ಶುಕ್ರವಾರ, ಏಪ್ರಿಲ್ 3, 2020
19 °C
5ನೇ ಬಾರಿ ಪರೀಕ್ಷೆಗೆ ಅವಕಾಶ ಕೋರಿ ಪ್ರತಿಭಟನೆ

ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾ ಲಯದ ಬ್ಯಾಚಲರ್‌ ಆಫ್‌ ಆಯುರ್ವೇದಿಕ್‌ ಮೆಡಿಕಲ್‌ ಸಿಸ್ಟಮ್ಸ್‌ (ಬಿಎಎಂಎಸ್‌) ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಜಯನಗರ ದಲ್ಲಿರುವ ವಿ.ವಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ವೇಳೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್‌ ಮತ್ತು ಗಣೇಶ್‌ ಎಂಬ ವಿದ್ಯಾರ್ಥಿಗಳನ್ನು ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಾಲ್ಕೂವರೆ ವರ್ಷ ಅವಧಿಯ ಬಿಎಎಂಎಸ್‌ ಪದವಿಗೆ ಮೂರು ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ. ಮೊದಲ ವರ್ಷದ ಪರೀಕ್ಷೆಯ ಆರು ಪತ್ರಿಕೆಗಳ ಪೈಕಿ ವಿದ್ಯಾರ್ಥಿಯು ನಾಲ್ಕು ಪತ್ರಿಕೆಗಳಲ್ಲಿ ಉತ್ತೀರ್ಣನಾದರೆ ಮುಂದಿನ ವರ್ಷದ ತರಗತಿಗೆ ಪ್ರವೇಶ ಪಡೆಯಬಹುದು. ಆದರೆ, ವಿ.ವಿ.ಯ ಸುಮಾರು 200 ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿಗೆ ಬಂದರೂ ಮೊದಲನೇ ವರ್ಷದ ಒಂದು ಅಥವಾ ಎರಡು ಪತ್ರಿಕೆಗಳಲ್ಲಿ ಉತ್ತೀರ್ಣರಾಗಿಲ್ಲ.‘ಪ್ರಥಮ ವರ್ಷದ ಒಂದು ಅಥವಾ ಎರಡು ಪತ್ರಿಕೆಗಳಲ್ಲಿ ಅನುತ್ತೀರ್ಣರಾದ ಸುಮಾರು 200 ಮಂದಿ ವಿದ್ಯಾರ್ಥಿಗಳು ಈಗಾಗಲೇ ನಾಲ್ಕು ಬಾರಿ ಪರೀಕ್ಷೆ ತೆಗೆದು ಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಐದನೇ ಬಾರಿ ಪರೀಕ್ಷೆ ತೆಗೆದುಕೊಳ್ಳಲು ನಿಯಮ ಗಳ ಪ್ರಕಾರ ಅವಕಾಶವಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದೆವು’ ಎಂದು ವಿಶ್ವವಿದ್ಯಾಲಯ ಕುಲಸಚಿವ ಡಾ.ಪ್ರೇಮ್‌ಕುಮಾರ್‌ ಹೇಳಿದರು.‘ವಿಶೇಷ ಸಂದರ್ಭಗಳಲ್ಲಿ ಐದನೇ ಬಾರಿ ಪರೀಕ್ಷೆ ತೆಗೆದುಕೊಳ್ಳಲು ಕುಲಪತಿಗಳು ಅನುಮತಿ ನೀಡಬಹುದು. ಆದರೆ, ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದೆಂದು ನ.28ರಂದು ಹೈಕೋರ್ಟ್‌ ನಿರ್ದೇಶನ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ಧಾರವಾಡ ಸಂಚಾರಿ ಪೀಠದ ಆದೇಶ : ಇತ್ತ ವಿಶ್ವವಿದ್ಯಾಲಯ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರಾಕರಿಸಿದ್ದರೆ, ಪ್ರತಿಭಟನಾನಿರತ ವಿದ್ಯಾರ್ಥಿಗಳು ಧಾರವಾಡ ಸಂಚಾರಿ ಹೈಕೋರ್ಟ್‌ ಪೀಠದ ಮಧ್ಯಂತರ ಆದೇಶದ ಪ್ರಕಾರ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

‘ಸಂಚಾರಿ ಪೀಠ ಡಿ.16ರಂದು ಮಧ್ಯಂತರ ಆದೇಶ ನೀಡಿ, ಐದನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದೆ. ಈ ಆದೇಶದ ಪ್ರಕಾರ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ವಿಜಾಪುರದ ಕರ್ಪೂರಮಠ್‌ ಆಯುರ್ವೇದಿಕ್‌ ಕಾಲೇಜು ವಿದ್ಯಾರ್ಥಿ ನಾಗೇಂದ್ರಪ್ಪ ಒತ್ತಾಯಿಸಿದರು.‘2009ರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ನನ್ನಂಥ ಸುಮಾರು 200 ವಿದ್ಯಾರ್ಥಿಗಳು ಐದನೇ ಬಾರಿ ಪರೀಕ್ಷೆ ಬರೆಯುವುದು ಅನಿವಾರ್ಯವಾಗಿದೆ. ನಮ್ಮ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ಅವಕಾಶ ನೀಡಬೇಕು. ಇಲ್ಲವಾದರೆ ವಿಶ್ವವಿದ್ಯಾಲಯದ ಆವರಣದಲ್ಲೇ ಆಮರಣಾಂತ ಉಪವಾಸ ನಡೆಸಲಾಗುವುದು’ ಎಂದು ಎಚ್ಚರಿಸಿದರು.ಆರೋಗ್ಯ ಸ್ಥಿರವಾಗಿದೆ

ಪ್ರತಿಭಟನೆ ವೇಳೆ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಗಳಾದ ರಾಯಚೂರು ಜಿಲ್ಲೆ ಮಾನ್ವಿಯ ಜಗದೀಶ್‌ ಮತ್ತು ಉತ್ತರ ಪ್ರದೇಶ ಮೂಲದ ಗಣೇಶ್‌ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಜೀವ್‌ ಗಾಂಧಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

‘ಫಿನಾಯಿಲ್‌ ಕುಡಿದು ಅಸ್ವಸ್ಥಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುವಾರ ಅವರನ್ನು ಆಸ್ಪತ್ರೆಯಿಂದ ಕಳಿಸಲಾಗುವುದು’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸರೋಜಾ ಹೇಳಿದ್ದಾರೆ.ಇಂದಿನಿಂದ ಪರೀಕ್ಷೆ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಬಿಎಎಂಎಸ್‌ ಪರೀಕ್ಷೆ ಗುರುವಾರದಿಂದ ಆರಂಭವಾಗಲಿದೆ.ನಾವು ಅಸಹಾಯಕರು

ಐದನೇ ಬಾರಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಈ ಹಿಂದೆಯೇ ತಿಳಿಸಿದ್ದೆವು. ಆದರೂ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆಯ ಬದಲಿಗೆ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದಿತ್ತು. ಪರೀಕ್ಷೆಗೆ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಈಗ ಸಹಾಯ ಮಾಡಲು ಸಾಧ್ಯವಿಲ್ಲ. ಈಗ ನಾವು ಅಸಹಾಯಕರು.

–ಡಾ.ಪ್ರೇಮ್‌ ಕುಮಾರ್‌, ಕುಲಸಚಿವರು, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)