ಗುರುವಾರ , ನವೆಂಬರ್ 14, 2019
18 °C

ಫಲಿತಾಂಶದ ಬಳಿಕ ಬಿಜೆಪಿ ಮೂಲೆಗುಂಪು: ಬಿಎಸ್‌ವೈ

Published:
Updated:

ಬೆಳಗಾವಿ: `ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿ ಮೂಲೆಗುಂಪಾಗಲಿದೆ' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನನ್ನ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರಿಂದ ಬಿಜೆಪಿ 120 ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನನಗೆ ಮೋಸ ಮಾಡಿದ ಜಗದೀಶ ಶೆಟ್ಟರ್‌ಗೆ 10 ವರ್ಷಗಳ ಸಮಯ ನೀಡುತ್ತೇನೆ, ರಾಜ್ಯದಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದು ತೋರಿಸಲಿ' ಎಂದು ಸವಾಲು ಹಾಕಿದರು.`ರಾಷ್ಟ್ರೀಯ ಪಕ್ಷ ಅಸ್ತಿತ್ವ ಕಳೆದುಕೊಂಡಿದ್ದು, ತೃತೀಯ ರಂಗದ ನಿರ್ಮಾಣವಾಗಲಿದೆ. ಚುನಾವಣೆ ಫಲಿತಾಂಶದ ಬಳಿಕ ಪ್ರಾದೇಶಿಕ ಪಕ್ಷದ ಆಡಳಿತ ಇರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು, ರಾಷ್ಟ್ರಮಟ್ಟದಲ್ಲಿ ತೃತೀಯ ರಂಗವನ್ನು ರಚಿಸಲಾಗುವುದು. ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದೆಡೆಗೆ ತರಲು ನಾನೇ ಮುಂದಾಳತ್ವ ವಹಿಸಿ ವೇದಿಕೆ ನಿರ್ಮಿಸುತ್ತೇನೆ' ಎಂದು ಹೇಳಿದರು.`ವೀರೇಂದ್ರ ಪಾಟೀಲರು ಅಧಿಕಾರ ಕಳೆದುಕೊಂಡ ಬಳಿಕ ಅವರಿಂದ ಉಳಿದ ನಾಯಕರು ದೂರ ಸರಿದಿದ್ದರು. ಆದರೆ, ನಾನು ಅಧಿಕಾರ ಕಳೆದು ಕೊಂಡ ಬಳಿಕವೂ ವ್ಯಾಪಕ ಬೆಂಬಲ ದೊರೆಯುತ್ತಿರುವುದರಿಂದ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೆಳೆಯಲು ಉತ್ತಮ ವಾತಾವರಣ ಇದೆ' ಎಂದು ಅಭಿಪ್ರಾಯಪಟ್ಟರು.ಕ್ಷಮೆಯಾಚನೆ:

`ದೇಶದಲ್ಲಿ ಇರುವ ಬೆರಳೆಣಿಕೆಯಷ್ಟು ಪ್ರಾಮಾಣಿಕ ನಾಯಕರಲ್ಲಿ ಎಲ್.ಕೆ. ಅಡ್ವಾಣಿ ಸಹ ಒಬ್ಬರಾಗಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನಿಂದ ಅವರು ಹಣ ಪಡೆದಿದ್ದಾರೆ ಎಂದು ಧನಂಜಯ ಕುಮಾರ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಧನಂಜಯ ಕುಮಾರ ಪರವಾಗಿ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಈ ಕುರಿತು ಕ್ಷಮೆ ಕೋರಿ ಅಡ್ವಾಣಿ ಅವರಿಗೂ ಪತ್ರವನ್ನು ಬರೆಯುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.`ಕೆಜೆಪಿ ಪರ್ಯಾಯ ಶಕ್ತಿ ಆಗಲಿದೆ'

`ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಪರ್ಯಾಯ ಶಕ್ತಿಯಾಗಿ ಕೆಜೆಪಿಗೆ ಜನರು ಅಧಿಕಾರವನ್ನು ನೀಡಲಿದ್ದಾರೆ' ಎಂದು ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.`210 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. 11 ಮಹಿಳೆಯರು ಹಾಗೂ 12 ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೇವೆ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇದ್ದಾಗ ಜನರಿಂದ ಬೆಂಬಲ ಸಿಕ್ಕಂತೆ ಕೆಜೆಪಿ ಅಧ್ಯಕ್ಷನಾಗಿದ್ದಾಗಲೂ ಲಭಿಸುತ್ತಿದೆ. ರಾಮಕೃಷ್ಣ ಹೆಗಡೆ ಅನುಯಾಯಿಯಾಗಿದ್ದ ಜನತಾ ಪರಿವಾರದ ಶೇ. 90ರಷ್ಟು ನಾಯಕರು ಕೆಜೆಪಿಯ ಬೆಂಬಲಕ್ಕೆ ನಿಂತಿದ್ದಾರೆ.ಮುಸ್ಲೀಮರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಕ್ಕಿರುವುದು ಪಕ್ಷದ ಶಕ್ತಿ ಇನ್ನಷ್ಟು ಹೆಚ್ಚಿದಂತಾಗಿದೆ' ಎಂದು ಹೇಳಿದರು.`ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳಿಂದ `ಶೂನ್ಯ' ಸ್ಥಿತಿ ನಿರ್ಮಾಣವಾಗಿದೆ. ಅಳಿವಿನ ಅಂಚಿನಲ್ಲಿರುವ ಬಿಜೆಪಿ, ಅಧಿಕಾರಕ್ಕಾಗಿ ಹೊಂಚು ಹಾಕುತ್ತಿರುವ ಕಾಂಗ್ರೆಸ್ ಪರಿಹಾರವಲ್ಲ. ಬರಿ ಸರ್ಕಾರದ ಬಲದಾವಣೆ ಮಾಡಿದರೆ ಪ್ರಯೋಜನವಿಲ್ಲ. ಸಮರ್ಥವಾದ ಪರ್ಯಾಯ ವ್ಯವಸ್ಥೆ ತರಲು ಜನರು ಕೆಜೆಪಿಗೆ ಬೆಂಬಲ ಸೂಚಿಸಬೇಕು' ಎಂದು ಹೇಳಿದರು.`ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಭ್ರಷ್ಟಾಚಾರದ ಉರುಳಿನಲ್ಲಿ ಸಿಲುಕಿಕೊಂಡಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬೆಲೆ ಏರಿಕೆ, ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತದಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಲೋಕಸಭೆಯಲ್ಲಿ ಪ್ರತಿ ಪಕ್ಷವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ' ಎಂದು ಅಭಿಪ್ರಾಯಪಟ್ಟರು.`ಕಳೆದ 6 ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಜಗದೀಶ ಶೆಟ್ಟರ್ ನಾಮಕಾವಾಸ್ತೆಗಾಗಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅವಧಿಯಲ್ಲಿ ಹಗಲು ದರೋಡೆ ನಡೆದಿದೆ. ಈ ಬಗ್ಗೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಅಧಿಕಾರಿಗಳನ್ನು ಕೇಳಿದರೆ ಸೂಕ್ತ ದಾಖಲೆ ದೊರೆಯುತ್ತದೆ.ಅಧಿಕಾರಕ್ಕೆ ಕಚ್ಚಾಟ: `ಚುನಾವಣೆ ಫಲಿತಾಂಶಕ್ಕಿಂತ ಮೊದಲೇ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ನಲ್ಲಿ ಕಚ್ಚಾಟ ಶುರುವಾಗಿರುವುದು `ಕೂಸು ಹುಟ್ಟುವ ಮೊದಲೇ ಕುಲಾವಿ' ಎಂಬಂತಾಗಿದೆ. ಇದು ಜನರಲ್ಲಿ ಗೊಂದಲ ಮೂಡಿಸಿದೆ. ಸಿದ್ದರಾಮಯ್ಯ ಸಿಎಂ ಆಗಬಾರದು ಎಂಬ ಉದ್ದೇಶದಿಂದ ಅವರನ್ನು ಸೋಲಿಸಲು ಖರ್ಗೆ ಬೆಂಬಲಿಗರು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಒಳಗಿನ ಕಚ್ಚಾಟವು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ' ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.ಕೆಜೆಪಿ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜು ಟೋಪಣ್ಣವರ, ನಿಪ್ಪಾಣಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನಿಯಾಜ್ ಗೌಸ್ ಪಠಾಣ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸುನಂದಾ ಪಾಟೀಲ, ರಾಯಬಾಗ ಕ್ಷೇತ್ರದ ಅಭ್ಯರ್ಥಿ ಬಾಳಾಸಾಹೇಬ ವಡ್ಡರ, ಕಲ್ಯಾಣರಾವ್ ಮುಚಳಂಬಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)