ಗುರುವಾರ , ಮೇ 19, 2022
20 °C
ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲ

ಪ್ರೇಮ್‌ಕುಮಾರ್‌ಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಲಾಂಗ್‌ಜಂಪ್ ಸ್ಪರ್ಧಿ ಕುಮಾರವೇಲು ಪ್ರೇಮ್‌ಕುಮಾರ್ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.ಕ್ಯಾಲಿಫೋರ್ನಿಯದ ಚುಲಾ ವಿಸ್ತಾದಲ್ಲಿ ಶುಕ್ರವಾರ ನಡೆದ ಕೂಟದಲ್ಲಿ ಪ್ರೇಮ್‌ಕುಮಾರ್ 8.12 ಮೀ. ದೂರ ಜಿಗಿದರು. ಆದರೆ ಗಾಳಿಯ ನೆರವು ಇದ್ದ ಕಾರಣ ಅವರ ಈ ಸಾಧನೆಯಲ್ಲಿ ಪರಿಗಣಿಸಲಿಲ್ಲ. ಗಾಳಿಯ ನೆರವು ಇಲ್ಲದೆ ಈ ಸಾಧನೆ ಮಾಡಿದ್ದಲ್ಲಿ ಪ್ರೇಮ್‌ಕುಮಾರ್ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸುತ್ತಿದ್ದರಲ್ಲದೆ, ವಿಶ್ವಚಾಂಪಿಯನ್‌ಷಿಪ್‌ಗೂ ಅರ್ಹತೆ ಗಿಟ್ಟಿಸುತ್ತಿದ್ದರು.ವಿಶ್ವ ಚಾಂಪಿಯನ್‌ಷಿಪ್‌ಗೆ `ಬಿ' ಸ್ಟ್ಯಾಂಡರ್ಡ್ ಅರ್ಹತೆಯ ಮಟ್ಟ 8.10 ಮೀ. ಆಗಿದೆ. ಪ್ರೇಮ್‌ಕುಮಾರ್ ಈ ಅರ್ಹತಾ ಮಟ್ಟ ತಲುಪಿದ್ದರು. ಆದರೆ ಸ್ಪರ್ಧೆಯ ವೇಳೆ ಬಲವಾಗಿ ಗಾಳಿ ಬೀಸುತ್ತಿದ್ದದ್ದು ಅವರಿಗೆ ಮುಳುವಾಗಿ ಪರಿಣಮಿಸಿತು. ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಅಮೃತ್‌ಪಾಲ್ ಸಿಂಗ್ (8.08 ಮೀ.) ಹೆಸರಿನಲ್ಲಿದೆ. 2004 ರಲ್ಲಿ ಈ ಸಾಧನೆ ಮೂಡಿಬಂದಿತ್ತು.ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಮಾಸ್ಕೊದಲ್ಲಿ ಆಗಸ್ಟ್ 10 ರಿಂದ 18ರ ವರೆಗೆ ನಡೆಯಲಿದ್ದು, ಅರ್ಹತೆ ಪಡೆಯಲು ಜುಲೈ 29 ಗಡುವು ಆಗಿದೆ.ಒಲಿಂಪಿಕ್ ತರಬೇತಿ ಕೇಂದ್ರದಲ್ಲಿ ನಡೆದ ಈ ಕೂಟದಲ್ಲಿ ಪ್ರೇಮ್‌ಕುಮಾರ್ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದುಕೊಂಡರು. ಅಮೆರಿಕದ ರೊನಾಲ್ಡ್ ಟೇಲರ್ (8.19 ಮೀ.) ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.20ರ ಹರೆಯದ ಪ್ರೇಮ್‌ಕುಮಾರ್ ಈ ತಿಂಗಳ ಆರಂಭದಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 7.92 ಮೀ. ದೂರ ಜಿಗಿದು ಬೆಳ್ಳಿ ಜಯಿಸಿದ್ದರು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 8.00 ಮೀ. ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.