ಫರೂಕಾಬಾದ್‌ಗೆ ಬಂದು ನೋಡಿ - ಸಚಿವ ಖುರ್ಷಿದ್ ಸವಾಲು

7

ಫರೂಕಾಬಾದ್‌ಗೆ ಬಂದು ನೋಡಿ - ಸಚಿವ ಖುರ್ಷಿದ್ ಸವಾಲು

Published:
Updated:
ಫರೂಕಾಬಾದ್‌ಗೆ ಬಂದು ನೋಡಿ - ಸಚಿವ ಖುರ್ಷಿದ್ ಸವಾಲು

ನವದೆಹಲಿ (ಪಿಟಿಐ/ಐಎಎನ್‌ಎಸ್): ಧೈರ್ಯವಿದ್ದಲ್ಲಿ ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ಫರೂಕಾಬಾದ್‌ಗೆ ಬಂದು ಪ್ರತಿಭಟನೆ ನಡೆಸುವಂತೆ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ (ಐಎಸಿ) ಮುಖ್ಯಸ್ಥ  ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲು ಎಸೆದಿದ್ದಾರೆ.ಮತ್ತೊಂದೆಡೆ ಕೇಜ್ರಿವಾಲ್ ಅವರು ಖುರ್ಷಿದ್ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದು, `ನನ್ನನ್ನು ಕೊಲ್ಲುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಇಡೀ ದೇಶ ಈಗ ಎಚ್ಚೆತ್ತುಕೊಂಡಿದೆ. ಒಬ್ಬ ಅರವಿಂದ್ ಸತ್ತಲ್ಲಿ ನೂರು ಜನ ಎದ್ದು ಬರುತ್ತಾರೆ~ ಎಂದು ತಿರುಗೇಟು ನೀಡಿದ್ದಾರೆ.ಹೀಗಾಗಿ ಈ ಇಬ್ಬರ ನಡುವೆ ಹೊಸ ವಾಕ್ಸಮರ ಆರಂಭವಾಗಿದೆ. ಮಂಗಳವಾರ ರಾತ್ರಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಸಲ್ಮಾನ್ ಖುರ್ಷಿದ್, `ಲೇಖನಿಯ ಜತೆ ಕೆಲಸ ಮಾಡಲಿ ಎಂದು ನನಗೆ ಕಾನೂನು ಸಚಿವರ ಸ್ಥಾನ ನೀಡಲಾಗಿದೆ. ನಾನು ಲೇಖನಿಯ ಜತೆ ಕೆಲಸ ಮಾಡುವ ಜತೆ ರಕ್ತದ ಜತೆಯೂ (ಜನರ) ಕೆಲಸ ಮಾಡುತ್ತೇನೆ~ ಎಂದು ಹೇಳಿದ್ದರು.

 

ಆ ಕಾರ್ಯಕ್ರಮದ ದೃಶ್ಯಾವಳಿಯನ್ನು ಕೆಲ ಟಿವಿ ವಾಹಿನಿಗಳು ಬುಧವಾರ ಬಿತ್ತರಿಸಿವೆ. ನವೆಂಬರ್ ಒಂದರಿಂದ ಫರೂಕಾಬಾದ್‌ದಲ್ಲಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಕೇಜ್ರಿವಾಲ್ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಸಲ್ಮಾನ್ ಹೀಗೆ ಮಾತನಾಡಿದ್ದಾರೆ.`ಫರೂಕಾಬಾದ್‌ಗೆ ಅವರು ಬರಲಿ, ಹಾಗೆಯೇ ಅಲ್ಲಿಂದ ಮರಳಿ ಹೋಗಲಿ. ನಾವು ಪ್ರಶ್ನೆ ಕೇಳುತ್ತೇವೆ. ನೀವು ಉತ್ತರಿಸಿ ಎಂದು ಅವರು (ಕೇಜ್ರಿವಾಲ್) ಹೇಳುತ್ತಾರೆ. ನೀವು ಉತ್ತರಗಳನ್ನು ಕೇಳುತ್ತ ಹೋಗಿ. ಪ್ರಶ್ನೆ ಹಾಕುವುದನ್ನೇ ಮರೆತುಬಿಡುತ್ತೀರಿ ಎಂದು ನಾವು ಹೇಳುತ್ತೇವೆ~ ಎಂದು ಖುರ್ಷಿದ್ ಹೇಳಿದ್ದಾರೆ.

 

ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಜತೆ ಅವರ ಪತ್ನಿ ಲೂಸಿ ಹಾಗೂ ಬೆಂಬಲಿಗರು ಇದ್ದರು. ಸಲ್ಮಾನ್ ಖುರ್ಷಿದ್ ಮಾತುಗಳನ್ನು ಕೇಜ್ರಿವಾಲ್ ಜೀವ ಬೆದರಿಕೆ ಎಂದು ಪರಿಗಣಿಸಿದ್ದಾರೆ.`ಸಲ್ಮಾನ್ ಬಳಸಿರುವ ಭಾಷೆ ದೇಶದ ಕಾನೂನು ಸಚಿವರ ಘನತೆಗೆ ತಕ್ಕುದಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಜನ ಸಿಟ್ಟಿಗೆದ್ದಿದ್ದಾರೆ ಎಂಬುದನ್ನು ಕಾಂಗ್ರೆಸ್  ಅರಿತುಕೊಳ್ಳಬೇಕು. ಭ್ರಷ್ಟಾಚಾರ ಮಟ್ಟಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು~`ನನ್ನ ಜೀವ ಅವರ (ಸಚಿವರ) ಕೈಯಲ್ಲಿ ಇಲ್ಲ. ಅದು ದೇವರ ಕೈಯಲ್ಲಿದೆ ಎಂಬುದನ್ನು ಖುರ್ಷಿದ್ ಅರಿತುಕೊಳ್ಳಬೇಕು~ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ಖುರ್ಷಿದ್ ಮತ್ತು ಅವರ ಪತ್ನಿ ಲೂಸಿ ನಡೆಸುವ ಟ್ರಸ್ಟ್‌ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಕೇಜ್ರಿವಾಲ್ ಅವರು ಖುರ್ಷಿದ್ ರಾಜೀನಾಮೆಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry