ಮಂಗಳವಾರ, ಜೂನ್ 15, 2021
23 °C

ಪ್ರೊ.ತೇಜಸ್ವಿ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ದಕ್ಷಿಣ ಭಾರತದ ಇತರೆ ರಾಜ್ಯಗಳಿಗಿಂತ ವೈವಿಧ್ಯಮಯವಾದ ಸಾಹಿತ್ಯಿಕ ಚಿಂತನೆ  ಕನ್ನಡದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು.ಧಾರವಾಡದ ಪ್ರೊ. ತೇಜಸ್ವಿ ಕಟ್ಟಿಮನಿ ಟ್ರಸ್ಟ್ ವತಿಯಿಂದ ನೀಡುವ 2011ನೇ ಸಾಲಿನ ಪ್ರೊ. ತೇಜಸ್ವಿ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿಯನ್ನು ಭಾನುವಾರ ಡಾ. ಬಸು ಬೇವಿನಗಿಡದ ಹಾಗೂ ಡಾ. ಗುರುಪಾದ ಮರಿಗುದ್ದಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.ನಗರದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಡಾ. ಬಸು ಬೇವಿನಗಿಡದ ಅವರ `ಬಾಳೆಯ ಕಂಬ~ ಕೃತಿಗೆ ಮತ್ತು  ಡಾ. ಗುರುಪಾದ ಮರಿಗುದ್ದಿ ಅವರ `ನೆತ್ತಿಯ ಗುರಿ ಅಂತರಿಕ್ಷ~ ಕೃತಿಗಳಿಗೆ ಪ್ರಶಸ್ತಿ ಫಲಕ ಮತ್ತು ತಲಾ ರೂ. 10 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.ಉತ್ತರ ಭಾರತಕ್ಕೆ ಹೋಲಿಸಿದಾಗ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಇಂದಿಗೂ ಅನೇಕ ಮಂದಿ ವಿದ್ವಾಂಸರು, ಸಾಹಿತ್ಯ ಸಾಧಕರು, ಅತ್ಯುತ್ತಮ ಲೇಖಕರು ಕಂಡುಬರುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿರುವ  ಹೊಸ ಬಗೆಯ ದೃಷ್ಟಿಕೋನ, ವಿಮರ್ಶೆ ಮತ್ತು ಸಂಶೋಧನೆಗಳಿಂದಾಗಿ ವಿದ್ವಾಂಸರು, ಸಾಹಿತ್ಯ ಸಾಧಕರು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟಿಕೊಳ್ಳಲು ಕಾರಣ ಎಂದು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.ನೆರೆಯ ಆಂಧ್ರದಲ್ಲಿ ಭಾಷಾ ಪ್ರಯೋಗಗಳು ಸೂಕ್ಷ್ಮ ಘಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ, ತಮಿಳುನಾಡಿನಲ್ಲಿ ಭಾಷೆ ಕೇವಲ ಅಬ್ಬರದ ಘೋಷಣೆಗೆ ಮತ್ತು ರಾಜಕೀಯಕ್ಕೆ ಮೀಸಲಾಗಿದೆ, ಇನ್ನು ಕೇರಳದಲ್ಲಿ ಭಾಷೆ ಕವಿತೆಗೆ ಮಾತ್ರ ಹೆಚ್ಚು ಬಳಕೆಯಾಗುತ್ತಿದೆ, ಮಹಾರಾಷ್ಟ್ರದಲ್ಲಿ ಧಾರ್ಮಿಕತೆಗೆ ಭಾಷೆ ಒತ್ತು ನೀಡಿರುವ ಕಾರಣ ಸಾಹಿತ್ಯ ಬೆಳವಣಿಗೆಗೆ ಪೂರಕ ವಾತಾವರಣವಿಲ್ಲ ಎಂದ ಅವರು ಕರ್ನಾಟಕದಲ್ಲಿ ಮಾತ್ರ ಸಾಹಿತ್ಯದಲ್ಲಿ ಹೊಸ ಪ್ರಯೋಗಗಳು ಹೆಚ್ಚು ನಡೆಯುತ್ತಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಸಾಹಿತ್ಯ ಜನರ ಬದುಕಿಗೆ ಶಕ್ತಿ ತುಂಬಬೇಕು, ಒಡೆದ ಮನಸ್ಸುಗಳನ್ನು ಒಂದುಗೂಡಿಸಬೇಕೇ ವಿನಃ ಮನಸ್ಸುಗಳನ್ನು ಒಡೆಯಬಾರದು ಎಂದು ಹೇಳಿದರು.ಸಂಸ್ಕೃತ ಭಾಷೆಯಲ್ಲಿ ಸಮೃದ್ಧ ಸಾಹಿತ್ಯ ಸಂಪತ್ತು ಮತ್ತು ಜ್ಞಾನ ಅಡಗಿರುವುದರಿಂದ ನೂತನ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು. ಸಂಸ್ಕೃತ ಬಾರದವರು ಆ ಭಾಷೆಯನ್ನು ಟೀಕಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ, ಕನ್ನಡಿಗರಿಗೆ ಕನ್ನಡ ತಾಯಿ ಭಾಷೆಯಾದರೆ, ಸಂಸ್ಕೃತ ತಂದೆ ಭಾಷೆ ಇದ್ದಂತೆ ಎಂದರು.`ಬಾಳೆಯ ಕಂಬ~ ಕೃತಿಯ ಕುರಿತು ಡಾ. ಚನ್ನಪ್ಪ ಕಟ್ಟಿ ಹಾಗೂ  `ನೆತ್ತಿಯ ಗುರಿ ಅಂತರಿಕ್ಷ~ ಕೃತಿಯ ಕುರಿತು ಡಾ. ಶಿವಾನಂದ ಕೆಳಗಿನಮನಿ ಮಾತನಾಡಿದರು.ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಟ್ರಸ್ಟಿನ ಅಧ್ಯಕ್ಷ ವಸಂತ ಲದ್ವಾ, ಟ್ರಸ್ಟಿನ ಕಾರ್ಯಾಧ್ಯಕ್ಷ ಡಾ ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಂಶುಪಾಲ  ಪ್ರೊ.ಟಿ.ಬಿ. ಕೋರಿಶೆಟ್ಟಿ, ಡಾ. ಬಸವರಾಜ ಡೋಣೂರ, ಡಾ. ಧನವಂತ ಹಾಜವಗೋಳ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.