ಶನಿವಾರ, ಮೇ 8, 2021
20 °C

`ಪ್ಲಾಸ್ಟಿಕ್ ಬಳಕೆ: ಜನ ಜಾಗೃತಿ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ಲಾಸ್ಟಿಕ್ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ನಿಂದಾಗುವ ಹಾನಿಯ ಕುರಿತು ಅರಿವು ಮೂಡಿಸಬೇಕು' ಎಂದು ನಟಿ ಭಾವನಾ ಹೇಳಿದರು.ಕಬ್ಬನ್ ಉದ್ಯಾನ ನಡಿಗೆದಾರರ ಸಂಘವು ಸೋಮವಾರ ಬಾಲಭವನದ ಎದುರು ಕೈಗೊಂಡಿದ್ದ `ಕಬ್ಬನ್ ಉದ್ಯಾನ ಸ್ವಚ್ಛತಾ ಕಾರ್ಯಕ್ರಮ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಈಗ ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ, ಒಂದೇ ಬಾರಿಗೆ ಪ್ಲಾಸ್ಟಿಕ್ ತ್ಯಜಿಸಲು ಸಾಧ್ಯವಿಲ್ಲ. ಆದರೆ, ಮೊದಲ ಪ್ರಯತ್ನವೆಂಬಂತೆ  ಪ್ಲಾಸ್ಟಿಕ್ ಅನ್ನು ಬಳಸುವುದಿಲ್ಲವೆಂದು ಪಣತೊಡಬೇಕು. ಅದರ ಬದಲಿಗೆ ಬಟ್ಟೆಯ ಚೀಲ ಅಥವಾ ಸೆಣಬಿನಿಂದ ಮಾಡಿದ ಚೀಲಗಳನ್ನು ಬಳಕೆ ಮಾಡಬೇಕು' ಎಂದು ಸಲಹೆ ನೀಡಿದರು.`ಉದ್ಯಾನ, ಬಸ್‌ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಎಸೆಯುವುದು ಸರಿಯಲ್ಲ. ಮನೆ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯಂತೆ, ನಗರದ ಸ್ವಚ್ಛತೆಯನ್ನು ಕಾಪಾಡಬೇಕಾದ ಜವಾಬ್ದಾರಿಯೂ ಎಲ್ಲರ ಮೇಲಿದೆ' ಎಂದರು.`ನೂರಾರು ಗಿಡಗಳಿಂದ ತುಂಬಿರುವ ಕಬ್ಬನ್ ಉದ್ಯಾನದಲ್ಲಿ ಸಂಚರಿಸುವುದೇ ಸಂತಸ ತರುತ್ತದೆ. ಇಂತಹ ಹಸಿರಿನ ಉದ್ಯಾನದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವುದು ಸರಿಯಿಲ್ಲ. ಉದ್ಯಾನದ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು' ಎಂದು ಹೇಳಿದರು.ಕಬ್ಬನ್ ಉದ್ಯಾನದ ನಡಿಗೆದಾರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ ಮಾತನಾಡಿ, `ಕಬ್ಬನ್ ಉದ್ಯಾನದಲ್ಲಿ ಬರುವ ವ್ಯಾಪಾರಿಗಳನ್ನು ತೋಟಗಾರಿಕೆ ಇಲಾಖೆಯು ನಿಯಂತ್ರಿಸಬೇಕು. ಅವರು ಮಾರುವ ತಿಂಡಿಗಳನ್ನು ಕೊಂಡು ತರುವ ಜನರು ಉದ್ಯಾನದೊಳಗೆ ತಿಂದು ಇಲ್ಲಿಯೇ ಕಸವನ್ನು ಎಸೆದು ಹೋಗುತ್ತಾರೆ. ಇದರ ಕುರಿತು ಕ್ರಮ ಕೈಗೊಳ್ಳಬೇಕು' ಎಂದರು.`ಕಬ್ಬನ್ ಉದ್ಯಾನ ಎಲ್ಲರಿಗೂ ಸೇರಿದೆ. ಉದ್ಯಾನದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು ಎಂಬ ಪರಿಜ್ಞಾನವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಿತರೇ ಹೆಚ್ಚಾಗಿ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಾರೆ. ಇದು ಶನಿವಾರ ಮತ್ತು ಭಾನುವಾರ ಹೆಚ್ಚಾಗಿ ಕಂಡುಬರುತ್ತದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.