ಫಾಲ್ಕನ್ ಟೈರ್ಸ್‌ ಬದಲಿ ನೌಕರರ ಅರೆಬೆತ್ತಲೆ ಮೆರವಣಿಗೆ

7

ಫಾಲ್ಕನ್ ಟೈರ್ಸ್‌ ಬದಲಿ ನೌಕರರ ಅರೆಬೆತ್ತಲೆ ಮೆರವಣಿಗೆ

Published:
Updated:

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫಾಲ್ಕನ್ ಟೈರ್ಸ್‌ ಬದಲಿ ಕಾರ್ಮಿಕರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು.ನಗರದ ಪುರಭವನದಿಂದ ಸಂಘದ ಅಧ್ಯಕ್ಷ ನರಸಿಂಹ ರಾಜೇ ಅರಸ್ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ನೌಕರರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದರು. ‘ಗಾಂಧಿ ಸತ್ಯಾಗ್ರಹಕ್ಕೆ ನ್ಯಾಯವಿಲ್ಲ, ಜಿಲ್ಲಾಡಳಿತದ ಮೌನಕ್ಕೆ ಧಿಕ್ಕಾರ, ಕಾರ್ಮಿಕ ಕಾನೂನು ಸಮರ್ಪಕವಾಗಿ ಜಾರಿಗೊಳಿಸಬೇಕು, ಬದಲಿ ಕಾರ್ಮಿಕರ ವಿರೋಧಿಗಳಿಗೆ ಧಿಕ್ಕಾರ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.ಕಾರ್ಖಾನೆ 30 ವರ್ಷಗಳಿಂದ ಟೈರ್ ಉತ್ಪಾದನೆಯಲ್ಲಿ ಕೋಟಿಗಟ್ಟಲೆ ಲಾಭ ಗಳಿಸುತ್ತಿದೆ. 550 ಕಾರ್ಮಿಕರು, 800 ಗುತ್ತಿಗೆ ಕಾರ್ಮಿಕರು ಹಾಗೂ 334 ಬದಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾಯಂ ನೌಕರರು ಮಾಡುವ ಕೆಲಸವನ್ನೇ ಬದಲಿ ನೌಕರರು ಮಾಡಿ ಕಂಪೆನಿ ಏಳಿಗೆಗೆ ಕಾರಣರಾಗಿದ್ದಾರೆ. ಆದರೆ ಆಡಳಿತ ವರ್ಗ ಬದಲಿ ಕಾರ್ಮಿಕರಿಗೆ ಕಾನೂನು ಬದ್ಧ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.ಕಾರ್ಖಾನೆಯ ದೃಢಿಕೃತ ಸ್ಥಾಯಿ ಆದೇಶದಲ್ಲಿ ಬದಲಿ ಕಾರ್ಮಿಕರಿಗೆ, ಕಾಯಂ ಕೆಲಸಗಾರರಿಗೆ ನೀಡುವ ಸೌಲಭ್ಯವನ್ನು ಹಾಗೂ ಕಾಯಂ ಕೆಲಸಗಾರರು ನಿವೃತ್ತಿಯಾದಲ್ಲಿ ಅಥವಾ ರಾಜೀನಾಮೆ ನೀಡಿದ ಜಾಗಕ್ಕೆ ಬದಲಿ ಕಾರ್ಮಿಕರನ್ನೇ ನೇಮಿಸಿಕೊಳ್ಳಲು ಆದೇಶವಿದೆ. ಆದರೆ ಆಡಳಿತ ವರ್ಗ ಯಾವುದೇ ನಿಯಮ ಪಾಲಿಸದಿರುವುದರಿಂದ ಹಲವು ಬಾರಿ ಬದಲಿ ಕಾರ್ಮಿಕರು ಕಾನೂನು ಬದ್ಧ ರಜೆ, ಬೋನಸ್ ಸೇರಿದಂತೆ ಇತರೆ ಸೌಲಭ್ಯಕ್ಕೆ ಮನವಿ ಮಾಡಿದ್ದರೂ ಯಾವುದನ್ನು ನೀಡದೆ ವಂಚನೆ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಕಾರ್ಮಿಕ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಸಭೆಯಲ್ಲಿ ಎಲ್ಲ ಬದಲಿ ಕಾರ್ಮಿಕರಿಗೂ ಕೆಲಸ ನೀಡುವುದು ಹಾಗೂ ಕಾನೂನು ಬದ್ಧ ಸೌಲಭ್ಯ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಆದರೆ ಆಡಳಿತ ವರ್ಗ ಕೆಲಸ ನೀಡಲು ನಿರಾಕರಿಸಿ ಸಭೆ ತೀರ್ಮಾನವನ್ನು ಉಲ್ಲಂಘನೆ ಮಾಡಿದೆ. ಇದರಿಂದ 300 ಕುಟುಂಬಗಳು ಬೀದಿ ಪಾಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry