ಮಂಗಳವಾರ, ನವೆಂಬರ್ 19, 2019
29 °C

ಫಲಿತಾಂಶ ಸರ್ವಸ್ವ ಅಲ್ಲ

Published:
Updated:

ಶೈಕ್ಷಣಿಕ ಪರೀಕ್ಷೆಗಳು ಮುಗಿದು ಫಲಿತಾಂಶ ಪ್ರಕಟವಾಗುವ ದಿನಗಳು ಬರುತ್ತಿವೆ. ಫಲಿತಾಂಶ ನೋಡಿದ ವಿದ್ಯಾರ್ಥಿಗಳು ಸಾವಿಗೆ ಶರಣಾಗುವ ಸುದ್ದಿಗಳೂ ಆಗಾಗ ಕೇಳಿಬರುತ್ತವೆ. ಇಂದು ಎಳೆಯ ಜೀವಗಳು ಹತಾಶೆಯಿಂದ ಸಾವಿನತ್ತ ಹೆಜ್ಜೆ ಹಾಕುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.ಬದುಕಿನ ಪಾಠವನ್ನು ಕಲಿಸಿಕೊಡದ ಶಿಕ್ಷಣ ವಿದ್ಯಾರ್ಥಿಗಳನ್ನು ಸಾವಿನತ್ತ ನೂಕುತ್ತಿರುವ ಬಗ್ಗೆ ಚಿಂತಿಸಬೇಕಾದುದು ಅನಿವಾರ್ಯ. ಕ್ಷುಲ್ಲಕ ಕಾರಣಕ್ಕಾಗಿ ದೇಶದ ಭಾವಿ ಜನಾಂಗವು ಸಾವಿಗೆ ಶರಣಾಗುವ ಗಂಭೀರ ವಿಷಯವನ್ನು ಶಿಕ್ಷಕರು, ಸರ್ಕಾರ, ಶಿಕ್ಷಣ ತಜ್ಞರು, ಪೋಷಕರು ಲಘುವಾಗಿ ಪರಿಗಣಿಸುವಂತಿಲ್ಲ.ಹಿಂದೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಿದ್ದ ನಿದರ್ಶನಗಳು ಬಹು ಅಪರೂಪವಾಗಿದ್ದವು. ಶಿಕ್ಷಣ ರಂಗದಲ್ಲಿ ಪೈಪೋಟಿ, ಸಮಾಜದಲ್ಲಿ ಬದಲಾದ ದೃಷ್ಟಿಕೋನ ಮುಂತಾದ ಕಾರಣಗಳಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಾವಿನತ್ತ ಸಾಗುವ ಪರಿಪಾಠ ಬೆಳೆದಿದೆ. ಹಿಂದಿನ ದಿನಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದುದೇ ಘನತೆಯ ವಿಷಯವಾಗಿತ್ತು.ಇಂದು 100ಕ್ಕೆ 100 ಅಂಕ ಪಡೆದುಕೊಳ್ಳುವತ್ತ ಪೈಪೋಟಿ ನಡೆಸುವುದು ಘನತೆ ಎನಿಸಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದನ್ನೊಂದು ಅವಮಾನ ಎಂದು ಪರಿಗಣಿಸುತ್ತಿರಲಿಲ್ಲ. ಸೋಲು ಎನ್ನುವುದು ಸವಾಲಾಗುತ್ತಿತ್ತು. ಮರಳಿ ಯತ್ನ ಮಾಡುವ ಛಲವಿತ್ತು. ಇಂದು ಶೈಕ್ಷಣಿಕ ವಿಷಯದಲ್ಲಿ ಸೋಲು ಆತ್ಮಹತ್ಯೆಗೆ ಹೆಚ್ಚು ಪ್ರಚೋದನೆ ಕೊಡುತ್ತಿದೆ. ಪರೀಕ್ಷೆಯಲ್ಲಿ ತೇರ್ಗಡೆಯಾಗದ ಬಗ್ಗೆ ಇರುವ ವ್ಯಥೆಗಿಂತ ಸ್ವಪ್ರತಿಷ್ಠೆ ಭಂಗ ಹಾಗೂ ತಂದೆ ತಾಯಿಯ ನಿರೀಕ್ಷೆಯ ಮಟ್ಟ ಮುಟ್ಟಲಾಗದೆ ಕುಟುಂಬದಲ್ಲಿ ಪ್ರೀತಿಯ ಸಂಬಂಧಗಳು ಬುಡಮೇಲಾಗುವ ಆತಂಕ ಮಕ್ಕಳಲ್ಲಿ ಮೂಡುತ್ತಿದೆ. ಇಂದು ಎಳೆಯ ಮಕ್ಕಳ ನಲಿಯುವ ವರ್ಷಗಳಲ್ಲಿಯೇ,   ಎಲ್.ಕೆ.ಜಿ.ಯಿಂದಲೇ ಪೈಪೋಟಿಯ ಹೊರೆ ಹೊರಿಸಲಾಗುತ್ತಿದೆ. ದಣಿದ ಕೂಲಿಯಾಳುಗಳಿಗೂ ವಿಶ್ರಾಂತಿ ಸಿಕ್ಕುತ್ತದೆ. ಆದರೆ ತಮ್ಮ ದೇಹದ ಭಾರಕ್ಕಿಂತ ಹೆಚ್ಚಿನ ಭಾರದ ಪುಸ್ತಕಗಳನ್ನು ಹೊತ್ತು ದಣಿದು ಬರುವ ಮಕ್ಕಳನ್ನು, ದಣಿವಾರಿಸಿಕೊಳ್ಳುವ ಬದಲು ಮನೆಪಾಠ, ಹೋಂವರ್ಕ್‌ನತ್ತ ನೂಕಲಾಗುತ್ತಿದೆ.ಅಂದು ಬೇಸಿಗೆ ರಜೆ ಸಿಕ್ಕೊಡನೆ, ಅಜ್ಜಿ ಮನೆಯತ್ತ ಸಾಗುವ ಸಂತಸದ ದಿನಗಳಾಗಿದ್ದರೆ, ಇಂದು ಬೇಸಿಗೆ ರಜೆಯನ್ನು ಸ್ಪರ್ಧಾತ್ಮಕ ಪರೀಕ್ಷೆ, ಮುಂದಿನ ತರಗತಿಯ ಪಠ್ಯಗಳನ್ನು ಮುಂದಾಗಿಯೇ ಅಧ್ಯಯನ ಮಾಡಲು ವ್ಯಯ ಮಾಡಲಾಗುತ್ತಿದೆ. ಹೆಚ್ಚಿನ ಅಂಕ ಗಳಿಸಲೇಬೇಕು, ಪ್ರಥಮ ಸ್ಥಾನವನ್ನು ಪಡೆಯಲೇಬೇಕು ಎಂಬ ಒತ್ತಡದ ಮನಃಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಫಲಿತಾಂಶ ನಿರೀಕ್ಷಿತ ಮಟ್ಟ ಮುಟ್ಟದಿದ್ದಾಗ ಕೀಳರಿಮೆಯ ಹುತ್ತ ಬೆಳೆಯಗೊಟ್ಟು ಎದುರಿಸಬೇಕಾದ ಅವಮಾನಗಳಿಗೆ ಅಂಜಿ, ಸಾವೆಂಬುದೇ ಸುಲಭ ಪರಿಹಾರ ಎಂದು ತಪ್ಪು ನಿರ್ಧಾರ ಕೈಗೊಂಡ ಮಕ್ಕಳು ತಮ್ಮ ಜೀವವನ್ನು ಬಲಿ ಕೊಡುತ್ತಿದ್ದಾರೆ.ಎಸ್ಸೆಸ್ಸೆಲ್ಸಿ ಅಥವಾ ಇನ್ಯಾವುದೇ ಪರೀಕ್ಷೆ ಇರಲಿ ಅವುಗಳ ಫಲಿತಾಂಶ ಬುದ್ಧಿಮತ್ತೆಯ ನಿರ್ಣಾಯಕ ಆಗಬೇಕೇ ಹೊರತು ಸಾವು ಬದುಕಿನ ನಿರ್ಣಾಯಕ ಆಗಬಾರದು. ಜೀವನದ ಮುಂದಿನ ಹತ್ತಾರು ಪರೀಕ್ಷೆಗಳಿಗೆ ಇದೊಂದು ಸಣ್ಣ ಸೋಪಾನ ಅಷ್ಟೆ. ಗಮ್ಯ ಸ್ಥಳವನ್ನು ಸೇರಲು ಹಲವು ದಾರಿಗಳಿರುವಂತೆ  ವಿದ್ಯಾಭ್ಯಾಸವೂ ಒಂದು ದಾರಿ ಅಷ್ಟೆ. ಹಾಗೆಂದು ವಿದ್ಯಾಭ್ಯಾಸವನ್ನು ಕಡೆಗಣಿಸಬೇಕೆಂದು ಅರ್ಥವಲ್ಲ. ನಮ್ಮ ಪ್ರತಿ ಪ್ರಯತ್ನ ಪ್ರಾಮಾಣಿಕವಾಗಿ ಇರಬೇಕು.  ಕೆಲವೊಮ್ಮೆ ನಿರೀಕ್ಷಿತ ಫಲ ದೊರೆಯುವುದಿಲ್ಲ. ಅದನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುವ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು.ತಮ್ಮ ಮಕ್ಕಳು ಇಂತಿಷ್ಟೇ ಅಂಕ ಗಳಿಸಲೇಬೇಕೆಂದು ಹಿರಿಯರು ಒತ್ತಡ ಹೇರಬಾರದು. ಪ್ರತಿ ಸಂಸಾರದಲ್ಲಿ ಎಲ್ಲ ಮಕ್ಕಳೂ ಡಾಕ್ಟರೋ, ಇಂಜಿನಿಯರ್ರ್ರೋ ಆಗಬೇಕಿಲ್ಲ. ಬದುಕಿನ ಬೇಕು ಬೇಡಗಳನ್ನು ಪೂರೈಸುವ ಸತ್ಪ್ರಜೆಗಳಾಗಲು ನೂರಾರು ಕಾಯಕಗಳಿವೆ.ಸನ್ಮಾರ್ಗದಲ್ಲಿ ನಡೆಯುವ ಎಲ್ಲ ಕಾಯಕಗಳಿಗೂ ಗೌರವ  ಇದ್ದೇ ಇದೆ. ಮಾನಸಿಕ ಒತ್ತಡವಿಲ್ಲದೇ ಪರೀಕ್ಷೆಗಳನ್ನು ಎದುರಿಸುವಂತೆ ಹುರಿದುಂಬಿಸಬೇಕು. ವ್ಯತಿರಿಕ್ತ ಫಲಿತಾಂಶ ಬಂದರೂ ಮಕ್ಕಳ ಮೇಲಿನ ಕಾಳಜಿ ಮೊದಲಿನಂತೆಯೇ ಇರುತ್ತದೆ ಎಂದು ಅರಿವು ಮೂಡಿಸಬೇಕು. ಹಿರಿಯರು ಮುಳ್ಳಿನ ಮೇಲೆ ತಾವಾಗಿಯೇ ಬಟ್ಟೆ ಹಾಕಿಕೊಂಡು ಮಕ್ಕಳನ್ನು ಹೀಯಾಳಿಸಿದರೆ ಪ್ರಯೋಜನವಿಲ್ಲ. ಪರಿಣಾಮಕಾರಿ ಪ್ರೀತಿಯಿಂದ ವಿವರಿಸಿದರೆ ಅವರು ಕೇಳಿಯಾರು. ಅನುತ್ತೀರ್ಣತೆ ಎಂದರೆ ಸೋಲಲ್ಲ. ಗೆಲುವಿನತ್ತ ಸಾಗುವಾಗ ಕಾಲಿಗೆ ಸಿಕ್ಕ ಕಲ್ಲು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಫಲಿತಾಂಶ ಪ್ರಕಟವಾದಾಗ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಶಿಕ್ಷಕರು ಸಮಾಲೋಚನೆ ನಡೆಸುವ ಕೃಪೆ ತೋರಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಸಾಗಬೇಕಾದ ಹಾದಿಯ ಪರಿಚಯವನ್ನು ಮಾಡಿಕೊಡಬೇಕು. ಮಕ್ಕಳು ವಿದ್ಯಾರ್ಥಿಗಳು ಸಹ ಆಗಿದ್ದಾರೆ ಅಷ್ಟೆ. ಪ್ರಕಟಗೊಂಡ ಫಲಿತಾಂಶದಲ್ಲಿ ತಾಂತ್ರಿಕ ದೋಷದಿಂದಲೋ, ಮತ್ತಿನ್ನೇನೋ ಕಾರಣದಿಂದ ಫೇಲಾದವರು ಮರು ಎಣಿಕೆ, ಮರು ಮೌಲ್ಯಮಾಪನದಿಂದ ಹೆಚ್ಚಿನ ಅಂಕ ಗಳಿಸಿದ ಉದಾಹರಣೆಗಳು ಬೇಕಾದಷ್ಟಿವೆ.ಹೀಗಾಗಿ ಫಲಿತಾಂಶ ಬಂದೊಡನೆ, ಇದೇ ಅಂತಿಮ ಎಂದು ತಿಳಿದು ಸರ್ವಸ್ವವೂ ಹೋಯಿತೆಂದು ಭಾವಿಸಬೇಕಾಗಿಲ್ಲ. ತಾಳ್ಮೆ ಕಳೆದುಕೊಂಡು ದುಡುಕಿನ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಈಗಿಲ್ಲ. ಭವಿಷ್ಯದ ಆಸೆ ಹೊತ್ತು ಸಲಹಿದ ಪೋಷಕರ ಭಾವನೆಗೆ ಮಹತ್ವ ಕೊಡುವಂತಾಗಬೇಕು. ಪೋಷಕರು, ವಿದ್ಯಾರ್ಥಿಗಳು ಸಹನೆ, ಸಹಾನುಭೂತಿ, ನೈತಿಕ ಸ್ಥೈರ್ಯ ಹೊಂದಬೇಕು.

 

ಪ್ರತಿಕ್ರಿಯಿಸಿ (+)