ಪ್ರೇಮ ವೈಫಲ್ಯ; ಎಂಜಿನಿಯರ್ ಸಾವು

7

ಪ್ರೇಮ ವೈಫಲ್ಯ; ಎಂಜಿನಿಯರ್ ಸಾವು

Published:
Updated:

ಬೆಂಗಳೂರು: ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮಿಲೇಔಟ್ ಸಮೀಪದ ಅಶೋಕಪುರದಲ್ಲಿ ನಡೆದಿದೆ.

ಮೂಲತಃ ಉಡುಪಿಯ ವೀರೇಶ್‌ಶೆಟ್ಟಿ (24) ಆತ್ಮಹತ್ಯೆ ಮಾಡಿಕೊಂಡವರು. ಅವರು ಅಶೋಕಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ವೀರೇಶ್‌ಶೆಟ್ಟಿ ಹಲವು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ, ಆ ಯುವತಿ ಕೆಲ ತಿಂಗಳುಗಳ ಹಿಂದೆ ಅವರಿಂದ ದೂರವಾಗಿದ್ದರು. ಇದರಿಂದ ಬೇಸರಗೊಂಡಿದ್ದ ಅವರು ಮನೆಯಲ್ಲೇ ಮಂಗಳವಾರ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಗರದಲ್ಲಿ ನೆಲೆಸಿರುವ ಅವರ ಸಂಬಂಧಿಕರೊಬ್ಬರು ಬುಧವಾರ ಬೆಳಿಗ್ಗೆ ಮನೆಯ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. `ಪ್ರೇಯಸಿ ವಂಚನೆ ಮಾಡಿದ್ದರಿಂದ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಪ್ರೇಯಸಿ ದೂರವಾದ ನಂತರ ಮನಸ್ಸು ಹತೋಟಿಗೆ ಸಿಗುತ್ತಿಲ್ಲ.ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ವೀರೇಶ್‌ಶೆಟ್ಟಿ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳನಿಗೆ ಥಳಿತಮನೆಯೊಂದರಲ್ಲಿ ಕಳವು ಮಾಡಿ ಪರಾರಿಯಾಗಲೆತ್ನಿಸಿದ ದುಷ್ಕರ್ಮಿಯನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಾಜಗೋಪಾಲನಗರ ಸಮೀಪದ ದೊಡ್ಡಣ್ಣ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಆರೋಪಿ ಪ್ರದೀಪ್ ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ದೊಡ್ಡಣ್ಣ ಕೈಗಾರಿಕಾ ಪ್ರದೇಶದಲ್ಲಿ ವಾಸವಾಗಿದ್ದ ಪ್ರದೀಪ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ಪಾನಮತ್ತನಾಗಿದ್ದ ಆತ ಅದೇ ಬಡಾವಣೆಯ ನಿವಾಸಿ ಮಂಜೇಗೌಡ ಎಂಬುವರ ಮನೆಗೆ ನುಗ್ಗಿ ಕೈಗಡಿಯಾರ ಮತ್ತು ಆಭರಣಗಳನ್ನು ಕಳವು ಮಾಡಿ ಪರಾರಿಯಾಗುವ ಯತ್ನದಲ್ಲಿದ್ದ. ಅದೇ ವೇಳೆಗೆ ಎಚ್ಚರಗೊಂಡ ಮಂಜೇಗೌಡ ಕುಟುಂಬ ಸದಸ್ಯರು ಸ್ಥಳೀಯರ ನೆರವಿನಿಂದ ಆತನನ್ನು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ತಿಳಿಸಿದ್ದಾರೆ.ವಿದ್ಯುತ್ ಪ್ರವಹಿಸಿ ಬಾಲಕ ಸಾವು

ಸಂಪ್‌ನಲ್ಲಿ (ತೊಟ್ಟಿ) ನೀರು ತುಂಬಿಕೊಳ್ಳಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಪಂಪ್‌ನ ವಯರ್ ಮುಟ್ಟಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ದಾರುಣ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದ ಒಂದನೇ ಹಂತದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮಾಯಣ್ಣ ಎಂಬುವರ ಪುತ್ರ ಅರುಣ್‌ಕುಮಾರ್ (15) ಮೃತಪಟ್ಟ ಬಾಲಕ. ಆತ ಪೀಣ್ಯದ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಮಾಯಣ್ಣ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅರುಣ್‌ಕುಮಾರ್ ಮನೆಯ ಸಮೀಪವೇ ಇರುವ ಕಾರ್ಖಾನೆಯೊಂದರ ಸಂಪ್‌ನಿಂದ ಮನೆಗೆ ನೀರು ತರಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬಿಂದಿಗೆಗೆ ನೀರು ತುಂಬಿಕೊಳ್ಳುತ್ತಿದ್ದ ಆತ ಸಂಪ್‌ನ ಪಕ್ಕದಲ್ಲೇ ಇದ್ದ ಪಂಪ್‌ನ ವಯರ್ ಅನ್ನು ಆಕಸ್ಮಿಕವಾಗಿ ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡ. ವಿಷಯ ತಿಳಿದ ಪೋಷಕರು ಕೂಡಲೇ ಸ್ಥಳಕ್ಕೆ ಬಂದು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದ್ದಾರೆ. ಪೀಣ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಸರಗಳವು

ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚಂದ್ರಾಲೇಔಟ್ ಸಮೀಪದ ಬಿಸಿಸಿ ಲೇಔಟ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಬಿಸಿಸಿ ಲೇಔಟ್ ಹತ್ತನೇ ಮುಖ್ಯರಸ್ತೆ ನಿವಾಸಿ ಎನ್.ವಿಮಲಾ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಮನೆಯ ಸಮೀಪವೇ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಸುಮಾರು 75 ರೂಪಾಯಿ ಮೌಲ್ಯದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry