ಫಾರ್ಮುಲಾ ಒನ್: ಸೆಬಾಸ್ಟಿಯನ್ ವೆಟೆಲ್‌ಗೆ ಗೆಲುವು

7

ಫಾರ್ಮುಲಾ ಒನ್: ಸೆಬಾಸ್ಟಿಯನ್ ವೆಟೆಲ್‌ಗೆ ಗೆಲುವು

Published:
Updated:
ಫಾರ್ಮುಲಾ ಒನ್: ಸೆಬಾಸ್ಟಿಯನ್ ವೆಟೆಲ್‌ಗೆ ಗೆಲುವು

ಸುಜುಕಾ, ಜಪಾನ್ (ಎಎಫ್‌ಪಿ/ ಐಎಎನ್‌ಎಸ್): ಫೋರ್ಸ್ ಇಂಡಿಯಾ ತಂಡದ ನಿಕೊ ಹಕೆನ್‌ಬರ್ಗ್ ಭಾನುವಾರ ಇಲ್ಲಿ ನಡೆದ ಜಪಾನೀಸ್ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಏಳನೇ ಸ್ಥಾನ ಪಡೆದರು. ಈ ಮೂಲಕ ತಂಡಕ್ಕೆ ಆರು ಪಾಯಿಂಟ್‌ಗಳನ್ನು ತಂದಿತ್ತರು.ಫೋರ್ಸ್ ಇಂಡಿಯಾದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಅವರು 12ನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ಇದೀಗ ಫೋರ್ಸ್ ಇಂಡಿಯಾ ತಂಡ ಪ್ರಸಕ್ತ ಋತುವಿನಲ್ಲಿ ಒಟ್ಟು 81 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದೆ.ವೆಟೆಲ್ ಚಾಂಪಿಯನ್: ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಈ ರೇಸ್ ಗೆದ್ದುಕೊಂಡರು. ಫೆರಾರಿ ತಂಡದ ಫಿಲಿಪ್ ಮಾಸಾ ಎರಡನೇ ಸ್ಥಾನ ಪಡೆದರೆ, ಸೌಬೆರ್ ತಂಡದ ಕಮುಯಿ ಕೊಬಯಾಶಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.ಹಾಲಿ ಚಾಂಪಿಯನ್ ವೆಟೆಲ್ ಗೆದ್ದ ಕಾರಣ ಈ ಬಾರಿ ವಿಶ್ವಚಾಂಪಿಯನ್‌ಷಿಪ್ ಪಟ್ಟಕ್ಕಾಗಿ ನಡೆಯುತ್ತಿರುವ ಪೈಪೋಟಿಗೆ ಹೊಸ ತಿರುವು ಲಭಿಸಿದೆ. ಇದೀಗ ಅಗ್ರಸ್ಥಾನದಲ್ಲಿರುವ ಫೆರ್ನಾಂಡೊ ಅಲೊನ್ಸೊ (194) ಮತ್ತು ವೆಟೆಲ್ (190) ನಡುವಿನ ಪಾಯಿಂಟ್‌ಗಳ ಅಂತರ ಮತ್ತಷ್ಟು ತಗ್ಗಿದೆ.ಲೋಟಸ್ ತಂಡದ ಕಿಮಿ ರೈಕೊನೆನ್ (157) ಮತ್ತು ಮೆಕ್‌ಲಾರೆನ್ ತಂಡದ ಲೂಯಿಸ್ ಹ್ಯಾಮಿಲ್ಟನ್ (152) ಬಳಿಕದ ಸ್ಥಾನಗಳಲ್ಲಿದ್ದಾರೆ. ಋತುವಿನಲ್ಲಿ ಇನ್ನು ಐದು ರೇಸ್‌ಗಳು ಬಾಕಿಯುಳಿದಿವೆ. ಫೆರಾರಿ ತಂಡದ ಅಲೊನ್ಸೊ ಭಾನುವಾರ ಮೊದಲ ಲ್ಯಾಪ್‌ನಲ್ಲೇ ನಿವೃತ್ತಿಯಾಗಿ ಹಿಂದೆ ಸರಿದರು. ರೇಸ್‌ನ ಮೊದಲ ತಿರುವಿನಲ್ಲಿ ಅವರ ಕಾರು ಕಿಮಿ ರೈಕೊನೆನ್ ಕಾರು ಜೊತೆ ಡಿಕ್ಕಿಯಾಯಿತು. ಬಳಿಕ ಅವರಿಗೆ ರೇಸ್ ಮುಂದುವರಿಸಲು ಆಗಲಿಲ್ಲ.ಆರಂಭದಿಂದಲೇ ಉತ್ತಮ ಚಾಲನಾ ಕೌಶಲ ಮೆರೆದ ವೆಟೆಲ್ ಕೊನೆಯವರೆಗೂ ಮುನ್ನಡೆ ಕಾಪಾಡಿಕೊಂಡರು. ಜರ್ಮನಿಯ ವೆಟೆಲ್‌ಗೆ ಪ್ರಸಕ್ತ ಋತುವಿನಲ್ಲಿ ದೊರೆತ ಮೂರನೇ ಗೆಲುವು ಇದು. ಇದಕ್ಕೂ ಮುನ್ನ ಅವರು ಬಹರೇನ್ ಮತ್ತು ಸಿಂಗಪುರ ಗ್ರ್ಯಾನ್ ಪ್ರಿ ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry