ಶುಕ್ರವಾರ, ಮೇ 7, 2021
21 °C

ಫಲಾನುಭವಿಗೆ ಗುಡಿಸಲೇ ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಗುಡಿಸಲು ರಹಿತ ಗ್ರಾಮಗಳ ಪರಿಕಲ್ಪನೆಯಲ್ಲಿ ಎರಡು ವರ್ಷಗಳ ಹಿಂದೆ ಜಾರಿಗೆ ಬಂದ ಕೇಂದ್ರ ಸರ್ಕಾರದ ನೆರವಿನ ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗೆ ಹಣ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣ ವಿಳಂಬಗೊಂಡಿದ್ದು ಗುಡಿಸಲೇ ಗತಿಯಾಗಿರುವುದು ಸೋಮವಾರ ಕಂಡುಬಂದಿತು.ಯೋಜನೆಗೆ ತಾಲ್ಲೂಕಿನಲ್ಲಿ ಚಾಲನೆ ನೀಡಿದಾಗ ಹಿರೇಮನ್ನಾಪೂರ ಗ್ರಾಮದ ಹನುಮಂತಪ್ಪ ಕಜ್ಜಿ ಎಂಬ ಫಲಾನುಭವಿಯ ಗುಡಿಸಲು ಪಕ್ಕದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಸ್ವತಃ ಭೂಮಿಪೂಜೆ ನೆರವೇರಿಸಿ ಶೀಘ್ರದಲ್ಲಿ ಫಲಾನುಭವಿಗೆ ಮನೆ ನಿರ್ಮಾಣಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗೆ ತಾಕೀತು ಮಾಡಿದ್ದರು.ಗುಡಿಸಲಿನಲ್ಲಿ ವಾಸಿಸುವ ಹನಮಪ್ಪ ಸ್ವಂತ ಮನೆಯ ಕನಸು ಕಂಡಿದ್ದ ಆದರೆ ಎರಡು ವರ್ಷಗಳು ಉರುಳಿದರೂ ಮನೆ ನೆಲಬಿಟ್ಟು ಮೇಲೇಳದ ಕಾರಣ ಮನೆ ಆಕಾಂಕ್ಷಿ ಫಲಾನುಭವಿಗೆ ಮುರುಕು ಗುಡಿಸಲೇ ಗತಿಯಾಗಿದ್ದು ಮತ್ತೆ ಮಳೆಗಾಳಿಗೆ ಮೈಒಡ್ಡುವಂಥ ಸ್ಥಿತಿಗೆ ಒಗ್ಗಿಕೊಳ್ಳುವಂತಹ ಅನಿವಾರ್ಯತೆ ಫಲಾನುಭವಿಗೆ ಎದುರಾಗಿದೆ.ಯೋಜನೆಯ ನಿಯಮದಂತೆ ಮನೆಗಳನ್ನು ಫಲಾನುಭವಿಗಳೇ ಕಟ್ಟಿಕೊಳ್ಳಬೇಕು, ನಿರ್ಮಾಣಕ್ಕೆ ಅನುಗುಣವಾಗಿ ಎಂಜಿನಿಯರ್ ನೀಡುವ ವರದಿಯ ಆಧಾರದ ಮೇಲೆ ಹಂತ ಹಂತವಾಗಿ ಚೆಕ್ ಮೂಲಕ ಹಣ ಸಂದಾಯ ಮಾಡಲಾಗುತ್ತದೆ. ಆದರೆ ಒಂದು ಕಂತು ಬಿಡುಗಡೆಯಾಗಿದ್ದು ಉಳಿದ ಕಂತುಗಳು ಈವರೆಗೂ ಬಿಡುಗಡೆಯಾಗಿಲ್ಲ ಎಂದು ಗೊತ್ತಾಗಿದೆ.ಗುಡಿಸಲು ವಾಸಿಗಳು, ಅರ್ಹ ಬಡವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬೇಕು ಆದರೆ, ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಮನೆ ಇದ್ದವರು, ಉಳ್ಳವರು ಸಹ ಈ ಯೋಜನೆಯಲ್ಲಿ ಸೇರಿದ್ದು ಈ ವಸತಿ ಯೋಜನೆಯು ಸಹ ಹತ್ತರಲ್ಲಿ ಹನ್ನೊಂದು ಎನ್ನುವಂತಾಗಿರುವುದು ವಿಪರ್ಯಾಸವಾಗಿದೆ. ಅಲ್ಲದೇ ಪ್ರಥಮವಾಗಿ ಭೂಮಿ ಪೂಜೆ ನೆರವೇರಿಸಿದ ಮನೆಯೇ ಅಪೂರ್ಣ ಸ್ಥಿತಿಯಲ್ಲಿದ್ದರೆ ತಾಲ್ಲೂಕಿನ ಉಳಿದ ಗ್ರಾಮಗಳಲ್ಲಿನ ಸ್ಥಿತಿ ಹೇಗಿರಬಹುದು ಎಂಬ ಅನುಮಾನ ಸಾರ್ವಜನಿಕರದ್ದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.