`ಫಲಾನುಭವಿಗಳ ಆಯ್ಕೆ ದೊಡ್ಡ ಸವಾಲು'

7

`ಫಲಾನುಭವಿಗಳ ಆಯ್ಕೆ ದೊಡ್ಡ ಸವಾಲು'

Published:
Updated:

ಧಾರವಾಡ: `ಸರ್ಕಾರದ ಯೋಜನೆಗಳು ಉದ್ದೇಶಿತ ಜನರಿಗೆ ಮುಟ್ಟುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಫಲಾನುಭವಿಗಳ ಆಯ್ಕೆಯೇ ಒಂದು ದೊಡ್ಡ ಸವಾಲಾಗಿದೆ. ಸದ್ಯ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ ಇದಕ್ಕೆ ನಿದರ್ಶನ. ಈ ಕುರಿತಂತೆ ಮಾನವ ಅಭಿವೃದ್ಧಿ ವರದಿ ತಯಾರಿಕೆಯಲ್ಲಿ ಬೆಳಕು ಚೆಲ್ಲಿ ಅದನ್ನು ಸುಲಭವಾಗಿಸುವಂತಹ ಕಾರ್ಯಮಾಡಬೇಕಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಇಲ್ಲಿಯ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.`ಗ್ರಾಮೀಣ ಪ್ರದೇಶದಲ್ಲಿ ಭೂರಹಿತ ಕಾರ್ಮಿಕರು ಕೃಷಿಯಿಂದ ವರ್ಷವಿಡಿ ಉದ್ಯೋಗ ಸಿಗದೆ ಅದನ್ನರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಅಂತವರಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾನವ ಅಭಿವೃದ್ಧಿ ಮಾನದಂಡಗಳನ್ವಯ ಆಗಬೇಕಾದ ಸಹಾಯ ಸೌಲಭ್ಯಗಳ ಕುರಿತು ಮಾರ್ಗದರ್ಶಿ ಸೂತ್ರಗಳು ಅವಶ್ಯವಿವೆ. ನಗರ ಪ್ರದೇಶದಲ್ಲೂ ಅನಿಯಂತ್ರಿತ ಬೆಳವಣಿಗೆ ಬಹುದೊಡ್ಡ ಸಮಸ್ಯೆಯಾಗಿದ್ದು, ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಹಿಂದೆಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ' ಎಂದರು.ಜಿಲ್ಲೆಯ ಮಾನವ ಅಭಿವೃದ್ಧಿ ವರದಿಯ ಗುಣಮಟ್ಟದ ಪರಿಶೀಲನಾ ನೋಡಲ್ ಅಧಿಕಾರಿ ಪ್ರೊ.ಎ.ಆರ್.ಚಂದ್ರಶೇಖರ ಮಾತನಾಡಿ, `ಮಾನವ ಅಭಿವೃದ್ಧಿ ಎನ್ನುವುದು ಸಾಮಾನ್ಯವಾಗಿರುವ ಆರ್ಥಿಕ ಅಭಿವೃದ್ಧಿಗಿಂತ ಭಿನ್ನವಾಗಿದೆ. 1990ರಿಂದೀಚೆಗೆ ಇದು ಹೆಚ್ಚಿನ ಗಮನ ಸೆಳೆದಿದೆ. ಇಲ್ಲಿ ಶಿಕ್ಷಣ, ಆರೋಗ್ಯ ಹಾಗೂ ದೇಶದ ವಿವಿಧ ಸಂಪನ್ಮೂಲಗಳ ಮೇಲೆ ಜನರ ಅಧಿಕಾರದ ಅಂಶಗಳನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ.ವಂಚಿತರಿಗೆ, ಅಂಚಿನವರೆಗೆ ಹಾಗೂ ದುಡಿಯುವ ವರ್ಗದವರಿಗೆ ಅಭಿವೃದ್ಧಿ ಫಲ ತಾನೇ ತಾನಾಗಿ ದೊರೆಯುವುದಿಲ್ಲ ಎನ್ನುವುದು ಎಲ್ಲರ ಅನುಭವ. ಅದಕ್ಕಾಗಿ ಆ ಫಲ ಅವರಿಗೆ ದೊರಕುವಂತೆ ಮಾಡಲು ಈ ಮಾನವ ಅಭಿವೃದ್ಧಿ ಸೂಚ್ಯಂಕಗಳ ಬಳಕೆ ಪ್ರಾರಂಭಗೊಂಡಿದೆ. ಒಂದರ್ಥದಲ್ಲಿ ರಾಜ್ಯದಲ್ಲಿ ಡಾ.ನಂಜುಂಡಪ್ಪ ವರದಿ ಸಲ್ಲಿಸಿದ್ದು, ಈ ಸೂಚ್ಯಂಕಗಳಲ್ಲಿನ ಒಂದಂಶವಾದ ಪ್ರಾದೇಶಿಕ ಅಸಮಾನತೆ ಆಧಾರದಲ್ಲಿ ಈಗ ಸಮಗ್ರ ಅಂಶಗಳನ್ನು ಗಣನೆಗೆ ತಾಲ್ಲೂಕು ಮಟ್ಟದಿಂದ ಸೂಚ್ಯಂಕಗಳನ್ನು ರೂಪಿಸಲಾಗುತ್ತಿದೆ' ಎಂದು ಹೇಳಿದರು.`ಧಾರವಾಡ ಜಿಲ್ಲೆಯ ಶೇ 40ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2012ರಲ್ಲಿ ಜಿಲ್ಲೆಯ ಸರಾಸರಿ ಸಾಕ್ಷರತೆ ಶೇ 80ರಷ್ಟಿತ್ತು. ಆದರೆ ಇದರಲ್ಲಿ ಮಹಿಳೆಯರ ಸಾಕ್ಷರತೆ ಕೇವಲ ಶೇ 65ರಷ್ಟಿದೆ. ಕಲಘಟಗಿ ತಾಲ್ಲೂಕು ಸಾಕ್ಷರತಾ ದೃಷ್ಟಿಯಿಂದ ಹಿಂದುಳಿದಿದೆ ಎಂದು ತಿಳಿಸಿದರು.ಜಿ.ಪಂ. ಸಿಇಒ ಪಿ.ಎ.ಮೇಘಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, `ಕ್ಲಿಷ್ಟ ಹಾಗೂ ಸಂಕೀರ್ಣ ಸ್ವಭಾವದ ಈ ವರದಿಯ ಕುರಿತು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸ್ಪಷ್ಟತೆ ತರುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ' ಎಂದರು.ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಟಿ.ಬಾಗಲಕೋಟಿ, `ಸಮಾಜದ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಜೀವನಮಟ್ಟಗಳು ಸಾಧನೆ ಪ್ರಮುಖ ಪಾತ್ರವಹಿಸುತ್ತವೆ. ಅವರ ದೀರ್ಘ, ಆರೋಗ್ಯಯುತ ಹಾಗೂ ಸೃಜನಾತ್ಮಕ ಬದುಕಿಗೆ ಪೂರಕವಾಗಿರುವುದೇ ಈ ಅಭಿವೃದ್ಧಿಯ ಮೂಲ ಉದ್ದೇಶವಾಗಿದೆ' ಎಂದು ಹೇಳಿದರು.ಜಿ.ಪಂ. ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ್, ಸಿ.ಪಿ.ಓ. ಎ.ಡಿ.ದೊಡ್ಡಮನಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry