ಗುರುವಾರ , ಜನವರಿ 23, 2020
22 °C
ಕ್ರೀಡಾ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ

ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಕ್ರೀಡಾಶಾಲೆ

ಕೆ.ನರಸಿಂಹಮೂರ್ತಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಕ್ರೀಡಾಶಾಲೆ

ಕೋಲಾರ: ಎಲ್ಲವೂ ಅಂದುಕೊಂಡಂತೆ ನಡೆದರೆ ಜಿಲ್ಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಒಂದು ಸುಸಜ್ಜಿತ ಕ್ರೀಡಾ ವಸತಿಶಾಲೆಯ ಸೌಕರ್ಯ ದೊರಕಲಿದೆ. ಈಗ ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಅಥ್ಲೆಟಿಕ್ಸ್ ಮತ್ತು ಫುಟ್ ಬಾಲ್ ಕ್ರೀಡಾ ವಸತಿಶಾಲೆ ನಡೆಯುತ್ತಿದ್ದು, ಅದರೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಹೊಸದೊಂದು ಅವಕಾಶ ದೊರೆಯಲಿದೆ.ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾಶಾಲೆಗಳನ್ನು ಆರಂಭಿಸಲು ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಎಲ್ಲ ಜಿಲ್ಲೆಗಳ ತನ್ನ ಅಧೀನದಲ್ಲಿರುವ ಸಹಾಯಕ ನಿರ್ದೇಶಕರಿಗೆ ಸುತ್ತೋಲೆಯನ್ನು ಕಳುಹಿಸಿದ್ದು, ಕೋಲಾರದಿಂದಲೂ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಶುರುವಾಗಿದೆ.ವಸತಿ ಶಾಲೆಯಲ್ಲಿ ಮೊದಲಿಗೆ 8ನೇ ತರಗತಿ ಸಹಶಿಕ್ಷಣ ಪದ್ಧತಿ ಅನ್ವಯ ಶಾಲಾ ಕಟ್ಟಡ ನಿರ್ಮಾಣಗೊಳ್ಳಲಿದೆ. 50 ಬಾಲಕರು ಮತ್ತು 50 ಬಾಲಕಿಯರಿಗೆ ವಸತಿ ನಿಲಯ ಸೌಲಭ್ಯ ಪ್ರತ್ಯೇಕವಾಗಿ ದೊರಕಲಿದೆ. ಅಥ್ಲೆಟಿಕ್ಸ್, ಫುಟ್ ಬಾಲ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್ ಮೊದಲಾದ ಕ್ರೀಡೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿ­ಪಡಿಸುವ ನಿಟ್ಟಿನಲ್ಲೂ ಪ್ರಸ್ತಾವ ಸಲ್ಲಿಸಬೇಕಾಗಿದೆ.ನಿರ್ಮಿತಿ ಕೇಂದ್ರಕ್ಕೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ವಸತಿಶಾಲೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸುವಂತೆ  ಇಲಾಖೆಯು ಕೆಲವು ದಿನಗಳ ಹಿಂದೆ ಸೂಚಿಸಿದೆ.  ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಕೊಡು­ವಂತೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅಂದಾಜು ಪಟ್ಟಿ ಕೈಸೇರಿದ ಕೂಡಲೇ ಇಲಾಖೆಗೆ ರವಾನಿಸ­ಲಾಗು­ವುದು ಎಂದು ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.ಜಿಲ್ಲೆಯು ಅಥ್ಲೆಟಿಕ್ಸ್, ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈಗಲೂ ಈ ಕ್ಷೇತ್ರಗಳಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ. ಅಂಥವರಿಗೆ ಈ ವಸತಿ ಶಾಲೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.ತರಬೇತುದಾರರು: ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಸ್ತುತ ಫುಟ್ ಬಾಲ್ ಮತ್ತು ಅಥ್ಲೆಟಿಕ್ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ವಸತಿಶಾಲೆ ಆರಂಭವಾಗುವ ಹೊತ್ತಿಗೆ ವಾಲಿಬಾಲ್, ಬ್ಯಾಸ್ಕೆಟ್ ಬಾಲ್ ತರಬೇತು­ದಾರರನ್ನೂ ನಿಯೋಜಿಸಬೇಕು ಎಂದು ಈಗಾಗಲೇ ಇಲಾಖೆಯ ಕೇಂದ್ರ ಕಚೇರಿಗೆ ಮನವಿ ಸಲ್ಲಿಸ­ಲಾಗಿದೆ. ಒಟ್ಟಾರೆ ಐವರು ತರಬೇತಿದಾರರು ಜಿಲ್ಲೆಯಲ್ಲಿ ಕಾರ್ಯ­ನಿರ್ವಹಿಸುವಂತಾದರೆ, ಐದು ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾ­ಪಟುಗಳಿಗೆ ಹೆಚ್ಚಿನ ತರಬೇತಿ ದೊರಕುತ್ತದೆ. ಕ್ರೀಡಾ ಕ್ಷೇತ್ರ­ದಲ್ಲಿ ಜಿಲ್ಲೆ ಇನ್ನಷ್ಟು ಸಾಧನೆ ಮಾಡಲು ಅನುವಾಗುತ್ತದೆ ಎಂದು ಅವರು ಹೇಳಿದರು.15 ದಿನದಲ್ಲಿ ಸಲ್ಲಿಕೆ: ಯುವ ಸಬಲೀಕರಣ ಇಲಾಖೆಯ ಕೋರಿರುವ ಹಿನ್ನೆಲೆಯಲ್ಲಿ  ವಸತಿ ಶಾಲೆ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸುವ ಕೆಲಸ ನಡೆಯುತ್ತಿದೆ.  ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಸ್ತುತ ಕಾರ್ಯ ನಿರ್ವ­ಹಿಸುತ್ತಿರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ವಸತಿನಿಲಯ­ವನ್ನು ₨1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಅದೇ ಮಾದರಿ­ಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ವಸತಿ ನಿಲಯವನ್ನೂ ನಿರ್ಮಿಸಲಾಗುವುದು. ಅದಕ್ಕೂ ಅಂದಾಜು ₨1 ಕೋಟಿ ವೆಚ್ಚವೇ ಆಗಬಹುದು ಎಂದು ನಿರ್ಮಿತಿ ಕೇಂದ್ರದ ಯೋಜನಾ  ನಿರ್ದೇಶಕ ನಾರಾಯಣಗೌಡ ತಿಳಿಸಿದ್ದಾರೆ.ವಸತಿಶಾಲೆಯನ್ನು ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಇಲಾಖೆ ಇನ್ನೂ ನಿವೇಶನ ಮಾಹಿತಿ ನೀಡಿಲ್ಲ. ಆದರೆ ಈಗಿರುವ ವಸತಿ ಶಾಲೆ ಸಮೀಪ­ದಲ್ಲೇ ನಿರ್ಮಿಸಬೇಕು ಎಂದು ಮಾಹಿತಿ­ಯನ್ನು ಇಲಾಖೆ ನೀಡಿದೆ. ಅದನ್ನು ಆಧರಿ­ಸಿಯೇ ಅಂದಾಜು ಪಟ್ಟಿ ಸಿದ್ಧಪಡಿಸು­ತ್ತಿದ್ದೇವೆ. 15 ದಿನದಲ್ಲಿ ಅದನ್ನು ಇಲಾಖೆಗೆ ಸಲ್ಲಿಸ­ಲಾಗು­ವುದು ಎಂದು ಅವರು ಮಾಹಿತಿ ನೀಡಿದರು.

 

ವಸತಿ ನಿಲಯ ಬೇಗ ನಿರ್ಮಾಣಗೊಳ್ಳಲಿ

ನಾವು ಪ್ರೌಢಶಾಲೆ ಓದುತ್ತಿದ್ದಾಗ ಯಾವುದೇ ಕ್ರೀಡಾ ತರಬೇತಿ ದೊರಕಿರಲಿಲ್ಲ. ದೊರೆತಿದ್ದರೆ ಇನ್ನಷ್ಟು ಸಾಧನೆ ಮಾಡಬಹುದಾಗಿತ್ತು ಎನ್ನಿಸುತ್ತಿದೆ. ಈಗಿನ ಪ್ರೌಢಶಾಲೆ ವಿದ್ಯಾರ್ಥಿಗಳಿ­ಗಾದರೂ ಆ ಸೌಕರ್ಯ ದೊರಕಲಿ. ಕ್ರೀಡಾ ವಸತಿ ಶಾಲೆ ಬೇಗ ನಿರ್ಮಾಣಗೊಳ್ಳಲಿ.

– ವಿ.-ಅರುಣಕುಮಾರ್, ರಾಷ್ಟ್ರಮಟ್ಟದ ವೇಗದ ಓಟಗಾರ, ವಕ್ಕಲೇರಿಸರ್ಕಾರದ ನಿರ್ಧಾರ ಸ್ವಾಗತಾರ್ಹ


ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಕ್ರೀಡಾ ವಸತಿಶಾಲೆ ತೆರೆಯುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಜಿಲ್ಲೆಯ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಸೂಕ್ತ ತರಬೇತಿ ಇಲ್ಲದೆ ಸಾಧನೆ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಂಥವರಿಗೆ ಸೌಕರ್ಯ ಮತ್ತು ತರಬೇತಿ ನೀಡಲು ಮುಂದಾಗುತ್ತಿರುವುದು ಒಳ್ಳೆ ಬೆಳವಣಿಗೆಯಾಗಿದೆ.

–ವಿನೋದ್ ಕುಮಾರ್, ಜಾವೆಲಿನ್ ರಾಷ್ಟ್ರೀಯ ಕ್ರೀಡಾಪಟು, ಮುಳಬಾಗಲು

ಪ್ರತಿಕ್ರಿಯಿಸಿ (+)