ಬುಧವಾರ, ಜೂಲೈ 8, 2020
23 °C

ಫಲಿತಾಂಶ ಏನೇ ಇರಲಿ; ಕ್ರಿಕೆಟ್ ಗೆಲ್ಲಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಲಿತಾಂಶ ಏನೇ ಇರಲಿ; ಕ್ರಿಕೆಟ್ ಗೆಲ್ಲಲಿದೆ

ಢಾಕಾ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ‘ಕಿಕ್’ ನೀಡುವ ಪಂದ್ಯಕ್ಕೆ ಕ್ಷಣಗಣನೆ  ಶುರುವಾಗುತ್ತಿದೆ. ಅದು ಭಾರತ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಹೋರಾಟ. ‘ಹೈ ವೋಲ್ಟೇಜ್’ ಪಂದ್ಯವದು!ಪ್ರೇಕ್ಷಕರು, ವಿಶ್ವಕಪ್ ಆಯೋಜಕರು, ಜಾಹೀರಾತುದಾರರು ಸೇರಿದಂತೆ ಎಲ್ಲರೂ ಇಂತಹ ಒಂದು ಪಂದ್ಯಕ್ಕಾಗಿ ಕಾದು ಕುಳಿತಿದ್ದರು. ಅದಕ್ಕೆಲ್ಲಾ ತನ್ನದೇ ಆದ ಕಾರಣಗಳಿವೆ. ಈಗ ಅವರೆಲ್ಲರ ಆಸೆ ಈಡೇರಿದೆ. ಜೊತೆಗೆ 12 ವರ್ಷಗಳ ಆಸ್ಟ್ರೇಲಿಯಾದ ವಿಶ್ವಕಪ್ ಪಾರಮ್ಯಕ್ಕೆ ತೆರೆ ಬಿದ್ದಿರುವುದರಿಂದ ಹೊಸ ಚಾಂಪಿಯನ್ ಯಾರಾಗಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.‘ತುಂಬಾ ದಿನಗಳ ಬಳಿಕ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿಯಾಗುತ್ತಿವೆ. ಇದೊಂದು ಒಳ್ಳೆಯ ಸುದ್ದಿ. ಇದರಿಂದ ಟೂರ್ನಿಗೂ ಒಳ್ಳೆಯದಾಗಲಿದೆ’ ಎಂದು ಟೂರ್ನಿಯ ನಿರ್ದೇಶಕ ಪ್ರೊ.ರತ್ನಾಕರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾರತ-ಪಾಕ್ ನಡುವಿನ ಈ ಪಂದ್ಯವನ್ನು ವರದಿ ಮಾಡಲು ಪಾಕ್ ಪತ್ರಕರ್ತರು ಕೂಡ ತುಂಬಾ ಖುಷಿಯಲ್ಲಿದ್ದಾರೆ. ‘ಸೆಮಿಫೈನಲ್‌ನಲ್ಲಿ ಭಾರತ-ಪಾಕ್ ನಡುವಿನ ಫಲಿತಾಂಶ ಏನೇ ಇರಲಿ, ಕೊನೆಯಲ್ಲಿ ಗೆಲ್ಲುವುದು ಕ್ರಿಕೆಟ್. ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಅದೊಂದು ಅದ್ಭುತ ಪಂದ್ಯವಾಗಲಿದೆ’ ಎನ್ನುತ್ತಾರೆ ಪಾಕ್‌ನ ದಿನಪತ್ರಿಕೆ ‘ಡಾನ್’ನ ಕ್ರೀಡಾ ವರದಿಗಾರ ಖಾಲಿದ್ ಎಚ್.ಖಾನ್.ಅದಕ್ಕೆ ಧ್ವನಿಗೂಡಿಸಿದ್ದು ‘ಜಂಗ್’ ಪತ್ರಿಕೆಯ ಕ್ರಿಕೆಟ್ ವರದಿಗಾರ ಮಜೀದ್ ಖಾನ್ ಬಟ್, ‘ಜಿಯೋ ಟಿವಿ’ಯ ಕ್ರೀಡಾ ವರದಿಗಾರ ಸೊಹೇಲ್ ಇಮ್ರಾನ್ ಹಾಗೂ ‘ದಿ ನ್ಯೂಸ್’ ಪತ್ರಿಕೆಯ ಸಂಪಾದಕ ಖಾಲೀದ್ ಹುಸೇನ್.ಪಾಕ್ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ವರದಿ ಮಾಡಲು ಇವರೆಲ್ಲಾ ಢಾಕಾದಲ್ಲಿದ್ದಾಗ ಮಾತಿಗೆ ಸಿಕ್ಕಿದ್ದರು. ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನೂ ವರದಿ ಮಾಡಿದ ಪಾಕ್ ಪತ್ರಕರ್ತರು ಶನಿವಾರ ಮೊಹಾಲಿಗೆ ತೆರಳಿದರು. ಬಾಂಗ್ಲಾಕ್ಕೆ ಆಗಮಿಸಿದ್ದ ಆ ದೇಶದ ತಂಡದ ಅಭಿಮಾನಿಗಳು ತಂಡವನ್ನು ಹಿಂಬಾಲಿಸಿದ್ದಾರೆ.‘ವಿಶ್ವ ಕ್ರಿಕೆಟ್‌ನಲ್ಲಿ ಇದಕ್ಕಿಂತ ದೊಡ್ಡ ಪಂದ್ಯ ಯಾವುದಿದೆ? ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯನ್ನು ಮೀರಿಸುವಂಥದ್ದು. ಈಗ ಪಾಕ್ ಹಾಗೂ ಭಾರತ ತಂಡಗಳು ಫಾರ್ಮ್‌ನ ಉತ್ತುಂಗದಲ್ಲಿವೆ’ ಎನ್ನುತ್ತಾರೆ ಜಿಯೋ ಟಿವಿಯ ಇಮ್ರಾನ್.ಪಾಕ್‌ಗೆ ಕ್ರಿಕೆಟ್ ಹಿಂತಿರುಗಬಹುದು: ‘ಉಭಯ ದೇಶಗಳ ನೆಲದಲ್ಲಿ ಪಾಕ್-ಭಾರತ ಹಣಾಹಣಿ ನಡೆದು ತುಂಬಾ ದಿನಗಳಾದವು. ಈ ತಂಡಗಳ ಮುಖಾಮುಖಿಗಿಂತ ಈ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ರೋಚಕ ವಿಷಯ ಇಲ್ಲ. ಎರಡೂ ದೇಶಗಳ ಜನರು ಕ್ರಿಕೆಟ್‌ಅನ್ನು ಗಾಢವಾಗಿ ಪ್ರೀತಿಸುತ್ತಾರೆ. ಭಾರತದ ಎದುರು ಆಡಲು ನಾನು ತುಂಬಾ ಇಷ್ಟಪಡುತ್ತೇನೆ’ ಎಂದು ಪಾಕ್ ತಂಡದ ಕೋಚ್ ವಕಾರ್ ಯೂನಿಸ್ ಶುಕ್ರವಾರ ಢಾಕಾದಿಂದ ಮೊಹಾಲಿಗೆ ತೆರಳುವ ಮೊದಲು ತಿಳಿಸಿದರು.‘ಪಾಕ್ ಕ್ರಿಕೆಟ್‌ನಲ್ಲಿ ತುಂಬಾ ವಿವಾದಗಳಿವೆ. ಇದು ನೋವು ಉಂಟು ಮಾಡುವ ವಿಷಯ. ನಮ್ಮ ದೇಶದಲ್ಲಿ ಕ್ರಿಕೆಟ್ ಕೂಡ ನಡೆಯುತ್ತಿಲ್ಲ. ಹಾಗಾಗಿ ಪಾಕ್ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಬೇಕು. ಆಗ ನಮ್ಮ ಮೇಲೆ ಜಗತ್ತಿಗೆ ನಂಬಿಕೆ ಬರಬಹುದು, ನಮ್ಮ ದೇಶಕ್ಕೆ ಬಂದು ಕ್ರಿಕೆಟ್ ಆಡಬಹುದು’ ಎಂದು ಅವರು ಹೇಳಿದರು.ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ಪಾಕ್‌ಗೆ ಇದುವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. 1992, 1996 (ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್), 1999, 2003ರ ವಿಶ್ವಕಪ್‌ಗಳಲ್ಲಿ ಪಾಕ್ ಸೋಲುಕಂಡಿದೆ. ಆದರೆ ಒಟ್ಟಾರೆ ಫಲಿತಾಂಶ ನೋಡಿದರೆ ಭಾರತಕ್ಕಿಂತ ಶಾಹೀದ್ ಅಫ್ರಿದಿ ಬಳಗ ಮುಂದಿದೆ. ಕಾರಣ ಮುಖಾಮುಖಿಯಾದ ಒಟ್ಟು 119 ಪಂದ್ಯಗಳಲ್ಲಿ ಭಾರತ 46 ಬಾರಿ ಗೆದ್ದಿದ್ದರೆ, ಪಾಕ್ 69 ಬಾರಿ ಜಯ ಗಳಿಸಿದೆ. 4 ಬಾರಿ ಫಲಿತಾಂಶ ಬಂದಿಲ್ಲ.‘ಸೆಮಿಫೈನಲ್ ತಲುಪುವುದು ನಮ್ಮ ಮೊದಲ ಗುರಿ ಎಂದು ವಿಶ್ವಕಪ್‌ಗೆ ಮುನ್ನ ನಾಯಕ ಅಫ್ರಿದಿ ಹೇಳಿದಾಗ ಎಲ್ಲರು ಇದೊಂದು ಜೋಕ್ ಎಂದು ಭಾವಿಸಿದ್ದರು. ಕಾರಣ ತಂಡದಲ್ಲಿದ್ದ ಹಲವು ಸಮಸ್ಯೆಗಳು. ಆದರೆ ಈಗ ಅದ್ಭುತ ಪ್ರದರ್ಶನ ತೋರಿ ತಮ್ಮ ಮಾತನ್ನು ನಿಜವಾಗಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಗೆಲ್ಲಲಿ ಅಥವಾ ಸೋಲಲಿ. ಕಷ್ಟಕಾಲದಲ್ಲೂ ಇಷ್ಟೊಂದು ಚೆನ್ನಾಗಿ ಆಡಿದ ರೀತಿ ಪಾಕ್ ಜನತೆಗೆ ಖುಷಿ ನೀಡಿದೆ’ ಎಂದು ಹೇಳಿದ್ದು ‘ಜಂಗ್’ ಪತ್ರಿಕೆಯ ಮಜೀದ್.‘ಇದೊಂದು ಕನಸಿನ ಪಂದ್ಯ. ರೋಮಾಂಚನಕಾರಿ ಪಂದ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಅಹಮದಾಬಾದ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸುವ ಮೊದಲೇ ಈ ಬಗ್ಗೆ ಮಾತುಗಳು ಶುರುವಾಗಿದ್ದವು.ನಮಗೆ ಭದ್ರತೆ ಬಗ್ಗೆ ಯಾವುದೇ ಆತಂಕವಿಲ್ಲ’ ಎಂದು ಪಾಕ್ ತಂಡದ ಮ್ಯಾನೇಜರ್ ಇಂತಿಕಾಬ್ ಆಲಾಂ ನುಡಿದಿದ್ದಾರೆ.

‘ವಿಶ್ವಕಪ್ ಗೆಲ್ಲಲಿ, ಬಿಡಲಿ ಪಾಕ್ ಎದುರಿನ ಈ ಸೆಮಿಫೈನಲ್‌ನಲ್ಲಿ ಭಾರತ ಗೆಲ್ಲಬೇಕು ಎಂದು ಈಗ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆ ಪಂದ್ಯಕ್ಕೆ ಎಷ್ಟು ಮಹತ್ವವಿದೆ ಎಂಬುದು ನನಗೂ ಗೊತ್ತಿದೆ’ ಎಂದು ಅಹಮಾದಾಬಾದ್‌ನಲ್ಲಿ ಆಸ್ಟ್ರೇಲಿಯಾ ಎದುರು ಗೆದ್ದಾಗ ದೋನಿ ಹೇಳಿದ್ದರು!‘ಸೆಮಿಫೈನಲ್ ಪಂದ್ಯ ಭಾರತದ ಬ್ಯಾಟ್ಸ್‌ಮನ್‌ಗಳು ಹಾಗೂ ಪಾಕ್‌ನ ಬೌಲರ್‌ಗಳ ನಡುವಿನ ಹೋರಾಟ. ಈ ಸೆಣಸಾಟದಲ್ಲಿ ಗೆದ್ದವರಿಗೆ ಯಶಸ್ಸು’ ಎನ್ನುತ್ತಾರೆ ಈ ವಿಶ್ವಕಪ್‌ನಲ್ಲಿ ಪಾಕ್ ತಂಡವನ್ನು ಹಿಂಬಾಲಿಸುತ್ತಿರುವ ಕ್ರಿಕೆಟ್ ಅಭಿಮಾನಿ ಉಸ್ಮಾನ್ ಖಾನ್.‘ಪಾಕ್ ಹಾಗೂ ಭಾರತ ಸೇರಿ ಈ ಬಾರಿ ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದ ಹೊರದೂಡಿವೆ. ಈಗ ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಇಂತಹ ಪಂದ್ಯವನ್ನು ನೋಡಲು ನಮಗೆ ಪದೇಪದೇ ಸಿಗುವುದಿಲ್ಲ. ಬುಧವಾರ ಉತ್ತಮ ಪ್ರದರ್ಶನ ತೋರುವ ತಂಡಕ್ಕೆ ಗೆಲುವು ಸಿಗಲಿ’ ಎಂದು ಇಲ್ಲಿನ ಮಿಡ್‌ಟೌನ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿರುವ ಪಾಕ್‌ನ ಶಫಿಕ್ ಅಲಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.