ಫಲಾನುಭವಿಗೆ ನಗದು ಬದಲು ಸ್ಮಾರ್ಟ್ ಕಾರ್ಡ್

7

ಫಲಾನುಭವಿಗೆ ನಗದು ಬದಲು ಸ್ಮಾರ್ಟ್ ಕಾರ್ಡ್

Published:
Updated:

ಗುಲ್ಬರ್ಗ: ಕಂತೆಗಟ್ಟಲೇ ಹಣವನ್ನು ಒಮ್ಮೆಲೇ ಒಯ್ದು ಹಳ್ಳಿಯಲ್ಲಿ ವಿತರಿಸುವ ಗೋಜಿಲ್ಲ. ಫಲಾನುಭವಿ ಊರಲ್ಲಿ ಇಲ್ಲದೇ ಹೋದಾಗ ಬೇರೊಬ್ಬರ ಕೈಗೆ ಹಣ ಕೊಡಬೇಕೇ? ಬೇಡವೇ? ಎಂಬ ಗೊಂದಲವಿಲ್ಲ. ತಂತ್ರಜ್ಞಾನದ ನೆರವಿನಿಂದ ವಹಿವಾಟು ತೀರ ಸರಳ...ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾಗಿ ನಗದು ರೂಪದಲ್ಲಿ ಕೊಡುವ ಬದಲಿಗೆ  `ಸ್ಮಾರ್ಟ್ ಕಾರ್ಡ್' ಮೂಲಕ ವಿತರಿಸುವ ಯೋಜನೆ ಜಿಲ್ಲೆಯಲ್ಲಿ ಸಫಲವಾಗಿದೆ. ಮಾಹಿತಿ ತಂತ್ರಜ್ಞಾನ ಬಳಕೆಯ ಈ ವಿಧಾನದಲ್ಲಿ ಫಲಾನುಭವಿಗಳು ಬೇಕಾದಾಗ ಅಗತ್ಯ ಮೊತ್ತದಷ್ಟು ಮಾತ್ರ ಹಣ ಪಡೆಯಲು ಅನುಕೂಲವಾಗಿದೆ.ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಇನ್ಫೋಸಿಸ್ ಪ್ರತಿಷ್ಠಾನದ ನೆರವಿನೊಂದಿಗೆ ಆರಂಭಿಸಿದ `ಪರಿಶುದ್ಧ ಯೋಜನೆ'ಯು ಹೈದರಾಬಾದ್ ಕರ್ನಾಟಕದಲ್ಲಿ 10,000 ಶೌಚಾಲಯ ನಿರ್ಮಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಫಲಾನುಭವಿಗಳಿಗೆ 8,000 ರೂಪಾಯಿ ನೆರವು ಕೊಡುತ್ತದೆ. ಉಳಿದ ಮೊತ್ತವನ್ನು ಫಲಾನುಭವಿ ಭರಿಸಬೇಕು. ಅಗತ್ಯವಿದ್ದಲ್ಲಿ ಬ್ಯಾಂಕ್ ಸಾಲದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.ಶೌಚಾಲಯ ನಿರ್ಮಿಸಿಕೊಂಡ ಬಳಿಕ ಫಲಾನುಭವಿಗೆ ನೆರವನ್ನು ನಗದು ರೂಪದಲ್ಲಿ ಕೊಡಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ `ಸ್ಮಾರ್ಟ್ ಕಾರ್ಡ್' ಮೂಲಕ ಧನಸಹಾಯ ವಿತರಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ `ಆಕ್ಸಿಸ್ ಬ್ಯಾಂಕ್' ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರತಿ ಕಾರ್ಡ್‌ಗೆ ರೂ. 169 ವೆಚ್ಚವಾಗುವ ಸ್ಮಾರ್ಟ್ ಕಾರ್ಡ್‌ಗಳನ್ನು (ಪೇರೋಲ್ ಕಾರ್ಡ್) ಬ್ಯಾಂಕ್ ನೀಡಿದೆ. ಶೌಚಾಲಯ ನಿರ್ಮಾಣ ಪೂರ್ಣಗೊಂಡ ಬಳಿಕ ಫಲಾನುಭವಿಗೆ ಹಣದ ಬದಲಿಗೆ ಕಾರ್ಡ್ ಹಾಗೂ ರಹಸ್ಯಸಂಖ್ಯೆ (ಪಾಸ್‌ವರ್ಡ್) ಕೂಡ ಕೊಡಲಾಗುತ್ತದೆ.ಒಂದು ಹಳ್ಳಿಯಲ್ಲಿ ಹತ್ತಾರು ಜನರಿಗೆ ಕಾರ್ಡ್ ವಿತರಿಸಿದ ಬಳಿಕ, ಯೋಜನೆಯ ಸಂಚಾಲಕರು ಒಟ್ಟು ಮೊತ್ತದ ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡುತ್ತಾರೆ. ಬ್ಯಾಂಕ್‌ನಿಂದ ಆಯಾ `ಸ್ಮಾರ್ಟ್ ಕಾರ್ಡ್'ಗಳ ಖಾತೆಗೆ ಹಣ ಸಂದಾಯವಾಗುತ್ತದೆ.ಐದು ವರ್ಷ ವ್ಯಾಲಿಡಿಟಿ: “ಈ ಕಾರ್ಡ್ ಬಳಸಿ ಯಾವುದೇ ಎಟಿಎಂನಿಂದ ಎಂಟು ಸಾವಿರ ರೂಪಾಯಿ ಮೊತ್ತವನ್ನು ಫಲಾನುಭವಿ ಪಡೆಯಬಹುದು. ಒಮ್ಮೆಲೇ ಅಥವಾ ತನಗೆ ಬೇಕೆನಿಸಿದಷ್ಟೇ ಹಣವನ್ನು ಕಂತುಗಳಲ್ಲಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಡ್‌ನ ಅವಧಿ ಐದು ವರ್ಷ” ಎಂದು `ಪರಿಶುದ್ಧ ಯೋಜನೆ'ಯ ವ್ಯವಸ್ಥಾಪಕ ಶ್ರೀನಿವಾಸ ದೇಶಮುಖ ಮಾಹಿತಿ ನೀಡಿದರು.“ಲಕ್ಷಾಂತರ ರೂಪಾಯಿ ತೆಗೆದುಕೊಂಡು ಹಳ್ಳಿಗೆ ಹೋಗಿ ನೂರಾರು ಜನರಿಗೆ ಅದನ್ನು ವಿತರಿಸುವುದು ಸ್ವಲ್ಪ ಅಪಾಯದ ಕೆಲಸ. ಆದರೆ ಸ್ಮಾರ್ಟ್ ಕಾರ್ಡ್ ವಿತರಣೆ ಬಳಿಕ ಕೆಲಸ ಸುಲಭವಾಗಿದೆ” ಎಂದು ದೇಶಮುಖ ಹೇಳಿದರು.ಸದ್ಯ 4,000 ಸ್ಮಾರ್ಟ್ ಕಾರ್ಡ್‌ಗಳನ್ನು ಬ್ಯಾಂಕ್ ನೀಡಿದ್ದು, ಈ ಪೈಕಿ 3000ಕ್ಕೂ ಹೆಚ್ಚು ಕಾರ್ಡ್ ವಿತರಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಪಡೆಯುವ ಫಲಾನುಭವಿಯು ಒಂದು ವಾರದ ಬಳಿಕ ಹಣ ತೆಗೆಯಬಹುದು. ಅಕ್ಟೋಬರ್ ಮೊದಲ ವಾರದಲ್ಲಿ ಆರಂಭಗೊಂಡ ಈ ವಿಧಾನಕ್ಕೆ ಫಲಾನುಭವಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮಗೆ ಈಗ ಎಲ್ಲ ಹಣದ ಅಗತ್ಯವಿಲ್ಲ. ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳುತ್ತೇವೆ. ಮುಂದೆ ಬೇರೆ ಖರ್ಚಿಗೆ ಬೇಕಾದಾಗ ಮತ್ತೆ ಅವಶ್ಯವಿದ್ದಷ್ಟು ಹಣ ಪಡೆಯುತ್ತೇವೆ. ಒಮ್ಮೆ ಕೈಗೆ ಬಂದ ಹಣ ಖರ್ಚಾಗುವ ಬದಲಿಗೆ ಬೇಕಾದಾಗ ಮಾತ್ರ ಹಣ ತೆಗೆದುಕೊಳ್ಳುವ ಈ ವಿಧಾನದಿಂದ ಅನುಕೂಲವಾಗಿದೆ” ಎಂದು ಫಲಾನುಭವಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry