ಪ್ಲಾಸ್ಟಿಕ್ ಹಾವಳಿ: ಹಸುಗಳ ಮೂಕ ರೋದನ

7

ಪ್ಲಾಸ್ಟಿಕ್ ಹಾವಳಿ: ಹಸುಗಳ ಮೂಕ ರೋದನ

Published:
Updated:
ಪ್ಲಾಸ್ಟಿಕ್ ಹಾವಳಿ: ಹಸುಗಳ ಮೂಕ ರೋದನ

ಮಂಡ್ಯ: ಮಾನವ ಕುಲಕೋಟಿಗೆ, ನೀವು ಕಸದ ತೊಟ್ಟಿಗಳಲ್ಲಿ, ರಸ್ತೆ ಬದಿಯಲ್ಲಿ ಎಸೆಯುತ್ತಿರವ ಪ್ಲಾಸ್ಟಿಕ್‌ನಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅದನ್ನು ತಿಂದ ಪರಿಣಾಮ ಹೊಟ್ಟೆಯಲ್ಲಿ ಅದು ಕರಗದೇ ಗಂಟಾಗುತ್ತಿದೆ. ನಮಗಷ್ಟೇ ಅಲ್ಲ, ಭೂಮಿಯೊಳಗೂ ಕರಗದೇ ಭೂ ಮಾತೆಯನ್ನೂ ಕಾಡುತ್ತಿದೆ.ಬಹಳ ವರ್ಷಗಳ ಹಿಂದೆ ಗ್ರಾಮಗಳಲ್ಲಿ ವಾಸಿಸುತ್ತಿದ್ದ ನಮ್ಮ ವಂಶಜರಿಗೆ ಆಹಾರದ ಕೊರತೆ ಇರಲಿಲ್ಲ. ಊರ ಮುಂದೆ ನಾವು ಮೇಯಲೆಂದೇ ಗೋಮಾಳಗಳಿರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವು ಕಾಣೆಯಾಗಿವೆ. ಆದರೂ ಅಲ್ಲಿ ಆಹಾರದ ಕೊರತೆ ನಮ್ಮವರನ್ನು ಅಷ್ಟಾಗಿ ಕಾಡುತ್ತಿಲ್ಲ.ಆದರೆ ನಗರ ಪ್ರದೇಶದಲ್ಲಿ ವಾಸಿಸುವ ನಮ್ಮಗಳ ಸ್ಥಿತಿ, ನಮ್ಮ ವಿರೋಧಿಗಳಿಗೂ ಬೇಡ ಎನ್ನುವಂತಾಗಿದೆ. ನಿಮ್ಮ ಕುಟುಂಬದ ಹೊರೆ ಯನ್ನು ಹೊರುತ್ತಿರುವ ನಮ್ಮನ್ನು ಗಾಳಿಯಾಡದ, ಸಣ್ಣ ಕೊಠಡಿಗಳಲ್ಲಿ ಸಾಕಿದ್ದೀರಿ. ನಾವು ನೀಡಿದ ಹಾಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೀರಿ.ನಮಗೆ ಬೇಕಾದಷ್ಟು ಆಹಾರವನ್ನು ನೀಡುತ್ತಿಲ್ಲ. ಹೊರಗಡೆ ಸಂಚರಿಸಲೇನೊ ಬಿಡುತ್ತಿದ್ದೀರಿ. ಆದರೆ ಮೇವು ಹುಡುಕಿಕೊಂಡು ಹೊರಟರೆ ಎಲ್ಲೆಡೆಯೂ ಕಟ್ಟಡಗಳೇ ಕಾಣ ಸಿಗುತ್ತವೆ. ಹೀಗಾಗಿ, ಅಲ್ಲಲ್ಲಿ ಇಟ್ಟಿರುವ ಕಸದ ತೊಟ್ಟಿಗಳೇ ನಮಗೆ ಆಹಾರದ ಮೂಲ.ಕಸದ ತೊಟ್ಟಿಗಳಲ್ಲಿ ತರಕಾರಿ ಅನುಪಯುಕ್ತ ಭಾಗ, ಹಣ್ಣುಗಳ ಸಿಪ್ಪೆ, ನೀವು ಉಂಡು, ಉಳಿದ ಆಹಾರ ಪದಾರ್ಥಗಳು ಸಿಗುತ್ತವೆ. ಅವುಗಳನ್ನೇ ತಿಂದುಕೊಂಡು ಬದುಕಲು ಯತ್ನಿಸುತ್ತಿದ್ದೇವೆ. ಆದರೆ ಅಲ್ಲಿ ಹಾಕುವ ಪ್ಲಾಸ್ಟಿಕ್ ನಮ್ಮ ಬದುಕಿಗೆ ಮುಳುವಾಗುತ್ತಿದೆ.ಮಾರುಕಟ್ಟೆಯಿಂದ ಸಾಮಗ್ರಿಗಳನ್ನು ತರುವುದಕ್ಕೆ ಪ್ಲಾಸ್ಟಿಕ್ ಬಳಸುತ್ತಿದ್ದೀರಿ. ಅದನ್ನೇ ಮನೆಯಲ್ಲಿ ಉಳಿದ ಪದಾರ್ಥಗಳನ್ನು ಎಸೆಯಲೂ ಬಳಸುತ್ತಿದ್ದೀರಿ. ಅದನ್ನು ತೆಗೆದು ತಿನ್ನಲು ಬರದ ನಾವುಗಳು, ಪ್ಲಾಸ್ಟಿಕ್ ಸಮೇತ ತಿನ್ನುತ್ತಿದ್ದೇವೆ. ಅದು ಹೊಟ್ಟೆಯಲ್ಲಿ ಗಂಟಾಗಿ ಕರಗದೇ ಜೀವಕ್ಕೇ ಆಪತ್ತು ತಂದೊಡ್ಡುತ್ತಿದೆ.ಪ್ಲಾಸ್ಟಿಕ್ ತಿಂದು ಆಗುತ್ತಿರುವ ತೊಂದರೆ ಯನ್ನು ಹೇಳೋಣ ಎಂದರೆ ಮಾತು ಬರುವುದಿಲ್ಲ. ಕೂಗಿ ಹೇಳಲು ಯತ್ನಿಸಿದರೆ ಕಿರಿ, ಕಿರಿ ಮಾಡುತ್ತಿದ್ದೇವೆ ಎಂದು ನಮ್ಮನ್ನೇ ದೂರುತ್ತೀರಿ. ಒಡಲೊಳಗೆ ಆಗುವ ಸಂಕಟ ವನ್ನು ಹೇಳುವುದು ಹೇಗೆ ಎಂದು ತಿಳಿಯದೇ ಹತಾಶರಾಗಿದ್ದೇವೆ.ನೀವು ಭೂಮಿಲ್ಲಿರುವ ಸಕಲ ಜೀವಿಗಳಲ್ಲಿಯೇ ಶ್ರೇಷ್ಠರೆಂದು ಬೀಗುತ್ತಿರುವವರು. ಸಂವಹನ ಸಾಧ್ಯವಿರುವುದರಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀವು ಮಾಡಿರುವ ಸಾಧನೆ ನೋಡಿದರೆ ನಿಜವಿರ ಬಹುದು ಎನಿಸುತ್ತದೆ. ಆದರೆ, ನೀವು ನಿಸರ್ಗದ ವಿರುದ್ಧ ಮಾಡುತ್ತಿರುವ ಅನಾಹುತಗಳನ್ನು ನೋಡಿದರೆ ನಿಮ್ಮ ಶ್ರೇಷ್ಠತೆ ಬಗೆಗೆ ಅನುಮಾನ ಹುಟ್ಟಿಕೊಳ್ಳುತ್ತದೆ.ವಂಶ ಪಾರಂಪರ‌್ಯವಾಗಿ ನಿಮ್ಮ ತಾತ, ಮುತ್ತಾತನ ಕಾಲದಿಂದಲೂ ನಿಮ್ಮ ಕುಟುಂಬಕ್ಕೆ `ಹಾಲು~ ನೀಡುತ್ತಾ ಬಂದಿದ್ದೇವೆ. ಎಲ್ಲರನ್ನೂಶಕ್ತಿಶಾಲಿ, ಆರೋಗ್ಯವಂತರನ್ನಾಗಿಸಿದ್ದೇವೆ. ಫೋಟೊಗಳಲ್ಲಿ ಗೋ ಮಾತೆ ಎಂದು ಪೂಜಿಸುತ್ತೀರಾ. ಆದರೆ ಎದುರಿಗೆ ಇರುವ ನಮ್ಮನ್ನು ತಾತ್ಸಾರದಿಂದ ಕಾಣುತ್ತೀರಿ.ಪ್ಲಾಸ್ಟಿಕ್ ನಿಷೇಧ ಕಾನೂನಿದೆ. ಅದನ್ನು ಜಾರಿಯೂ ಗೊಳಿಸಲಾಗಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ.

ನೀವು ಸುಖವಾಗಿ ಬದುಕುಬೇಕು ಎನ್ನುವ ಭರದಲ್ಲಿ ಅರಿವಿದ್ದೋ, ಅರಿವಿಲ್ಲದೆಯೋ ಜೀವಿಸುವ ನಮ್ಮ ಹಕ್ಕನ್ನೂ ಕಿತ್ತುಕೊಳ್ಳು ತ್ತಿದ್ದೀರಿ. ಪರಿಣಾಮ ನಮ್ಮ ಬದುಕು ನರಕವಾಗಿದೆ.ನಮ್ಮ ಬದುಕಷ್ಟೇ ಅಲ್ಲ, ನೀವು ಬದುಕುತ್ತಿರುವ ಪರಿಸರವೂ ಹಾಳಾಗುತ್ತಿದೆ. ನಮ್ಮ ಸ್ಥಿತಿಯನ್ನು ನೋಡಿ, ನೀವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬುದಕು ನಮ್ಮ ಹಾದಿಯನ್ನೇ ಹಿಡಿಯ ಲಿದೆ. ಆದ್ದರಿಂದ ಈಗಲಾದರೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಎಂಬುದೊಂದೇ ನಮ್ಮ ಮನವಿಇಂತಿ ನಿಮ್ಮ

ಹಸು, ಎಮ್ಮೆ ಇನ್ನಿತರ ಪ್ರಾಣಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry