ಭಾನುವಾರ, ಮೇ 22, 2022
22 °C

ಫಾರ್ಮುಲಾ ಒನ್ ಸಂಘಟನೆಯು ಹೊಸ ಅನುಭವ: ವಿಕಿ ಚಾಂಧೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಾರ್ಮುಲಾ ಒನ್ ಸಂಘಟನೆಯು ಹೊಸ ಅನುಭವ: ವಿಕಿ ಚಾಂಧೋಕ್

 ನವದೆಹಲಿ (ಪಿಟಿಐ): ಫಾರ್ಮುಲಾ ಒನ್ ಗ್ರ್ಯಾನ್ ಪ್ರೀಗಾಗಿ ಭರದಿಂದ ಅಂತಿಮ ಹಂತದ ಸಿದ್ಧತೆ ನಡೆದಿದೆ. ನೊಯಿಡಾದಲ್ಲಿ ಸಜ್ಜಾಗಿರುವ ಟ್ರ್ಯಾಕ್‌ನಲ್ಲಿ ರೇಸ್ ಕಾರುಗಳ ಅಬ್ಬರ ಆರಂಭವಾಗಲು ಒಂದು ವಾರ ಮಾತ್ರ ಬಾಕಿ. ಮುಂದಿನ ಭಾನುವಾರ ವೇಗದ ರೋಮಾಂಚನ!ಆದರೆ ಅದಕ್ಕೂ ಮುನ್ನ ಸಂಘಟಕರ ಮುಂದೆ ಕೆಲವು ಸವಾಲುಗಳು ಎದುರಾಗಿದ್ದು ಸಹಜ. ಅವೆಲ್ಲವನ್ನೂ ಮೀರಿ ನಿಂತು ಯಶಸ್ವಿಯಾಗಿ ಎಫ್-1 ಆಯೋಜಿಸುವ ವಿಶ್ವಾಸವನ್ನು ಜೇಪಿ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್  (ಜೆಪಿಎಸ್‌ಐ) ಹಾಗೂ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಫೆಡರೇಷನ್ (ಎಫ್‌ಎಂಎಸ್‌ಸಿಐ) ಹೊಂದಿವೆ.ರೇಸ್ ಆಯೋಜಿಸಲು ಅಗತ್ಯವಿರುವ ಸಾಧನಗಳನ್ನು ಆಮದು ಮಾಡಿಕೊಳ್ಳಲು ಭಾರಿ ಮೊತ್ತದ ಆಮದು ತೆರಿಗೆ ಪಾವತಿ ಮಾಡುವ ಸಂಕಷ್ಟವಿದ್ದರೂ ಎದೆಗುಂದಿಲ್ಲ. ಈ ನಡುವೆ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯ ನೋಟಿಸ್ ಕೂಡ ಜಾರಿ ನಿರ್ದೇಶನಾಲಯದಿಂದ ಬಂದಿದೆ. ಇನ್ನೊಂದೆಡೆ ಮನರಂಜನಾ ತೆರಿಗೆ ಪಾವತಿ ಮಾಡಲು ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಎಲ್ಲ ಸವಾಲುಗಳಿಗೆ ಎದೆಕೊಟ್ಟು ನಿಂತಿದ್ದಾರೆ ಸಂಘಟಕರು.ಮೊಟ್ಟ ಮೊದಲ ಬಾರಿಗೆ ಎಫ್-1 ರೇಸ್‌ಗೆ ವೇದಿಕೆಯಾಗುತ್ತಿರುವ ಭಾರತದಲ್ಲಿ ಈ ರೀತಿಯ ಸಮಸ್ಯೆಗಳ ಅಡೆತಡೆಯನ್ನು ದಾಟಿಕೊಂಡು ಸಾಗುವುದು ಅನಿವಾರ್ಯ. ಈ ಮಾತನ್ನು ಎಫ್‌ಎಂಎಸ್‌ಸಿಐ ಅಧ್ಯಕ್ಷ ವಿಕಿ ಚಾಂಧೋಕ್ ಕೂಡ ಒಪ್ಪುತ್ತಾರೆ. `ಮೊದಲ ಬಾರಿ ಸವಾಲುಗಳು ಸಹಜ~ ಎನ್ನುವ ಅವರು `ಫಾರ್ಮುಲಾ ಒನ್ ಸಂಘಟನೆಯು ನಮಗೆ ಹೊಸ ಅನುಭವ. ಮುಂದಿನ ಬಾರಿ ಇಂಥ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ. ಎಲ್ಲ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.`ಇಂಡಿಯನ್ ಪ್ರೀಮಿಯರ್ ಲೀಗ್, ಕಾಮನ್‌ವೆಲ್ತ್ ಕ್ರೀಡಾಕೂಟ ಈ ದೇಶದಲ್ಲಿ ನಡೆದ ಅತಿದೊಡ್ಡ ಕ್ರೀಡಾ ಚಟುವಟಿಕೆ. ಆದರೆ ಎಫ್-1 ಅದಕ್ಕಿಂತ ದೊಡ್ಡದು. ಆಗುವ ವೆಚ್ಚ ಹಾಗೂ ವಿಶ್ವ ಮಟ್ಟದಲ್ಲಿ ಸಿಗುವ ಪ್ರಚಾರವೂ ಅಧಿಕ~ ಎಂದ ಅವರು `ಭಾರಿ ಬೆಲೆಯುಳ್ಳ ಮೋಟಾರ್ ಸ್ಪೋರ್ಟ್ಸ್ ಕ್ರೀಡಾ ಸಾಧನಗಳು ಈಗ ಭಾರತಕ್ಕೆ ಬಂದಿವೆ. ಅದೇ ವಿಶೇಷ. ಗ್ರ್ಯಾನ್ ಪ್ರೀ ನಡೆಯುವಾಗ 180 ರಾಷ್ಟ್ರಗಳ ಅಂದಾಜು 570 ದಶಲಕ್ಷ ಜನರು ನೇರ ಪ್ರಸಾರ ವೀಕ್ಷಿಸಲಿದ್ದಾರೆ~ ಎಂದು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.