`ಪ್ರೊ .ಮಾಧವ ಗಾಡ್ಗೀಳ್ ಸಮಿತಿ ವರದಿ ಕೃಷಿಕರ ಪರ'

ಬುಧವಾರ, ಜೂಲೈ 17, 2019
27 °C

`ಪ್ರೊ .ಮಾಧವ ಗಾಡ್ಗೀಳ್ ಸಮಿತಿ ವರದಿ ಕೃಷಿಕರ ಪರ'

Published:
Updated:

ಬೆಂಗಳೂರು: `ಪರಿಸರ ತಜ್ಞ ಪ್ರೊ.ಮಾಧವ ಗಾಡ್ಗೀಳ್ ಸಮಿತಿಯ ವರದಿ ಕೃಷಿಕರ ಪರವಾಗಿದೆ. ವರದಿಯ ಅನುಷ್ಠಾನದಿಂದ ಅಕ್ರಮ ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಸುವವರಿಗೆ ಮಾತ್ರ ತೊಂದರೆಯಾಗುತ್ತದೆ ವಿನಃ ಕೃಷಿಕರಿಗಲ್ಲ' ಎಂದು ಡಾ.ಸಲೀಂ ಅಲಿ ಪಕ್ಷಿಶಾಸ್ತ್ರ ಮತ್ತು ನೈಸರ್ಗಿಕ ಇತಿಹಾಸ  ಕೇಂದ್ರದ ಮಾಜಿ ನಿರ್ದೇಶಕ ಡಾ.ವಿ.ಎಸ್.ವಿಜಯನ್ ಅಭಿಪ್ರಾಯಪಟ್ಟರು.ಭಾರತ ಜ್ಞಾನ ವಿಜ್ಞಾನ ಸಮಿತಿ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಪಶ್ಚಿಮ ಘಟ್ಟಗಳ ಕುರಿತು ಪ್ರೊ. ಮಾಧವ ಗಾಡ್ಗೀಳ್ ಸಮಿತಿ ಹಾಗೂ ಕಸ್ತೂರಿ ರಂಗನ್ ಸಮಿತಿ ವರದಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಗಾಡ್ಗೀಳ್ ವರದಿಯಲ್ಲಿ ಕೃಷಿಕರಿಗೆ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದೆ. ಆದರೆ ಕಸ್ತೂರಿರಂಗನ್ ವರದಿಯಲ್ಲಿ ಕಾಲಾವಕಾಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.ಗಾಡ್ಗೀಳ್ ವರದಿಯ ಅನುಷ್ಠಾನದಿಂದ ರೈತ ತನಗೆ ಬೇಕಾದ ಬೆಳೆಯನ್ನು ಬೆಳೆಯಲಾಗುವುದಿಲ್ಲ. ಭೂಮಿ ಮಾಲೀಕರ ಭೂಮಿಗಳು ಕೈ ತಪ್ಪುತ್ತವೆ. ಯಾರೂ ಮನೆಗಳನ್ನು ನಿರ್ಮಾಣ ಮಾಡುವಂತಿಲ್ಲ. ರಾಜ್ಯದಲ್ಲಿರುವ ಅಣೆಕಟ್ಟಗಳ ನಾಶವಾಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡಿ, ಕೆಲವರು ದಾರಿ ತಪ್ಪಿಸುತ್ತಿದ್ದಾರೆ ಎಂದರು.ಗಾಡ್ಗೀಳ್ ವರದಿಯಲ್ಲಿ ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸ್ನೇಹಿ ಮನೆಗಳ ನಿರ್ಮಾಣ ಮಾಡುವುದು, ಕೃಷಿಕರು ರಾಸಾಯನಿಕಗಳನ್ನು ಬಳಸುವ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸುವುದು ಹಾಗೂ ಇಂತಹ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ಸರ್ಕಾರ ಯಾವ ರೀತಿಯ ಸಬ್ಸಿಡಿ ನೀಡಬೇಕು ಎಂಬುದರ ಬಗ್ಗೆ ವಿವರವಾಗಿ ನೀಡಲಾಗಿದೆ ಎಂದು ಹೇಳಿದರು.ಪಶ್ಚಿಮ ಘಟ್ಟಗಳಲ್ಲಿ ಇನ್ನು ಮುಂದೆ ಯಾವುದೇ ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಗೆ ಹೊಸ ಪರವಾನಗಿ ನೀಡಬಾರದು. ಈಗಾಗಲೇ ನೀಡಿರುವ ಪರವಾನಗಿಯನ್ನು 2016ಕ್ಕೆ ಕೊನೆಗೊಳ್ಳುವಂತೆ ಮಾಡಬೇಕು. ಒಂದು ವೇಳೆ ದೇಶದಲ್ಲಿ ಎಲ್ಲೂ ಸಿಗದ ಖನಿಜಗಳ ಗಣಿಗಾರಿಕೆಗೆ ಮಾತ್ರ ಸೂಕ್ತ ಪ್ರದೇಶಗಳಲ್ಲಿ ಕಠಿಣ ನಿಬಂಧನೆಗಳೊಂದಿಗೆ ಅನುಮತಿ ನೀಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.ಪಶ್ಚಿಮ ಘಟ್ಟಗಳಿಂದ 6 ರಾಜ್ಯಗಳಿಗೆ ನೀರಿನ ಪೂರೈಕೆಯಾಗುತ್ತದೆ. ಹೀಗಾಗಿ ನೀರಿನ ಮೂಲ ಹಾಗೂ ನದಿಗಳಿರುವ ಕಡೆಗಳಲ್ಲಿ ಕಾಡಿನ ಸಂರಕ್ಷಣೆ ಮಾಡುವುದು ಅತ್ಯಗತ್ಯ. ಎಷ್ಟೇ ಜಲವಿದ್ಯುತ್ ಹಾಗೂ ನೀರಾವರಿ ಯೋಜನೆಗಳನ್ನು ಮಾಡಿದರೂ ಅದು ಪರಿಸರ ಸ್ನೇಹಿ ಹಾಗೂ ನದಿ ಮೂಲಕ್ಕೆ  ತೊಂದರೆಯಾಗದ ರೀತಿಯಲ್ಲಿ ಇರಬೇಕು. ಅದರಲ್ಲೂ ನದಿಯ ಹರಿಯುವಿಕೆಗೆ ಯಾವುದೇ ರೀತಿ ತೊಂದರೆಯಾಗಬಾರದು.ಸ್ಥಳೀಯ ಜನರ ಅಭಿಪ್ರಾಯ ಹಾಗೂ ಅವರ ಸಹಕಾರದಿಂದ ಮಾತ್ರ ಅಪರೂಪದ ವನ್ಯಜೀವಿ ಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯ.  ಹೀಗಾಗಿ ಅಧಿಕಾರದ ವಿಕೇಂದ್ರೀಕರಣವಾಗಬೇಕು. ಪಶ್ಚಿಮ ಘಟ್ಟಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಲ್ಲಿನ ಸ್ಥಳೀಯ ಜನರು ಹಾಗೂ ಗ್ರಾಮ ಪಂಚಾಯಿತಿಗಳ ಅಭಿಪ್ರಾಯ ತಿಳಿಯಬೇಕು. ಜೊತೆಗೆ ಅಂತಿಮ  ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಅವರಿಗೆ ನೀಡಬೇಕು ಎಂದು ಗಾಡ್ಗೀಳ್ ವರದಿಯಲ್ಲಿದೆ ಎಂದರು.ಸ್ಥಳೀಯರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದರೆ, ಸ್ಥಳೀಯವಾಗಿ ಪರಿಸರಕ್ಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಪ್ರೊ. ರೆನಿ ಎಂ. ಬೊರ್ಗೆಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry