ಗುರುವಾರ , ಆಗಸ್ಟ್ 22, 2019
23 °C
ಬ್ಲಾಗಿಲನು ತೆರೆದು...

ಫಕೀರನ ಪದಾರ್ಥ ವೈವಿಧ್ಯ

Published:
Updated:
ಫಕೀರನ ಪದಾರ್ಥ ವೈವಿಧ್ಯ

ಸಿನಿಮಾ ಪಾತ್ರಗಳ ವೈವಿಧ್ಯ ಹಾಗೂ ಸಾತ್ವಿಕ ವ್ಯಕ್ತಿತ್ವದಿಂದ ಕನ್ನಡಿಗರ ಮನಸ್ಸು ಗೆದ್ದವರು ವರನಟ ರಾಜಕುಮಾರ್. ಅವರ ವ್ಯಕ್ತಿತ್ವ ಒಂದು ಮಾದರಿಯ ರೂಪದಲ್ಲಿ, ಆದರ್ಶದ ರೂಪದಲ್ಲಿ ಅಭಿಮಾನಿಗಳ ನಡುವೆ ಚಾಲ್ತಿಯಲ್ಲಿದೆ. ಇಂಥ ರಾಜಕುಮಾರ್, ಸಿಗರೇಟ್ ಸೇದೋದನ್ನ ಬಿಟ್ಟ ವಿಶಿಷ್ಟ ಕಥೆ ಬಲ್ಲಿರಾ? ಅದು ಹೀಗಿದೆ:“ಅಣ್ಣಾವ್ರ ಚಿತ್ರರಂಗಕ್ಕೆ ಬಂದು ಸುಮಾರು ವರ್ಷಗಳಾಗಿದ್ದವು. ಆಗಲೇ ಒಳ್ಳೊಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಮೊದಲಿನಿಂದಲೂ ರಾಜ್ಕುಮಾರ್ ಅವರನ್ನು ಜನರು ದೇವರ ರೀತಿಯಲ್ಲಿ ಕಾಣುತ್ತಿದ್ದರು. ಆಗ ರಾಜ್ಕುಮಾರ್ ಅವರಿಗೆ ದಿನಕ್ಕೆ ಒಂದೋ ಎರಡೋ ಸಿಗರೇಟುಗಳನ್ನು ಸೇದುವ ಚಟವಿತ್ತು. ಅಕಸ್ಮಾತಾಗಿ ಅವರು ಸಿಗರೇಟು ಸೇದುವುದನ್ನು ಕಂಡಾಗ ಅವರ ಅಭಿಮಾನಿಗಳು `ಏನಣ್ಣಾ ನಿಮ್ಮ ಕೈಲಿ ಸಿಗರೇಟ್ ಚೆನ್ನಾಗಿ ಕಾಣಲ್ಲ... ದಯವಿಟ್ಟು ಇದು ಬೇಡಿ' ಅಂತ ಹೇಳಿದ್ದರು.ಅಂದಿನಿಂದ ರಾಜ್ಕುಮಾರ್ ಯಾರಿಗೂ ಕಾಣದೇ ಗ್ರೀನ್ ರೂಮ್ನಲ್ಲೋ, ತಮ್ಮ ಖಾಸಗಿ ರೂಮ್ನಲ್ಲೋ ಅಪರೂಪಕ್ಕೆ ಸೇದುತ್ತಿದ್ದರು. ಹೀಗಿರುವಾಗ ಒಂದು ಘಟನೆ ನಡೆಯಿತು. ರಾಜ್ಕುಮಾರ್ ಅವರಿಗೆ ಸತ್ಯನಾರಾಯಣ ಅನ್ನುವ ಬಾಲ್ಯದ ಗೆಳೆಯರಿದ್ದರು. ಇವರು ರಾಜ್ಕುಮಾರ್ ಸಿಗರೇಟು ಸೇದೊದನ್ನು ಒಮ್ಮೆ ನೋಡಿಬಿಟ್ಟರು.ಅವರಿಗೆ ತಮ್ಮ ಸ್ನೇಹಿತನ ಕೈಯಲ್ಲಿ ಸಿಗರೇಟ್ ಇದ್ದುದನ್ನು ಕಂಡು ಆಶ್ಚರ್ಯವಾಯಿತು. ತನ್ನ ಸ್ನೇಹಿತ ಮುತ್ತುರಾಜನ ಕೈಯಲ್ಲಿ ಸಿಗರೇಟು ಇದ್ದದ್ದನ್ನು ಕಲ್ಪನೆ ಕೂಡ ಮಾಡಿಕೊಳ್ಳಲಾಗದ ಸತ್ಯನಾರಾಯಣ, ಅಣ್ಣಾವ್ರ ಎದುರಿಗೆ ಬಂದು ಜಬರ್ದಸ್ತಾಗಿ ಒಂದು ಮಾತು ಹೇಳೇಬಿಟ್ಟರು. `ನಿಮ್ಮ ಅಪ್ಪಾಜಿ ಬದುಕಿದ್ರೆ ನೀನು ಸಿಗರೇಟು ಸೇದುತ್ತಿದ್ದೆಯಾ?'. ಅಣ್ಣಾವ್ರಿಗೆ ಸ್ನೇಹಿತನ ಮಾತು ವಿಪರೀತ ನೋವನ್ನುಂಟು ಮಾಡಿತು.ಅವರಿಗೆ ಅವರ ತಂದೆಯೇ ಬಂದು ಕಪಾಳಕ್ಕೆ ಹೊಡೆದ ಹಾಗೆ ಅನಿಸಿತು. ಸ್ನೇಹಿತನ ಮೂಲಕ ತಮ್ಮ ತಂದೆಯೇ ಈ ಮಾತನ್ನು ಹೇಳಿದ್ದಾರೆ ಅಂತ ಅಂದುಕೊಂಡರು. ಅವರಿಗೆ ಅಂದು ಸತ್ಯದರ್ಶನವಾಯಿತು. ರಾಜ್ಕುಮಾರ್ ಅವ್ರಿಗೆ ಮೊದಲಿನಿಂದಲೂ ತಂದೆ ಪುಟ್ಟಸ್ವಾಮಯ್ಯ ಅವರೆಂದರೆ ವಿಪರೀತ ಭ ಕ್ತಿ, ಭಯ, ಗೌರವ. ತಂದೆ ಮಾತನ್ನು ಯಾವುದೇ ಕಾರಣಕ್ಕೂ ಅವರು ಮೀರುತ್ತಿರಲಿಲ್ಲ. ಪುಟ್ಟಸ್ವಾಮಯ್ಯನವರು ತೀರಿಕೊಂಡಾಗ ರಾಜ್ಕುಮಾರ್‌ಗೆ 22 ವರ್ಷವಾಗಿತ್ತು. ಮನೆಯಲ್ಲಿ ವಿಪರೀತ ಬಡತನವಿತ್ತು. ದೊಡ್ಡ ಸಂಬಂಧಗಳು ಬಂದಿದ್ದರೂ, ತಂದೆ ನೋಡಿ, `ಅವಳೇ ನನ್ನ ಸೊಸೆ' ಅಂತ ಹೇಳಿದ್ದ ಅಪ್ಪಾಜಿ ಗೌಡರ ಮಗಳಾದ ಪಾರ್ವತಿಯನ್ನೇ (ಪಾರ್ವತಮ್ಮ ರಾಜ್ಕುಮಾರ್) ಮದುವೆಯಾದರು. ಇದೆಲ್ಲಾ ತಂದೆಯ ಮೇಲೆ ಇಟ್ಟಿದ್ದ ಪ್ರೀತಿಗೆ ಉದಾಹರಣೆಗಳಾಗಿದ್ದವು.ಆ ದಿನ ಸ್ನೇಹಿತ ಸತ್ಯನಾರಾಯಣ ಹೇಳಿದ ಮಾತು ರಾಜ್ಕುಮಾರ್ ಅವರ ಮೇಲೆ ಎಷ್ಟು ಪ್ರಭಾವ ಬೀರಿತು ಅಂದರೆ, ಅಂದು ನೆಲಕ್ಕೆ ಹಾಕಿದ ಸಿಗರೇಟನ್ನು ಅವರು ಮತ್ತೇ ತಿರುಗಿ ನೋಡಲಿಲ್ಲ. ಅಪರೂಪಕ್ಕೆ ಸಿಗರೇಟು ಸೇದುತ್ತಿದ್ದ ಅವರು ಅದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟರು. ಸಿನಿಮಾಗಳಲ್ಲಿ ಕೂಡ ಸೇದಲಿಲ್ಲ”.ಮೇಲಿನದು ಶ್ರೀಧರ ಬನವಾಸಿ ಅವರ `ಫಕೀರನ ಕನಸುಗಳು' (shalivahan-circle.blogspot.in) ಬ್ಲಾಗ್‌ನ ಬರಹ. ರಾಜಕುಮಾರ್ ಕುರಿತಾದ ಈ ಬರಹ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವಂತೆಯೂ, ಕಥನದ ರೂಪದಲ್ಲಿಯೂ ಓದಿಸಿಕೊಳ್ಳುತ್ತದೆ. ರಾಜಕುಮಾರ್ ಮಾತ್ರವಲ್ಲ, ಚಿತ್ರರಂಗಕ್ಕೆ ಸಂಬಂಧಿಸಿದ ಮತ್ತೂ ಕೆಲವರ ಕುರಿತ ಬರಹಗಳೂ ಈ ಬ್ಲಾಗ್‌ನಲ್ಲಿವೆ.ಶ್ರೀಧರ ಕಥೆಗಾರರೂ ಕವಿಯೂ ಹೌದು. ಅವರ ಚೊಚ್ಚಿಲ ಕಥಾ ಸಂಕಲನ `ಅಮ್ಮನ ಆಟೋಗ್ರಾಫ್' ಪುಸ್ತಕದ ಬಗೆಗಿನ ವಿವರಗಳು ಬ್ಲಾಗಿನಲ್ಲಿವೆ. ನಿರ್ದೇಶಕ, ಗೀತರಚನೆಕಾರ ವಿ. ಮನೋಹರ್ ಅವರ ಸಂದರ್ಶನ ಇಲ್ಲಿದೆ. ಕಿರುತೆರೆಯ ಜನಪ್ರಿಯ ನಟ ಅನಂತವೇಲು ಅವರ ಬದುಕಿನ ಕಥನವಿದೆ. ಹಿಂದಿ ಕಿರುತೆರೆಯ ಜನಪ್ರಿಯ ನಟನಟಿಯರ ಕುರಿತು ಟಿಪ್ಪಣಿಗಳಿವೆ.ಸಲ್ಮಾನ್ ಖಾನ್ ಇಷ್ಟಕಷ್ಟಗಳ ಬಗ್ಗೆ ಮಾಹಿತಿ ತುಣುಕುಗಳಿವೆ. ಜೈಲಿಗೆ ಹೋಗಿ ಬಂದ ಮೇಲೆ ದರ್ಶನ್ ತಾರಾ ವರ್ಚಸ್ಸು ಹೆಚ್ಚಿದ ಬಗ್ಗೆ ವಿಶ್ಲೇಷಣೆಯಿದೆ. ಈ ಎಲ್ಲ ಸಿನಿಮಾ ಪೋಸ್ಟ್‌ಗಳನ್ನು ನೋಡಿದರೆ `ಫಕೀರನ ಕನಸುಗಳು' ಸಿನಿಮಾಕ್ಕೆ ಸಂಬಂಧಿಸಿದ ಬ್ಲಾಗ್ ಎಂದು ಹೇಳಬಹುದು. ಆದರೆ, ಇಲ್ಲಿನ ವಿಷಯ ವೈವಿಧ್ಯದಲ್ಲಿ ಸಿನಿಮಾ ಒಂದು ಭಾಗ ಮಾತ್ರ.ಸಿನಿಮಾ ವ್ಯಕ್ತಿಗಳ ಬಗ್ಗೆ ಪ್ರೀತಿಯಿಂದ ಬರೆದಷ್ಟೇ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಶ್ರೀಧರ ಭಾವುಕವಾಗಿ ಬರೆಯಬಲ್ಲರು. ಈ ನಿಟ್ಟಿನಲ್ಲಿ ಹಸಿವಿನ ಸಮಸ್ಯೆ ಹಾಗೂ ಅನ್ನಭಾಗ್ಯ ಯೋಜನೆಗಳ ಕುರಿತ ಅವರ ಬರಹಗಳನ್ನು ಉದಾಹರಿಸಬಹುದು. ಮಾಧ್ಯಮಗಳ ಕಾರ್ಯ ನಿರ್ವಹಣೆಯ ಬಗೆಗೂ ಅವರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ.ಕಥೆ-ಕವಿತೆ, ಓದಿನ ಅನುಭವ, ಪ್ರತಿಕ್ರಿಯೆ, ಸಂದರ್ಶನಗಳು- ಹೀಗೆ ಫಕೀರನ ಕನಸುಗಳ ವಿಸ್ತಾರ ಹರಡಿಕೊಂಡಿದೆ. ಈ ವಿಸ್ತಾರವನ್ನೇ `ಅಭಿರುಚಿಗಳ ಅಭಿವ್ಯಕ್ತಿ' ಎನ್ನುವ ಬ್ಲಾಗ್ ತಲೆಬರಹದ ಅಡಿ ಬರಹ ಸೂಚಿಸುವಂತಿದೆ.“ಬ್ಲಾಗ್‌ನ ಬಾಗಿಲು ತೆರೆದು ಒಳಗೆ ಬನ್ನಿ.. ಇಷ್ಟವಾದರೆ ಮೆಲ್ಲಗೆ ಮಾತನಾಡಿ, ಅದು ಜೋರಾಗಿ ಕೇಳಿಸಿಕೊಳ್ಳುತ್ತದೆ. ಇಷ್ಟವಾಗಿಲ್ಲ ಅಂದರೆ ಬಾಗಿಲ ಕಡೆ ನೋಡಿ, ಅದು ಅರ್ಥಮಾಡಿಕೊಳ್ಳುತ್ತದೆ” ಎಂದು ಬ್ಲಾಗ್‌ನ ಆರಂಭದಲ್ಲೇ ಶ್ರೀಧರ ಬರೆದುಕೊಂಡಿದ್ದಾರೆ. ಮೆಲ್ಲನೆ ಮಾತನಾಡುವುದು ಸರಿ. ಬಾಗಿಲ ಕಡೆ ನೋಡಿ ಎನ್ನುವ ಮಾತು ಮಾತ್ರ ಕೊಂಚ ಪೆಡಸಾಗಿ ಧ್ವನಿಸುತ್ತದೆ.

Post Comments (+)