ಮಂಗಳವಾರ, ನವೆಂಬರ್ 12, 2019
24 °C

`ಫಲಿತಾಂಶ'ದ ವೇಳೆ ಪಾಠ!

Published:
Updated:

ಕಾರವಾರ:  ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿರುವ ಚುನಾವಣಾ ಆಯೋಗ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸೇವೆಯನ್ನೂ ಬಳಸಿಕೊಂಡಿದೆ. ಇದಕ್ಕಾಗಿ ಮತದಾರರ ಜಾಗೃತಿ ಸಮಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಿಸಿದೆ.ಆಯೋಗದ ಸೂಚನೆಯಂತೆ ಶಿಕ್ಷಣ ಇಲಾಖೆ ಶಾಲೆಗೆ ಬರುವ ಪಾಲಕರಲ್ಲಿ ಮತದಾನದ ಕುರಿತ ಜಾಗೃತಿ ಮೂಡಿಸಲು ವಿವಿಧ ಹಂತಗಳಲ್ಲಿ ಕಾರ್ಯಕ್ರಮವನ್ನು  ಹಾಕಿಕೊಂಡಿದೆ.ಒಂದರಿಂದ ಒಂಬತ್ತನೇ ತರಗತಿ ಫಲಿತಾಂಶ ಬುಧವಾರ (ಏ.10) ಪ್ರಕಟವಾಗಲಿದ್ದು ಫಲಿತಾಂಶ ಪಡೆಯಲು ಶಾಲೆಗೆ ಬರುವ ಪಾಲಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಸ್ಥರಿಗೆ, ಸಿಆರ್‌ಪಿ (ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ), ಬಿಆರ್‌ಪಿಗಳಿಗೆ (ಕ್ಷೇತ್ರ ಸಂಪನ್ಮೂಲ ವ್ಯಕ್ತಿ) ಇಲಾಖೆ ಸೂಚನೆ ನೀಡಿದೆ.`ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತದಾನದ ಮಾಡುವ ಸಂಬಂಧ ಯಾವುದೇ ಆಮಿಷಕ್ಕೆ ಒಳಗಾಗದೆ ಮತಚಲಾಯಿಸುವಂತೆ ನೆರವು ನೀಡುತ್ತೇವೆ' ಎಂದು ವಿದ್ಯಾರ್ಥಿಗಳು ಪ್ರಮಾಣ ಮಾಡಿದ್ದಾರೆ.ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು 16 ವರ್ಷ ವಯೋಮಿತಿ ಒಳಗಿರುವುದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಆದರೆ, ವಿದ್ಯಾರ್ಥಿಗಳು ಪಾಲಕರಿಗೆ ವಿಷಯ ತಿಳಿಸಲಿದ್ದಾರೆ ಎನ್ನುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ ಎನ್ನುತ್ತಾರೆ ಡಿಡಿಪಿಐ ರೇವಣ ಸಿದ್ದಪ್ಪ.ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳುತ್ತಿರುವ ಮತದಾರರ ಶಿಕ್ಷಣ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳ ಸೇವೆಯನ್ನೂ ಪಡೆಯಲಾಗುತ್ತಿದೆ. ವಿದ್ಯಾರ್ಥಿಗಳನ್ನು ಬಳಸಿಕೊಂಡರೆ ಅದರ ನೇರ ಪರಿಣಾಮ ಸಮುದಾಯದ ಮೇಲೆ ಆಗಲಿದೆ ಎನ್ನುವ ಲೆಕ್ಕಚಾರ ಇಲಾಖೆಯದ್ದು.

ಪ್ರತಿಕ್ರಿಯಿಸಿ (+)