ಫಲಕಗಳಿಲ್ಲದ ನಗರ

7

ಫಲಕಗಳಿಲ್ಲದ ನಗರ

Published:
Updated:
ಫಲಕಗಳಿಲ್ಲದ ನಗರ

ಸ್ವಪ್ನನಗರಿ

ಬೆಂಗಳೂರಿನ ಬಹಳ ಮುಖ್ಯವೆನಿಸುವ ಸ್ಥಳಗಳಲ್ಲೇ ಸೈನ್ ಬೋರ್ಡ್ ಇಲ್ಲದ ಅವ್ಯವಸ್ಥೆ ರಾರಾಜಿಸುತ್ತಿದೆ. ಕೆಂಪೇಗೌಡ ರಸ್ತೆಯನ್ನೇ ತೆಗೆದುಕೊಳ್ಳಿ. ಕಾವೇರಿ ಭವನದ ಕಡೆಯಿಂದ ಬಂದರೆ ಇದ್ದಕ್ಕಿದ್ದಂತೆ ರಸ್ತೆ ಕವಲೊಡೆದು ಬೇರೆ ಬೇರೆ ದಿಕ್ಕಿಗೆ ಹೋಗುತ್ತದೆ.ಬಸ್‌ಸ್ಟ್ಯಾಂಡಿಗೆ ಹೋಗಬೇಕಾದರೆ ಒಂದು ದಾರಿ, ರೈಲ್ವೆ ಸ್ಟೇಶನ್‌ಗೆ ಹೋಗಬೇಕಾದರೆ ಇನ್ನೊಂದು. ಆದರೆ ಯಾವುದು ಎಲ್ಲಿಗೆ ಹೋಗುತ್ತದೆ ಎಂದು ಗೊತ್ತಿಲ್ಲದಿದ್ದರೆ ನಿಮ್ಮ ಸಹಾಯಕ್ಕೆ ಯಾವ ಬೋರ್ಡೂ ಕಾಣುವುದಿಲ್ಲ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ವಿಂಡ್ಸರ್ ಮ್ಯೋನರ್ ಹತ್ತಿರ ಒಂದು ಸೇತುವೆ ಇದೆ. ಏರಿದರೆ ಎಲ್ಲಿಗೆ ಹೋಗುತ್ತದೆ, ಏರದಿದ್ದರೆ ಎಲ್ಲಿಗೆ ಹೋಗುತ್ತದೆ ಎಂದು ಹೇಳುವ ಯಾವ ದಿಕ್ಸೂಚಿ ಫಲಕವೂ ಇಲ್ಲ. ಅಲ್ಲಿಂದ ಸ್ವಲ್ಪ ಹತ್ತಿರದಲ್ಲಿರುವ ಮೇಖ್ರಿ ಸರ್ಕಲ್ ಇದೇ ಕಾರಣಕ್ಕೆ ಗೊಂದಲಮಯವಾಗಿದೆ.ಮುಂಬೈನಂಥ ನಗರಕ್ಕೆ ಹೋದ ಹೊಸಬರೂ ದಾರಿ ಹುಡುಕಿಕೊಳ್ಳುವುದಕ್ಕೆ ಕಾರಣ ಅಲ್ಲಿಯ ಫಲಕಗಳಲ್ಲಿ ಕಂಡುಬರುವ ನಿರ್ದಿಷ್ಟ ಸೂಚನೆಗಳು. ಫಲಕಗಳನ್ನು ದೊಡ್ಡದಾಗಿ, ಎಲ್ಲರಿಗೂ ಕಾಣುವಂತೆ ವಿನ್ಯಾಸ ಮಾಡಿದ್ದಾರೆ. ರಾತ್ರಿ ಹೊತ್ತು ಲೈಟ್ ಹಾಕಿರುತ್ತಾರೆ.ಬೆಂಗಳೂರಿಗೆ ಬಂದ ಹೊಸಬರ ವಿಷಯ ಹಾಗಿರಲಿ, ಸ್ಥಳೀಯರಿಗೆ ಕೂಡ ಇಲ್ಲಿ ದಾರಿ ಹುಡುಕುವುದು ವಿಪರೀತ ಕಷ್ಟದ ಕೆಲಸ. ಒಂದು ತಪ್ಪು ತಿರುವಿನಲ್ಲಿ ಸಾಗಿದರೆ ಸಾಕು, ಕನಿಷ್ಠ ಹದಿನೈದು ನಿಮಿಷ ಹಾಳಾಗುವುದು ಖಂಡಿತ. ದಾರಿ ಕೇಳುವುದಕ್ಕೆ ಗಾಡಿ ನಿಲ್ಲಿಸಿದರೆ, ಹಿಂದಿರುವ ಚಾಲಕರಿಂದ ಕೆಟ್ಟ ಬೈಗುಳ ತಿನ್ನುವ ಕರ್ಮ.ಭಾರತದ ತಂತ್ರಜ್ಞಾನ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇಂಥ ಸಣ್ಣ ವಿಷಯಗಳಿಗೂ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಿಬಿಟ್ಟಿದೆ. ಸಂಚಾರದ ಪ್ರತಿ ನಿಮಿಷವೂ ಮುಖ್ಯ ಎನ್ನುವಂಥ ಸ್ಥಳಗಳಲ್ಲಾದರೂ ಸರಿಯಾದ ಫಲಕಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಬೇಕು. ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದಿರುವುದರಿಂದ  ಬೆಂಗಳೂರಿನ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ಮಂತ್ರಿಗಳಾದ ಸುರೇಶ್ ಕುಮಾರ್ ಅವರೇ ಈ ಕೆಲಸವನ್ನು ಮಾಡುವಂತೆ ಆಜ್ಞೆ ಮಾಡಬೇಕೇನೋ.ಅನ್-ರೊಮ್ಯೋಂಟಿಕ್ ಆಗ್ಬಿಟ್ಟಯ್ತೆ

`ಕೊಲವೆರಿ ಡಿ~ ಬೆನ್ನಲ್ಲೇ ಬಂದ ಕನ್ನಡ ಹಾಡೊಂದು ಬೆಂಗಳೂರಿನ ಕೇಳುಗರ ಆಸಕ್ತಿ ಕೆರಳಿಸಿದೆ. ಕೋಮಲ್ ನಟನೆಯ `ಗೋವಿಂದಾಯ ನಮಃ~ ಚಿತ್ರದ ಈ ಹಾಡು ಬೆಂಗಳೂರಿನ ಮುಸ್ಲಿಮರು ಮಾತಾಡುವ ಶೈಲಿಯೊಂದನ್ನು ಅಣಕ ಮಾಡಲು ಹೊರಟಿದೆ. (ಬಿಜಾಪುರದಲ್ಲಿ ಹಾಡನ್ನು ಶೂಟ್ ಮಾಡಿದ್ದಾರೆ, ಆದರೆ ಆ ಪ್ರದೇಶದ ಮುಸ್ಲಿಮರಂತೂ ಹಾಗೆ ಮಾತನಾಡಲಾರರು). ಹಿಂದಿಯ ಹಿಟ್ ಚಿತ್ರ `ಪಡೋಸನ್~ನಲ್ಲಿ ದಕ್ಷಿಣ ಭಾರತೀಯರನ್ನು ತಮಾಷೆ ಮಾಡಿದ ಧಾಟಿಯಲ್ಲೇ ಇದೂ ಇದೇ.

 

ಸುಮಾರು ಐವತ್ತು ಅರವತ್ತರ ದಶಕದ ಹಿಂದಿ ಚಿತ್ರಗೀತೆಯ ಶೈಲಿಯನ್ನು ಆಧರಿಸಿ ಮಾಡಿರುವ ಟ್ಯೂನ್ ಆ ಕಾಲದ ಸೌಂಡನ್ನು ಮರುಕಳಿಸುವಂತೆ ಮಾಡುತ್ತದೆ. ಸೂಕ್ಷ್ಮ ಕವಿತೆ ಬರೆಯುವ ಮತ್ತು ಮುಸ್ಲಿಂ ಸಂಸ್ಕೃತಿಯ ಬಗ್ಗೆ ಒಲವಿರುವ ಕನ್ನಡದ ಕವಯತ್ರಿ ಈ ಹಾಡನ್ನು ಇಷ್ಟಪಟ್ಟು ಒಂದೇ ಒಂದು ಆಕ್ಷೇಪ ತೆಗೆದಿದ್ದಾರೆ: `ಡಜನ್‌ಗಟ್ಟಲೆ ಮಕ್ಕಳನ್ನು ಹೆರುವ ಮಾತು ಎರಡನೇ ಚರಣದಲ್ಲಿ ಬರುತ್ತೆ.ಇದು ಸ್ಟೀರಿಯೋ ಟೈಪ್ ಅನ್ನೋದನ್ನು ಮರೆತರೂ, ನಮ್ಮ ದೇಶದ ಗಂಡಸರು ಪ್ರೀತಿಯ ತೀವ್ರತೆಯನ್ನು ಹೇಳಲು ಹೊರಟಾಗ ಇಂಥ ಅನ್-ರೊಮ್ಯೋಂಟಿಕ್ ಸಾಲುಗಳಿಗೆ ಮೊರೆಹೋಗುತ್ತಾರೆ ಅನ್ನೋದನ್ನ ಮರೆಯೋಕಾಗಲ್ಲ. ಅಷ್ಟೊಂದು ಹೆರಿಗೆ ಕಷ್ಟ ಕೊಡುವ ಹುಡುಗನಿಗೆ ಹೀರೋಯಿನ್ ಯಾಕೋ ಕಪಾಳಕ್ಕೆ ಬಾರಿಸಿಲ್ಲ!~ಅದೇನೇ ಇರಲಿ, `ಗೋವಿಂದಾಯ ನಮಃ~ ಕಥೆ ಹೊಸ ಬೆಂಗಳೂರಿನ ಒಂದು ಎಳೆಯನ್ನು ಹಿಡಿದು ಮಾಡಿದಂತಿದೆ. ಕ್ಯಾಬ್ ಡ್ರೈವರ್‌ಗೂ ಸಾಫ್ಟ್‌ವೇೀರ್ ಕಂಪೆನಿಯಲ್ಲಿ ಕೆಲಸ ಮಾಡುವ ಹುಡುಗಿಗೂ ಪ್ರೀತಿಯಾಗುವ ಈ ಚಿತ್ರ ಹೇಗಿರಬಹುದು ಎಂದು ನನಗಂತೂ ಕುತೂಹಲ ಇದೆ.ಮೊದಲು ಪೇಟೆ ಮತ್ತು ಕಂಟೋನ್ಮೆಂಟ್ ಎಂಬ ಎರಡು ಅಸ್ತಿತ್ವಗಳಾಗಿ ಬೆಂಗಳೂರು ಕಾಣುತ್ತಿತ್ತು. ಈಗ `ಐಟಿ~ ಮತ್ತು `ಐಟಿಯೇತರ~ ಎಂಬ ಭೇದ ಕಣ್ಣಿಗೆ ರಾಚುತ್ತದೆ.  ನಮ್ಮ ನೆರೆ ಹೊರೆಯಲ್ಲಿ ನಡೆಯುತ್ತಿರುವ ನಿಜ ಜೀವನದ ಅನುಭವಗಳು ತೀರ ಹೊಸದಾಗಿವೆ. ಈ ನಾಟಿ ಡ್ರೈವರ್ ಮತ್ತು ಸಾಫ್ಟ್‌ವೇರ್ ಬೇಬ್ ಕಥೆಗೆ  ಈ ಎರಡು ಪ್ರಪಂಚಗಳ ವೈರತ್ವವನ್ನೂ ಆಕರ್ಷಣೆಯನ್ನೂ ಸಾಂಕೇತಿಕವಾಗಿ ತೋರಿಸುವ ಸಾಧ್ಯತೆ ಇದೇ, ಅಲ್ಲವೇ? ಇಂಡಕ್ಷನ್ ಒಲೆಗಳ ಕಾಲ


ಬೆಂಗಳೂರಿನ ಎಷ್ಟೋ ಮನೆಗಳಿಗೆ ಗ್ಯಾಸ್ ಪೂರೈಕೆ ನಿಧಾನವಾಗಿಬಿಟ್ಟಿದೆ. ಇದಕ್ಕೆ ಒಂದು ಕಾರಣ: ಲಾರಿ ಸ್ಟ್ರೈಕ್. ಮತ್ತೊಂದು: ಸ್ಟ್ರೈಕ್ ನೆಪ ಒಡ್ಡಿ ಏಜೆನ್ಸಿಗಳು ಮಾಡುತ್ತಿರುವ ಕಪ್ಪು ದಂಧೆ. ವಾರಗಟ್ಟಲೆ ಗ್ಯಾಸ್ ಬರದ ಕಾರಣ ಎಷ್ಟೋ ಜನ ವಿದ್ಯುತ್ ಒಲೆಗಳನ್ನು ಕೊಳ್ಳಲು ಅಂಗಡಿಗೆ ಹೋದಾಗ ಕಣ್ಣಿಗೆ ಬೀಳುತ್ತಿರುವುದು ಇಂಡಕ್ಷನ್ ಕುಕ್ ಟಾಪ್‌ಗಳು.ಇವು ಅಯಸ್ಕಾಂತದ ಶಕ್ತಿ ಬಳಸಿಕೊಂಡು ಮಾಮೂಲಿ ಎಲೆಕ್ಟ್ರಿಕ್ ಹೀಟರ್‌ಗಳಿಗಿಂತ ಶೀಘ್ರವಾಗಿ ಶಾಖವನ್ನು ಉತ್ಪತ್ತಿ ಮಾಡುತ್ತವೆ. ಸುಮಾರು 2,500 ರೂಪಾಯಿ ಬೆಲೆಯಿಂದ ಶುರುವಾಗುವ ಈ ಹೊಸ ಮಾದರಿಯ ಒಲೆಗಳನ್ನು ಹೆಸರುವಾಸಿ ಕಂಪೆನಿಗಳು ತಯಾರು ಮಾಡುತ್ತಿವೆ. ಹೀಟರ್‌ಗಳಿಗಿಂತ ಸೊಗಸಾಗಿ ಕಾಣುವ ಈ ಹೊಸ ಒಲೆಗಳಿಗೆ ವಿಶೇಷ ಪಾತ್ರೆಗಳು ಬೇಕು. ಹಾಗಾಗಿ ಒಲೆಗಳ ಜೊತೆಗೆ ಕೆಲವು ಪಾತ್ರೆಗಳನ್ನು ಕೂಡ ಕಂಪೆನಿಗಳು ಬಿಟ್ಟಿಯಾಗಿ ಕೊಡುತ್ತಿವೆ.ಸಾವಯವ ಮೇಳ, ವ್ಯಾಲೆಂಟೈನ್ಸ್ ಡೇ

ಹೋದವಾರ ಬೆಂಗಳೂರಿನಲ್ಲಿ ಎರಡು ದೊಡ್ಡ ಹಬ್ಬಗಳು ನಡೆದವು. ಒಂದು- ಲಾಲ್‌ಬಾಗ್‌ನಲ್ಲಿ ನಡೆದ ನೈಸರ್ಗಿಕ (ಅಂದರೆ ರಾಸಾಯನಿಕ ಗೊಬ್ಬರ ಹಾಕದೆ ಬೆಳೆಸಿದ) ಪದಾರ್ಥಗಳ ಮೇಳ. ಮತ್ತೊಂದು- ವ್ಯಾಲೆಂಟೈನ್ಸ್ ಡೇ ಸಂಭ್ರಮ. ಇಂಗ್ಲಿಷ್ ಪತ್ರಿಕೆಗಳಲ್ಲಿ ವ್ಯಾಲೆಂಟೈನ್ಸ್ ಡೇಗೆ ಸಿಕ್ಕಿದ ಸ್ಥಳಾವಕಾಶ ಈ ನೈಸರ್ಗಿಕ ಮೇಳಕ್ಕೆ ಸಿಗಲಿಲ್ಲ. ಯೌವನ, ಪ್ರೀತಿ, ಕಾಮ, ವ್ಯಾಪಾರ ಎಲ್ಲ ಸೇರಿರುವ ವ್ಯಾಲೆಂಟೈನ್ಸ್ ಹಬ್ಬದ ಜೊತೆ ಕಷ್ಟಜೀವಿ ಕೃಷಿಕರ ಸಾತ್ವಿಕ ಆಹಾರ, ಪುಡಿ, ಲೇಹ್ಯಗಳು ಸ್ಪರ್ಧಿಸುವುದು ಅಸಾಧ್ಯ, ನೋಡಿ. ಆದರೂ ಸಾವಯವ ಮೇಳದಲ್ಲಿ ಜನ ಕಿಕ್ಕಿರಿದಿದ್ದರಂತೆ.ಕಂಪ್ಯೂಟರ್ ಕಡ್ಡಾಯ

ಎಲ್ಲ ಸರ್ಕಾರಿ ಉದ್ಯೋಗಿಗಳೂ ಕಡ್ಡಾಯವಾಗಿ ಕಂಪ್ಯೂಟರ್ ಕಲಿಯಬೇಕಂತೆ. ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸುವ ವಿದ್ಯೆ ಕಲಿಯಲು ಸರ್ಕಾರವೇ ತಲಾ 5,000 ರೂ. ಕೊಡುತ್ತದಂತೆ. ಆದರೆ ಸರ್ಕಾರ ನರ್ಸ್‌ಗಳನ್ನು ಈ ನಿಯಮದಿಂದ ಹೊರತುಪಡಿಸಿದೆ. ಯಾಕಿರಬಹುದು? ಅವರ ಕನ್ನಡ ಕೇಳಿ ಹೆದರಿರಬಹುದೇ? ಈ ಜೋಕ್ ಕೇಳಿದ್ದೀರಾ?- ನರ್ಸ್: `ಸಾರಿ ಡಾಕ್ಟರ್, ಕೆಲಸಕ್ಕೆ ಬರೋದು ಲೇಟ್ ಆಗಿಹೋಯ್ತು. ರಾತ್ರಿ ಮಲಗುವಾಗ ಒಂದು ಗಂಡ. ಏಳುವಾಗ ಎಂಟು ಗಂಡ~!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry