ಪ್ರೇಮ ಪ್ರಕರಣ: ಮೂವರ ಹತ್ಯೆ

7

ಪ್ರೇಮ ಪ್ರಕರಣ: ಮೂವರ ಹತ್ಯೆ

Published:
Updated:

ಹವರೆ (ಚಿಕ್ಕಮಗಳೂರು):  ಅಂತರಜಾತಿಯ ಯುವಕ-ಯುವತಿ ನಡುವಿನ ಪ್ರೇಮ ಪ್ರಕರಣ ಎರಡು ಕುಟುಂಬಗಳ ನಡುವೆ ಘರ್ಷಣೆಗೆ ಕಾರಣವಾಗಿ ಮೂವರು ಕೊಲೆಯಾದ ಘಟನೆ ತಾಲ್ಲೂಕಿನ ಹವರೆ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.ಕಸ್ಕೆ ಗ್ರಾಮದ ಅಜ್ಜೇಗೌಡ (48), ಹವರೆ ಗ್ರಾಮದ ರಾಮಶೆಟ್ಟಿ (51) ಹಾಗೂ ಈತನ ತಮ್ಮನ ಪತ್ನಿ ಸುಧಾ (35) ಕೊಲೆಯಾದವರು. ಅಜ್ಜೇಗೌಡ ಜೋಡಿ ನಳಿಕೆ ಬಂದೂಕಿನಿಂದ ಹಾರಿಸಿದ ಗುಂಡುಗಳು ರಾಮಶೆಟ್ಟಿ ಮತ್ತು ಸುಧಾ ಅವರನ್ನು ಬಲಿ ತೆಗೆದುಕೊಂಡರೆ, ರಾಮಶೆಟ್ಟಿ ಸಹೋದರರು ಮಾರಕಾಸ್ತ್ರಗಳಿಂದ ನಡೆಸಿದ ದಾಳಿಯಲ್ಲಿ ಅಜ್ಜೇಗೌಡನೂ ಕೊಲೆಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ತಿಳಿಸಿದರು.ಘಟನೆ ಹಿನ್ನೆಲೆ: ಹವರೆ ಗ್ರಾಮದ ರಾಮಶೆಟ್ಟಿ ಪುತ್ರ ಲೋಹಿತ್ ಮತ್ತು ಅಜ್ಜೇಗೌಡನ ಸಹೋದರಿಯ ಪುತ್ರಿ ನಡುವೆ ಪ್ರೇಮ ಏರ್ಪಟ್ಟಿತ್ತು. ಇದನ್ನು ವಿರೋಧಿಸಿದ್ದ ಯುವತಿಯ ಸೋದರಮಾವ ಅಜ್ಜೇಗೌಡ, ಬುಧವಾರ ರಾತ್ರಿ ಲೋಹಿತ್‌ನನ್ನು ಮನೆಗೆ ಕರೆದುಕೊಂಡು ಹೋಗಿ ಎಚ್ಚರಿಕೆ ನೀಡಿದ್ದ. ಅವರ ಮಾತಿಗೆ ಬಗ್ಗದಿದ್ದಾಗ ಯುವಕನಿಗೆ ಥಳಿಸಿದ್ದರು. ಯುವಕ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಯಲ್ಲಿದ್ದ ತಂದೆ, ತಾಯಿಯನ್ನು ಹತ್ತಿರದಲ್ಲಿ ವಾಸವಿದ್ದ ಚಿಕ್ಕಪ್ಪಂದಿರ ಮನೆಗಳಿಗೆ ಕರೆದುಕೊಂಡು ಹೋಗಿ ಅವರ ರಕ್ಷಣೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಎನ್ನಲಾಗಿದೆ.ಇದು ಗೊತ್ತಾಗಿ ಅಜ್ಜೇಗೌಡ, ನವೀನ್, ರಾಮೇಗೌಡ ಮತ್ತು ಪ್ರದೀಪ ಗುಂಪು ಕಟ್ಟಿಕೊಂಡು ಬಂದೂಕು ಸಮೇತ ಹವರೆ ಗ್ರಾಮಕ್ಕೆ ನುಗ್ಗಿ, ಲೋಹಿತ್‌ನನ್ನು ಒಪ್ಪಿಸುವಂತೆ ಬೆದರಿಕೆ ಹಾಕಿದ್ದಾನೆ. ಆಗ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದು, ಅಜ್ಜೇಗೌಡ ಬಂದೂಕಿನಿಂದ ಗುಂಡು ಹಾರಿಸಿದಾಗ ಮೊದಲು ಯುವಕನ ಚಿಕ್ಕಮ್ಮ ಸುಧಾ, ನಂತರ ತಂದೆ ರಾಮಶೆಟ್ಟಿ ಸಾವನ್ನಪ್ಪಿದ್ದಾರೆ. ಉಳಿದವರ ಮೇಲೂ ಗುಂಡು ಹಾರಿಸಲು ಬಂದೂಕು ಸಜ್ಜು ಮಾಡುತ್ತಿರುವಾಗ ಮೃತರ ಸಂಬಂಧಿಕರು ಕೈಗೆ ಸಿಕ್ಕಿದ ಮಾರಕಾಸ್ತ್ರಗಳಿಂದ ಅಜ್ಜೇಗೌಡನ ಮೇಲೆ ಹಲ್ಲೆ ನಡೆಸಿ, ಕೊಂದು ಹಾಕಿದ್ದಾರೆ.ಅಜ್ಜೇಗೌಡನ ಕೊಲೆಗೆ ಸಂಬಂಧಿಸಿ ಮೊಗಣ್ಣ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಸಣ್ಣಪ್ಪ ಶೆಟ್ಟಿ ಮತ್ತು ಲೋಹಿತ್ ಅವರನ್ನು ಹಾಗೂ ಅಜ್ಜೇಗೌಡನ ಜತೆಗೆ ಹೋಗಿದ್ದವರಲ್ಲಿ ನವೀನ್ ಮತ್ತು ರಾಮೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಪ್ರದೀಪ್ ಬಂಧನಕ್ಕೆ ಜಾಲ ಬೀಸಿದ್ದಾರೆ.ಮಲ್ಲಂದೂರು ಠಾಣೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಂದೋಬಸ್ತ್ ಹಾಕಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry