ಪ್ಲಾಸ್ಟಿಕ್ ಗೆಲ್ಲು ಎಲ್ಲೆಲ್ಲು...

7

ಪ್ಲಾಸ್ಟಿಕ್ ಗೆಲ್ಲು ಎಲ್ಲೆಲ್ಲು...

Published:
Updated:
ಪ್ಲಾಸ್ಟಿಕ್ ಗೆಲ್ಲು ಎಲ್ಲೆಲ್ಲು...

ಪ್ಲಾಸ್ಟಿಕ್‌ನದು ರಕ್ತ ಬೀಜಾಸುರ ಸಂತತಿ. ಅದು ಎಡೆಯಿಟ್ಟಲ್ಲಿ ಮುಗಿಯದ ಮಾಲಿನ್ಯ. ಜೂನ್ 5 `ವಿಶ್ವ ಪರಿಸರ ದಿನ~. ನಮ್ಮ ಪರಿಸರ ಕಾಳಜಿಗಳನ್ನು ಮರು ವಿಮರ್ಶೆಗೆ ಒಡ್ಡಿಕೊಳ್ಳುವ ದಿನ.ಇಪ್ಪತ್ತನೇ ಶತಮಾನದ ಆರಂಭದಲ್ಲಿ ಬಂದ ಕವಿ ಎಲಿಯಟ್ `ವೇಸ್ಟ್‌ಲ್ಯಾಂಡ್~ ಮಹಾಕಾವ್ಯ ಬರೆದಾಗ ಇದ್ದಂತಹ ಪರಿಸರ ಹೇಗಿತ್ತೋ ನಾನರಿಯೆ. ಆದರೆ ಹಸಿರಿನಿಂದ ಸಂಪದ್ಭರಿತವಾದ ಮಲೆನಾಡಿನಲ್ಲಿ ಹುಟ್ಟಿ ಬೆಳೆದು ಬಂದಿದ್ದ ನನಗೆ ಮದುವೆಯ ನಂತರ ಮದರಾಸಿಗೆ ಹೋದಾಗ ಅದೇ ಎಲಿಯಟ್ ವಿವರಿಸಿದ `ವೇಸ್ಟ್ ಲ್ಯಾಂಡ್~ ಇರಬಹುದೆಂಬ ಭ್ರಮೆಗೆ ನನ್ನನ್ನು ಸಿಲುಕಿಸಿತ್ತು. ಮುನ್ನೂರರವತ್ತೈದು ದಿನವೂ ರಾಚುವ ಏಕತಾನದ ಅದೇ ಬಿಸಿಲು....ತಲೆ ಮೇಲೆ ಸುಡುವ ಬಿಸಿಲಿರಲಿ, ತಲೆಯೊಳಗೂ ಹೊಕ್ಕು ಒಂದು ಸಣ್ಣ ಭಾವನೆಯೂ ಉಳಿಯದ ಹಾಗೆ ಎಲ್ಲವನ್ನು ಕಬಳಿಸಿ ಕರಟಿಸಿ ಬಿಡುವ ಆ ಬಿಸಿಲಿನ ಅಗಾಧ ಶಕ್ತಿಯೇ ನನ್ನನ್ನು ಬೆರಗುಗೊಳಿಸಿತ್ತು. ಅದಕ್ಕೆ ಕಳಶವಿಟ್ಟಂತೆ ಡಿಎಂಕೆ ಬರಲಿ, ಅಣ್ಣಾ ಡಿಎಂಕೆ ಬರಲಿ, ಇಡೀ ಊರಿಗೆ ಊರೇ ಹಳದಿ ಬಳಿದುಕೊಳ್ಳುವ ರೀತಿಯೇ ಬೇಸರ ತರಿಸುತ್ತಿತ್ತು.ಮಧ್ಯಾಹ್ನದ ಹೊತ್ತು ಉರಿವ ಸೂರ್ಯ ಹಳದಿ, ಕುದಿಯುವ ಸಮುದ್ರ ಹಳದಿ, ರಸ್ತೆಯ ಡಿವೈಡರ್ ಹಳದಿ, ರಾರಾಜಿಸುವ ಪೋಸ್ಟರ್‌ಗಳು ಹಳದಿ, ಜನರು ಉಡುವ ತೊಡುವ ಬಟ್ಟೆಬರೆಗಳು ಹಳದಿ, ಮುಖ, ಕೈ ಕಾಲುಗಳಿಗೆ ಢಾಳಾಗಿ ಬಳಿದುಕೊಳ್ಳುವ ಅರಿಸಿನ ಹಳದಿ, ರಸ್ತೆಯ ಉದ್ದಗಲಕ್ಕೂ ಓಡಿಯಾಡುವ ಆಟೋಗಳು ಹಳದಿ, ಸಂಡಿಗೆ ಇಟ್ಟ ಹಾಗೆ ಬೆಳ್ಳಂಬೆಳಗ್ಗೆ ರಸ್ತೆ ಬದಿ ಹೇಲುವ ಮಕ್ಕಳ ಕಕ್ಕವೂ ಹಳದಿ... ಇಂತಹ ಊರಿನಲ್ಲಿ ಹೇಗಪ್ಪಾ ಬದುಕುವುದು ಅನ್ನಿಸಿತ್ತು. ಆಗೆಲ್ಲಾ `ನನ್ನ ಊರು ಬೆಂಗಳೂರು~ ಎಂದು ಹೇಳಿಕೊಳ್ಳಲೇ ಹೆಮ್ಮೆ.ಅಂತಹ ಕಾಮಾಲೆ ಬಡಿದ ಒಂದು ಊರಿನಿಂದ ತಪ್ಪಿಸಿಕೊಂಡು ಬಂದ ನನಗೆ ಈಗ ಬೇರೆ ಊರಿಗೂ ನಮ್ಮ ಊರಿಗೂ ಅಂತಹ ವ್ಯತ್ಯಾಸವೇ ಕಾಣುತ್ತಿಲ್ಲ. ಎಲ್ಲೆಂದರಲ್ಲಿ ಹರಿಯುವ ಗಟಾರಗಳು, ರಸ್ತೆಯ ಉದ್ದಗಲಕ್ಕೂ ಬಿದ್ದಿರುವ ಕಸಕುಪ್ಪೆಗಳು, ರಿಪೇರಿ ಕಾಣದೆ ಒಡೆದು ದುರ್ನಾತ ಬೀರುವ ಮೋರಿಗಳು, ನಡೆಯಲು ಅಸಾಧ್ಯವೆಂಬಂತೆ ಕಾಲಿಗೆ ಅಡ್ಡಡ್ಡ ಬರುವ ಬೀದಿ ನಾಯಿಗಳು, ಯಾವ ನಿಯಮವೂ ಇಲ್ಲವೆಂಬಂತೆ ಕರ್ಕಶವಾಗಿ ಸಾಗಿ ಹೋಗುವ ವಾಹನಗಳ ಎಡೆಬಿಡದ ಸದ್ದುಗಳು, ಡಾಂಬರು ಕಾಣದೆ ದೂಳೆದ್ದು ಗಬ್ಬಾಗಿ ಹೋದ ಹಾದಿ ಬೀದಿಗಳು, ಎತ್ತ ತಿರುಗಿದರತ್ತ ರಾಶಿ ರಾಶಿ ಬಿದ್ದಿರುವ ಉಪಯೋಗಿಸಿ ಎಸೆದ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ನಿರಾತಂಕವಾಗಿ ಓಡಿಯಾಡುವ ಹಸುಕರುಗಳು, ಎಲ್ಲಿಂದಲೋ ಕಸ ಎತ್ತಿ ತಂದು ಇಲ್ಲಿ ಹಾಕು, ಇಲ್ಲಿಂದ ಎತ್ತಿಕೊಂಡು ಹೋಗಿ ಮತ್ತೆಲ್ಲೋ ಹಾಕೆಂಬಂತೆ ಕಾರ್ಯ ನಿರ್ವಹಿಸುವ ಮುನಿಸಿಪಾಲಿಟಿಯವರು - ಇದು ನಮ್ಮ ನಾಗರಿಕತೆಗೆ ಹಿಡಿದ ಪ್ರತಿಬಿಂಬ.ಮೊನ್ನೆ ನಮ್ಮ ಮನೆ ಹತ್ತಿರ ಮನೆ ಕಟ್ಟುತ್ತಿದ್ದವರೊಬ್ಬರು, ತಮ್ಮ ಮನೆ ಸುತ್ತ ಬಿದ್ದ ಕಸಕಡ್ಡಿಗಳನ್ನು ಎತ್ತಿ ಟ್ರಾಕ್ಟರ್‌ಗೆ ತುಂಬಿ ಮನೆ ಮುಂದಿನ ಮುಖ್ಯ ರಸ್ತೆಯಲ್ಲಿ ಚೆಲ್ಲುತ್ತಿದ್ದರು. ವಿಚಾರಿಸಿದಾಗ ಬಂದ ಉತ್ತರ: `ಜೆ.ಸಿ.ಬಿ.ಯವರನ್ನು ಕರೆಸಿದರೆ ಲೋಡ್‌ಗೆ ಎರಡು ಸಾವಿರ ಕೊಡಬೇಕು. ನಾಲ್ಕೈದು ಲೋಡ್ ಎಂದರೆ ಸುಖಾಸುಮ್ಮನೆ ಎಂಟು-ಹತ್ತು ಸಾವಿರ.ಈಗಿನ ಕಾಲದಲ್ಲಿ ತಲೆ ಇದ್ದವರ‌್ಯಾರೂ ಅಂತಹ ಕೆಲಸ ಮಾಡುವುದಿಲ್ಲ.~ ಇದು ಏನು ಜಾಣತನದ ಉತ್ತರವೇ? ಇಲ್ಲ, ಕೇಳಿದವರ ಬಾಯಿ ಮುಚ್ಚಿಸುವ ಪ್ರಯತ್ನವೇ? ಇನ್ನು ಕಸ ತಂದು ಸುರಿಯುವ ಜೆ.ಸಿ.ಬಿ. ಅವರನ್ನು ಕೇಳಿದರೆ, `ನಿಮ್ಮ ಮನೆ ಮುಂದೇನೂ ಹಾಕುತ್ತಿಲ್ಲವಲ್ಲಾ~, ಸಾರ್ವಜನಿಕ ರಸ್ತೇನೆಲ್ಲಾ ಗುತ್ತಿಗೆಗೆ ತಕ್ಕೋಂಡವ್ರಂಗೆ ಮಾತಾಡುತ್ತೀರಲ್ಲಾ~ ಅಂತ ದಬಾಯಿಸುತ್ತಾರೆ - ಇದು ನಾವು ಅಳವಡಿಸಿಕೊಂಡ ನಾಗರಿಕ ಸಂಸ್ಕೃತಿಯ ಫಲ.ಈಗ ಮೂರು ವರುಷದ ಹಿಂದೆ ಕೆಲವೊಂದು ಕಾರಣಕ್ಕಾಗಿ ಬೆಂಗಳೂರು-ಮದರಾಸು ಎಂದು ಒಂದೆರಡು ವರುಷ ಸುತ್ತಬೇಕಾಯಿತು. ಆಗ ನನ್ನ ಗಮನಕ್ಕೆ ಬಂದ ವಿಷಯ ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ತಾವು ಕುಡಿಯುವ ಮಿನರಲ್ ವಾಟರ್ ಬಾಟಲಿಗಳನ್ನು, ಕುಡಿದು ಮುಗಿಯುತ್ತಿದ್ದಂತೆ ಅದೇನೋ ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ರಭಸದಿಂದ ಚಲಿಸುವ ರೈಲಿನ ಕಿಟಕಿಯ ಮೂಲಕ ರೊಯ್ಯನೆ ಹೊರಗೆಸೆಯುತ್ತಿದ್ದರು. ಹಾಗೆ ತಾವು ತಂದ ತಿಂಡಿ-ತೀರ್ಥಗಳನ್ನೆಲ್ಲಾ ಅಚ್ಚುಕಟ್ಟಾಗಿ ತಿಂದುಂಡು ನಂತರ ಪೇಪರ್‌ಗಳನ್ನೆಲ್ಲಾ ಮುದ್ದೆ ಕಟ್ಟಿ ರೊಯ್ಯನೆ ಎಸೆಯುತ್ತಿದ್ದರು. ಹಾಗೆ ಮಾಡದೆ ಇದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ?ಪ್ಲಾಸ್ಟಿಕ್ಕನ್ನು ನಾಶಪಡಿಸಲಾಗುವುದಿಲ್ಲವಾದ್ದರಿಂದ ಅದನ್ನೇ ತ್ಯಜಿಸಬೇಕೆಂಬ ಘೋಷಣೆಗಳೇನೋ ಜೋರಾಗಿ ಕೇಳಿ ಬರುತ್ತಿವೆ. ಆದರೆ ಅದನ್ನು ಆಚರಣೆಗೆ ತರೋದು ಹೇಗೆ? ದೊಡ್ಡ ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಹಿತಮಿತದಲ್ಲಿ ಇಡಲು ಒಂದು ಕವರ್‌ಗೆ ಎರಡು-ಮೂರು ರೂಪಾಯಿ ಎಂದು ಬೆಲೆ ಇಟ್ಟು ಮನೆಯಿಂದಲೇ ಚೀಲ ತರುವ ಪದ್ಧತಿ ಅಳವಡಿಸಲು ನೋಡಿದರೂ ಏನೂ ಪ್ರಯೋಜನವಾಗುವುದಿಲ್ಲ.ಏಕೆಂದರೆ ಎಮ್.ಎನ್.ಸಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಎರಡು-ಮೂರು ರೂಪಾಯಿಗಳಿಗೆ ಅರ್ಥವೇ ಇಲ್ಲ; ಚೀಲ ತರುವುದನ್ನು ಅವರು ಮರೆಯುವುದೂ ಅಲ್ಲದೆ, ಹಾಗೆ ತಂದವರನ್ನು ಅನಾಗರಿಕರೆಂಬಂತೆ ನೋಡುತ್ತಾರೆ. ಎಲ್ಲಾ ಮಾಲ್ ಮುಂದು ಚಾಟ್ ಸೆಂಟರ್‌ಗಳು, ಸಾಮಾನು ಕೊಂಡ ನಂತರ ಈ ಚಾಟ್‌ಗಳಲ್ಲಿ ಚಾಟ್ ಅನ್ನು ತಿಂದೇ ಆಗಬೇಕು, ಇಲ್ಲವೆಂದಾದರೆ ನಾವು ಆಳವಡಿಸಿಕೊಂಡ ಮಲ್ಟಿ ನ್ಯಾಷನಲ್ ಸಂಸ್ಕೃತಿಗೇ ಅವಮಾನ. ಚಾಟ್ ತಿಂದು, ಸಾಫ್ಟ್ ಡ್ರಿಂಕ್ಸ್ ಕುಡಿಯುವ ಅನಿವಾರ‌್ಯ ಚಟಕ್ಕೆ ಬಿದ್ದವರು ಗುಪ್ಪೆ ಹಾಕಿದ ಪ್ಲಾಸ್ಟಿಕ್ ಗೊಬ್ಬರಗುಂಡಿಗಳ ದರ್ಶನವಿಲ್ಲದ ಮಾಲ್, ಕಾಂಪ್ಲೆಕ್ಸ್, ಎನಕ್ಸ್‌ಗಳಿಲ್ಲ....ಈಗ ಕೆಲದಿನಗಳ ಹಿಂದೆ  ಘೆಈಖ್ಖ  ಅವರು ಹಮ್ಮಿಕೊಂಡ  NDTV-TOYOTA – Greenathan Launch –Yamuna Clean-up Drive   - ಎಂಬ ಕಾರ್ಯಕ್ರಮವೊಂದು ಪ್ರಸಾರವಾಯಿತು. ವಿಕ್ರಮ್ ಚಂದ್ರರ ಜೊತೆ ಕಣ್ಣಿಗೆ ಕಪ್ಪು ಕನ್ನಡಕ, ಕೈಗೆ ಗ್ಲೌಸ್ ಹಾಕಿದ ಪ್ರಿಯಾಂಕ ಚೋಪ್ರಾ ಆಗ್ರಾದ ಯಮುನಾ ನದಿಯಿಂದ ಗುಟ್ಕಾ ಪೇಪರ್‌ಗಳನ್ನ, ಶ್ಯಾಂಪೂ ಪ್ಯಾಕೆಟ್‌ಗಳನ್ನ, ಹೂವಿನ ಮಾಲೆಗಳನ್ನ, ಇನ್ನೂ ಏನೇನೋ ಕಸಗಳನ್ನ ನೀರಿನಿಂದ ತೆಗೆದೂ ತೆಗೆದೂ ತೋರಿದಳು.

 

ಇಂತಹ ವಿಷಪೂರಿತ ವಸ್ತುಗಳು ನದಿಗಳಿಗೆ ಬಂದು ಬೀಳುವುದು ಹೊಸತಲ್ಲ. ಈ ತರದ ಕಾರ್ಯಕ್ರಮ ಬರುತ್ತಲೇ ಇರುತ್ತೆ. ಆದರೆ ಎಷ್ಟು ಮಂದಿ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ? 20th May is the day to take pledge to do something for the plastic waste... ಅಂತ ಅನೌನ್ಸ್ ಕೂಡ ಮಾಡಿದರು. ಆದರೆ ಜನರಲ್ಲಿ ಜಾಗೃತಿ ಮೂಡಿಸೋದು ಹೇಗೆ? ಕೇವಲ ಒಂದು ದಿನದಲ್ಲಿ ಯಮುನಾ ನದಿಯನ್ನ, ಗಂಗಾ ನದಿಯನ್ನ ಅಥವಾ ಯಾವುದೇ ನದಿಯನ್ನ ಶುದ್ಧೀಕರಿಸಲು ಸಾಧ್ಯವೇ? ಒಂದು IPL ಮ್ಯಾಚ್‌ನಿಂದ ಎಷ್ಟು ಮಾನವ ಗೊಬ್ಬರ ಬಂದು ಬೀಳುತ್ತಿದೆ, ಅದನ್ನು ಹೇಗೆ ಕರಗಿಸಬೇಕೂಂತ ತಿಳಿಯದೆ ಅಧಿಕಾರಿಗಳು ಹೇಗೆ ಒದ್ದಾಡುತ್ತಿದ್ದಾರೆಂದು ಪತ್ರಿಕೆಗಳು, ಚಾನಲ್‌ಗಳು ವರದಿ ಮಾಡಿದವು. ಆದರೆ ಇದರಿಂದ ಜನರಲ್ಲಿ ಕಡೇ ಪಕ್ಷ ಒಂದು ಪರ‌್ಸೆಂಟ್ ಆದರೂ ಪ್ರತಿಕ್ರಿಯೆ ಮೂಡಿಬಂತೆ?ಸುತ್ತಮುತ್ತಲಿನ ಆಗುಹೋಗುಗಳಿಗೂ ತಮಗೂ ಯಾವ ರೀತಿಯ ಸಂಬಂಧವಿಲ್ಲವೆಂಬಂತೆ ವರ್ತಿಸುವ ಜನರ ದೃಷ್ಟಿಕೋನದಲ್ಲೇ ಏನೋ ಐಬಿದೆ. ಟೀವಿಗಳಲ್ಲಿ ಬರುವ ಉಪಯುಕ್ತ ಕಾರ್ಯಕ್ರಮಗಳು ಜನರ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ. ಹಾಗಂತ ಜನರು ಮಾತನಾಡದೆ ಸುಮ್ಮನಿರುವುದಿಲ್ಲ. ಹಿಂದೆಂದಿಗಿಂತಲೂ ಹೆಚ್ಚು ವಾಕ್ ಸ್ವಾತಂತ್ರ್ಯ ಈಗ ಬಳಕೆಯಲ್ಲಿದೆ. ಮಾಧ್ಯಮಗಳಲ್ಲಿ, ಅಂತರ್ಜಾಲಗಳಲ್ಲಿ ಇಂದು ಪ್ರತಿಯೊಬ್ಬರೂ ಪ್ರತಿಕ್ರಿಯಿಸುವವರೇ. ಆದರೆ ಒಂದು ಉಪಯುಕ್ತ ಕಾರ್ಯಕ್ರಮ ನೋಡಿದಾಗ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ, ನಮ್ಮಿಂದ ಜೀವನ ಸುಧಾರಿಸಲು ಏನು ಮಾಡಲು ಸಾಧ್ಯ ಎಂದು ಯಾರೂ ಯೋಚಿಸುವುದಿಲ್ಲ.1933ರಲ್ಲಿ ಬ್ರಿಟಿಷ್ ಇಂಡಸ್ಟ್ರಿಯಲ್ ಜೈಂಟ್ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸ್‌ನ ರೇಜಿನಾಲ್ಡ್ ಗಿಬ್ಸನ್ ಮತ್ತು ಎರಿಕ್ ಫಾಸೆಟ್ ಕಂಡುಹಿಡಿದ ಟ್ಝಛಿಠಿಢ್ಝಛ್ಞಿಛಿ ಅಥವಾ ಟ್ಝಠಿಛ್ಞಿಛಿಯೇ ಮುಂದೆ ನಮ್ಮೆಲ್ಲರ ಮಲ್ಟಿ-ಪರ‌್ಪಸ್ ಉಪಯೋಗದ ಪ್ಲಾಸ್ಟಿಕ್ ಕವರ್‌ಗಳಾಯಿತು. ಒಂದು ಅಂದಾಜಿನ ಪ್ರಕಾರ ಈಗ ಸರಾಸರಿ 10 ಕೋಟಿ ಟನ್ ಪ್ಲಾಸ್ಟಿಕ್ ವಿಶ್ವಾದ್ಯಂತ, 20 ಲಕ್ಷ ಟನ್ ಭಾರತದಾದ್ಯಂತ ಉಪಯೋಗಿಸಲಾಗುತ್ತಿದೆ.ಒಂದು ವರುಷಕ್ಕೆ ಸರಾಸರಿ 500 ಬಿಲಿಯನ್‌ನಿಂದ ಒಂದು ಟ್ರಿಲಿಯನ್ ಪ್ಲಾಸ್ಟಿಕ್ ಬಳಕೆಯೆಂದಾಯಿತು. 40 ಮೈಕ್ರಾನ್‌ಗಿಂತ ತೆಳು ಪ್ಲಾಸ್ಟಿಕ್ ಬಳಕೆಯನ್ನು ನಮ್ಮ ದೇಶದಲ್ಲೂ ನಿಷೇಧಿಸಿದ್ದರೂ ಅದರ ಗೊಡವೆ ಯಾರಿಗೂ ಇಲ್ಲ. 1988ರಲ್ಲಿ ಬಾಂಗ್ಲಾದೇಶದ ನೆರೆಗೆ ಮುಖ್ಯ ಕಾರಣ ಆ ದೇಶದ ಒಳಚರಂಡಿ ವ್ಯವಸ್ಥೆಗಳಲ್ಲಿ ಕಟ್ಟಿಕೊಂಡು ಸೇರಿಕೊಂಡ ಪ್ಲಾಸ್ಟಿಕ್ ತ್ಯಾಜ್ಯವೇ ಆಗಿತ್ತು ಎಂಬ ಅಂಕಿಅಂಶದ ಆಧಾರದ ಮೇಲೆ ಬಾಂಗ್ಲಾದೇಶ 2002ರಲ್ಲಿ ಪ್ಲಾಸ್ಟಿಕ್ಕನ್ನು ನಿಷೇಧಿಸಿತು.ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ಗಳೆಲ್ಲಾ ಎಂದೋ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಬಳಕೆಗಳಲ್ಲಿ ಕೆಲವು ಮಾರ್ಪಾಡು ತಂದುವು. ಅಮೆರಿಕಾದವರು ಜೋಳ ತಿಂದರೆಂದು ನಾವು ಬೆಳಿಗ್ಗೆ ಎದ್ದು ಹಾಲಿಗೆ ಕೆಲೋಗ್ಸ್ ಹಾಕಿಕೊಂಡು ಪೆದ್ದುಪೆದ್ದಾಗಿ ತಿನ್ನುತ್ತಾ, ಅವರು ಪೆಪ್ಸಿ ಕುಡಿದರೆಂದು ನಾವು ಹುಚ್ಚಾಪಟ್ಟೆ ಕುಡಿಯುತ್ತಾ ಅವರಿಗಿಂತ ಕಮ್ಮಿಯಿಲ್ಲವೆಂದು ಬೀಗುತ್ತಾ ಓಡಿಯಾಡುವವರು ಒಳ್ಳೆಯದನ್ನು ಯಾಕೆ ಅನುಸರಿಸುವುದಿಲ್ಲ? `ಸತ್ಯಮೇವ ಜಯತೇ~ಯಂತಹ ಕಾರ್ಯಕ್ರಮಕ್ಕೆ ಕಾದು ಕುಳಿತು ನಾಳೆ ಅಮೀರ್‌ಖಾನೋ, ಪ್ರಿಯಾಂಕಳೋ ಪೊರಕೆ ಹಿಡಿದು ಬೀದಿ ಗುಡಿಸಿದಾಗಲೇ ನಮಗೆ ಜ್ಞಾನೋದಯವಾಗುವುದೇ?ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಹಾಕಿದಾಗ ಅದರಲ್ಲಿನ ಪ್ಲಾಸ್ಟಿಸೈಸರ್ ಎಂಬ ಕೆಮಿಕಲ್ ಕರಗಿ ನಮ್ಮ ರಕ್ತನಾಳಕ್ಕೆ ಸುಲಭವಾಗಿ ಸೇರಿ ಕಣ್ಣು ಕುರುಡಾಗುವ ಅಪಾಯವೂ ಇದೆ. ಪ್ಲಾಸ್ಟಿಕ್‌ನಲ್ಲಿರುವ ಡೈಯಾಕ್ಸಿನ್ ರಾಸಾಯನಿಕ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆಯಲು ಸರಾಸರಿ ನೂರು ವರುಷ ಹಿಡಿಯುತ್ತದೆ.

 

ಹಾಗಾಗಿ ಇದರ ತ್ಯಾಜ್ಯ ನಿರ್ವಹಣೆಯೂ ಕಷ್ಟದ್ದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ಲಾಸ್ಟಿಕ್ ಮೆದ್ದು ಎಂಟು ಜಿಂಕೆ ಮರಿಗಳು ಸತ್ತಿದ್ದೂ, ರಸ್ತೆಯಲ್ಲಿನ ಪ್ಲಾಸ್ಟಿಕ್‌ಗಳು ಹಸುಗಳ ಹೊಟ್ಟೆ ಸೇರಿ ಆದಂತಹ ತೊಂದರೆಗಳನ್ನ ಯಾರೂ ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.  `ಪ್ಲಾಸ್ಟಿಕ್ ಚೀಲಗಳ ಆತಂಕ ಬಾಂಬ್‌ಗಿಂತಲೂ ಗಂಭೀರವಾದುದು~ ಅಂತ ಪತ್ರಿಕೆಗಳೇನೋ ಸಾರುತ್ತಲೇ ಇರುತ್ತವೆ. ಆದರೆ ಎಷ್ಟು ಜನರ ಕಿವಿಗೆ ಇದು ತಟ್ಟುತ್ತಿದೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry