ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲ ಉತ್ಪಾದನೆ

7

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲ ಉತ್ಪಾದನೆ

Published:
Updated:

ಮೈಸೂರು: `ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಸ ದೊಡ್ಡ ಸಮಸ್ಯೆ ಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯಿಂದ ಹೊರ ತಾಗಿಲ್ಲ. ಪ್ಲಾಸ್ಟಿಕ್ ಬಳಕೆ ನಂತರ ತ್ಯಾಜ್ಯವೆಂದು ಹೇಳುವಂತಿಲ್ಲ. ಅದು ಒಂದು ಸಂಪನ್ಮೂಲ. ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ (ಕ್ರೂಡ್) ತೈಲ ಉತ್ಪಾದನೆ ಮಾಡಬಹುದು' ಎಂದು ಬೆಂಗಳೂರಿನ ಎಂ.ಕೆ.ಅರೊಮಾಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮರ್ಚಂಟ್ ತಿಳಿಸಿದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಪ್ಲಾಸ್ಟಿಕ್ ತ್ಯಾಜ್ಯದಿಂದ ಉಪಯೋಗಕ್ಕೆ ಬರುವ ಕಚ್ಚಾ ತೈಲ ಉತ್ಪಾದನೆಯಿಂದ ಮುಂದಿನ 25 ವರ್ಷಗಳವರೆಗೆ ಪ್ಲಾಸ್ಟಿಕ್ ಪಿಡುಗನ್ನು ತಡೆಗಟ್ಟ ಬಹುದು. ಈಗಾಗಲೇ ಚೆನ್ನೈನಲ್ಲಿ ಪ್ಲಾಂಟ್ ಹಾಕಿ ಕಚ್ಚಾ ತೈಲ ಉತ್ಪಾದನೆ ಮಾಡಲಾಗುತ್ತಿದೆ' ಎಂದು ಹೇಳಿದರು.`ಬೃಹತ್ ಬೆಂಗಳೂರು ಮಹಾನಗರಪಾಲಿಕೆ  ಮತ್ತು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿ ಯಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾರಣಾಂತರಗಳಿಂದ ಯೋಜನೆಗೆ ಮಹಾನಗರಪಾಲಿಕೆಗಳು ಅನುಮೋದನೆ ನೀಡಲಿಲ್ಲ. ಹಾಗಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. ಹಾಲಿ ಮೈಸೂರು ಮಹಾನಗರಪಾಲಿಕೆ ಆಯುಕ್ತರು ಯೋಜನೆ ಬಗ್ಗೆ ಉತ್ಸುಕರಾಗಿದ್ದು, ಅನುಮೋದನೆ ನೀಡಿದರೆ ನಗರದಲ್ಲಿ ಪ್ಲಾಂಟ್ ನಿರ್ಮಾಣ ಮಾಡುತ್ತೇವೆ' ಎಂದು ತಿಳಿಸಿದರು.`ಪ್ಲಾಂಟ್ ನಿರ್ಮಾಣಕ್ಕೆ 4 ಎಕರೆ ಭೂಮಿ ಅಗತ್ಯ ಇದೆ. ಕಸ ವಿಲೇವಾರಿ ಮಾಡುವ ಸ್ಥಳದಲ್ಲೇ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತದೆ. ಯೋಜನೆ ಅಂದಾಜು ವೆಚ್ಚ ರೂ.10 ಕೋಟಿ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡದೆ ಮೆಲ್ಟ್ ಮಾಡಲಾಗುತ್ತದೆ. ಇದು ಹೊಗೆರಹಿತ.ಪ್ಲಾಸ್ಟಿಕ್‌ಮೆಲ್ಟ್ ಮಾಡುವುದರಿಂದ ಉತ್ಪತ್ತಿಯಾಗುವ ಶಕ್ತಿಯಿಂದಲೇ ಯಂತ್ರ ಚಾಲನೆಯಾಗಲಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಸ ಹಾಯುವವರಿಂದ ಮತ್ತು ಎನ್‌ಜಿಒಗಳ ಮೂಲಕ ಸಂಗ್ರಹಿಸ ಲಾಗುವುದು. ಪ್ರತಿ ಕೆ.ಜಿ. ಪ್ಲಾಸ್ಟಿಕ್‌ಗೆ ರೂ.3-5 ನೀಡಿ ಖರೀದಿ ಮಾಡಲಾಗುವುದು' ಎಂದು ವಿವರಿಸಿದರು.ಟನ್‌ಗೆ 800 ಲೀ. ಕಚ್ಚಾ ತೈಲ: `ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ 800 ಲೀಟರ್ ಕಚ್ಚಾ ತೈಲವನ್ನು ಉತ್ಪಾದಿಸಬಹುದು. ಇದನ್ನು ಸುಪಿರಿಯರ್ ಆಯಿಲ್ ಎಂದೂ ಕರೆಯ ಲಾಗುತ್ತದೆ. ಕೈಗಾರಿಕಾ ಬಳಕೆಗೆ ಕಚ್ಚಾ ತೈಲಕ್ಕೆ ಬೇಡಿಕೆ ಇದೆ. ಎಲ್ಲ ಬಗೆಯ ಪ್ಲಾಸ್ಟಿಕ್‌ಗಳನ್ನು ತೆಗೆದುಕೊಳ್ಳಬಹುದು. ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾದಷ್ಟು ಕಚ್ಚಾ ತೈಲ ಉತ್ಪಾದನೆ ಹೆಚ್ಚಾಗಲಿದೆ' ಎಂದು ಹೇಳಿದರು.ಪಾಲಿಕೆ ಆಯುಕ್ತ ಡಾ.ಎಂ.ಆರ್.ರವಿ ಮಾತನಾಡಿ `ಹೊಸ ತಂತ್ರಜ್ಞಾನ ಯಾವುದೇ ಬಂದರೂ ಅದನ್ನು ಅಳವಡಿಸಿಕೊಳ್ಳಲು ಪಾಲಿಕೆ ಸಿದ್ಧವಿದೆ. ಈಗಾಗಲೇ ಘನತ್ಯಾಜ್ಯದಿಂದ ಕಾಂಪೊಸ್ಟ್ ಗೊಬ್ಬರ ತಯಾರು ಮಾಡಲಾಗುತ್ತಿದೆ. ನಗರದಲ್ಲಿ ನಿತ್ಯ 80-90 ಟನ್ ಪ್ಲಾಸ್ಟಿಕ್ ತ್ಯಾಜ್ಯ ಹೊರಬರುತ್ತದೆ. ಪಾಲಿಕೆ ಸದಸ್ಯರು ಹಿಂದೆ ಒಪ್ಪದ ಕಾರಣ ಅನುಮೋದನೆ ನೆನೆಗುದಿಗೆ ಬಿದ್ದಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲ ಉತ್ಪಾದನೆಗೆ ಬೇಕಾದ ಅಗತ್ಯ ಭೂಮಿಯನ್ನು ನೀಡುವ ಕುರಿತು ಪಾಲಿಕೆ ಸಭೆಯಲ್ಲಿ ಚರ್ಚಿಸಿ, ನಂತರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗುವುದು. ಹೊಸ ಯೋಜನೆ ಕಾರ್ಯಗತಗೊಳಿಸುವುದರಿಂದ ನಗರದಲ್ಲಿ ಹೊರಬೀಳುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ದೊರಕಲಿದೆ' ಎಂದು ತಿಳಿಸಿದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಎಸ್.ಸತೀಶ್, ಕಾರ್ಯದರ್ಶಿ ಎಂ.ಸಿ.ಬನ್ಸಾಲಿ, ಮಾಜಿ ಅಧ್ಯಕ್ಷರಾದ ಕೃಷ್ಣ, ಮಾಜಿ ಮೇಯರ್ ವಿಶ್ವನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry