ಫಲವತ್ತಾದ ಭೂಮಿಯ ಸ್ವಾಧೀನಕ್ಕೆ ರೈತರ ವಿರೋಧ

7

ಫಲವತ್ತಾದ ಭೂಮಿಯ ಸ್ವಾಧೀನಕ್ಕೆ ರೈತರ ವಿರೋಧ

Published:
Updated:

ದೇವನಹಳ್ಳಿ: ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ ಅನುಸಾರ (ಐಟಿಐಆರ್) ಭೂ ಸ್ವಾಧೀನಕ್ಕೆ ಒಳಪಡುತ್ತಿರುವ ಗ್ರಾಮಗಳ ರೈತರ ಮತ್ತು ಸಾರ್ವಜನಿಕರ ಆಕ್ಷೇಪಗಳ ಆಲಿಕೆಯ ಸಭೆ ಬುಧವಾರ ದೇವನಹಳ್ಳಿ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು.ರೈತ ಸಂಘವು ಫಲವತ್ತಾದ ಭೂಮಿ ಸ್ವಾಧೀನಕ್ಕೆ ತಮ್ಮ ಪ್ರಬಲ ವಿರೋಧ ವ್ಯಕ್ತಪಡಿಸಿದರೆ ಭೂ ಸ್ವಾಧೀನಕ್ಕೆ ಒಳಪಡುತ್ತಿರುವ ಗ್ರಾಮಗಳ ರೈತರಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು.ಸಭೆಯ ಆರಂಭಕ್ಕೂ ಮುನ್ನ ರೈತರನ್ನುದ್ದೇಶಿಸಿ ಕೈಎಡಿಬಿಭೂ ಸ್ವಾಧಿನ ವಿಶೇಷ ಅಧಿಕಾರಿ ಶಿವಸ್ವಾಮಿ ಮಾತನಾಡಿದರು.`ಐಟಿಐಆರ್ ಅವಶ್ಯಕತೆಗಾಗಿ ಭೂ ಸ್ವಾಧೀನದ ಮೊದಲ ಹಂತದಲ್ಲಿ ತಾಲ್ಲೂಕಿನ ರಬ್ಬನಹಳ್ಳಿ, ರಾಮನಾಥಪುರ, ಆರುವನಹಳ್ಳಿ, ಗೊಲ್ಲಹಳ್ಳಿ, ಚಪ್ಪರದಹಳ್ಳಿ, ಬೈರದೇನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿ ವ್ಯಾಪ್ತಿಯಲ್ಲಿ 2072 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಇದು 2010ರಿಂದಲೇ ಆರಂಭವಾಗಿದೆ' ಎಂದರು.ಲಿಂಗನಹಳ್ಳಿ ಗ್ರಾಮದ ರೈತ ಗೋವಿಂದಸ್ವಾಮಿ ಮಾತನಾಡಿ, `ನಮ್ಮ ಗ್ರಾಮ ವ್ಯಾಪ್ತಿಯಲ್ಲಿ 570 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡುತ್ತಿದೆ. ಈಗ ನಿಗದಿಸಿರುವ ಭೂಮಿಯ ಪ್ರತಿ ಎಕರೆ ಮೌಲ್ಯ ಅತ್ಯಂತ ಕನಿಷ್ಠವಾಗಿದೆ. ಸೂಕ್ತಬೆಲೆ ನಿಗದಿ ಮಾಡಿದರೆ ಮಾತ್ರ ನಾವು ಭೂಮಿ ಕೊಡಲು ಸಿದ್ಧ' ಎಂದು ಹೇಳಿದರು.ಕೃಷಿಕ ಸಮಾಜ ನಿರ್ದೇಶಕ ಎಚ್.ಎಂ.ರವಿಕುಮಾರ್ ಮಾತನಾಡಿ, `ಮುಂದಿನ ಐದು ವರ್ಷದ ಭೂಮಿ ಮೌಲ್ಯಕ್ಕೆ ಸಮನಾಗಿ ಸರ್ಕಾರ ಬೆಲೆ ನಿಗದಿಪಡಿಸಬೇಕು. ಪ್ರತಿ ಎಕರೆಗೆ ಕನಿಷ್ಠ ಒಂದರಿಂದ ಒಂದೂವರೆ ಕೋಟಿ ರೂ ನೀಡಬೇಕು' ಎಂದು ಒತ್ತಾಯಿಸಿದರು.ಮುಖಂಡ ಎಂ.ಶ್ರಿನಿವಾಸ್ ಮಾತನಾಡಿ, `ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಈ ಭಾಗದ ರಸ್ತೆಗಳ ಮೂಲಕ ವಿಮಾನ ನಿಲ್ದಾಣಕ್ಕೆ ನಿತ್ಯವೂ ಇಪ್ಪತ್ತೆರಡು ಸಾವಿರ ವಾಹನಗಳು ಸಂಚರಿಸುತ್ತವೆ ಎಂಬ ಅಂದಾಜಿದೆ. ಇದರಿಂದಾಗಿ ಇಲ್ಲಿ ಆಮ್ಲಜನಕ ಕೊರತೆ ಕಾಡುತ್ತಿದೆ ಎಂದು ರಾಜ್ಯ ಪರಿಸರ ಇಲಾಖೆಯೇ ತಿಳಿಸಿದೆ. ಇಂತಹುದರಲ್ಲಿ ಈಗಿನ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕಂಡರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹೀಗಾಗಿ ಇಲ್ಲಿ ಸ್ವಾಧೀನಕ್ಕೆ ನಮ್ಮ ವಿರೋಧವಿದೆ' ಎಂದು ಸ್ಪಷ್ಟಪಡಿಸಿದರು.ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, `ತಾಲ್ಲೂಕಿನಲ್ಲಿ ಯೋಗ್ಯವಲ್ಲದ ಭೂಮಿ ಸ್ವಾಧೀನ ಪಡಿಸಿಕೊಳ್ಳುವಂತೆ ಮಾಹಿತಿ ತಂತ್ರಜ್ಞಾನ ಸಚಿವರಿಗೆ ತಿಳಿಸಿದ್ದೇನೆ. ರೈತರಿಗೆ ಯಾವುದೇ ತೊಂದರೆ ಕೊಡುವ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಬಾರದು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.ದೊಡ್ಡಬಳ್ಳಾಪುರ ವರದಿ: ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿ.ಶಂಕರ್ ಬುಧವಾರ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಭೂ ಸ್ವಾಧೀನಕ್ಕೆ ಒಳಪಡುತ್ತಿರುವ ರೈತರಿಂದ ಮಾಹಿತಿ ಪಡೆದರು.ಲಿಂಗನಹಳ್ಳಿ ಗ್ರಾಮದ ಜಿ.ಲಕ್ಷ್ಮೀಪತಿ ಮತ್ತು ಆನಂದಮೂರ್ತಿ ಮಾತನಾಡಿ, `ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ನೀತಿಯಂತೆಯೇ ಭೂ ಸ್ವಾಧೀನ ನಡೆಯಬೇಕು' ಎಂದು ಒತ್ತಾಯಿಸಿದರು.`ಲಿಂಗನಹಳ್ಳಿ ಗ್ರಾಮಕ್ಕೆ ಸೇರಿರುವ 516 ಎಕರೆ ಭೂಮಿಯು ಐಟಿಐಆರ್ ನಿರ್ಮಾಣಕ್ಕೆ ಒಳಪಡುತ್ತಿದೆ. ಭೂ ಸ್ವಾಧೀನಕ್ಕೆ ಒಳಪಡುತ್ತಿರುವ ಪ್ರತಿಯೊಬ್ಬ ರೈತರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಸ್ವಾಧೀನಕ್ಕೆ ಒಳಪಡುತ್ತಿರುವ ಕೃಷಿ ಭೂಮಿಗೆ ಮಾರುಕಟ್ಟೆ ಬೆಲೆಗಿಂತಲೂ ನಾಲ್ಕು ಪಟ್ಟು ಹೆಚ್ಚುವರಿ ಬೆಲೆ ನೀಡಬೇಕು' ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry