ಫಾಡ್ ಕಲೆಯ ಹಾಡು-ಪಾಡು
`ಈ ಕಲೆ ಕೇವಲ ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು. ಅಪ್ಪನಿಗೆ ತಮ್ಮ ನಂತರ ಏನು ಎಂಬ ಪ್ರಶ್ನೆ. ಅದಕ್ಕಿಂತ ಕಲಾಕೃತಿಗಳ ಬಗ್ಗೆ ನಿರಂತರವಾಗಿ ಬೇಡಿಕೆ ಇತ್ತು. ಆದರೆ ಕಲಾಕೃತಿಗೆ ಬೇಕಿರುವ ಬಣ್ಣಗಳನ್ನು ನೈಸರ್ಗಿಕವಾಗಿಯೇ ತಯಾರಿಸಬೇಕಿತ್ತು. ಅದೂ ಸಹ ನಮ್ಮ ಕುಟುಂಬದ ಗುಟ್ಟಾಗಿತ್ತು~
ಪ್ರಕಾಶ್ ಜೋಷಿ ಹೇಳುತ್ತಿದ್ದರು.
ಪರಂಪರೆಯ ಬಗ್ಗೆ ಹೇಳುವಾಗ ಅಭಿಮಾನವಾಗಲಿ, ಅಹಂಕಾರವಾಗಲಿ ಯಾವುದೂ ಅವರ ಧ್ವನಿಯಲ್ಲಿರಲಿಲ್ಲ. ಅಲ್ಲಿದ್ದುದು ನಿರಾಳಭಾವ. ಎಲ್ಲವನ್ನೂ ಎಲ್ಲರಿಗೂ ಕಲಿಸಬೇಕೆಂಬ ಹಂಬಲ.
ಫಾಡ್ ಕಲೆಯ ಮೂಲ ಹಿಂದಿಯ `ಪಢ್ನಾ~ ಎಂಬುದು. ವೇದೋಪನಿಷತ್ ಅಥವಾ ರಾಜಸ್ತಾನದ ಆರಾಧ್ಯ ದೈವ ಪಾಬುಜಿ ಅವರ ಬಗ್ಗೆ ಚಿತ್ರಕತೆಯನ್ನು ಹೇಳುವ ಕಲೆಯಾಗಿದೆ ಎಂದು ಅವರು ವಿವರಿಸಿದರು.
ಇಲ್ಲಿಯ ಚಿತ್ರಗಳಲ್ಲಿ ಬರುವ ವ್ಯಕ್ತಿಗಳ ಕಣ್ಣು ಮತ್ತು ಮೂಗು ಹಾಗೂ ಪಾರ್ಶ್ವಭಾವವೇ ಮುಖ್ಯವಾಗಿದೆ. ಚೂಪುಕಂಗಳು, ದುಂಡನೆಯ ಮೂಗು ಚಿತ್ರದ ಲಕ್ಷಣಗಳಾಗಿವೆ. ದೇವರು ಹಾಗೂ ರಾಜ ರಾಣಿಯರನ್ನು ಹೊರತು ಪಡಿಸಿದರೆ ಎಲ್ಲರನ್ನೂ ಒಂದು ಬದಿಯಿಂದಲೇ ಚಿತ್ರಿಸುವುದು ಈ ಚಿತ್ರಪ್ರಕಾರದ ವಿಶೇಷ.
`ಕೇವಲ ಮೂಲ ಬಣ್ಣಗಳನ್ನು ಮಾತ್ರ ಬಳಸಲಾಗುತ್ತದೆ. ಕಡು ಹಸಿರು, ಹಳದಿ, ಕಿತ್ತಲೆ, ಕಂದು ಹಾಗೂ ಕಪ್ಪು ಬಣ್ಣಗಳಿಗೆ ಮಾತ್ರ ಇಲ್ಲಿ ಅವಕಾಶ. ಬಣ್ಣಬಣ್ಣದ ಹರಳುಗಳಿಂದ ಈ ಬಣ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಕೈಮಗ್ಗದ ಹತ್ತಿ ಬಟ್ಟೆಯನ್ನು ಮೈದಾ ಗಂಜಿಯಲ್ಲಿ ಅದ್ದಿ, ಒಣಗಿಸಲಾಗುತ್ತದೆ.
ನಂತರ ವಿಶೇಷ ಬಗೆಯ ಕಲ್ಲಿನಿಂದ ಇಸ್ತ್ರಿ ಪೆಟ್ಟಿಗೆಯಂತೆ ಈ ವಸ್ತ್ರದ ಮೇಲೆ ಉಜ್ಜಲಾಗುತ್ತದೆ. ಆಗಲೇ ಆ ಬಟ್ಟೆಗೆ ಹೊಳಪು ಮೂಡುವುದು ಆಗಲೇ. ನಂತರ ಚಿತ್ರ ಬರೆದು ಬಣ್ಣ ತುಂಬಿ ಒಣಗಿಸಿಟ್ಟರೆ ನೂರಾರು ವರ್ಷಗಳವರೆಗೂ ಈ ಚಿತ್ರಗಳ ಬಣ್ಣ ಮಾಸುವುದಿಲ್ಲ. ನಮ್ಮ ಬಳಿ 300 ವರ್ಷಕ್ಕೂ ಹಿಂದಿನ ಚಿತ್ರಪಟಗಳಿವೆ~.
ಇದಿಷ್ಟೂ ಚಿತ್ರ ಪ್ರಕಾರದ ಕತೆಯಾಯಿತು. ಆಸಕ್ತಿಕರ ಅಂಶವೆಂದರೆ ಹತ್ತು ಶತಮಾನಗಳಿಂದ ಒಂದು ಮನೆತನದ ಸ್ವತ್ತಾಗಿದ್ದ ಈ ಕಲೆ ಈಗ ಕಲಾಸಕ್ತರೆಲ್ಲರೂ ಕಲಿಯುವಂತಾಗಿದೆ. ಹೀಗೆ ಮಾಡಿದ್ದು, ಪ್ರಕಾಶ್ಜೋಷಿ ಅವರ ತಂದೆ ನಂದಕಿಶೋರ್ಲಾಲ್ ಜೋಷಿ.
ಮನೆಯ ಹೆಣ್ಣುಮಕ್ಕಳಿಗೂ ಹೇಳಿಕೊಡದ ಕಲೆಯನ್ನು ಸಂಪ್ರದಾಯ, ಪರಂಪರೆ ಮೀರಿ ಎಲ್ಲರಿಗೂ ಹೇಳಿಕೊಡಲಾರಂಭಿಸಿದರು. ಐದು ಅಡಿಗಿಂತ ಹೆಚ್ಚು ಉದ್ದಗಲ ಇರುವ ಕಲೆಯ ಮಿನಿಯೇಚರ್ ಮಾಡಲು ಆರಂಭಿಸಿದರು. ಮೊದಲು ಇವನ್ನು ಜನಪ್ರಿಯಗೊಳಿಸಲು ಸೀರೆಗಳಲ್ಲಿಯೂ ಬಳಸಲಾರಂಭಿಸಿದರು.
ಆದರೆ ಒಂದು ಸೀರೆ ಸಿದ್ಧಪಡಿಸಲು ಅಗತ್ಯವಿರುವ ಶ್ರಮಕ್ಕೂ ನೀಡುವ ಬೆಲೆಗೂ ಸಂಬಂಧವಿರದಂತಾದಾಗ ಸಣ್ಣಸಣ್ಣ ಫ್ರೇಮಿಗೆ ಇಳಿಸಲಾಯಿತು. ಫಾಡ್ ಕಲೆಯ ಪ್ರಚಾರಕ್ಕೆ www.phadchitrakari.com ವೆಬ್ತಾಣ ರೂಪಿಸಿದರು. ಚಿತ್ರಶಾಲಾ ಸಂಸ್ಥೆ ಆರಂಭಿಸಿದರು. ಇದೀಗ ಇವರ ಸಂಸ್ಥೆಯಿಂದ ಕಲಿತವರಲ್ಲಿ ಇಬ್ಬರು ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದಾರೆ.
`ಸಾಂಪ್ರದಾಯಿಕ ಕಲೆಗೆ ಸಮಕಾಲೀನ ಸ್ಪರ್ಶ ನೀಡಲು, ಪೂಜಾಮನೆಯಿಂದ ಇದನ್ನು ಡ್ರಾಯಿಂಗ್ ರೂಮ್ಗೆ ತರುವ ಪ್ರಯತ್ನ ಆರಂಭಿಸಿದೆವು. ಅದು ಬಳಕೆಗೆ ಬಂದೊಡನೆ ಸಾಕಷ್ಟು ಪ್ರಚಾರ ಲಭಿಸಿತು. ಕಲಾವಿದರಿಗೆ ಕೆಲಸ ದೊರೆಯಿತು. ಕಲೆ ಉಳಿಯಿತು.
ಆರೇಳು ದಶಕಗಳ ಹಿಂದೆ ಈ ಫಾಡ್ ಕಲಿಕೆಯನ್ನು ಕುಟುಂಬದಾಚೆಗೂ ಕಲಿಸುವ ಪ್ರಯತ್ನ ಮಾಡಿದಾಗ ಮೂಲಭೂತವಾದಿಗಳು ಜೀವಬೆದರಿಕೆ ಹಾಕಿದ್ದೂ ಉಂಟು. ಆದರೆ ಆಗ ಅವರಿಗೆ ಕಲೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಕಲೆ ಅಳಿಯುವ ಬಗ್ಗೆ ಹೇಳಲಾಯಿತು~ ಎಂದು ಪ್ರಕಾಶ್ ಜೋಷಿ ನೆನಪಿಸಿಕೊಂಡರು.
ಪ್ರಕಾಶ್ ಈಚೆಗೆ ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ, 16 ಗಂಟೆಗಳ ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಇಲ್ಲಿಯ ಜನರು ಅದ್ಭುತವಾಗಿ ಸ್ಪಂದಿಸುತ್ತಾರೆ. ಇನ್ನು ಮೇಲೆ ಪ್ರತಿ ವರ್ಷವೂ ತರಬೇತಿ ಹಮ್ಮಿಕೊಳ್ಳುವ ಬಗ್ಗೆ ಯೋಚಿಸುವೆ ಎಂದೂ ಹೇಳಿದರು.
ಬಣ್ಣ ಕ್ರಿಯೇಶನ್ಸ್ ಸಂಸ್ಥೆ ಏರ್ಪಡಿಸಿದ್ದ ಈ ಕಾರ್ಯಾಗಾರದಲ್ಲಿ 25 ಜನರಿಗೆ ಮಾತ್ರ ಅವಕಾಶವಿತ್ತು. ವಿವಿಧ ವಯೋಮಾನ ಹಾಗೂ ವಿವಿಧ ಕ್ಷೇತ್ರದ ಜನರು ಪಾಲ್ಗೊಂಡಿದ್ದರು.
ಹೆಚ್ಚಿನ ಮಾಹಿತಿಗೆ: ಬಣ್ಣ ಕ್ರಿಯೇಶನ್ಸ್ 9945611081
ಚಿತ್ರಧ್ಯಾನ...
ಚಿತ್ರಕಲೆಯನ್ನು ಎಲ್ಲಿಯೂ ಕಲಿತಿಲ್ಲ. ಆದರೆ ಹವ್ಯಾಸಕ್ಕಾಗಿ ಆಗಾಗ ಚಿತ್ರ ಬರೆಯುತ್ತೇನೆ. ಇದೀಗ ಫಾಡ್ ಸಾಂಪ್ರದಾಯಿಕ ಕಲೆ ಎಂಬ ಕುತೂಹಲದಿಂದ ಬಂದೆ. ನೋಡಿದಾಗ ಅತಿ ಸರಳ ಎನಿಸುವ ರೇಖೆಗಳು ಇಡೀ ದಿನ ಎಳೆದಾಡಿದರೂ ಒಂದು ಸ್ವರೂಪಕ್ಕೆ ಬರುವುದಿಲ್ಲ. ಕಣ್ಣು ಮೂಗು ತಿದ್ದಿ ತೀಡುವುದೇ ಮೊದಲ ತರಗತಿಯಾಗಿತ್ತು. ಇಲ್ಲಿ `ಮಾಸ್ಟರ್ ಜಿ~ ಗೆರೆ ಅಳುಹಿಸಲು ರಬ್ಬರ್ ಸಹ ಬಳಸಬಾರದು ಎನ್ನುತ್ತಾರೆ.
ಹಾಗಾಗಿ ಇನ್ನಷ್ಟು ಎಚ್ಚರಿಕೆಯಿಂದ ಚಿತ್ರ ಬರೆಯುತ್ತಿದ್ದೇನೆ.. ಆದರೆ ಇದೊಂದು ಬಗೆಯ ತಪಸ್ಸು ಇದ್ದಂತೆ. ನಾಲ್ಕು ಗಂಟೆಗಳು ಸರಿದು ಹೋಗಿದ್ದೇ ಗೊತ್ತಾಗುವುದಿಲ್ಲ. ಇಲ್ಲಿಂದಾಚೆ ಎದ್ದು ಹೋದರೂ ಗೆರೆಗಳ ಗುಂಗಿನಿಂದ ಬರುವುದಾಗುವುದಿಲ್ಲ.
-ಶಿವಗೀತಾ ಜಿ. ನೆಟ್ ಆ್ಯಪ್ಸ್ ಉದ್ಯೋಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.