ಸೋಮವಾರ, ಮೇ 17, 2021
31 °C

ಫಿಟ್‌ನೆಸ್ ರಾಗಪವರ್ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀವು `ಸ್ಲಿಮ್~ ಮತ್ತು `ಫಿಟ್~ ಆಗಿರಬೇಕೆ? ನಿಮ್ಮಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗಬೇಕೆ? ಅತಿಯಾದ ತೂಕ ಕಡಿಮೆಯಾಗಬೇಕೆ? ಆರೋಗ್ಯದ ಕಾಂತಿ ಮತ್ತು ಸದಾ ಪುಟಿದೇಳುವ ಚೈತನ್ಯ ನಿಮ್ಮದಾಗಬೇಕೆ?

ಹಾಗಿದ್ದರೆ `ಪವರ್ ಯೋಗ~ ಮಾಡಬನ್ನಿ ಎಂದು ಕರೆ ನೀಡುತ್ತಾರೆ ಮಾಸ್ಟರ್ ಅಕ್ಷರ್.

`ಪವರ್ ಯೋಗ ಎಂದಾಕ್ಷಣ ಎಲ್ಲರೂ ಮಾಡಲು ಸಾಧ್ಯವೇ ಎಂಬ ಅನುಮಾನ ಬೇಡ. ಎಲ್ಲ ವಯೋಮಾನದವರು ಮಾಡಬಹುದು. ಪ್ರತಿಯೊಬ್ಬರೂ ತಮ್ಮಳಗೆ ಇರುವ ಶಕ್ತಿಯನ್ನೇ ಬಳಸಿ, ದೇಹದಲ್ಲಿ ಶಕ್ತಿ ಸಂಚಯವಾಗುವಂತೆ ಮಾಡುವ ಅದ್ಭುತ ಯೋಗ ವಿಧಾನ ಇದಾಗಿದೆ~ ಎಂದು ನುಡಿಯುತ್ತಾರೆ ಅಕ್ಷರ್.

ಯಾವುದೇ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆಯ ಗೊಡವೆಯಿಲ್ಲದೇ `ಪವರ್ ಯೋಗ~ದ ಏಕಮಾತ್ರ ಅಭ್ಯಾಸದಿಂದಲೇ ದೇಹದ ಆಕಾರವನ್ನು ಸಹಜ ಸ್ಥಿತಿಗೆ ತರಬಹುದು ಎಂದು ವಿಶ್ವಾಸದಿಂದ ನುಡಿಯುತ್ತಾರೆ ಅವರು.

ಅಕ್ಷರ್, ಚಿಕ್ಕ ವಯಸ್ಸಿನಲ್ಲೇ `ಪವರ್ ಯೋಗ~ದ ಅಂತರರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಎಂಬ ಗೌರವಕ್ಕೆ ಪಾತ್ರರಾದವರು. ಅವರು `ಯೋಗ ಅಲಯನ್ಸ್ ಇಂಟರ್‌ನ್ಯಾಷನಲ್~ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ.  ದೂರದ ಹಿಮಾಲಯ, ದೆಹಲಿಯಲ್ಲಿ ಯೋಗ ಶಿಕ್ಷಣ ಪಡೆದಿರುವ ಅವರು ಸದ್ಯ ಬೆಂಗಳೂರಿನಲ್ಲಿ ಯೋಗ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸದಾಶಿವನಗರದಲ್ಲಿ ಎರಡು ವರ್ಷಗಳ ಹಿಂದೆ `ಅಕ್ಷರ್ ಪವರ್ ಯೋಗ ಅಕಾಡೆಮಿ~ ಸ್ಥಾಪಿಸಿದ ಅಕ್ಷರ್, ಇದುವರೆಗೂ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿಗೆ `ಪವರ್ ಯೋಗ~ ಕಲಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿತ್ಯ ಮುನ್ನೂರಕ್ಕೂ ಹೆಚ್ಚು ಮಂದಿ `ಪವರ್ ಯೋಗ~ದ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅವರ ಇಪ್ಪತ್ತಕ್ಕೂ ಹೆಚ್ಚು ಶಿಷ್ಯರು ದೇಶ ವಿದೇಶಗಳಲ್ಲಿ `ಪವರ್ ಯೋಗ~ ಹೇಳಿಕೊಡುತ್ತಿದ್ದಾರೆ.

ಆಸಕ್ತರು ವೆಬ್‌ಸೈಟ್: www.aksharyoga.com ನೋಡಬಹುದು ಅಥವಾ  ಮೊಬೈಲ್: 9986121226, 8867122121, 080- 40952324, 40941581 ಅನ್ನು ಸಂಪರ್ಕಿಸಬಹುದು.

`ಬೆವರು, ಬಿಸಿ, ಆಕಾರ...~

`ಸ್ವೆಟ್, ಹೀಟ್, ಮೌಲ್ಡ್, ಡಿಸೈನ್~ ಎಂಬ ನಾಲ್ಕಂಶಗಳ ಆಧಾರದಲ್ಲಿ ಅಕ್ಷರ್ `ಪವರ್ ಯೋಗ~ವನ್ನು ವಿನ್ಯಾಸಗೊಳಿಸಿದ್ದಾರೆ. ಯೋಗದ ಎಂಟು ಆಯಾಮಗಳನ್ನು ತಮ್ಮದೇ ಆದ ರೀತಿಯಲ್ಲಿ ಸಂಯೋಜಿಸಿರುವ ಅಕ್ಷರ್, ತಾವು ಹೇಳಿಕೊಡುವ ವಿಧಾನ ನಿಸರ್ಗ ಸಹಜವಾಗಿದ್ದು, ತ್ವರಿತ ಫಲಿತಾಂಶ ಕೊಡಲಿದೆ ಎಂದು ಹೇಳುತ್ತಾರೆ.

`ಬೆವರು ಕಿತ್ತು ಬರುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳೆಲ್ಲ ಹೊರಹಾಕಲ್ಪಡುತ್ತವೆ. ಬಳಿಕ ಬಿಸಿಯಾಗುವ ದೇಹವನ್ನು ಬೇಕಾದ ಹಾಗೆ ಬಾಗಿಸಬಹುದು. ಇದರಿಂದ ಅಸ್ತವ್ಯಸ್ತವಾಗಿ ಬೆಳೆದ ಶರೀರವನ್ನು ಸಹಜ ಆಕಾರಕ್ಕೆ ತರಬಹುದು. ಇದುವೇ ನಮ್ಮ ಪವರ್ ಯೋಗದ ಕ್ರಮ~ ಎಂದು ಅಕ್ಷರ್ ವಿವರಿಸುತ್ತಾರೆ.

2005ರಿಂದ 2010ರವರೆಗೆ ಅಕ್ಷರ್, ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ವೈಜ್ಞಾನಿಕ ತಳಹದಿಯಲ್ಲಿ `ಪವರ್ ಯೋಗ~ವನ್ನು ರೂಪಿಸಿದ್ದಾರೆ. ಹೀಗಾಗಿ ಈ ವಿಧಾನವನ್ನು `ಅಕ್ಷರ್ ಪವರ್ ಯೋಗ~ ಎಂದೇ ಕರೆಯಲಾಗುತ್ತಿದೆ.

ಈ ವಿಧಾನದಲ್ಲಿ ಅನುಸರಿಸುತ್ತಿರುವ ಕ್ರಮ ಈ ರೀತಿಯಾಗಿದೆ; ಕಾರ್ಡಿಯೊ ಅಭ್ಯಾಸಗಳ ಮೂಲಕ ದೇಹವನ್ನು ಆಸನಗಳಿಗೆ ಸಜ್ಜುಗೊಳಿಸಲಾಗುತ್ತದೆ. ಸೂರ್ಯ ನಮಸ್ಕಾರ ಮತ್ತು ಆಸನಗಳ ಸರಣಿ ಸಂಯೋಜನೆಯಿಂದ ದೇಹದೊಳಗಿನ ಶಕ್ತಿಯನ್ನು ಜಾಗೃತಗೊಳಿಸಲಾಗುತ್ತದೆ. ಈ ಎಲ್ಲ ಅಭ್ಯಾಸಕ್ಕೆ ಹಿನ್ನೆಲೆಯಾಗಿ ಆಧ್ಯಾತ್ಮಿಕ ಮನಸ್ಥಿತಿಗೆ ಕೊಂಡೊಯ್ಯುವ ಲಯಬದ್ಧ ಸಂಗೀತವನ್ನು ಬಳಸಿಕೊಳ್ಳಲಾಗುತ್ತಿದೆ.

`ಪವರ್ ಯೋಗ~ ಎಂದರೆ...

`ಕರೀನಾ ಕಪೂರ್ ಸೇರಿದಂತೆ ಬಾಲಿವುಡ್‌ನ ಅನೇಕ ತಾರೆಗಳು ಪವರ್ ಯೋಗದ ಅಭ್ಯಾಸ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 1,500 ಮಂದಿ ಯೋಗ ಶಿಕ್ಷಕರು ಪವರ್ ಯೋಗ ಕಲಿಸಿಕೊಡುತ್ತಿದ್ದಾರೆ. ಎಲ್ಲರ ವಿಧಾನವೂ ಒಂದೇ ಆಗಿಲ್ಲ~ ಎಂದು ತಿಳಿಸುತ್ತಾರೆ ಅಕ್ಷರ್.

`ಯೋಗ ಅಥವಾ ಪವರ್ ಯೋಗ ಎಂಬುದು ದೇವರಿದ್ದಂತೆ. ದೇವರು ಎಂಬ ಪದ ಅಥವಾ ಶಕ್ತಿಯನ್ನು ನೂರಾರು ರೀತಿಯಲ್ಲಿ ಅರ್ಥ ಮಾಡಿಕೊಂಡಂತೆ ಯೋಗ ಅಥವಾ ಪವರ್ ಯೋಗವನ್ನೂ ಬಹಳಷ್ಟು ಮಂದಿ ತಮಗೇ ಬೇಕಾದಂತೆ ಅರ್ಥೈಸಿಕೊಂಡಿದ್ದಾರೆ~ ಎಂದು ಹೇಳುತ್ತಾರೆ ಅಕ್ಷರ್.

`ಜಿಮ್‌ನಲ್ಲಿ ಸಾಮಾನ್ಯವಾಗಿ ಮಾಡಿಸುವ ಕಸರತ್ತುಗಳೊಂದಿಗೆ ಕೆಲವು ಆಸನಗಳನ್ನು ಮಾಡಿಸುವುದನ್ನೇ ಪವರ್ ಯೋಗ ಎಂದು ಕರೆಯುವವರೂ ಇದ್ದಾರೆ. ವೇಗವಾಗಿ ಆಸನ ಹಾಕಿಸುವುದನ್ನೇ ಪವರ್ ಯೋಗ ಎನ್ನುವವರೂ ಇದ್ದಾರೆ~ ಎಂದು ಅವರು ವಿವರಿಸುತ್ತಾರೆ.

`ನನ್ನ ಪ್ರಕಾರ ದೇಹವೆಂಬ ದೇಗುಲದಲ್ಲಿ ದೇವರು ನೆಲೆಸಿದ್ದಾನೆ. ಆಸನಗಳ ಮೂಲಕವೇ ಆತನನ್ನು ನಾನು ಪ್ರಾರ್ಥಿಸುತ್ತೇನೆ. ಮಣ್ಣನ್ನು ಮಡಿಕೆ ಮಾಡುವ ರೀತಿಯಲ್ಲಿ ದೇಹವನ್ನು ಪವರ್ ಯೋಗದ ಮೂಲಕ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವುದೇ ನನ್ನ ಧ್ಯೇಯ~ ಎಂದು ಅವರು ನುಡಿಯುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.