲ ಸಾಂಕೇತಿಕ ಅಷ್ಟೇ. ನಮ್ಮ ಪ್ರೀತಿ ಶುರುವಾಗಿದ್ದು, ಈ ದಿನದಂದು ಅಲ್ಲವೇ ಅಲ್ಲ. ಆದರೆ ನಮ್ಮ ಪ್ರೀತಿಯನ್ನು ಈ ದಿನದಂದು ಆಚರಿಸುತ್ತೇ ವಷ್ಟೇ. ಇದು ನಮಗೆ ಪವಿತ್ರ ಸೇಂಟ್ ವ್ಯಾಲೆಂಟೇನ್ ಅವರ ಹುಟ್ಟುಹಬ್ಬದ ದಿನವೂ ಹೌದು. ಇದನ್ನು ನಾವು ಕುಟುಂಬ ಸಮೇತವೂ ಆಚರಿಸುತ್ತೇವೆ. ಈ ದಿನ ಕೇವಲ ಪ್ರೇಮಿ ಗಳಿಗೇನು ಮೀಸಲಲ್ಲ. ಪ್ರೀತಿ ಇರುವ ಯಾರು ಬೇಕಾದರೂ ವ್ಯಾಲೆಂಟೇನ್ ದಿನ ಆಚರಿಸಬಹುದು~ ಎಂದು ಸಲಹೆ ನೀಡಿದರು.ಬಲ್ಮಠ ರಸ್ತೆಯ ಕಾಫಿ ಡೇನಲ್ಲಿ ಕೇಕ್ ಕತ್ತರಿಸಿ ಹಂಚಿ ತಿಂದ ಪ್ರೇಮಿಗಳಾದ ಅನುಪಮಾ ಹಾಗೂ ದಿನೇಶ್ ಜೋಡಿ, ಪ್ರೇಮಿಗಳ ದಿನವನ್ನು ಸಂಭ್ರಮದಿಂದಲೇ ಆಚರಿಸಿದರು. ಪತ್ರಿಕೆ ಜತೆ ಮಾತನಾಡಿದ ದಿನೇಶ್, `ಪ್ರೇಮಿಗಳ ದಿನಾಚರಣೆ ಎಂದರೆ ಇದು ನಮ್ಮ ದಿನ. ವರ್ಷಕ್ಕೆ ಒಮ್ಮೆ ನಮಗೆ ಮುಕ್ತವಾಗಿ ಪ್ರೇಮ ಆಚರಿಸುವ ಸ್ವಾತಂತ್ರ್ಯ ಇಂದೇ ಸಿಗುವುದು. ಆದರೆ ನಮ್ಮ ಪ್ರೀತಿ ಇಂದಿಗೇ ಸೀಮಿತವೇನಲ್ಲ. ವರ್ಷ ಪೂರ್ತಿ ಆಚರಿಸುತ್ತೇವೆ~ ಎಂದರು.`ಇದು ನಮ್ಮಿಬ್ಬರಿಗೂ ಸಂಭ್ರಮದ ದಿನ. ನಮ್ಮ ಮನೆಯಲ್ಲೂ ನಮ್ಮ ಪ್ರೇಮದ ಬಗ್ಗೆ ಅರಿವಿದೆ. ಪ್ರೇಮಿಗಳ ದಿನವನ್ನು ಯಾರೂ ಕದ್ದು ಮುಚ್ಚಿ ಆಚರಿಸಬಾರದು~ ಎಂದು ಹರ್ಷ ವ್ಯಕ್ತಪಡಿಸಿದರು ಅನುಪಮಾ.

ಸಿಟಿ ಸೆಂಟರ್‌ನಲ್ಲಿ ಜೋಡಿಗಳೇ ಇರಲಿಲ್ಲ ಎನ್ನುವಷ್ಟು ನೀರಸ ಪ್ರತಿಕ್ರಿಯೆಯಿತ್ತು. ಇಲ್ಲಿನ ಫುಡ್ ಕೋರ್ಟ್‌ನಲ್ಲಿ ಸಿಕ್ಕ ಜೋಡಿ ಶ್ವೇತಾ ಮತ್ತು ಶಶಿಧರ್ ಮಾತಿಗೆ ಸಿಕ್ಕರು. ಶ್ವೇತ ಮಾತನಾಡಿ, `ನಮ್ಮದು ಅಂತರಜಾತಿ ಪ್ರೇಮ. ನನ್ನ `ಶ್ಯಾಶ್~ (ಶಶಿಧರ್) ಮಾತ್ರ ನನಗೆ ಮುಖ್ಯ. ನಮ್ಮಿಬ್ಬರಿಗೂ ಜಾತಿ ಗೊತ್ತಿಲ್ಲ. ಪ್ರೀತಿ ಜಾತಿಗಳನ್ನು ಮರೆಸಬೇಕು. ಪ್ರೀತಿಸಿ ಮದುವೆಯಾದರೆ ಮಾತ್ರ ಒಬ್ಬರನ್ನೊಬ್ಬರು ಅರ್ಥೈಸಲು ಸಾಧ್ಯ~ ಎಂದು ಕರೆ ಕೊಟ್ಟರು.ಬಿಗ್ ಸಿನಿಮಾದಲ್ಲಿ ಭಲೇ ಜೋಡಿ!: `ಪ್ರೇಮಿಗಳಿಗೆ ಪ್ರೇಮಿಸಲು ಮುಕ್ತ ಜಾಗ ಸಿಗುವುದು ಸಿನಿಮಾ ಹಾಲ್. ಅದಕ್ಕೇ ನಾವು `ಏಕ್ ಮೇ ಔರ್ ಏಕ್ ತು~ ಸಿನಿಮಾ ನೋಡಲು ಬಂದಿದ್ದೇವೆ. ಜನ ಕಡಿಮೆಯಿರುವುದು ಖುಷಿಯೇ ಆಗಿದೆ~ ಎಂದು ತುಂಟ ನಗೆ ಬೀರಿದವರು ಸ್ವರ್ಣ ಮತ್ತು ಸುರೇಶ್ ಜೋಡಿ. ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಈ ಜೋಡಿಯ ಪ್ರೀತಿ ಶುರುವಾಗಿ ಆರು ತಿಂಗಳು ಆಗಿದೆಯಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry