ಶುಕ್ರವಾರ, ಮೇ 7, 2021
25 °C

ಫಲಿತಾಂಶಕ್ಕೆ ತಡೆ: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಬಿ.ಕಾಂ ಹಾಗೂ ಬಿ.ಎಸ್ಸಿ ಅಂತಿಮ ವರ್ಷದ ಫಲಿತಾಂಶವನ್ನು ಕರ್ನಾಟಕ ವಿಶ್ವವಿದ್ಯಾಲಯ ತಡೆಹಿಡಿದ ಕ್ರಮವನ್ನು ಖಂಡಿಸಿ ಹಾಗೂ ಪ್ರಾಂಶುಪಾಲರ ವರ್ತನೆಯನ್ನು ವಿರೋಧಿಸಿ ಪಟ್ಟಣದ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಂತಿಮ ವರ್ಷದ ಫಲಿತಾಂಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಸೋಮವಾರ ನೂತನ ವಿದ್ಯಾರ್ಥಿಗಳ ಪ್ರವೇಶ ತಡೆದು ಮಹಾವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.ಜೂನ್ 4ರಂದು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ದರ್ಜೆಯ ಬಿ.ಕಾಂ ಹಾಗೂ ಇನ್ನಿತರ  ಅಂತಿಮ ವರ್ಷದ ತರಗತಿಗಳ ಫಲಿತಾಂಶವನ್ನು ಪ್ರಕಟಿಸಿತ್ತು.ಆದರೆ ಪ್ರಥಮ ದರ್ಜೆ ಮಹಾವಿದ್ಯಾಲಯ ಹವಗಿ ಹಳಿಯಾಳ ಕಾಲೇಜಿನ ಫಲಿತಾಂಶವನ್ನು ತಡೆ ಹಿಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಸಂಬಂಧ ಶಿಕ್ಷಣ ಸಚಿವ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಸೋಮವಾರ ಬೆಳಿಗ್ಗೆ ವರೆಗೂ ಸಹ ಯಾವುದೇ ಫಲಿತಾಂಶ ಬಾರದೇ ಇರುವುದರಿಂದ ಮತ್ತಷ್ಟು ಕೋಪಗೊಂಡ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿಯನ್ನು ಒಳಗೆ ಕೂಡಿಹಾಕಿ ಹೊರಗಿನಿಂದ ಬಂದ್ ಮಾಡಿದರು. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬಂದಂತಹ ವಿದ್ಯಾರ್ಥಿ ವೇತನ ಸಹ ನೀಡುತ್ತಿಲ್ಲ. ಗಣಕ ಯಂತ್ರದ ಕೊಠಡಿಗೆ ಪ್ರವೇಶ ತೆಗೆದುಕೊಳ್ಳುತ್ತಿಲ್ಲ. ಕಾಲೇಜಿನ ಒಳ ಆವರಣದಲ್ಲಿ ಎಲ್ಲೆಂದರಲ್ಲಿ ಕಪಾಟು, ಕುರ್ಚಿ, ಮರದ ದಿನ್ನೆಗಳನ್ನು ಸಂಗ್ರಹ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ತೀರಾ ತೊಂದರೆ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳಾದ ವಿ.ಬಿ.ಬಸವರಾಜ, ಅಲ್ತಾಫ್ ಪುಂಗಿ, ಸಂದೀಪ ಮುಕ್ರಿ ಮೊದಲಾದವರು ಆರೋಪಿಸಿದರು.ಮಧ್ಯಾಹ್ನ 12.30ರ ಹೊತ್ತಿಗೆ ಅಂತಿಮ ವರ್ಷದ ಫಲಿತಾಂಶ ಅಂತರ್ಜಾಲದಲ್ಲಿ ಬಿತ್ತರವಾಗುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಫಲಿತಾಂಶ ವೀಕ್ಷಿಸಲು ತೆರಳಿದರು. ಮಧ್ಯಾಹ್ನ 12 ಗಂಟೆಯಾದರೂ ಸಹ ಪ್ರಾಚಾರ್ಯರ ಕೊಠಡಿಯ ಬೀಗ ತೆರೆಯದೇ ಇರುವುದು ಕಂಡುಬಂದಿತು.ಈ ಬಗ್ಗೆ ಕಾಲೇಜಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಕಾಲೇಜಿನಲ್ಲಿ ಯಾವುದೇ ಪ್ರಭಾರ ವ್ಯವಸ್ಥೆಯಿಲ್ಲ ಹಾಗೂ ಪ್ರಾಂಶುಪಾಲರೇ ಬಂದು ತಮ್ಮ ಕೊಠಡಿಯ ಬೀಗ ತೆಗೆಯುತ್ತಾರೆಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.