ಫಜೀರು: 18ರಂದು ಲವ-ಕುಶ ಕಂಬಳ

7

ಫಜೀರು: 18ರಂದು ಲವ-ಕುಶ ಕಂಬಳ

Published:
Updated:

ಬಂಟ್ವಾಳ: ಇದೇ 18ರಂದು ತಾಲ್ಲೂಕಿನ ಪ್ರಸಿದ್ಧ ಫಜೀರು-ಕೇದಗೆಬೈಲು ಎಂಬಲ್ಲಿ 23ನೇ ವರ್ಷದ `ಲವ-ಕುಶ~ ಹೊನಲು ಬೆಳಕಿನ ಜೋಡುಕರೆ ಬಯಲು ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಮಿತ್ತಕೋಡಿ ವೆಂಕಪ್ಪ ಕಾಜವ ಅವರು ಸೋಮವಾರ ಬಿ.ಸಿ.ರೋಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.



ಕಳೆದ 22ವರ್ಷಗಳ ಹಿಂದೆ ಸ್ಥಳೀಯ ಕೃಷಿಕರಾದ ಎಂ.ವೆಂಕಪ್ಪ ಕಾಜವ, ಎನ್. ತಿಮ್ಮಪ್ಪ ಕೊಂಡೆ ಮತ್ತಿತರರು ಸೇರಿ ಸರಳ ರೀತಿಯಲ್ಲಿ ಕಂಬಳ ಆರಂಭಿಸಿದ್ದರು. ಆರಂಭದಲ್ಲಿ ನಡೆಯುತ್ತಿದ್ದ `ಹಗಲು ಕಂಬಳ~ದಲ್ಲಿ ವಿಜೇತ ಓಟದ ಕೋಣಗಳ ಮಾಲೀಕರಿಗೆ ಬಾಳೆಹಣ್ಣಿನ ಗೊಣೆ, ಸೀಯಾಳ ಗೊಣೆ ಮತ್ತಿತರ ಕೃಷಿ ಬೆಳೆಯನ್ನೇ ಬಹುಮಾನವಾಗಿ ನೀಡಲಾಗುತ್ತಿತ್ತು.



ಕ್ರಮೇಣ ಹೊನಲು ಬೆಳಕಿನ ಕಂಬಳ ಆರಂಭಗೊಂಡು, ಜಿಲ್ಲಾ ಕಂಬಳ ಸಮಿತಿ ನಿಯಮಾವಳಿಯಂತೆ ಕಂಪ್ಯೂಟರೀಕೃತ ಫಲಿತಾಂಶ ದಾಖಲಿಸುವ ಪದ್ಧತಿ ಸೇರಿದಂತೆ ಹೊಸತನದ ಸ್ಪರ್ಶ ನೀಡಲಾಗುತ್ತಿದೆ.

ಈ ಬಾರಿ ಒಟ್ಟು 150ಕ್ಕೂ ಮಿಕ್ಕಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿಜೇತರಿಗೆ ಒಂದೂವರೆ ಪವನ್ ಚಿನ್ನದ ನಾಣ್ಯ ಬಹುಮಾನ ನೀಡಲಾಗುತ್ತದೆ ಎಂದರು.



ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಎನ್.ತಿಮ್ಮಪ್ಪ ಕೊಂಡೆ, ಪ್ರಮುಖರಾದ ಸುದರ್ಶನ್ ಜೈನ್, ಜಯರಾಮ ಸಾಮಾನಿ, ಕೆ.ಮಹಾಬಲ ಆಳ್ವ, ಸಂಜೀವ ಶೆಟ್ಟಿ ಬೋಳಂತೂರು, ಗೋಪಾಲಕೃಷ್ಣ ತುಂಬೆ, ಮಧುಸೂಧನ್, ತಿಮ್ಮಪ್ಪ ಪೂಜಾರಿ ಮತ್ತಿತರರು ಇದ್ದರು.

 

ಎರಡನೇ ಕಂಬಳ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗರಿಷ್ಟ ಮತ್ತು ಅದ್ದೂರಿ ಕಂಬಳಕ್ಕೆ ಹೆಸರಾಗಿದ್ದ ಬಂಟ್ವಾಳ ತಾಲ್ಲೂಕಿನಲ್ಲಿ ಈ ಬಾರಿ ಕೇವಲ ಎರಡು ಕಂಬಳ ಮಾತ್ರ ನಡೆಯುತ್ತಿದ್ದು, ಫಜೀರು ಕಂಬಳಕ್ಕೆ ಸಿದ್ಧತೆ ನಡೆಯುತ್ತಿದೆ.



ಈಗಾಗಲೇ ಬಂಟ್ವಾಳ-ಬೆಳ್ತಂಗಡಿ ತಾಲ್ಲೂಕಿನ ಗಡಿಭಾಗದಲ್ಲಿರುವ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳವು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿ.ಕೆ.ಸಂತೋಷ್ ಕುಮಾರ್ ಭಂಡಾರಿ ನೇತೃತ್ವದಲ್ಲಿ ನಡೆದಿತ್ತು.



ಈ ಹಿಂದೆ ಶಾಸಕ ಬಿ.ರಮಾನಾಥ ರೈ ಮತ್ತು ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ನೇತೃತ್ವದಲ್ಲಿ ಕಾವಳಕಟ್ಟೆ `ಮೂಡೂರು-ಪಡೂರು~ ಅದ್ದೂರಿ ಕಂಬಳವು ದಶಮಾನೋತ್ಸವ ಪೂರೈಸಿದ ಬಳಿಕ ಸ್ಥಗಿತಗೊಂಡಿದೆ. ಇದಕ್ಕೂ ಮೊದಲು ಪೊಳಲಿ ಸಮೀಪದ ಕೊಳತ್ತಮಜಲು `ಜಯ-ವಿಜಯ~ ಕಂಬಳ ಹಲವಾರು ವರ್ಷ ನಿರಂತರವಾಗಿ ನಡೆದು ಬಳಿಕ ಸ್ಥಗಿತಗೊಂಡಿದೆ.



ಇದೇ ವೇಳೆ ಮಾಜಿ ಜಿ.ಪಂ.ಅಧ್ಯಕ್ಷ ಬಿ.ಸದಾನಂದ ಪೂಂಜ ನೇತೃತ್ವದಲ್ಲಿ ಪಾಣೆಮಂಗಳೂರು `ಜಯ-ವಿಜಯ~ ಕಂಬಳವೂ ಇದೇ ಹಾದಿ ಹಿಡಿದಿದೆ.ಆರಂಭದಲ್ಲಿ ಬೋಳಂತೂರು, ಅನಂತಾಡಿ, ಸರಪಾಡಿ ಮತ್ತಿತರ ಕಡೆಗಳಲ್ಲಿಯೂ ಕಂಬಳ ಕ್ರೀಡೆ ಯಶಸ್ವಿಯಾಗಿ ನಡೆದು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿತ್ತು.



ಪ್ರಸಕ್ತ ಕಂಬಳ ಕೂಟ ಏರ್ಪಡಿಸಲು ಖರ್ಚು-ವೆಚ್ಚ ದುಬಾರಿಯಾಗಿದ್ದು, ಒಂದು ಕಂಬಳಕ್ಕೆ ಕನಿಷ್ಟ ಎಂದರೂ ರೂ. ಐದು ಲಕ್ಷಕ್ಕೂ ಮಿಕ್ಕಿ ಖರ್ಚು ತಗಲುತ್ತದೆ. ಇದಕ್ಕಾಗಿ ಸರ್ಕಾರದಿಂದ ಅನುದಾನ ದೊರೆತಾಗ ಮಾತ್ರ `ತುಳುನಾಡಿನ ರೈತರ ಕ್ರೀಡೆ ಕಂಬಳ~ವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ ಎಂಬ ಅಭಿಪ್ರಾಯ ಇಲ್ಲಿನ ಕಂಬಳ ಅಭಿಮಾನಿಗಳಿಂದ ವ್ಯಕ್ತವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry