ಬುಧವಾರ, ನವೆಂಬರ್ 13, 2019
23 °C

ಫಲ ನೀಡದ ಅಪಘಾತ ವಿಮೆ!

Published:
Updated:

ಬೆಳಗಾವಿ: `ಪ್ರಿಯ ಮತದಾರರೇ, ನಿಮ್ಮ ಮೇಲೆ ಅಪಘಾತ ವಿಮೆ ಮಾಡಿಸಿದ್ದೇವೆ. ನಿಮ್ಮ ಕುಟುಂಬದವರು ಇನ್ನು ಹೆದರಬೇಕಿಲ್ಲ. ಆದರೆ, ನಮಗೆ ಮತ  ಹಾಕಲು ಮಾತ್ರ ಮರೆಯಬೇಡಿ...!'ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹಣ, ಮದ್ಯ ಹಂಚುವುದು ಸಾಮಾನ್ಯ. ಆದರೆ, ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಸಾವಿರಾರು ಮತದಾರರಿಗೆ ಉಚಿತವಾಗಿ ಗುಂಪು ಅಪಘಾತ ವಿಮೆ ಮಾಡಿಸಲಾಗಿದೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಂಜಲಿ ನಿಂಬಾಳ್ಕರ ಅವರು `ಡಾ. ಅಂಜಲಿತಾಯಿ ವಿಚಾರ ಮಂಚ್' ಅಡಿ ಖಾನಾಪುರ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ `ದಿ ನ್ಯೂ ಇಂಡಿಯಾ ಇನ್ಶುರನ್ಸ್ ಕಂಪೆನಿ'ಯಲ್ಲಿ `ಗುಂಪು ವೈಯಕ್ತಿಕ ಅಪಘಾತ ವಿಮೆ' ಮಾಡಿಸಿದ್ದಾರೆ. ಕಾಂಗ್ರೆಸ್‌ನ 2ನೆ ಪಟ್ಟಿಯಲ್ಲಿ ರಫೀಕ್ ಕೆ. ಖಾನಾಪುರಿ ಅವರಿಗೆ ಟಿಕೆಟ್ ನೀಡಲಾಗಿದೆ.ನಿಂಬಾಳ್ಕರ ಬೆಂಬಲಿಗರು (ಏಜೆಂಟರು) ಕ್ಷೇತ್ರದ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಮತದಾರರಿಗೆ ಅವರ `ಡಾ. ಅಂಜಲಿತಾಯಿ ಅಪಘಾತ ವಿಮಾ ಸುರಕ್ಷಾ ಕವಚ' ಪ್ರಮಾಣ ಪತ್ರದ ಕಾರ್ಡ್‌ಗಳನ್ನು ವಿತರಿಸಿ, ನಿಂಬಾಳ್ಕರ್‌ಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಕಳೆದ ವಾರ ಇಟಗಿ ಗ್ರಾಮದಲ್ಲಿ ಮನೆ ಮನೆಗೆ ಹೋಗಿ ಮತದಾರರಿಗೆ ವಿಮೆ ಕಾರ್ಡ್ ವಿತರಿಸುತ್ತಿದ್ದಾಗ ದಾಳಿ ನಡೆಸಿದ ಚುನಾವಣಾಧಿಕಾರಿಗಳು, ನೀತಿ ಸಂಹಿತೆ ಉಲ್ಲಂಘನೆಯಡಿ ಅಂಜಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂಜಲಿ 'ಕೈ' ಮುಗಿದಿರುವ ಭಾವಚಿತ್ರವನ್ನು ಕಾರ್ಡ್‌ನ ಮುಂಬದಿಯಲ್ಲಿ ಮುದ್ರಿಸಲಾಗಿತ್ತು. ಪ್ರತಿಯೊಂದು ವಿಮೆ ಕಾರ್ಡ್‌ನಲ್ಲೂ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಲಾಗಿದೆ. ಅವರ ವೆಬ್‌ಸೈಟ್ ವಿಳಾಸ ನೀಡಲಾಗಿದೆ. ಮತದಾರರಿಗೆ ರೂ 1 ಲಕ್ಷ ಮೊತ್ತದ ಅಪಘಾತ ವಿಮೆ ಮಾಡಿಸಲಾಗಿದೆ.

ಪ್ರತಿಕ್ರಿಯಿಸಿ (+)