ಭಾನುವಾರ, ಜೂನ್ 13, 2021
25 °C

ಫಲಿತಾಂಶ ರಾಜಕೀಯ ದಿಕ್ಸೂಚಿಯಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ ಫಲಿತಾಂಶ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರದು. ಅಲ್ಲದೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯೂ ಆಗಲಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಅಂತರದಿಂದ ಗೆಲುವು ಸಾಧಿಸುವುದು ಖಚಿತ. ಪಕ್ಷದ ಅಭ್ಯರ್ಥಿ ವಿ.ಸುನೀಲ್‌ಕುಮಾರ್ ಹಲವು ಹೋರಾಟಗಳಲ್ಲಿ ಪಾಲ್ಗೊಂಡು, ಜನರ ವಿಶ್ವಾಸ ಗೆದ್ದಿದ್ದಾರೆ ಎಂದರು.ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಚನಾತ್ಮಕ ಮತ್ತು ಜನಪರ ಕಾರ್ಯಗಳನ್ನು ಮಾಡಿದೆ. ಕಳೆದ ಮೂರುವರೆ ವರ್ಷಗಳ ನಮ್ಮ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಕ್ಷೇತ್ರದಲ್ಲಿ ಏಳು ಮಂದಿ ಶಾಸಕರಿದ್ದು, ಬಹುತೇಕ ಸ್ಥಳೀಯ ಸಂಸ್ಥೆಗಳ ಆಡಳಿತ ಪಕ್ಷದ ಹಿಡಿತ ದಲ್ಲಿರುವುದು ನಮ್ಮ ಗೆಲುವಿಗೆ ಪೂರಕವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋ ಜನೆಗೆ 1400 ಕೋಟಿ ರೂಪಾಯಿ ಹಣ ನೀಡಬೇಕಿತ್ತು. ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಪೈಸೆ ಹಣ ನೀಡಿಲ್ಲ. ಇಂದು ಈ ಯೋಜನೆ ಯನ್ನು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾ ನದಲ್ಲೇ ಯಶಸ್ವಿಯಾಗಿ ಅನುಷ್ಠಾನ ಮಾಡಿ, ದೇಶದಲ್ಲೇ ಎರಡನೇ ಯಶಸ್ವಿ ರಾಜ್ಯ ಎನಿಸಿಕೊಂಡಿದೆ.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದರು. ಪ್ರತಿಯೊಂದು ಜಿಲ್ಲೆಯಲ್ಲೂ ತಲಾ 20 ಕಿ.ಮೀ. ರಸ್ತೆಯನ್ನು ಅತ್ಯಂತ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ 3300 ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆ ಜಾರಿಗೆ ತಂದಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲೂ 36 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನವಾಗಿದೆ ಎಂದು ಹೇಳಿದರು. ಈ ಬಾರಿಯ ಬಜೆಟ್ ಅನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ಮಂಡಿಸಲಿದ್ದಾರೆ. ಈ ಬಗ್ಗೆ ಅನುಮಾನ ಬೇಡ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಮಾಜಿ ಸಚಿವ ಅರವಿಂದ ಲಿಂಬಾ ವಳಿ, ಶಾಸಕ ಸಿ.ಟಿ.ರವಿ, ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಪ್ರಧಾನ ಕಾರ್ಯದರ್ಶಿ ವರಸಿದ್ದಿ ವೇಣುಗೋಪಾಲ್ ಇದ್ದರು.ಯಡಿಯೂರಪ್ಪ ಬರ‌್ತಾರೆ!~

ಇನ್ನೂ ಪ್ರಚಾರಕ್ಕೆ ಒಂದು ದಿನ ಬಾಕಿ ಇದೆ. ಯಡಿಯೂರಪ್ಪ ಪ್ರಚಾರಕ್ಕೆ ಬಂದರೂ ಬರಬಹುದು ಎಂದು ಭಾರಿ ನೀರಾವರಿ ಸಚಿವ ಎಸ್.ಬಸವರಾಜ ಬೊಮ್ಮಾಯಿ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಚಾರಕ್ಕೆ ಯಡಿಯೂರಪ್ಪ ಬಾರದಿದ್ದರೆ ಬಿಜೆಪಿ ಮೇಲೆ ಪರಿಣಾಮ ಉಂಟಾ ಗುವುದಿಲ್ಲವೇ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಪ್ರಚಾರಕ್ಕೆ ಬರುವ ಸಾಧ್ಯತೆ ಇರುವ ಸುಳಿವು ನೀಡಿದರು.

ಚುನಾವಣಾ ಪ್ರಚಾರವನ್ನು ಮುಖ್ಯಮಂತ್ರಿ ಗಳು ಮತ್ತು ಸಚಿವರು ಹಾಗೂ ಶಾಸಕರು ನಿರ್ವಹಿಸುತ್ತಿರುವುದರಿಂದ ಪಕ್ಷದ ರಾಷ್ಟ್ರನಾಯಕರು ಆಗಮಿಸಿಲ್ಲ ಎಂದು ಸ್ಪಷ್ಟಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.