ಪ್ರೇಮ ಹೋದರೂ ಉಳಿದ ಸ್ನೇಹ

7

ಪ್ರೇಮ ಹೋದರೂ ಉಳಿದ ಸ್ನೇಹ

Published:
Updated:

ಮಾಜಿ ಪ್ರೇಮಿಗಳಿಬ್ಬರೂ ಮುಂದೆಯೂ ಒಳ್ಳೆ ಸ್ನೇಹಿತರಾಗಿ ಇರುವುದು ಅಸಾಧ್ಯ. ಆದರೆ, ಈ ಒಗಟಿನ ಮಾತಿಗೆ ವಿರೋಧಾಭಾಸವೆಂಬಂತೆ ನಟಿ ನೀತೂ ಚಂದ್ರ ಮತ್ತು ರಣ್‌ದೀಪ್‌ ಹೂಡಾ ಎಂಬ ಇಬ್ಬರು ಎಕ್ಸ್ ಲವರ್ಸ್ ಈಗಲೂ ಒಳ್ಳೆ ಸ್ನೇಹಿತರಾಗಿದ್ದಾರಂತೆ. ಮಾಜಿ ಲವರ್‌ಗಳ ಸ್ನೇಹ ಸಮಾಚಾರ ಈಗ ಬಾಲಿವುಡ್ ಓಣಿ ತುಂಬ ಹರಿದಾಡುತ್ತಿದೆ.‘ನಾವೆಲ್ಲರೂ ವೃತ್ತಿಪರರು. ಬಾಲಿವುಡ್‌ಗೆ ಬಂದಾಗ ಹೂಡಾ ಪರಿಚಯವಾದ್ರು. ಪರಿಚಯ ಪ್ರೀತಿಗೆ ತಿರುಗಿತು. ಸಿನಿಮಾದಲ್ಲಿ ನಟಿಸುತ್ತಲೇ ಇಬ್ಬರೂ ಪರಸ್ಪರ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಯಾವುದೋ ಒಂದು ಸಮಯದಲ್ಲಿ ಬೇರೆಯಾದೆವು. ರಣ್‌ದೀಪ್‌ ನಿಜಕ್ಕೂ ಒಳ್ಳೆಯ ನಟ. ಪ್ರೀತಿ ಮುರಿದುಬಿತ್ತು ಅಂತ ಹೇಳಿ ನಾವಿಬ್ಬರೂ ಪರಸ್ಪರ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಎದೆಯಲ್ಲಿ ಪ್ರೀತಿಗೆ ಜಾಗವಿಲ್ಲದಿದ್ದರೇನಂತೆ; ಸ್ನೇಹಕ್ಕೆ ಸ್ಥಳವಿದೆಯಲ್ಲ? ಹಾಗಾಗಿ, ನಾವಿಬ್ಬರೂ ಈಗಲೂ ಒಳ್ಳೆ ಸ್ನೇಹಿತರು’ ಎಂದಿದ್ದಾರೆ ನೀತೂ.   ಈ ಕಡೆ ನೀತೂ ಹಳೇ ಲವರ್‌ನ ಗುಣಗಾನ ಮಾಡುತ್ತಿದ್ದರೆ, ಅತ್ತ ರಣ್‌ದೀಪ್‌ ಹೂಡಾ ‘ಮರ್ಡರ್‌ 3’ ಚಿತ್ರದಲ್ಲಿ ಜತೆಯಾಗಿ ನಟಿಸಿರುವ ಅದಿತಿ ರಾವ್‌ ಹೈದರಿ ಜತೆಗೆ ಡೇಟಿಂಗ್‌ ನಡೆಸುತ್ತಿದ್ದಾರೆ. ಈ ಬಗ್ಗೆ ನೀತೂಗೆ ಯಾವುದೇ ಹೊಟ್ಟೆಕಿಚ್ಚು ಇಲ್ಲವಂತೆ.‘ಪ್ರತಿಯೊಬ್ಬರ ಜೀವನದಲ್ಲೂ ಪರಿವರ್ತನೆಗಳಾಗುತ್ತಲೇ ಇರುತ್ತವೆ. ಅದಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಸಿದ್ಧಾಂತ. ಪ್ರೀತಿ ಮುರಿದು ಬಿತ್ತು ಅಂತ  ನಾನು ಕುಗ್ಗಲಿಲ್ಲ. ಪ್ರೀತಿ ಸೋತ ದುಃಖ ಮನದೊಳಗಿದ್ದರೂ, ವಾಸ್ತವ ಅರಿತುಕೊಂಡು ಮನಸ್ಸು ಗಟ್ಟಿಮಾಡಿಕೊಂಡೆ. ಆ ನನ್ನ ಗಟ್ಟಿ ನಿರ್ಧಾರ ಇಂದು ನಾನು ಜಗತ್ತಿನ ಮುಂದೆ ತಲೆಎತ್ತಿ ನಿಲ್ಲಲು ಸಾಧ್ಯವಾಗಿದೆ’ ಎಂದು ಮಾತು ಸೇರಿಸುತ್ತಾರೆ ನೀತೂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry