`ಫಲಿತಾಂಶ ದೇಶದ ಚಿತ್ರಣ ಬದಲಿಸಲಿದೆ'

7
ಗುಜರಾತ್ ಚುನಾವಣೆ: ಬಿಜೆಪಿಗೆ ಹ್ಯಾಟ್ರಿಕ್ ಗೆಲುವು

`ಫಲಿತಾಂಶ ದೇಶದ ಚಿತ್ರಣ ಬದಲಿಸಲಿದೆ'

Published:
Updated:

ಚಿಕ್ಕಮಗಳೂರು: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಅವಧಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಪಡೆಯುತ್ತಿದ್ದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಕಾರ್ಯಕರ್ತರು ಪಕ್ಷದ ಮತ್ತು ಮೋದಿ ಪರ ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ, ಆಜಾದ್ ಪಾರ್ಕ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಹಿ ಹಂಚಿ ಸಂಭ್ರಮಿಸಿದರು.ಪಾಂಚಜನ್ಯ ಬಿಜೆಪಿ ಕಚೇರಿಯಿಂದ ಬೈಕ್ ಜಾಥಾ ಆರಂಭಿಸಿ, ವಿವಿಧ ರಸ್ತೆಗಳಲ್ಲಿ ಸಂಚರಿಸಿದರು.ವಿಜಯೋತ್ಸವದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ ದೇಶದ ಚಿತ್ರಣವನ್ನೆ ಬದಲಾಯಿಸಲಿದೆ. ಮುಂದಿನ 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಹಿಡಿಯುವುದು ಖಚಿತ, ಈಗ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮಾತನಾಡಿ, ಗುಜರಾತಿನಲ್ಲಿ ಹೊಸ ಕ್ರಾಂತಿ ಆಗಿದೆ. ನವ ಶಕೆ ಆರಂಭಗೊಂಡಿದೆ. ದೇಶ ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ಜನರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆಯುವ ಮೂಲಕ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವೆ ನಡೆದ ಚುನಾವಣೆಯಲ್ಲಿ ಮೋದಿ ಜಯ ಗಳಿಸಿದ್ದಾರೆ.  ದೇಶ ಮುನ್ನೆಡೆಸುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್, ಮುಖಂಡರಾದ ಸುಲೋಚನಾ ಭಟ್, ಭೋಜರಾಜ್, ಜಿ.ಪಂ. ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ನಗರಸಭೆ ಅಧ್ಯಕ್ಷ ಪ್ರೇಂಕುಮಾರ್, ಸಿಡಿಎ ಅಧ್ಯಕ್ಷ ಬಿ.ರಾಜಪ್ಪ ಇನ್ನಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry