ಫಲಾನುಭವಿಗಳಿಗೆ ಆಸರೆ ಮನೆಗಳ ಹಸ್ತಾಂತರ

7

ಫಲಾನುಭವಿಗಳಿಗೆ ಆಸರೆ ಮನೆಗಳ ಹಸ್ತಾಂತರ

Published:
Updated:
ಫಲಾನುಭವಿಗಳಿಗೆ ಆಸರೆ ಮನೆಗಳ ಹಸ್ತಾಂತರ

ಫಿರೋಜಾಬಾದ (ಗುಲ್ಬರ್ಗ ತಾ.): ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ‘ಆಸರೆ’ ಯೋಜನೆಯಡಿ ಇನ್ಫೋಸಿಸ್ ಸಂಸ್ಥೆಯು ನಿರ್ಮಿಸಿದ ಮನೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಗುಲ್ಬರ್ಗ ಜಿಲ್ಲೆಯ 12 ಗ್ರಾಮಗಳಲ್ಲಿ ಇನ್ಫೋಸಿಸ್ ಸಂಸ್ಥೆಯು ಒಟ್ಟು 1,248 ಮನೆಗಳನ್ನು ನಿರ್ಮಿಸಿದ್ದು, ಫಿರೋಜಾಬಾದ ಗ್ರಾಮದ ಹೊರವಲಯದಲ್ಲಿ ನಡೆದ ಸಮಾರಂಭದಲ್ಲಿ 100 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಇನ್ಫೋಸಿಸ್‌ನ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು ‘ಮೇ ತಿಂಗಳ ಅಂತ್ಯದೊಳಗೆ ಶೇ 90ರಷ್ಟು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು’ ಎಂದು ಪ್ರಕಟಿಸಿದರು.ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಇಂಥದೊಂದು ಯೋಜನೆ ಕೈಗೆತ್ತಿಕೊಂಡಿದೆ. ಸಂಘ-ಸಂಸ್ಥೆಗಳು ಹಾಗೂ ಮಠಾಧಿಪತಿಗಳ ನೆರವಿನೊಂದಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ, ಪ್ರವಾಹಪೀಡಿತರಿಗೆ ನೀಡಲಾಗುತ್ತಿದೆ ಎಂದರು.‘ಸರ್ಕಾರ ಜಮೀನು, ನೀರು, ವಿದ್ಯುತ್ ಹಾಗೂ ರಸ್ತೆಯಂತಹ ಮೂಲಸೌಲಭ್ಯ ಕಲ್ಪಿಸಿದರೆ, ದಾನಿಗಳು ಮನೆ ಕಟ್ಟಿಸಿಕೊಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಲು ಬಂದಿರುವ ದಾನಿಗಳ ನೆರವನ್ನು ಸರ್ಕಾರ ಸದಾ ಸ್ಮರಿಸಲಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಗೋಪಾಲಕೃಷ್ಣನ್, ನಿರ್ದೇಶಕ ಟಿ.ವಿ.ಮೋಹನದಾಸ್ ಪೈ, ಹಿರಿಯ ಉಪಾಧ್ಯಕ್ಷ ಯು.ರಾಮದಾಸ್ ಕಾಮತ್, ಕಾರ್ಯಕ್ರಮ ವ್ಯವಸ್ಥಾಪಕ ವಾಸುದೇವರಾವ ದೇಶಪಾಂಡೆ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ರೇವುನಾಯಕ ಬೆಳಮಗಿ, ಶಾಸಕ ಮಾಲಿಕಯ್ಯ ಗುತ್ತೇದಾರ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry