ಪ್ರೇಮ ವೈಫಲ್ಯ: ವಿದ್ಯಾರ್ಥಿ ಆತ್ಮಹತ್ಯೆ

7

ಪ್ರೇಮ ವೈಫಲ್ಯ: ವಿದ್ಯಾರ್ಥಿ ಆತ್ಮಹತ್ಯೆ

Published:
Updated:

ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಬಿಬಿಎಂ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಪಿ.ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.ಕೊಲ್ಕತ್ತಾ ಮೂಲದ ಶೊವೋನಸ್ ನಸ್ಕರ್ (21) ಆತ್ಮಹತ್ಯೆ ಮಾಡಿಕೊಂಡವರು. ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಬಿಬಿಎಂ ಎರಡನೇ ಸೆಮಿಸ್ಟರ್ ಓದುತ್ತಿದ್ದ ಅವರು ಜೆ.ಪಿ.ನಗರ ಆರನೇ ಹಂತದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದರು.ಅವರು ರಾತ್ರಿ 9.45ರ ಸುಮಾರಿಗೆ ವಿದ್ಯಾರ್ಥಿನಿಲಯದ ಐದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ತಲೆಗೆ ತೀವ್ರ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಶೊವೋನಸ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ (ಕಿಮ್ಸ) ಮಂಗಳವಾರ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಪಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಕಿಮ್ಸನ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶೊವೋನಸ್ ಅವರ ಚಿಕ್ಕಪ್ಪ ಪೂರ್ಣೇಶ್, `ಪ್ರತಿಭಾವಂತನಾಗಿದ್ದ ಶೊವೋನಸ್ ದೆಹಲಿ ಮೂಲದ ಯುವತಿಯೊಬ್ಬಳನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಪರಸ್ಪರರು ಪ್ರೀತಿಸುತ್ತಿದ್ದರು. ಆದರೆ, ಶೊವೋನಸ್ ಧೂಮಪಾನ ಮಾಡುವ ವಿಷಯ ತಿಳಿದು ಕೋಪಗೊಂಡ ಆ ಯುವತಿ ಒಂದು ತಿಂಗಳ ಹಿಂದೆ ಆತನಿಂದ ದೂರವಾಗಿದ್ದಳು. ಈ ಬಗ್ಗೆ ಆತ ಕುಟುಂಬ ಸದಸ್ಯರ ಬಳಿ ಅಳಲು ತೋಡಿಕೊಂಡಿದ್ದ. ಪ್ರೇಯಸಿ ದೂರವಾಗಿದ್ದರಿಂದಲೇ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ~ ಎಂದು ಹೇಳಿದರು.ಅಪಘಾತ: ಸಾವು

ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಆರ್.ರಸ್ತೆಯ ವಾಣಿವಿಲಾಸ ಆಸ್ಪತ್ರೆ ಸಮೀಪ ಸೋಮವಾರ ರಾತ್ರಿ ನಡೆದಿದೆ.ಸುಂಕದಕಟ್ಟೆ ನಿವಾಸಿ ಆಶಾ (25) ಮೃತಪಟ್ಟವರು. ಅವರು ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಸೆಂಟ್ರಲ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಆಶಾ ಸಿಟಿ ಮಾರುಕಟ್ಟೆಯಿಂದ ರಾತ್ರಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅವರಿಗೆ ಡಿಕ್ಕಿ ಹೊಡೆದಿರುವ ವಾಹನದ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ವಾಹನದ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.ವ್ಯಕ್ತಿಯ ಕೊಲೆ

ಹಣಕಾಸು ವಿಷಯವಾಗಿ ಸಹೋದರರು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ದೇವರಜೀವನಹಳ್ಳಿ ಮುಖ್ಯರಸ್ತೆಯಲ್ಲಿ ಸೋಮವಾರ ನಡೆದಿದೆ.ದೇವರಜೀವನಹಳ್ಳಿ ನಿವಾಸಿ ಶಫಿ  (42) ಕೊಲೆಯಾದವರು. ಕಸಾಯಿಖಾನೆ ನಡೆಸುತ್ತಿದ್ದ ಅವರು ಸ್ನೇಹಿತ ಸೈಯದ್ ಜಮೀರ್ ಎಂಬುವರಿಂದ 1.50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ, ಸಾಲದ ಹಣವನ್ನು ಹಿಂದಿರುಗಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಜಮೀರ್ ತನ್ನ ಇಬ್ಬರು ಸಹೋದರರ ಜತೆ ರಾತ್ರಿ ಶಫಿ ಅವರ ಅಂಗಡಿಯ ಬಳಿ ಬಂದು ಸಾಲದ ಹಣ ನೀಡುವಂತೆ ಕೇಳಿದರು. ಈ ಸಂದರ್ಭದಲ್ಲಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಜಮೀರ್ ಸಹೋದರ, ಶಫಿ ಅವರಿಗೆ ಚಾಕುವಿನಿಂದ ಇರಿದ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಜಮೀರ್‌ನನ್ನು ಬಂಧಿಸಲಾಗಿದ್ದು, ಆತನ ಸಹೋದರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೇವರಜೀವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರು ಗುದ್ದಿಸಿದ ಎಂಜಿನಿಯರ್

ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಮಡಿವಾಳ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಬಸವಯ್ಯ ಅವರಿಗೆ ವಾಹನ ಗುದ್ದಿಸಿರುವ ಘಟನೆ ಹೊಸೂರು ರಸ್ತೆಯ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ಸೋಮವಾರ ರಾತ್ರಿ ನಡೆದಿದೆ.ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ ಸಾಫ್ಟ್‌ವೇರ್ ಎಂಜಿನಿಯರ್ ಮನು ತ್ರಿವೇದಿ (28) ಅವರನ್ನು ಮಡಿವಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ಮನು ಅವರು ನಗರದ ಎಚ್‌ಎಸ್‌ಆರ್ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ರಾತ್ರಿ 1.45ರ ಸುಮಾರಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್‌ಗಳಾದ ಬಸವಯ್ಯ ಮತ್ತು ಶಿವರಾಜ್ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಅದೇ ಮಾರ್ಗವಾಗಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿಕೊಂಡು ಬಂದ ಮನು, ಬಸವಯ್ಯ ಅವರಿಗೆ ವಾಹನ ಗುದ್ದಿಸಿ ಪರಾರಿಯಾಗಲು ಯತ್ನಿಸಿದರು.ಸ್ಥಳದಲ್ಲೇ ಇದ್ದ ಶಿವರಾಜ್, ಘಟನೆಯ ಬಗ್ಗೆ ಮತ್ತು ಕಾರಿನ ನೋಂದಣಿ ಸಂಖ್ಯೆಯ ಬಗ್ಗೆ ವಾಕಿ ಟಾಕಿ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಕಾರ್ಯ ಪ್ರವೃತ್ತರಾದ ಪೊಲೀಸರು ಮನು ಅವರ ವಾಹನವನ್ನು ಬೆನ್ನಟ್ಟಿ ಬಂಧಿಸಿದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.`ಅಜಾಗರೂಕತೆಯಿಂದ ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 279 ಹಾಗೂ 338 ಅನ್ವಯ ಮನು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ಪಾನಮತ್ತರಾಗಿ ಕಾರು ಚಾಲನೆ ಮಾಡುತ್ತಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ಈ ಸಂಬಂಧ ದೋಷಾರೋಪಣಾ ಪಟ್ಟಿಯಲ್ಲಿ ಮಾಹಿತಿ ನಮೂದಿಸಲಾಗುತ್ತದೆ~ ಎಂದು ಇನ್‌ಸ್ಪೆಕ್ಟರ್ ಕೆ.ಸಿ.ಲಕ್ಷ್ಮಿನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.`ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಆರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಿದರು~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry