ಫಲಿತಾಂಶದ ಪ್ರಗತಿಗಾಗಿ ವಿದ್ಯಾರ್ಥಿ ಮನೆಯೆಡೆಗೆ...

7

ಫಲಿತಾಂಶದ ಪ್ರಗತಿಗಾಗಿ ವಿದ್ಯಾರ್ಥಿ ಮನೆಯೆಡೆಗೆ...

Published:
Updated:

ಮುಂಡರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಏನೋ ಒಂದು ರೀತಿಯ ಕಳವಳ. ನಮ್ಮ ಮಗು ಪಾಸಾಗುತ್ತದೆಯೋ ಇಲ್ಲವೊ? ಎಷ್ಟು ಅಂಕಗಳು ಬರುತ್ತವೊ ಏನೊ? ಅಕಸ್ಮಾತ್ ನಪಾಸಾದರೆ ಅಥವಾ ನಿರೀಕ್ಷಿಸಿದಷ್ಟು ಅಂಕಗಳು ಬಾರದಿದ್ದರೆ ಗತಿ ಏನು...? ಇವೆ ಮೊದಲಾದ ಪ್ರಶ್ನೆಗಳು ವಿದ್ಯಾರ್ಥಿ ಹಾಗೂ ಪಾಲಕರನ್ನು ಸದಾ ಕಾಡುತ್ತಿರುತ್ತವೆ.ವಿದ್ಯಾರ್ಥಿಗಳ ಹಾಗೂ ಪಾಲಕರ ಮನದಲ್ಲಿ ಹುದುಗಿರುವ ಇಂಥ ಕಳವಳವನ್ನು ನಿವಾರಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯ ಸಿಬ್ಬಂದಿಯವರು ಫೆ. 2ರಿಂದ 9ರವರೆಗೆ ಒಂದು ವಾರಕಾಲ ಶಾಲಾ ಅವಧಿ ಮುಗಿದ ನಂತರ ಪಾಲಕರ ಮನೆಮನೆಗೆ ತೆರಳಿ ‘ಪಾಲಕರ ಜಾಗೃತಿ ಹಾಗೂ ಮನ ಒಲಿಕೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಒಂದೊಂದು ದಿವಸ ಒಂದೊಂದು ಗ್ರಾಮಕ್ಕೆ ತೆರಳುವ ಶಾಲಾಶಿಕ್ಷಕ ವೃಂದ ತಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಯ ಮನೆಗೆ ತೆರಳಿ ಅವರ ಪಾಲಕರ ಜೊತೆ ವಿದ್ಯಾರ್ಥಿಯ ವಿದ್ಯಾಭ್ಯಾಸ ಕುರಿತು ಸುದೀರ್ಘವಾಗಿ ಚರ್ಚಿಸುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಯಲ್ಲಿ ಸಮಸ್ಯೆ ಕಂಡುಬಂದಲ್ಲಿ ಅಥವಾ ಹೆಚ್ಚು ಗಮನ ಹರಿಸಬೇಕಾದ ವಿಷಯಗಳ ಕುರಿತು ಪಾಲಕರಿಗೆ ಸೂಚಿಸುತ್ತಾರೆ, ವಿದ್ಯಾರ್ಥಿಯು ಈ ಪೂರ್ವದಲ್ಲಿ ಜರುಗಿದ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳು, ವಿದ್ಯಾರ್ಥಿಗೆ ಆಸಕ್ತಿ ಹಾಗೂ ನಿರಾಸಕ್ತಿಯ ವಿಷಯಗಳು, ವಿದ್ಯಾರ್ಥಿಯ ಇನ್ನಿತರೆ ಆಸಕ್ತಿ ಇವೆ ಮೊದಲಾದ ವಿಷಯಗಳ ಕುರಿತು ಪಾಲಕರೊಂದಿಗೆ ಎಲ್ಲರೂ ಒಟ್ಟಾಗಿ ಚರ್ಚಿಸುತ್ತಾರೆ. ಪರೀಕ್ಷಾ ಸಮಯ ಸಮೀಪಿಸುತ್ತಿದ್ದು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಮಗುವನ್ನು ಮನೆಗೆಲಸಕ್ಕೆ ಬಳಸಿಕೊಳ್ಳದಂತೆ ಪಾಲಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ.ತಾಲ್ಲೂಕಿನ ಶಿಂಗಟಾಲೂರ ಈರಣ್ಣನ ಗುಡ್ಡದಲ್ಲಿ ಕಳೆದ 29 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಸ್ತುತ ವರ್ಷ 106 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ. ತಾಲ್ಲೂಕಿನ ಶೀರನಹಳ್ಳಿ, ಗಂಗಾಪುರ, ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಬೆಣ್ಣಿಹಳ್ಳಿ ಮೊದಲಾದ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶಾಲಾ ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ಕುರಿತಂತೆ ಶಾಲೆಯಲ್ಲಿ ಸಭೆಗಳನ್ನು ಮಾಡಿ, ಕೇವಲ ಮಕ್ಕಳೊಂದಿಗೆ ಚರ್ಚಿಸಿದರೆ ಸಾಲದು. ಅದರ ಜೊತೆಗೆ ಸಮಯವಿದ್ದಾಗ ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಪಾಲಕರ ಜೊತೆ ಮಗವಿನ ಅಭ್ಯಾಸ ಹಾಗೂ ಅವನ ದೈನಂದಿನ ಚಟುವಟಿಕೆಗಳ ಕುರಿತು ತಿಳಿಹೇಳುವುದು ಬಹು ಮುಖ್ಯ’ ಎಂದು ತಿಳಿಸಿದರು.‘ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮರಾಜು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ನಮ್ಮ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಈ ಪ್ರಯತ್ನ ಪರೀಕ್ಷಾ ಫಲಿತಾಂಶದಲ್ಲಿ ಖಂಡಿತ ಸುಧಾರಣೆ ತರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಭಾಗ್ಯಲಕ್ಷ್ಮಿ ಇನಾಮತಿ, ಯು.ಆರ್.ಸಿರಸಗಿ, ಎಸ್.ಉಮಾದೇವಿ, ನಂದಾ ಪೈಲ್, ಶಿಕ್ಷಕರಾದ ಬಿ.ಜೆ.ಲಮಾಣಿ, ಯು.ಎಂ.ಬೂದಿಹಾಳ, ಟಿ.ಎಲ್.ಮುಳವಳ್ಳಿ, ಎಂ.ಬಿ.ಮೇಟಿ ಪಾಲಕರ ಜಾಗೃತಿ ಹಾಗೂ ಮನ ಒಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry