ಫಿಡೆ ಚೆಸ್: ರತ್ನಾಕರನ್‌ಗೆ ಸೋಲುಣಿಸಿದ ಶಾಲಾ ಬಾಲಕ

7

ಫಿಡೆ ಚೆಸ್: ರತ್ನಾಕರನ್‌ಗೆ ಸೋಲುಣಿಸಿದ ಶಾಲಾ ಬಾಲಕ

Published:
Updated:

ಮಂಗಳೂರು: ಗೋವಾದ ಶಾಲಾ ವಿದ್ಯಾರ್ಥಿ ರೋಹನ್ ಅಹುಜಾ ಮೂರನೇ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಅನುಭವಿ ಇಂಟರ್‌ನ್ಯಾಷನಲ್ ಮಾಸ್ಟರ್ ಕೆ.ರತ್ನಾಕರನ್ (ದಕ್ಷಿಣ ರೈಲ್ವೆ) ಅವರನ್ನು ಸೋಲಿಸಿ ಮೊದಲ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.ಕೊಡಿಯಾಲ್‌ಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಬುಧವಾರ 3ನೇ ಬೋರ್ಡ್‌ನ ಈ ಫಲಿತಾಂಶವೇ ಹೆಚ್ಚಿನ ಚರ್ಚೆಗೆ ಕಾರಣವಾಯಿತು. ಗೋವಾ ರಾಜ್ಯ ಸೀನಿಯರ್ ಚಾಂಪಿಯನ್ ಆಗಿರುವ ರೋಹನ್ (ರೇಟಿಂಗ್ 1978) ಪಂದ್ಯದ ಮಹತ್ವದ ಹಂತದಲ್ಲಿ ರತ್ನಾಕರನ್ (2439) ಅವರ ಎರಡು ಕಾಲಾಳುಗಳನ್ನು ಬಲಿ ಪಡೆದರು. ಕೊನೆಯ ಹಂತದಲ್ಲಿ `ರೂಕ್~ (ಗಜ) ನೆರವಿನಿಂದ ರೋಹನ್ ಅವರ `ಪಾನ್ ಪ್ರಮೋಷನ್~ ತಡೆಯಲು ರತ್ನಾಕರನ್‌ಗೆ ಸಾಧ್ಯವಾಗಲಿಲ್ಲ.ರತ್ನಾಕರನ್ 55ನೇ ನಡೆಯಲ್ಲಿ ಪಂದ್ಯ ತ್ಯಜಿಸಿದರು.ಏಷ್ಯನ್ ವಯೋವರ್ಗ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿರುವ ರೋಹನ್, ಮಂಗಳೂರಿನಲ್ಲಿ 2008ರ ರೇಟೆಡ್ ಟೂರ್ನಿಯೊಂದರಲ್ಲಿ ಆಡುವ ಮೂಲಕ ರೇಟಿಂಗ್ ಯಾದಿಯಲ್ಲಿ ಸ್ಥಾನ ಪಡೆದಿದ್ದರು ಎಂಬುದು ಗಮನಾರ್ಹ. ಕಳೆದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಯುಕೆಸಿಎ ಕಪ್‌ನಲ್ಲಿ ಆರನೇ ಸ್ಥಾನ ಪಡೆದಿದ್ದು ಕೂಡ ಕಡಿಮೆಯೇನಲ್ಲ.ಅಹುಜಾ ಜತೆ ಉಳಿದ ಶ್ರೇಯಾಂಕ ಆಟಗಾರರು ಸತತ ಮೂರನೇ ಗೆಲುವಿನೊಡನೆ 3 ಪಾಯಿಂಟ್ ಸಂಗ್ರಹಿಸಿದ್ದಾರೆ. ಅಗ್ರ ಶ್ರೇಯಾಂಕದ ಐಎಂ ಶ್ಯಾಮ್ ನಿಖಿಲ್ (ತಮಿಳುನಾಡು), ಕರ್ನಾಟಕದ ಸಂತೋಷ್ ಕಷ್ಯಪ್ ವಿರುದ್ಧ ಸುಲಭ ಜಯಗಳಿಸಿದರೆ, ಐಎಂ ಎಂ.ಎಸ್.ತೇಜಕುಮಾರ್ (ನೈರುತ್ಯ ರೈಲ್ವೆ), ವಿನಾಯಕ ಕುಲಕರ್ಣಿ (ಕರ್ನಾಟಕ) ಅವರನ್ನು 66 ನಡೆಗಳಲ್ಲಿ ಸೋಲಿಸಿದರು.ನಾಲ್ಕನೇ ಶ್ರೇಯಾಂಕದ ಐಎಂ ಎಸ್.ನಿತಿನ್ (ತಮಿಳುನಾಡು), ಐದನೇ ಶ್ರೇಯಾಂಕದ ಹಿಮಾಂಶು ಶರ್ಮ ಮತ್ತು ಆರನೇ ಶ್ರೇಯಾಂಕದ ದಿನೇಶ ಕುಮಾರ್ ಶರ್ಮ (ಎಲ್‌ಐಸಿ) ಕೂಡ ಮುನ್ನಡೆದರು. ಹಿಮಾಂಶು, ಸುಳ್ಯದ ಪಿ.ಗೋಪಾಲಕೃಷ್ಣ ಅವರನ್ನು ಸೋಲಿಸಿದರು.ಸ್ಥಳೀಯ ಆಟಗಾರ ವಿವೇಕರಾಜ್ (ರೇಟಿಂಗ್: 1700), ಕೇರಳದ ಒ.ಟಿ.ಅನಿಲ್ ಕುಮಾರ್ (2186) ಅವರನ್ನು ಸೋಲಿಸಿದರೆ, ಎಂ.ಚಕ್ರವರ್ತಿ ರೆಡ್ಡಿ (1978), ತಮಗಿಂತ ಪ್ರಬಲ ಆಟಗಾರ ಆಂಧ್ರದ ಪ್ರವೀಣ್ ಪ್ರಸಾದ್ (2271) ಜತೆ ಡ್ರಾ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry