ಪ್ರೇಮ ಪರಿಮಳ ಹದಗೆಟ್ಟಾಗ (ಚಿತ್ರ: ಅಯ್ಯಾ (ಹಿಂದಿ)

7

ಪ್ರೇಮ ಪರಿಮಳ ಹದಗೆಟ್ಟಾಗ (ಚಿತ್ರ: ಅಯ್ಯಾ (ಹಿಂದಿ)

Published:
Updated:

ನಿರ್ದೇಶನ: ಸಚಿನ್ ಕುಂಡಲ್ಕರ್

ನಿರ್ಮಾಪಕ: ಅನುರಾಗ್ ಕಶ್ಯಪ್

ಸಂಗೀತ: ಅಮಿತ್ ತ್ರಿವೇದಿ

ತಾರಾಗಣ: ರಾಣಿ ಮುಖರ್ಜಿ, ಪೃಥ್ವಿರಾಜ್, ಸತೀಶ್ ಆಲೇಕರ್, ಸುಬೋಧ್ ಭಾವೆ, ನಿರ್ಮಿತಿ ಸಾವಂತ್ ಮತ್ತಿತರರು.ಚಿತ್ರವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು: ಒಂದು- ಹಾಡುಗಳು, ಇನ್ನೊಂದು-ನಾಟಕ. ಹೀಗೆ ವಿಭಾಗ ಮಾಡಿದ ಮೇಲೆ ಸಿನಿಮಾ ಎನ್ನುವ ಇನ್ನೊಂದು ಆಯಾಮ ಉಳಿಯುವುದೇ ಇಲ್ಲ.ಹೇಳಿ ಕೇಳಿ ಸಚಿನ್ ಕುಂಡಲ್ಕರ್ ಮರಾಠಿ ರಂಗಭೂಮಿ ಹಿನ್ನೆಲೆಯವರು. ಅವರ ನಿರ್ದೇಶನದ `ನಿರೋಪ್~ (2007) ಚಿತ್ರಕ್ಕೆ ಶ್ರೇಷ್ಠ ಮರಾಠಿ ಚಿತ್ರ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ. ಮರಾಠಿ ಚಿತ್ರಗಳಲ್ಲಿ ಸಾಮಾಜಿಕ ಕಥನಗಳನ್ನು ಆರಿಸಿಕೊಂಡಿದ್ದ ಅವರು `ಅಯ್ಯಾ~ ಹಿಂದಿ ಚಿತ್ರದಲ್ಲಿ ಪಥ ಬದಲಿಸಿದ್ದಾರೆ. ಇದು ಒತ್ತಾಯಪೂರ್ವಕವಾಗಿ ಆದದ್ದೇನೋ ಎಂಬಷ್ಟು ಗೊಂದಲ ಇಡೀ ಚಿತ್ರದಲ್ಲಿ ಇಡುಕಿರಿದಿದೆ. ಆಗೀಗ ಸಾಮಾಜಿಕ ನಾಟಕದಂತೆ ಕಾಣುವ ಚಿತ್ರ, ಹಾಡುಗಳು ಮೂಡಿದಾಗ ಅಶ್ಲೀಲತೆಯ ಸೋಂಕಿಗೀಡಾದಂತೆ ಕಾಣುತ್ತದೆ.ಮರಾಠಿ ಹೆಣ್ಣುಮಗಳು ಹಾಗೂ ತಮಿಳು ಯುವಕನ ನಡುವಿನ ಪ್ರೇಮಕಥಾನಕ `ಅಯ್ಯಾ~. ಮಧ್ಯಮವರ್ಗದ ಕುಟುಂಬದವರ ಕನವರಿಕೆ, ಅಸಹಾಯಕತೆ, ರಾಜಿ ಆಗುವ ಅನಿವಾರ್ಯ, ಸಿನಿಮೀಯ ಶೈಲಿಯಲ್ಲಿ ಕನಸು ಕಾಣುವ ಮನೋಧರ್ಮ ಎಲ್ಲವೂ ಚಿತ್ರದಲ್ಲಿ ಇವೆ. ಆದರೆ, ಸಾಂಸ್ಕೃತಿಕ ಹಾಗೂ ಭಾವಲೋಕದ ಈ ಗೊಂದಲಗಳನ್ನು ವ್ಯಂಗ್ಯದ ಚೌಕಟ್ಟಿನಲ್ಲಿ ತೋರಿಸಬೇಕೆಂಬ ನಿರ್ದೇಶಕರ ಯತ್ನ ಸಫಲವಾಗಿಲ್ಲ.ಶ್ರೀದೇವಿ, ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅಭಿನಯಿಸಿದ ಜನಪ್ರಿಯ ಹಾಡುಗಳ ಕನಸು ಕಾಣುತ್ತಾ, ಆ ನಟೀಮಣಿಯರ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡು ನಾಯಕಿ ಕನಸು ಕಾಣುವ ದೃಶ್ಯದಿಂದ ಚಿತ್ರ ಪ್ರಾರಂಭವಾಗುತ್ತದೆ. ಆ ಕ್ಷಣಕ್ಕೆ `ತಮಿಳ್ ಪಡಂ~ ತಮಿಳು ಚಿತ್ರ ನೆನಪಾಗುತ್ತದೆ. ಜನಪ್ರಿಯ ಚಿತ್ರಗಳ ಮಾದರಿಯನ್ನು ಅಣಕುವಾಡು ಶೈಲಿಯಲ್ಲಿ ತೋರಿದ್ದ ಆ ಚಿತ್ರದಿಂದ ಇದೂ ಸ್ಫೂರ್ತಿ ಪಡೆದಿರಬಹುದೇ ಎಂದುಕೊಳ್ಳುವಷ್ಟರಲ್ಲೇ ಸಚಿನ್ ಕುಂಡಲ್ಕರ್ `ಈ ಚಿತ್ರ ಹಾಗಲ್ಲ~ ಎಂಬುದನ್ನು ಢಾಳಾಗಿ ಕಾಣಿಸುತ್ತಾರೆ.ಚಿತ್ರದ ಪ್ರಾರಂಭ ಕುತೂಹಲ ಹುಟ್ಟಿಸುವಂತಿದೆ. ಮರಾಠಿ ಹೆಣ್ಣುಮಗಳಾಗಿ ರಾಣಿ ಮುಖರ್ಜಿ ಚಹರೆಯ ಭಾವಗಳ ಕಚಗುಳಿಯಂತೂ ತುಂಬಾ ಸಹಜ. ನೋಡುಗನ ಮನಸ್ಸಿನಲ್ಲಿ ಚಿತ್ರ ತನ್ನದೇ ಒಂದು ಪ್ರಭೆ ಮೂಡಿಸುವಷ್ಟರಲ್ಲಿ ನಿರ್ದೇಶಕರು ಒಂದು ಹಾಡನ್ನು ಮೂಡಿಸಿ, ತಾವೇ ಸೃಜಿಸಿದ ಭಾವಜಗತ್ತನ್ನು ಚಿಂದಿ ಮಾಡಿಬಿಡುತ್ತಾರೆ. `ಡ್ರೀಮಂ ವೇಕಪಂ~ ಹಾಗೂ `ವಾಟ್ ಟು ಡೂ~ ಹಾಡುಗಳಂತೂ ಅಶ್ಲೀಲ ಚಲನವಲನಗಳಿಂದ ತುಂಬಿ ತುಳುಕುತ್ತವೆ.ಹಾಡುಗಳಿಗೂ ಚಿತ್ರದ ನಾಡಿಮಿಡಿತಕ್ಕೂ ಸುತರಾಂ ಸಂಬಂಧವಿಲ್ಲ. ಸಂಘರ್ಷ, ವಿಷಾದ, ದುಃಖ, ಪರಂಪರಾಗತವಾಗಿ ಜಡ್ಡುಗಟ್ಟಿದಂಥ ಬದುಕಿನ  ಸಣ್ಣ ಸಣ್ಣ ಸಂಗತಿಗಳನ್ನು ತೋರುವಾಗ ಸಿನಿಮೀಯ ಹೊಣೆಗಾರಿಕೆ ಇರಬೇಕು. ಅದಕ್ಕೆ ಸಚಿನ್ ಕುಂಡಲ್ಕರ್ ಬೆನ್ನುಮಾಡಿದ್ದಾರೆ. ಕಾವ್ಯಾತ್ಮಕ ಆಗಬಹುದಿದ್ದ ಪ್ರೇಮದ ಹಾದಿಯ ಪರಿಮಳ ದುರ್ಬಲ ವ್ಯಂಗ್ಯ, ಅಗ್ಗದ ಮನರಂಜನೆ ಒಗ್ಗರಣೆಯ ಕಮಟಿನಲ್ಲಿ ಉಸಿರುಗಟ್ಟಿದೆ. ಅದೇ ಕಾರಣಕ್ಕೆ ಸಿನಿಮಾ ನೋಡಿದ ಮೇಲೆ `ಅಯ್ಯಯ್ಯೋ~ ಎನಿಸುವುದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry